Logo YouVersion
Îcone de recherche

ಅಪೊಸ್ತಲರ ಕೃತ್ಯಗಳು 4

4
ಯೆಹೂದ್ಯರ ಅಧಿಕಾರಿಗಳು ಪೇತ್ರ ಯೋಹಾನರನ್ನು ಹಿಡಿಸಿ ಯೇಸುವಿನ ಹೆಸರನ್ನು ಎತ್ತಬಾರದೆಂದು ಆಜ್ಞೆಮಾಡಲು ಅವರು ಧೈರ್ಯವಾಗಿ ಉತ್ತರಕೊಟ್ಟದ್ದು
1ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಾ 2ಸತ್ತವರು ಜೀವಿತರಾಗಿ ಏಳುವರು ಎಂಬದನ್ನು ಯೇಸುವಿನ ದೃಷ್ಟಾಂತದಿಂದ ಸಾರುತ್ತಾ ಇದ್ದದ್ದಕ್ಕೆ ಯಾಜಕರೂ ದೇವಾಲಯದ ಅಧಿಪತಿಯೂ ಸದ್ದುಕಾಯರೂ ಅಸಮಾಧಾನಪಟ್ಟು ಅಪೊಸ್ತಲರು ಜನರ ಸಂಗಡ ಮಾತಾಡುತ್ತಿರುವಾಗಲೇ ಬಂದು 3ಅವರನ್ನು ಹಿಡಿದು ಆಗಲೇ ಸಾಯಂಕಾಲವಾಗಿದ್ದದರಿಂದ ಮರುದಿನದವರೆಗೆ ಕಾವಲಲ್ಲಿಟ್ಟರು. 4ಆದರೆ ವಾಕ್ಯವನ್ನು ಕೇಳಿದವರಲ್ಲಿ ಅನೇಕರು ನಂಬಿದರು; ಗಂಡಸರ ಸಂಖ್ಯೆ ಸುಮಾರು ಐದುಸಾವಿರ ತನಕ ಬೆಳೆಯಿತು.
5ಮರುದಿನ ಯೆಹೂದ್ಯರ ಅಧಿಕಾರಿಗಳೂ ಹಿರಿಯರೂ ಶಾಸ್ತ್ರಿಗಳೂ ಯೆರೂಸಲೇವಿುನಲ್ಲಿ ಕೂಡಿಬಂದರು. 6ಅನ್ನನೆಂಬ ಮಹಾಯಾಜಕನೂ ಕಾಯಫನೂ ಯೋಹಾನನೂ ಅಲೆಕ್ಸಾಂದ್ರನೂ ಮಹಾಯಾಜಕನ ಸಂಬಂಧಿಗಳೆಲ್ಲರೂ ಇದ್ದರು. 7ಇವರು ಪೇತ್ರ ಯೋಹಾನರನ್ನು ನಡುವೆ ನಿಲ್ಲಿಸಿ - ನೀವು ಎಂಥಾ ಶಕ್ತಿಯಿಂದ ಇಲ್ಲವೆ ಎಂಥಾ ಹೆಸರಿನಿಂದ ಇದನ್ನು ಮಾಡಿದಿರಿ ಎಂದು ಕೇಳಲು 8ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ - ಜನರ ಅಧಿಕಾರಿಗಳೇ, ಹಿರಿಯರೇ, 9ಒಬ್ಬ ಅಂಗಹೀನನಿಗೆ ಆದ ಉಪಕಾರದ ವಿಷಯದಲ್ಲಿ ಅವನಿಗೆ ಯಾತರಿಂದ ನೆಟ್ಟಗಾಯಿತು ಎಂಬದಾಗಿ ನಮ್ಮನ್ನು ಈ ಹೊತ್ತು ವಿಚಾರಣೆ ಮಾಡುವದಾದರೆ 10ನಿಮ್ಮೆಲ್ಲರಿಗೂ ಇಸ್ರಾಯೇಲ್ ಜನರೆಲ್ಲರಿಗೂ ತಿಳಿಯಬೇಕಾದದ್ದೇನಂದರೆ - ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದಲೇ ಈ ಮನುಷ್ಯನು ನಿಮ್ಮೆದುರಿನಲ್ಲಿ ಸ್ವಸ್ಥನಾಗಿ ನಿಂತಿರುತ್ತಾನೆ. 11ಮನೆ ಕಟ್ಟುವವರಾದ ನೀವು ಹೀನೈಸಿದ ಕಲ್ಲು ಆತನು; ಆತನೇ ಮುಖ್ಯವಾದ ಮೂಲೆಗಲ್ಲಾದನು. 12ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.
13ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವದನ್ನು ಆ ಸಭಿಕರು ನೋಡಿ ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು. 14ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು; ಮತ್ತು ಕ್ಷೇಮಹೊಂದಿದ ಆ ಮನುಷ್ಯನು ಅವರ ಕೂಡ ನಿಂತಿರುವದನ್ನು ನೋಡಿ ಪ್ರತಿಯಾಗಿ ಏನೂ ಮಾತಾಡಲಾರದೆ ಇದ್ದರು. 15ಆಮೇಲೆ ಸಭೆಯಿಂದ ಸ್ವಲ್ಪ ಹೊರಗೆ ಹೋಗಿರೆಂದು ಅವರಿಗೆ ಅಪ್ಪಣೆಕೊಟ್ಟು - 16ಈ ಮನುಷ್ಯರಿಗೆ ನಾವೇನು ಮಾಡೋಣ? ಪ್ರಸಿದ್ಧವಾದ ಒಂದು ಸೂಚಕಕಾರ್ಯವು ಇವರ ಮೂಲಕವಾಗಿ ನಡೆಯಿತೆಂಬದು ಯೆರೂಸಲೇವಿುನಲ್ಲಿ ವಾಸಮಾಡುವವರೆಲ್ಲರಿಗೂ ಗೊತ್ತಾಗಿದೆಯಷ್ಟೆ; ಅದು ಆಗಲಿಲ್ಲವೆನ್ನುವದಕ್ಕಾಗದು. 17ಆದರೆ ಇದು ಜನರಲ್ಲಿ ಇನ್ನೂ ಹಬ್ಬದಂತೆ ಮುಂದೆ ಆ ಹೆಸರನ್ನು ಎತ್ತಿ ಯಾರ ಸಂಗಡಲೂ ಮಾತಾಡಬಾರದೆಂದು ಅವರನ್ನು ಬೆದರಿಸೋಣ ಎಂಬದಾಗಿ ಒಬ್ಬರ ಕೂಡೊಬ್ಬರು ಆಲೋಚನೆ ಮಾಡಿಕೊಂಡು 18ಅವರನ್ನು ಕರೆಯಿಸಿ - ಆ ಯೇಸುವಿನ ಹೆಸರನ್ನು ಎತ್ತಿ ಹೇಗೂ ಮಾತಾಡಬಾರದು, ಉಪದೇಶ ಮಾಡಲೂಬಾರದು ಎಂದು ಅವರಿಗೆ ಖಂಡಿತವಾಗಿ ಅಪ್ಪಣೆಕೊಟ್ಟರು. 19ಅದಕ್ಕೆ ಪೇತ್ರ ಯೋಹಾನರು ಅವರಿಗೆ - ದೇವರ ಮಾತನ್ನು ಕೇಳುವದಕ್ಕಿಂತಲೂ ನಿಮ್ಮ ಮಾತನ್ನು ಕೇಳುವದು ದೇವರ ಮುಂದೆ ನ್ಯಾಯವೋ ಏನು? ನೀವೇ ತೀರ್ಪುಮಾಡಿಕೊಳ್ಳಿರಿ; 20ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು ಎಂದು ಉತ್ತರ ಕೊಟ್ಟರು. 21ನಡೆದಿದ್ದ ಕಾರ್ಯಕ್ಕೋಸ್ಕರ ಜನರೆಲ್ಲರು ದೇವರನ್ನು ಕೊಂಡಾಡುತ್ತಾ ಇದ್ದ ಕಾರಣ ಅವರ ದೆಸೆಯಿಂದ ಸಭಿಕರು ಅಪೊಸ್ತಲರನ್ನು ದಂಡಿಸತಕ್ಕ ಉಪಾಯವನ್ನು ಕಾಣದೆ ಅವರನ್ನು ಇನ್ನಷ್ಟು ಬೆದರಿಸಿ ಬಿಟ್ಟುಬಿಟ್ಟರು. 22ಈ ಸೂಚಕಕಾರ್ಯದಿಂದ ಸ್ವಸ್ಥತೆಹೊಂದಿದ ಆ ಮನುಷ್ಯನಿಗೆ ನಾಲ್ವತ್ತು ವರುಷಕ್ಕಿಂತ ಹೆಚ್ಚು ವಯಸ್ಸಾಗಿತ್ತು.
