ಲೂಕ. 15

15
ಕಾಣದೆ ಹೋದ ಕುರಿ
(ಮತ್ತಾ. 18:12-14)
1ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. 2ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು. 3ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: 4“ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆ ಎನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಬತ್ತೊಂಬತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? 5ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; 6ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. ‘ಕಳೆದುಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾನೆ, ಅಲ್ಲವೆ?
7“ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಬತ್ತೊಂಬತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಕಳೆದುಹೋದ ನಾಣ್ಯ
8“ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ? ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದುಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ? 9ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ‘ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾಳಲ್ಲವೆ?
10“ಅದೇ ಮೇರೆಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ,” ಎಂದರು.
ದುಂದುಗಾರ ಮಗ
11ಯೇಸುಸ್ವಾಮಿ ಮುಂದುವರಿಸುತ್ತಾ ಈ ಸಾಮತಿಯನ್ನು ಹೇಳಿದರು: “ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. 12ಅವರಲ್ಲಿ ಕಿರಿಯವನು, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,’ ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. 13ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲುಮಾಡಿಬಿಟ್ಟ. 14ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. 15ನಿರ್ಗತಿಕನಾದ ಅವನು ಹೋಗಿ, ಆದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. 16ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. 17ಆಗ ಅವನಿಗೆ ಬುದ್ಧಿ ಬಂದಿತು. ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. 18ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; 19ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,’ ಎಂದುಕೊಂಡ. 20ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ.
“ಮಗನು ಇನ್ನೂ ಅಷ್ಟು ದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. 21ಆದರೂ ಮಗನು, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ’ ಎಂದ. 22ತಂದೆಯಾದರೋ ಆಳುಗಳನ್ನು ಕರೆದು, 'ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ; 23ಕೊಬ್ಬಿಸಿದ ಪ್ರಾಣಿಯನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಆನಂದಿಸೋಣ. 24ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿಹೋಗಿದ್ದ, ಈಗ ಸಿಕ್ಕಿದ್ದಾನೆ,’ ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು.
25“ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. 26‘ಮನೆಯಲ್ಲೇನು ವಿಶೇಷ?’ ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. 27ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,’ ಎಂದು ಆಳು ತಿಳಿಸಿದ.
28“ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ 29ಅವನು, ‘ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. 30ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಪ್ರಾಣಿಯನ್ನು ಕೊಯ್ಯಿಸಿದ್ದೀರಿ!’ ಎಂದು ವಾದಿಸಿದ. 31ಆಗ ತಂದೆ ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. 32ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿಬಂದಿದ್ದಾನೆ. ತಪ್ಪಿಹೋಗಿದ್ದ; ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೆ?’ ಎಂದನು.”

اکنون انتخاب شده:

ಲೂಕ. 15: KANCLBSI

های‌لایت

به اشتراک گذاشتن

کپی

None

می خواهید نکات برجسته خود را در همه دستگاه های خود ذخیره کنید؟ برای ورودثبت نام کنید یا اگر ثبت نام کرده اید وارد شوید