ಜೆಕರ್ಯ 8
8
ಯೆರೂಸಲೇಮನ್ನು ಆಶೀರ್ವದಿಸುತ್ತೇನೆ ಎಂದು ಯೆಹೋವ ದೇವರ ವಾಗ್ದಾನ
1ಯೆಹೋವ ದೇವರ ವಾಕ್ಯವು ನನಗೆ ಪುನಃ ಉಂಟಾಗಿ ಹೇಳಿದ್ದೇನೆಂದರೆ,
2ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಾನು ಚೀಯೋನಿನ ವಿಷಯವಾಗಿ ಅತಿ ರೋಷಗೊಂಡಿದ್ದೇನೆ. ಅತಿ ಉಗ್ರದಿಂದ ಅವಳ ವಿಷಯದಲ್ಲಿ ರೋಷವುಳ್ಳವನಾಗಿದ್ದೇನೆ.”
3ಯೆಹೋವ ದೇವರು ಹೀಗೆ ಹೇಳುತ್ತಾರೆ: “ಚೀಯೋನಿಗೆ ನಾನು ತಿರುಗಿಕೊಂಡು, ನಾನು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವೆನು. ಆಗ ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೇನಾಧೀಶ್ವರ ಯೆಹೋವ ದೇವರ ಪರ್ವತವು ಪರಿಶುದ್ಧ ಪರ್ವತವೆಂದೂ ಕರೆಯಿಸಿಕೊಳ್ಳುವುದು.”
4ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇನ್ನು ಯೆರೂಸಲೇಮಿನ ಬೀದಿಗಳಲ್ಲಿ ವೃದ್ಧರೂ, ಮುದುಕಿಯರೂ ವಾಸವಾಗಿರುವರು. ವೃದ್ದಾಪ್ಯದಿಂದ ಒಬ್ಬೊಬ್ಬರ ಕೈಯಲ್ಲಿ ಅವರವರ ಕೋಲು ಇರುವುದು. 5ಪಟ್ಟಣದ ