ಲೂಕ 12
12
ಫರಿಸಾಯರ ಉಪದೇಶಕ್ಕೆ ಎಚ್ಚರಿಕೆಯಾಗಿರಬೇಕೆಂದು ಯೇಸು ಬೋಧಿಸಿದ್ದು
(ಮತ್ತಾ. 10.26-33)
1ಇಷ್ಟರಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿಯುವಷ್ಟು ಕೂಡಿಬಂದಿರಲಾಗಿ ಆತನು ಮೊದಲು ತನ್ನ ಶಿಷ್ಯರಿಗೆ ಹೇಳುವದಕ್ಕೆ ತೊಡಗಿದ್ದೇನಂದರೆ - ಫರಿಸಾಯರ ಕಪಟವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ್ರಿ. 2ಮರೆಯಾಗಿರುವ ಯಾವದೂ ವ್ಯಕ್ತವಾಗದೆ ಇರುವದಿಲ್ಲ; ಹೊರಪಡದ ರಹಸ್ಯವೂ ಇಲ್ಲ. 3ಹೀಗಿರುವದರಿಂದ ನೀವು ಕತ್ತಲಲ್ಲಿ ಹೇಳಿದಂಥದು ಬೆಳಕಿನಲ್ಲಿ ಕೇಳಲಾಗುವದು; ಮತ್ತು ನೀವು ಕೋಣೆಗಳೊಳಗೆ ಕಿವಿಮಾತು ಆಡಿದ್ದು ಮಾಳಿಗೆಗಳ ಮೇಲೆ ಸಾರಲಾಗುವದು.
4ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ - ದೇಹವನ್ನು ಕೊಂದು ಅದಕ್ಕಿಂತ ಹೆಚ್ಚಿನದೇನೂ ಮಾಡಲಾರದವರಿಗೆ ಹೆದರಬೇಡಿರಿ. 5ನೀವು ಯಾರಿಗೆ ಹೆದರಬೇಕೋ ನಿಮಗೆ ತಿಳಿಸುತ್ತೇನೆ; ಕೊಂದ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳವನಿಗೆ ಹೆದರಬೇಕು; ಹೌದು, ಆತನಿಗೇ ಹೆದರಬೇಕೆಂದು ನಿಮಗೆ ಹೇಳುತ್ತೇನೆ. 6ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತು ಹೋಗುವದಿಲ್ಲ. 7ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು. 8ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ ಮನುಷ್ಯಕುಮಾರನು ಸಹ ಅವನನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. 9ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು. 10ಮನುಷ್ಯಕುಮಾರನ ಮೇಲೆ ಏನಾದರೂ ಮಾತಾಡುವ ಪ್ರತಿಯೊಬ್ಬನಿಗೆ ಕ್ಷಮಾಪಣೆಯಾಗುವದು; ಆದರೆ ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮಾಪಣೆಯಿಲ್ಲ. 11ಅವರು ನಿಮ್ಮನ್ನು ಸಭಾಮಂದಿರಗಳ ಅಧ್ಯಕ್ಷರ ಮುಂದಕ್ಕೂ ಅಧಿಕಾರಿಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ಹಿಡುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರಕೊಡಬೇಕು? ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ. 12ಯಾಕಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು ಅಂದನು.
ಯೇಸು ಬುದ್ಧಿಯಿಲ್ಲದ ಐಶ್ವರ್ಯವಂತನ ಸಾಮ್ಯವನ್ನು ಹೇಳಿ ದ್ರವ್ಯಾಶೆಯ ವಿಷಯವಾಗಿಯೂ ಇಹಲೋಕದ ಚಿಂತೆಯ ವಿಷಯವಾಗಿಯೂ ಎಚ್ಚರಿಸಿದ್ದು
(ಮತ್ತಾ. 6.25-33)
13ಆಗ ಜನರಲ್ಲಿ ಒಬ್ಬನು - ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡಿ ಕೊಡುವಂತೆ ನನ್ನ ಅಣ್ಣನಿಗೆ ಹೇಳು ಎಂದು ಆತನನ್ನು ಕೇಳಿಕೊಳ್ಳಲು 14ಆತನು - ಎಲಾ ಮನುಷ್ಯ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇವಿುಸಿದವರಾರು ಎಂದು ಅವನನ್ನು ಕೇಳಿ 15ಜನರಿಗೆ - ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ ಎಂದು ಹೇಳಿ ಒಂದು ಸಾಮ್ಯವನ್ನು ಹೇಳಿದನು; 16ಅದೇನಂದರೆ ಒಬ್ಬಾನೊಬ್ಬ ಐಶ್ವರ್ಯವಂತನ ಭೂವಿುಯು ಚೆನ್ನಾಗಿ ಬೆಳೆಯಿತು. 17ಆಗ ಅವನು ತನ್ನೊಳಗೆ - ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲವಲ್ಲಾ ಎಂದು ಆಲೋಚಿಸಿ - ಒಂದು ಕೆಲಸ ಮಾಡುತ್ತೇನೆ; 18ನನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ತುಂಬಿಟ್ಟು 19ನನ್ನ ಜೀವಾತ್ಮಕ್ಕೆ - ಜೀವವೇ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಿದ್ದದೆ; ವಿಶ್ರವಿುಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು ಅಂದುಕೊಂಡನು. 20ಆದರೆ ದೇವರು ಅವನಿಗೆ - ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು ಎಂದು ಹೇಳಿದನು. 21ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ ಅಂದನು.