23ಇವರು ಬಿಡುಗಡೆ ಹೊಂದಿ ಸ್ವಂತ ಜನರ ಬಳಿಗೆ ಹೋಗಿ ಮಹಾಯಾಜಕರೂ ಹಿರಿಯರೂ ತಮಗೆ ಹೇಳಿದ ಮಾತುಗಳನ್ನೆಲ್ಲಾ ತಿಳಿಸಿದರು. 24ಅವರು ಕೇಳಿ ಏಕಮನಸ್ಸಾಗಿ ದೇವರನ್ನು ಗಟ್ಟಿಯಾದ ಧ್ವನಿಯಿಂದ ಹೀಗೆ ಪ್ರಾರ್ಥಿಸಿದರು - ಒಡೆಯನೇ, ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನೇ, 25ನೀನು ಪವಿತ್ರಾತ್ಮ ಮೂಲಕವಾಗಿ ನಿನ್ನ ಸೇವಕನಾಗಿದ್ದ ನಮ್ಮ ಪಿತೃವಾದ ದಾವೀದನ ಬಾಯಿಂದ -
ಅನ್ಯಜನಗಳು ಯಾಕೆ ರೇಗಿದರು?
ಜನಾಂಗಗಳವರು ವ್ಯರ್ಥಕಾರ್ಯಗಳನ್ನು ಯಾಕೆ ಯೋಚಿಸಿದರು?
26ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ
ಭೂಪತಿಗಳು ಸನ್ನದ್ಧರಾಗಿ ನಿಂತರು,
ಅಧಿಕಾರಿಗಳು ಏಕವಾಗಿ ಕೂಡಿಕೊಂಡರು
ಎಂದು ಹೇಳಿಸಿದಿಯಲ್ಲವೇ. 27ಆ ಮಾತಿಗೆ ಅನುಸಾರವಾಗಿಯೇ ಈ ಪಟ್ಟಣದಲ್ಲಿ ಹೆರೋದನೂ ಪೊಂತ್ಯ ಪಿಲಾತನೂ ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಅನ್ಯಜನರ ಮತ್ತು ಇಸ್ರಾಯೇಲ್ ಜನರ ಸಹಿತವಾಗಿ ಕೂಡಿಕೊಂಡು 28ನಿನ್ನ ಕೈಯೂ ನಿನ್ನ ಸಂಕಲ್ಪವೂ ಮೊದಲು ನೇವಿುಸಿದ್ದನ್ನೇ ನಡಿಸಿದರು. 29-30ಕರ್ತನೇ, ಈಗ ನೀನು ಅವರ ಬೆದರಿಸುವಿಕೆಗಳನ್ನು ನೋಡಿ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನ ಮೂಲಕವಾಗಿ ರೋಗ ಪರಿಹಾರವೂ ಸೂಚಕಕಾರ್ಯಗಳೂ ಅದ್ಭುತಕಾರ್ಯಗಳೂ ಉಂಟಾಗುವಂತೆ ನಿನ್ನ ಕೈ ಚಾಚುತ್ತಿರುವಲ್ಲಿ ನಿನ್ನ ದಾಸರು ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು ಅಂದರು. 31ಹೀಗೆ ಪ್ರಾರ್ಥನೆ ಮಾಡಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು, ಅವರೆಲ್ಲರು ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವವರಾದರು.
