ಜೆಕರ್ಯ 9
9
ಇಸ್ರಾಯೇಲಿನ ವೈರಿಗಳಿಗಾಗುವ ನ್ಯಾಯತೀರ್ಪು;
1ಒಂದು ಪ್ರವಾದನೆ:
ಹದ್ರಾಕ್ ದೇಶದ ವಿಷಯವಾದ ಯೆಹೋವ ದೇವರ ವಾಕ್ಯ:
ಅದು ದಮಸ್ಕದಲ್ಲಿ ತಂಗುವುದು.
ಮನುಷ್ಯನ ಕಣ್ಣುಗಳು, ಇಸ್ರಾಯೇಲಿನ ಎಲ್ಲಾ ಗೋತ್ರಗಳು
ಯೆಹೋವ ದೇವರ ಮೇಲೆ ಇರುವುವು.
2ಹಮಾತು, ಬಹಳ ಜ್ಞಾನವಿರುವ
ಟೈರ್, ಸೀದೋನ್ ಸಹ ಅದರ ಮೇರೆಯಾಗಿದೆ.
3ಟೈರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು,
ಬೆಳ್ಳಿಯನ್ನು ಧೂಳಿನಂತೆಯೂ,
ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.
4ಯೆಹೋವ ದೇವರು ಅದರ ಆಸ್ತಿಪಾಸ್ತಿಯನ್ನು ಕಿತ್ತುಹಾಕುವರು.
ಅದೆಲ್ಲವನ್ನು ಸಮುದ್ರದಲ್ಲಿ ಎಸೆದುಬಿಡುವರು.
ಅದು ಬೆಂಕಿಯಿಂದ ದಹಿಸಿಬಿಡುವುದು.
5ಅಷ್ಕೆಲೋನು ಕಂಡು ಭಯಪಡುವುದು,
ಗಾಜವು ಸಹ ಅದನ್ನು ಕಂಡು ವೇದನೆ ಪಡುವುದು.
ಎಕ್ರೋನಿಗೂ ಸಹ ಹೀಗೆ ಆಗುವುದು. ಏಕೆಂದರೆ ಅವಳ ನಿರೀಕ್ಷೆಯು ಬಾಡುವುದು.
ಗಾಜದೊಳಗಿಂದ ಅರಸನು ನಾಶವಾಗುವನು.
ಅಷ್ಕೆಲೋನು ನಿವಾಸ ಇಲ್ಲದೆ ಇರುವುದು.
6ಅಷ್ಡೋದಿನಲ್ಲಿ ಮಿಶ್ರಜಾತಿಯವರು ವಾಸಿಸುವರು.
ಫಿಲಿಷ್ಟಿಯರ ಗರ್ವವನ್ನು ನಾನು ತೆಗೆದುಬಿಡುವೆನು.
7ಅವರ ರಕ್ತವನ್ನು ಅವರ ಬಾಯೊಳಗಿಂದಲೂ,
ಅವರು ಕಚ್ಚುವ ಅಸಹ್ಯ ಪದಾರ್ಥಗಳನ್ನು ನಾನು ತೆಗೆದುಹಾಕಿಬಿಡುವೆನು.
ಅವರು ಸಹ ನಮ್ಮ ದೇವರಿಗಾಗಿ ಉಳಿಯುವರು.
ಯೆಹೂದದಲ್ಲಿ ಪ್ರಭುವಿನ ಹಾಗೆ ಇರುವರು.
ಎಕ್ರೋನು ಯೆಬೂಸಿಯನ ಹಾಗೆ ಇರುವರು.
8ಹೋಗುತ್ತಾ ಬರುತ್ತಾ ಇರುವವನ ನಿಮಿತ್ತವೂ, ಸೈನ್ಯದ ನಿಮಿತ್ತವೂ
ನನ್ನ ಆಲಯದ ಹತ್ತಿರ ಪಾಳೆಯ ಮಾಡುತ್ತೇನೆ.
ಇನ್ನು ಮೇಲೆ ಉಪದ್ರವ ಕೊಡುವವನು, ಅವರ ಮೇಲೆ ಹಾದು ಹೋಗುವುದಿಲ್ಲ.
ಏಕೆಂದರೆ ಈಗ ನನ್ನ ಕಣ್ಣುಗಳಿಂದ ನೋಡುತ್ತಿದ್ದೇನೆ.
ಚೀಯೋನಿನ ಅರಸನ ಆಗಮನ
9ಚೀಯೋನ್ ಪುತ್ರಿಯೇ, ಮಹಾ ಉಲ್ಲಾಸಪಡು.
ಯೆರೂಸಲೇಮಿನ ಪುತ್ರಿಯೇ ಆರ್ಭಟಿಸು,
ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ.
ಆತನು ನೀತಿವಂತನಾಗಿಯೂ ಜಯಹೊಂದಿದವನಾಗಿಯೂ,
ದೀನನಾಗಿಯೂ ಕತ್ತೆಯ ಮೇಲೆ
ಹೌದು, ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾನೆ.
