YouVersion Logo
Search Icon

ಲೂಕ 11

11
ಮನುಷ್ಯರು ದೇವರ ಪ್ರಾರ್ಥನೆಯಲ್ಲಿ ಆಸಕ್ತರಾಗಿರಬೇಕೆಂದು ಯೇಸುವು ಸಾಮ್ಯರೂಪವಾಗಿ ಬೋಧಿಸಿದ್ದು
(ಮತ್ತಾ. 6.9-13, 7.7-11)
1ಆತನು ಒಂದಾನೊಂದು ಸ್ಥಳದಲ್ಲಿ ಪ್ರಾರ್ಥನೆಮಾಡಿ ಮುಗಿಸಿದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ - ಸ್ವಾಮೀ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು ಎಂದು ಕೇಳಿದನು. 2ಅದಕ್ಕಾತನು - ನೀವು ಪ್ರಾರ್ಥಿಸುವಾಗ -
ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.
ನಿನ್ನ ರಾಜ್ಯವು ಬರಲಿ.
3ನಮ್ಮ ಅನುದಿನದ ಆಹಾರವನ್ನು ಪ್ರತಿದಿನವೂ ದಯಪಾಲಿಸು.
4ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು
ನಾವು ಕ್ಷವಿುಸುತ್ತೇವಾದ್ದರಿಂದ ನಮ್ಮ ಪಾಪಗಳನ್ನು ಕ್ಷವಿುಸು.
ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ
ಎಂದು ಹೇಳಿರಿ ಅಂದನು.
5ಮತ್ತು ಅವರಿಗೆ ಹೇಳಿದ್ದೇನಂದರೆ - ನಿಮ್ಮಲ್ಲಿ ಒಬ್ಬನಿಗೆ ಸ್ನೇಹಿತನಿದ್ದಾನೆ ಎಂದು ಹೇಳೋಣ. ಅವನು ಸರುಹೊತ್ತಿನಲ್ಲಿ ಆ ಸ್ನೇಹಿತನ ಬಳಿಗೆ ಹೋಗಿ - ಸ್ನೇಹಿತನೇ, ನನಗೆ ಮೂರು ರೊಟ್ಟಿಗಳನ್ನು ಕಡವಾಗಿ ಕೊಡು. 6ನನ್ನ ಸ್ನೇಹಿತರಲ್ಲಿ ಒಬ್ಬನು ಎಲ್ಲಿಗೋ ಪ್ರಯಾಣವಾಗಿ ನನ್ನ ಬಳಿಗೆ ಬಂದಿದ್ದಾನೆ; ಅವನಿಗೆ ಊಟಮಾಡಿಸುವದಕ್ಕೆ ನನ್ನಲ್ಲಿ ಏನೂ ಇಲ್ಲ ಎಂದು ಕೇಳಲು 7ಆ ಸ್ನೇಹಿತನು - ನನಗೆ ತೊಂದರೆಕೊಡಬೇಡ; ಈಗ ಕದಾಹಾಕಿ ಅದೆ; ನನ್ನ ಚಿಕ್ಕ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ನಿನಗೆ ಕೊಡುವದಕ್ಕಾಗುವದಿಲ್ಲ ಎಂದು ಒಳಗಿನಿಂದ ಉತ್ತರ ಕೊಟ್ಟರೂ ಕೊಡಬಹುದು. 8ಆದರೆ ಸ್ನೇಹದ ನಿವಿುತ್ತವಾಗಿ ಎದ್ದು ಕೊಡದೆ ಇದ್ದರೂ ಅವನ ಕಾಟದ ದೆಸೆಯಿಂದ ಎದ್ದು ಬಂದು ಕೇಳಿದಷ್ಟು ಅವನಿಗೆ ಕೊಡುವನೆಂದು ನಿಮಗೆ ಹೇಳುತ್ತೇನೆ. 9ಹಾಗೆಯೇ ನಾನು ನಿಮಗೆ ಹೇಳುವದೇನಂದರೆ - ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು; 10ತಟ್ಟಿರಿ, ನಿಮಗೆ ತೆರೆಯುವದು. ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವದು, ತಟ್ಟುವವನಿಗೆ ತೆರೆಯುವದು. 