22ಇದಲ್ಲದೆ ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟಮಾಡಬೇಕು? ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬದಾಗಿ ನಿಮಗೆ ಹೇಳುತ್ತೇನೆ. 23ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಷ್ಟೆ. 24ಕಾಗೆಗಳನ್ನು ಲಕ್ಷ್ಯವಿಟ್ಟು ಯೋಚಿಸಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ. 25ಚಿಂತೆಮಾಡಿಮಾಡಿ ಒಂದು ಮೊಳ#12.25 ಅಂದರೆ, ಆಯಸ್ಸು ಹೆಚ್ಚು ಮಾಡಿಕೊಳ್ಳುವದು. ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು? 26ಆದದರಿಂದ ಕೇವಲ ಅಲ್ಪವಾದದ್ದನ್ನಾದರೂ ಮಾಡುವದಕ್ಕೆ ನೀವು ಅಶಕ್ತರಾಗಿರಲಾಗಿ ವಿುಕ್ಕಾದದ್ದರ ವಿಷಯದಲ್ಲಿ ಚಿಂತೆಮಾಡುವದೇಕೆ? 27ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಯೋಚಿಸಿರಿ; ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದರೂ ಈ ಹೂವುಗಳೊಳಗೆ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ. 28ಎಲೈ ಅಲ್ಪವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು. 29ಏನು ಊಟಮಾಡಬೇಕು? ಏನು ಕುಡಿಯಬೇಕು ಎಂದು ತವಕಪಡಬೇಡಿರಿ ಮತ್ತು ಅನುಮಾನ ಪಡಬೇಡಿರಿ. 30ಇವೆಲ್ಲವುಗಳ ಮೇಲೆ ಇಹಲೋಕದ ಜನಗಳು ತವಕಪಡುತ್ತಾರೆ; ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ. 31ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ; ಇದರ ಕೂಡ ಅವೂ ನಿಮಗೆ ದೊರಕುವವು. 32ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ. 33ನಿಮಗಿರುವದನ್ನು ಮಾರಿಬಿಟ್ಟು ದಾನಾ ಕೊಡಿರಿ; ಹಳೇವಾಗದಂಥ ಹಮ್ಮೀಣಿಗಳನ್ನು ಮಾಡಿಕೊಂಡು ಪರಲೋಕದಲ್ಲಿ ಲಯವಾಗದ ದ್ರವ್ಯವನ್ನು ಇಟ್ಟುಕೊಳ್ಳಿರಿ. ಅಲ್ಲಿ ಕಳ್ಳನು ಸಮೀಪಕ್ಕೆ ಬರುವದಿಲ್ಲ; ಅದು ನುಸಿಹಿಡಿದು ನಾಶವಾಗುವದಿಲ್ಲ. 34ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸೂ ಇರುವದಷ್ಟೆ.
ತನ್ನ ಶಿಷ್ಯರು ಯಾವಾಗಲೂ ಎಚ್ಚರವಾಗಿರಬೇಕೆಂಬದಾಗಿ ಯೇಸು ಎರಡು ಸಾಮ್ಯಗಳನ್ನು ಹೇಳಿದ್ದು
(ಮತ್ತಾ. 24.42-51)
35ನಿಮ್ಮ ನಡುಗಳು ಕಟ್ಟಿರಲಿ; ನಿಮ್ಮ ದೀವಟಿಗೆಗಳು ಉರಿಯುತ್ತಾ ಇರಲಿ. 36ನೀವಂತೂ ತಮ್ಮ ಯಜಮಾನನು ಬಂದು ತಟ್ಟಿದ ಕೂಡಲೆ ಕದವನ್ನು ತೆರೆಯುವದಕ್ಕೆ ಸಿದ್ಧವಾಗಿದ್ದು ಮದುವೇ ಊಟವನ್ನು ಯಾವಾಗ ತೀರಿಸಿಕೊಂಡು ಬರುವನೋ ಎಂದು ಅವನನ್ನು ಎದುರುನೋಡುತ್ತಿರುವ ಮನುಷ್ಯರಂತಿರಿ. 37ಯಜಮಾನನು ಬಂದು ಯಾವ ಯಾವ ಆಳುಗಳು ಎಚ್ಚರವಾಗಿರುವದನ್ನು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಆತನೇ ನಡುಕಟ್ಟಿಕೊಂಡು ಅವರನ್ನು ಊಟಕ್ಕೆ ಕೂಡ್ರಿಸಿ ಹತ್ತಿರಕ್ಕೆ ಬಂದು ಅವರಿಗೆ ಸೇವೆಮಾಡುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 38ಎರಡನೆಯ ಜಾವದಲ್ಲಿಯಾಗಲಿ ಮೂರನೆಯ ಜಾವದಲ್ಲಿಯಾಗಲಿ ಬಂದಾತನಿಗೆ ಹಾಗೆ ಕಾಣಿಸಿಕೊಂಡವರು ಧನ್ಯರು. 39ಕಳ್ಳನು ಬರುವ ಗಳಿಗೆಯು ಮನೇಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ. 40ನೀವು ಸಹ ಸಿದ್ಧವಾಗಿರ್ರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ ಅಂದನು.
41ಆಗ ಪೇತ್ರನು - ಸ್ವಾಮೀ, ನೀನು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತೀಯೋ? ಎಲ್ಲರಿಗೂ ಹೇಳುತ್ತೀಯೋ ಎಂದು ಕೇಳಲು 42ಸ್ವಾವಿು ಹೇಳಿದ್ದೇನಂದರೆ - ಹೊತ್ತುಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು ಅಳೆದು ಕೊಡುವದಕ್ಕಾಗಿ ಯಜಮಾನನು ತನ್ನ ಮನೆಯವರ ಮೇಲೆ ನೇವಿುಸಿದ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು ಯಾರು? 43ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು. 44ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇವಿುಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 45ಆದರೆ ಆ ಆಳು - ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವದಕ್ಕೂ ತಿಂದು ಕುಡಿದು ಅಮಲೇರುವದಕ್ಕೂ ತೊಡಗಿದರೆ 46ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿನವಾಗಿ ಹೊಡಿಸಿ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇವಿುಸುವನು. 47ತನ್ನ ಯಜಮಾನನ ಚಿತ್ತವನ್ನು ತಿಳಿದ ಆಳು ಸಿದ್ಧಮಾಡದೆಹೋದರೆ ಅಥವಾ ಅವನ ಚಿತ್ತಕ್ಕನುಸಾರ ನಡೆಯದಿದ್ದರೆ ಅವನು ಬಹಳ ಪೆಟ್ಟು ತಿನ್ನುವನು. 48ತಿಳಿಯದೆ ಪೆಟ್ಟುಗಳಿಗೆ ಯೋಗ್ಯವಾದದ್ದನ್ನು ನಡಿಸಿದವನು ಸ್ವಲ್ಪ ಪೆಟ್ಟು ತಿನ್ನುವನು. ಯಾವನಿಗೆ ಬಹಳವಾಗಿ ಕೊಟ್ಟದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು; ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳುವರು.