10ಎಫ್ರಾಯೀಮಿನೊಳಗಿಂದ ರಥಗಳನ್ನೂ
ಯೆರೂಸಲೇಮಿನೊಳಗಿಂದ ಯುದ್ಧದ ಕುದುರೆಗಳನ್ನೂ ತೆಗೆದುಬಿಡುವೆನು.
ಯುದ್ಧದ ಬಿಲ್ಲು ಸಹ ಮುರಿದು ಹಾಕಲಾಗುವುದು.
ಇತರ ರಾಷ್ಟ್ರಗಳಿಗೆ ಸಮಾಧಾನಕರವಾಗಿರುವುದು.
ಆತನ ದೊರೆತನವು ಸಮುದ್ರದಿಂದ ಸಮುದ್ರಕ್ಕೂ,
ನದಿಯಿಂದ ಭೂಮಿಯ ಅಂತ್ಯಗಳವರೆಗೂ ಇರುವುದು.
11ನೀನು ನನ್ನೊಡನೆ ಒಡಂಬಡಿಕೆಯನ್ನು ಮಾಡಿಕೊಂಡಾಗ ಸುರಿಸಿದ ರಕ್ತವನ್ನು
ನಾನು ಸ್ಮರಿಸಿ ನಿನ್ನ ಸೆರೆಯವರನ್ನು ನೀರಿಲ್ಲದ ಬಾವಿಯೊಳಗಿಂದ ಬಿಡುಗಡೆಮಾಡುವೆನು.
12ನಿರೀಕ್ಷೆಯ ಸೆರೆಯವರೇ, ಬಲವಾದ ದುರ್ಗಸ್ಥಾನಕ್ಕೆ ತಿರುಗಿರಿ.
ಎರಡರಷ್ಟು ಕೊಡುವೆನೆಂದು ನಿನಗೆ ಈ ಹೊತ್ತೇ ಪ್ರಕಟಿಸುತ್ತೇನೆ.
13ನಾನು ನನ್ನ ಬಿಲ್ಲನ್ನು ಬಗ್ಗಿಸುವಂತೆ ಯೆಹೂದವನ್ನು ಬಗ್ಗಿಸುತ್ತೇನೆ.
ಎಫ್ರಾಯೀಮಿನಿಂದ ಅದನ್ನು ತುಂಬಿಸುತ್ತೇನೆ.
ಚೀಯೋನೇ, ನಿನ್ನ ಪುತ್ರರನ್ನು ಗ್ರೀಕ್ ಪುತ್ರರ ವಿರೋಧವಾಗಿ ಎಬ್ಬಿಸಿ,
ನಿನ್ನನ್ನು ಶೂರನ ಖಡ್ಗದಂತೆ ಮಾಡಿದ್ದೇನೆ.
ಯೆಹೋವ ದೇವರು ಕಾಣಿಸಿಕೊಳ್ಳುವರು
14ಇದಲ್ಲದೆ ಯೆಹೋವ ದೇವರು ಅವರ ಮೇಲೆ ಕಾಣಿಸಿಕೊಳ್ಳುವರು.
ಆತನ ಬಾಣಗಳು ಮಿಂಚಿನ ಹಾಗೆ ಹೊರಡುವುವು.
ಸಾರ್ವಭೌಮ ಯೆಹೋವ ದೇವರು ತುತೂರಿಯನ್ನು ಊದಿ,
ದಕ್ಷಿಣದ ಸುಳಿಗಾಳಿಯಲ್ಲಿ ಹೋಗುವರು.
15ಸೇನಾಧೀಶ್ವರ ಯೆಹೋವ ದೇವರು ಅವರನ್ನು ಕಾಪಾಡುವರು.
ಅವರು ನಾಶಮಾಡಿ,
ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿಕೊಳ್ಳುವರು.
ಕುಡಿದು, ದ್ರಾಕ್ಷಾರಸದಿಂದಾದ ಹಾಗೆ ತೂಗಾಡುವರು.
ಅವರು ಬಲಿಪೀಠದ ಮೂಲೆಗಳಿಗೆ ಚಿಮುಕಿಸಲು ಬಳಸುವ
ಪಾತ್ರೆಯ ಹಾಗೆಯೂ ತುಂಬಿರುವರು.
16ಅವರ ದೇವರಾದ ಯೆಹೋವ ದೇವರು ಆ ದಿವಸದಲ್ಲಿ,
ಅವರನ್ನು ತನ್ನ ಜನರ ಮಂದೆಯ ಹಾಗೆ ರಕ್ಷಿಸುವನು,
ಅವರು ಕಿರೀಟದ ರತ್ನಗಳಂತೆ
ಆತನ ದೇಶದಲ್ಲಿ ಹೊಳೆಯುವರು.
17ಅವರ ಒಳ್ಳೆಯತನವು ಎಷ್ಟೋ ದೊಡ್ಡದು.
ಅವರು ಸೌಂದರ್ಯವು ಎಷ್ಟು ಮಹತ್ತಾದದ್ದು! ಧಾನ್ಯವು ಯೌವನಸ್ಥರನ್ನೂ,
ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವುವು.
Currently Selected:
ಜೆಕರ್ಯ 9: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.