11ನಿಮ್ಮಲ್ಲಿ ತಂದೆಯಾದವನು ಮೀನನ್ನು#11.11 ಕೆಲವು ಪ್ರತಿಗಳಲ್ಲಿ - ರೊಟ್ಟಿಯನ್ನು ಕೇಳಿದ ಮಗನಿಗೆ ಕಲ್ಲನ್ನು ಕೊಡುವನೇ ಎಂದು ಹೆಚ್ಚಾಗಿ ಬರೆದದೆ. ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ? 12ಅಥವಾ ತತ್ತಿಯನ್ನು#11.12 ಅಥವಾ, ಮೊಟ್ಟೆಯನ್ನು. ಕೇಳಿದರೆ ಚೇಳನ್ನು ಕೊಡುವನೇ? 13ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ ಅಂದನು.
ಫರಿಸಾಯರು ಯೇಸುವನ್ನು ದೂಷಿಸಿ ಸೂಚಕಕಾರ್ಯವನ್ನು ನೋಡಬೇಕೆಂದು ಕೇಳಿಕೊಂಡಾಗ ಯೇಸು ಕೊಟ್ಟ ಉತ್ತರ
(ಮತ್ತಾ. 12.22-45; ಮಾರ್ಕ. 3.22-30, 8.11, 12)
14ಒಂದಾನೊಂದು ಸಮಯದಲ್ಲಿ ಆತನು ಮೂಕ ದೆವ್ವವನ್ನು ಬಿಡಿಸುತ್ತಿದ್ದನು. ಆ ದೆವ್ವವು ಬಿಟ್ಟುಹೋದ ಮೇಲೆ ಮೂಕನು ಮಾತಾಡಿದನು; ಅದಕ್ಕೆ ಜನರು ಆಶ್ಚರ್ಯಪಟ್ಟರು. 15ಆದರೆ ಅವರಲ್ಲಿ ಕೆಲವರು - ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು. 16ಬೇರೆ ಕೆಲವರು ಆತನನ್ನು ಪರೀಕ್ಷಿಸುವದಕ್ಕಾಗಿ - ನೀನು ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ತೋರಿಸಿಕೊಡಬೇಕು ಎಂದು ಕೇಳಿದರು. 17ಆತನು ಅವರ ಆಲೋಚನೆಗಳನ್ನು ತಿಳುಕೊಂಡು ಅವರಿಗೆ ಹೇಳಿದ್ದೇನಂದರೆ - ತನ್ನಲ್ಲಿ ಭೇದಹುಟ್ಟಿದ ರಾಜ್ಯವು ಹಾಳಾಗುತ್ತದೆ; ಮತ್ತು ತನ್ನಲ್ಲಿ ಭೇದಹುಟ್ಟಿದ ಮನೆ ಬೀಳುತ್ತದೆ. 18ಅದರಂತೆ ಸೈತಾನನು ತನ್ನಲ್ಲಿ ಭೇದಹುಟ್ಟಿಸಿಕೊಂಡರೆ ಅವನ ರಾಜ್ಯವು ಹೇಗೆ ಉಳಿದೀತು? ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುತ್ತಿ ಎಂದು ನನಗೆ ಹೇಳುತ್ತೀರಲ್ಲಾ. 19ನಾನು ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವದಾದರೆ ನಿಮ್ಮವರು ಯಾರ ಬಲದಿಂದ ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯತೀರಿಸುವವರಾಗುವರು. 20ನಾನು ದೇವರ ಬಲದಿಂದಲೇ#11.20 ಮೂಲ: ಬೆರಳಿನಿಂದ. ದೆವ್ವಗಳನ್ನು ಬಿಡಿಸುವದಾದರೆ ದೇವರ ರಾಜ್ಯವು ನಿಮ್ಮ ಹತ್ತಿರಕ್ಕೆ ಬಂತಲ್ಲಾ. 21ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ ಅವನ ವಸ್ತುಗಳು ಭದ್ರವಾಗಿಯೇ ಇರುವವು; 22ಆದರೆ ಅವನಿಗಿಂತ ಬಲಿಷ್ಠನು ಬಂದು ಅವನನ್ನು ಸೋಲಿಸಿದ ಮೇಲೆ ಆ ಮೊದಲಿನವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ತೆಗೆದುಕೊಂಡು ತಾನು ಸುಲಿಗೆಮಾಡಿದ್ದನ್ನು ಹಂಚಿಕೊಡುವನು. 