ಯೇಸುವನ್ನು ಅನುಸರಿಸುವವರಿಗೆ ನೆಂಟರ ವಿರೋಧವಿರುವದೆಂತಲೂ ನೂತನ ಕಾಲದ ಸೂಚನೆಗಳನ್ನು ಗುರುತು ಹಿಡಿಯಬೇಕೆಂತಲೂ ಬೋಧೆ
(ಮತ್ತಾ. 10.34-36, 16.1-3)
49ನಾನು ಬೆಂಕಿಯನ್ನು ಭೂವಿುಯ ಮೇಲೆ ಹಾಕಬೇಕೆಂದು ಬಂದೆನು; ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ! 50ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು. ಅದು ನೆರವೇರುವ ತನಕ ನಾನು ಎಷ್ಟೋ ಬಿಕ್ಕಟ್ಟಿನಲ್ಲಿದ್ದೇನೆ. 51ಭೂಲೋಕದಲ್ಲಿ ಸಮಾಧಾನವನ್ನುಂಟುಮಾಡುವದಕ್ಕೆ ಬಂದೆನೆಂದು ಭಾವಿಸುತ್ತೀರೋ? ಅದಕ್ಕೆ ಬರಲಿಲ್ಲ, ಭೇದವನ್ನುಂಟುಮಾಡುವದಕ್ಕೆ ಬಂದೆನೆಂದು ನಿಮಗೆ ಹೇಳುತ್ತೇನೆ. 52ಹೇಗಂದರೆ - ಇಂದಿನಿಂದ ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರು, ಈ ಮೇರೆಗೆ ಭೇದವುಳ್ಳವರಾಗಿರುವರು. 53ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು, ಅತ್ತೆಗೆ ವಿರೋಧವಾಗಿ ಸೊಸೆಯು ಭೇದವುಳ್ಳವರಾಗಿರುವರು ಅಂದನು.
54ಇದಲ್ಲದೆ ಆತನು ಜನರೆಲ್ಲರಿಗೂ ಹೇಳಿದ್ದೇನಂದರೆ - ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವದನ್ನು ನೀವು ನೋಡಿದ ಕೂಡಲೆ ಮಳೆ ಬರುತ್ತದೆ ಅನ್ನುತ್ತೀರಿ; ಹಾಗೇ ಆಗುತ್ತದೆ. 55ದಕ್ಷಿಣ ದಿಕ್ಕಿನ ಗಾಳಿ ಬೀಸಲಾಗಿ ಸೆಕೆ ಹುಟ್ಟುವದು ಅನ್ನುತ್ತೀರಿ; ಅದೂ ಆಗುತ್ತದೆ. 56ಕಪಟಿಗಳು ನೀವು, ಭೂಮ್ಯಾಕಾಶಗಳ ಭಾವವನ್ನು ಶೋಧಿಸುವದಕ್ಕೆ ನಿಮಗೆ ಗೊತ್ತಿರುವಲ್ಲಿ ಈ ಸಮಯವನ್ನು ಶೋಧಿಸುವದಕ್ಕೆ ನಿಮಗೆ ಯಾಕೆ ಗೊತ್ತಿಲ್ಲ?
57ಇದಲ್ಲದೆ ಇಂಥಿಂಥದು ನ್ಯಾಯವಾದದ್ದೆಂದು ನೀವೇ ಯಾಕೆ ತೀರ್ಮಾನಮಾಡಿಕೊಳ್ಳುವದಿಲ್ಲ? 58ನೀನು ವಾದಿಯ ಸಂಗಡ ನ್ಯಾಯಾಧಿಪತಿಯ ಮುಂದಕ್ಕೆ ಹೋಗುತ್ತಿರುವಾಗ ದಾರಿಯಲ್ಲಿಯೇ ತಂಟೆಹರಿಸಿಕೊಳ್ಳಲು ಪ್ರಯತ್ನಮಾಡು; ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಎಳಕೊಂಡು ಹೋದಾನು; ನ್ಯಾಯಾಧಿಪತಿಯು ನಿನ್ನನ್ನು ಸೆರೇಯಜಮಾನನ ವಶಕ್ಕೆ ಒಪ್ಪಿಸಾನು; ಸೆರೇಯಜಮಾನನು ನಿನ್ನನ್ನು ಸೆರೆಮನೆಯಲ್ಲಿ ಹಾಕಾನು. 59ನೀನು ಒಂದು ಕಾಸನ್ನಾದರೂ ನಿಲ್ಲಿಸಿಕೊಳ್ಳದೆ ಎಲ್ಲಾ ಸಲ್ಲಿಸುವ ತನಕ ಅಲ್ಲಿಂದ ಬರುವದೇ ಇಲ್ಲವೆಂದು ನಿನಗೆ ಹೇಳುತ್ತೇನೆ ಅಂದನು.
Currently Selected:
ಲೂಕ 12: KANJV-BSI
Tõsta esile
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.