ಶಿಷ್ಯರಲ್ಲಿ ಅನೇಕರು ತಮ್ಮ ಆಸ್ತಿಯನ್ನು ಮಾರಿ ಬಂದ ಹಣವನ್ನು ಹುದುವಾಗಿ ಅನುಭೋಗಿಸುವದಕ್ಕೆ ಕೊಡಲು ಅನನೀಯನೂ ಸಪ್ಫೈರಳೂ ಮೋಸಮಾಡಿ ಸತ್ತದ್ದು
32ನಂಬಿದ್ದ ಮಂಡಲಿಯವರ ಹೃದಯವೂ ಪ್ರಾಣವೂ ಒಂದೇ ಆಗಿತ್ತು. ಇದಲ್ಲದೆ ಒಬ್ಬನಾದರೂ ತನಗಿದ್ದ ಆಸ್ತಿಯಲ್ಲಿ ಯಾವದೊಂದನ್ನೂ ಸ್ವಂತವಾದದ್ದೆಂದು ಹೇಳಲಿಲ್ಲ. ಎಲ್ಲವೂ ಅವರಿಗೆ ಹುದುವಾಗಿ ಇತ್ತು. 33ಮತ್ತು ಕರ್ತನಾದ ಯೇಸು ಜೀವಂತನಾಗಿ ಎದ್ದುಬಂದನೆಂಬದಕ್ಕೆ ಅಪೊಸ್ತಲರು ಬಹು ಬಲವಾಗಿ ಸಾಕ್ಷಿ ಹೇಳುತ್ತಿದ್ದರು. ಬಹಳ ದಯವು ಅವರೆಲ್ಲರ ಮೇಲೆ ಇತ್ತು. 34ಅವರಲ್ಲಿ ಕೊರತೆಪಡುವವನು ಒಬ್ಬನೂ ಇರಲಿಲ್ಲ, ಯಾಕಂದರೆ ಹೊಲಮನೆಗಳಿದ್ದವರು ಅವುಗಳನ್ನು ಮಾರಿ 35ಬಂದ ಕ್ರಯವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುತ್ತಿದ್ದರು; ಅದನ್ನು ಪ್ರತಿಯೊಬ್ಬನಿಗೆ ಅವನವನ ಅವಶ್ಯದಂತೆ ಹಂಚಿಕೊಡುತ್ತಿದ್ದರು.
36ಈ ಪ್ರಕಾರ ಮಾಡಿದವರೊಳಗೆ ಕುಪ್ರದ್ವೀಪದಲ್ಲಿ#4.36 ಅಂದರೆ, ಸೈಪ್ರಸ್‍ದ್ವೀಪದಲ್ಲಿ. ಹುಟ್ಟಿದ ಲೇವಿಯನಾಗಿದ್ದ ಯೋಸೇಫನೆಂಬವನು ಒಬ್ಬನು. ಅವನಿಗೆ ಅಪೊಸ್ತಲರು ಬಾರ್ನಬ ಅಂದರೆ ಧೈರ್ಯದಾಯಕ ಎಂದು ಹೆಸರಿಟ್ಟಿದ್ದರು. 37ಅವನು ತನಗಿದ್ದ ಭೂವಿುಯನ್ನು ಮಾರಿ ಬಂದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು.

Surbrillance

Partager

Copier

None

Tu souhaites voir tes moments forts enregistrés sur tous tes appareils? Inscris-toi ou connecte-toi

Vidéos pour ಅಪೊಸ್ತಲರ ಕೃತ್ಯಗಳು 4