23ನನ್ನ ಪಕ್ಷ ಹಿಡಿಯದವನು ನನಗೆ ವಿರೋಧಿ; ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ. 24ದೆವ್ವವು ಮನುಷ್ಯನನ್ನು ಬಿಟ್ಟುಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ; ವಿಶ್ರಾಂತಿ ಸಿಕ್ಕದ ಕಾರಣ ಅದು - ನಾನು ಬಿಟ್ಟು ಬಂದ ನನ್ನ ಮನೆಗೆ ಹಿಂತಿರುಗಿ ಹೋಗುತ್ತೇನೆ ಅಂದುಕೊಂಡು ಬಂದು 25ಆ ಮನೆ ಗುಡಿಸಿ ಅಲಂಕರಿಸಿದ್ದಾಗಿರುವದನ್ನು ಕಂಡು ಹೊರಟುಹೋಗಿ 26ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರಕೊಂಡು ಬರುವದು; ಅವು ಒಳಹೊಕ್ಕು ಅಲ್ಲಿ ವಾಸಮಾಡುವವು; ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗುವದು ಅಂದನು.
27ಆತನು ಈ ಮಾತುಗಳನ್ನು ಹೇಳುತ್ತಿರುವಾಗ ಜನರಲ್ಲಿ ಒಬ್ಬ ಸ್ತ್ರೀಯು - ನಿನ್ನನ್ನು ಹೊತ್ತ ಗರ್ಭವೂ 28ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು ಎಂದು ಕೂಗಿದಳು. ಆತನು - ಹಾಗನ್ನಬೇಡ, ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು ಅಂದನು.
29ಜನರು ಗುಂಪುಗುಂಪಾಗಿ ಕೂಡಿಬರುತ್ತಿರುವಾಗ ಆತನು ಹೇಳುವದಕ್ಕೆ ತೊಡಗಿದ್ದೇನಂದರೆ - ಈ ಸಂತತಿ ಕೆಟ್ಟ ಸಂತತಿಯೇ; ಇದು ಸೂಚಕಕಾರ್ಯವನ್ನು ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವದೂ ಇದಕ್ಕೆ ಸಿಕ್ಕುವದಿಲ್ಲ. 30ಹೇಗೆಂದರೆ ಯೋನನು ನಿನವೆ ಪಟ್ಟಣದವರಿಗೆ ಗುರುತಾದ ಹಾಗೆಯೇ ಮನುಷ್ಯಕುಮಾರನು ಈ ಸಂತತಿಗೆ ಗುರುತಾಗಿರುವನು. 31ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆಯಲ್ಲಿ ಈ ಸಂತತಿಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು; ಆಕೆಯು ಸೊಲೊಮೋನನ ಜ್ಞಾನವನ್ನು ತಿಳುಕೊಳ್ಳುವದಕ್ಕೆ ಭೂವಿುಯ ಕಟ್ಟಕಡೆಯಿಂದ ಬಂದಳು; ಆದರೆ ಇಲ್ಲಿ ಸೊಲೊಮೋನನಿಗಿಂತಲೂ ಹೆಚ್ಚಿನವನಿದ್ದಾನೆ. 32ನ್ಯಾಯವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಹೇಳುವರು. ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ದೇವರ ಕಡೆಗೆ ತಿರುಗಿಕೊಂಡರು; ಆದರೆ ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ.
33ಯಾರೂ ದೀಪವನ್ನು ಹಚ್ಚಿ ಮರೆಯಲ್ಲಾಗಲಿ ಕೊಳಗದೊಳಗಾಗಲಿ ಇಡುವದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಆ ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. 34ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ; ನಿನ್ನ ಕಣ್ಣು ನೆಟ್ಟಗಿರುವಾಗ ಅದರಂತೆ ನಿನ್ನ ದೇಹವೆಲ್ಲಾ ಬೆಳಕಾಗಿರುವದು; ಅದು ಕೆಟ್ಟದ್ದಾಗಿರುವಾಗ ಅದರಂತೆ ನಿನ್ನ ದೇಹವು ಕತ್ತಲಾಗಿರುವದು. ಆದದರಿಂದ ನಿನ್ನೊಳಗಿರುವ ಬೆಳಕೇ ಕತ್ತಲಾಗಿದೆಯೋ ಏನೋ ನೋಡು. 35ನಿನ್ನ ದೇಹವೆಲ್ಲಾ ಬೆಳಕಾಗಿದ್ದು 36ಒಂದು ಭಾಗದಲ್ಲಿಯೂ ಕತ್ತಲಿಲ್ಲದ್ದಾಗಿದ್ದರೆ ದೀಪವು ಹೊಳೆದು ನಿನಗೆ ಬೆಳಕನ್ನು ಕೊಡುವ ಕಾಲದಲ್ಲಿ ಹೇಗೋ ಹಾಗೆಯೇ ಅದು ಪೂರ್ಣವಾಗಿ ಬೆಳಕಾಗಿರುವದು ಅಂದನು.
ಯೇಸು ಫರಿಸಾಯರ ದುರ್ಗುಣಗಳನ್ನು ಖಂಡಿಸಿದ್ದು
(ಮತ್ತಾ. 23.1-36)
37ಆತನು ಮಾತಾಡುತ್ತಿರುವಾಗ ಒಬ್ಬ ಫರಿಸಾಯನು ಆತನನ್ನು ಊಟಕ್ಕೆ ಬರಬೇಕೆಂದು ಕೇಳಿಕೊಳ್ಳಲು ಆತನು ಒಳಕ್ಕೆ ಹೋಗಿ ಊಟಕ್ಕೆ ಕೂತುಕೊಂಡನು. 38ಆತನು ತೊಳಕೊಳ್ಳದೆ ಊಟಕ್ಕೆ ಕೂತದ್ದನ್ನು ಆ ಫರಿಸಾಯನು ಕಂಡು ಆಶ್ಚರ್ಯಪಟ್ಟನು. 39ಸ್ವಾವಿುಯು ಅವನಿಗೆ - ಫರಿಸಾಯರಾದ ನೀವು ಪಂಚಪಾತ್ರೆ ಬಟ್ಟಲು ಇವುಗಳ ಹೊರ ಭಾಗವನ್ನು ಶುಚಿಮಾಡುತ್ತೀರಿ ಸರಿ; ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ. 40ಬುದ್ಧಿಯಿಲ್ಲದವರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಿದನಲ್ಲವೇ. 41ಹೇಗೂ ಒಳಗಿರುವಂಥದನ್ನು ದಾನಾಕೊಡಿರಿ; ಆಗ ಸಕಲವೂ ನಿಮಗೆ ಶುದ್ಧವಾಗಿರುವದು.
42ಅಯ್ಯೋ ಫರಿಸಾಯರೇ, ನೀವು ಮರುಗ ಸದಾಪು ಮುಂತಾದ ಸಕಲ ಪಲ್ಯಗಳಲ್ಲಿ ಹತ್ತರಲ್ಲೊಂದು ಪಾಲುಕೊಡುತ್ತೀರಿ ಸರಿ; ಆದರೆ ನ್ಯಾಯವನ್ನೂ ದೇವರ ಪ್ರೀತಿಯನ್ನೂ ಒತ್ತಟ್ಟಿಗೆ ಬಿಟ್ಟಿದ್ದೀರಿ; ಇವುಗಳನ್ನು ಮಾಡಬೇಕಾಗಿತ್ತು, ಅವುಗಳನ್ನೂ ಬಿಡಬಾರದು. 43ಅಯ್ಯೋ ಫರಿಸಾಯರೇ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳೂ ಅಂಗಡಿ ಬೀದಿಗಳಲ್ಲಿ ನಮಸ್ಕಾರಗಳೂ ನಿಮಗೆ ಇಷ್ಟ. 44ನಿಮ್ಮ ಗತಿಯನ್ನು ಏನು ಹೇಳಲಿ; ನೆಲಸಮವಾದ ಸಮಾಧಿಗಳ ಹಾಗಿದ್ದೀರಿ; ಅವುಗಳ ಮೇಲೆ ತಿರುಗಾಡುವ ಜನರಿಗೆ ಇವು ಸಮಾಧಿಗಳೆಂದು ತಿಳಿಯದು ಎಂದು ಹೇಳಿದನು.
45ಇದನ್ನು ಕೇಳಿ ಒಬ್ಬ ಧರ್ಮೋಪದೇಶಕನು ಆತನಿಗೆ - ಬೋಧಕನೇ, ಈ ಮಾತುಗಳನ್ನು ಹೇಳುವದರಿಂದ ನಮ್ಮನ್ನೂ ನಿಂದಿಸಿದ ಹಾಗಾಯಿತು ಎಂದು ಹೇಳಲು 46ಆತನು - ಧರ್ಮೋಪದೇಶಕರೇ, ನಿಮ್ಮ ಗತಿಯನ್ನೂ ಏನು ಹೇಳಲಿ? ನೀವು ಜನರ ಮೇಲೆ ಹೊರಲಾರದ ಹೊರೆಗಳನ್ನು ಹೊರಿಸುತ್ತೀರಿ; ನೀವಾದರೋ ಆ ಹೊರೆಗಳನ್ನು ಒಂದು ಬೆರಳಿನಿಂದಲೂ ಮುಟ್ಟುವದಿಲ್ಲ. 47ನಿಮ್ಮ ಗತಿಯನ್ನು ಏನು ಹೇಳಲಿ? ನೀವು ಪ್ರವಾದಿಗಳ ಗೋರಿಗಳನ್ನು ಕಟ್ಟುತ್ತೀರಿ; ಅವರನ್ನು ಕೊಂದವರು ನಿಮ್ಮ ಪಿತೃಗಳೇ. 48ಹೀಗಿರುವದರಿಂದ ನಿಮ್ಮ ಪಿತೃಗಳು ಮಾಡಿದ್ದಕ್ಕೆ ನೀವೇ ಸಾಕ್ಷಿಗಳಾಗಿರುವದಲ್ಲದೆ ಅವರ ಕೃತ್ಯಗಳಿಗೆ ಒಪ್ಪಿಕೊಂಡ ಹಾಗಾಯಿತು. ಹೇಗಂದರೆ ಅವರು ಪ್ರವಾದಿಗಳನ್ನು ಕೊಂದರು, ನೀವು ಗೋರಿಗಳನ್ನೇ ಕಟ್ಟುತ್ತೀರಿ. 49ಆದದರಿಂದ ದೇವರ ಜ್ಞಾನವು ಹೇಳಿದ್ದೇನಂದರೆ - ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲ್ಲುವರು; ಕೆಲವರನ್ನು ಹಿಂಸೆಪಡಿಸುವರು. 50-51ಹೀಗೆ ಲೋಕಾದಿಯಿಂದ ಹೇಬೆಲನ ರಕ್ತವು ಮೊದಲುಗೊಂಡು ಯಜ್ಞವೇದಿಗೂ ದೇವಾಲಯಕ್ಕೂ ನಡುವೆ ಹತವಾದ ಜಕರೀಯನ ರಕ್ತದವರೆಗೂ ಸುರಿಸಲ್ಪಟ್ಟ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಈ ಸಂತತಿಯವರು ಉತ್ತರಕೊಡಬೇಕು ಎಂಬದೇ; ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಿಮಗೆ ಹೇಳುತ್ತೇನೆ. 52ಅಯ್ಯೋ ಧರ್ಮೋಪದೇಶಕರೇ, ಜ್ಞಾನಕ್ಕೆ ಸಾಧನವಾದ ಬೀಗದ ಕೈಯನ್ನು ತೆಗೆದುಬಿಟ್ಟಿರಿ. ನೀವೂ ಒಳಕ್ಕೆ ಹೋಗಲಿಲ್ಲ; ಒಳಕ್ಕೆ ಹೋಗುತ್ತಿರುವವರಿಗೂ ಅಡ್ಡಿಮಾಡಿದಿರಿ ಅಂದನು.
53ಬಳಿಕ ಆತನು ಅಲ್ಲಿಂದ ಹೊರಗೆ ಬಂದಾಗ ಶಾಸ್ತ್ರಿಗಳೂ ಫರಿಸಾಯರೂ ಆತನನ್ನು ಕಠಿನವಾಗಿ ವಿರೋಧಿಸಿ ಅನೇಕ ವಿಷಯಗಳನ್ನು ಕುರಿತು ಆತನನ್ನು ಅಡ್ಡಾದಿಡ್ಡಿ ಪ್ರಶ್ನೆ ಮಾಡುತ್ತಾ 54ಆತನ ಬಾಯಿಮಾತಿನಲ್ಲಿ ಏನಾದರೂ ಹಿಡಿಯಬೇಕೆಂದು ಆತನನ್ನು ಹೊಂಚಿನೋಡುತ್ತಿದ್ದರು.

Currently Selected:

ಲೂಕ 11: KANJV-BSI

Tõsta esile

Share

Copy

None

Want to have your highlights saved across all your devices? Sign up or sign in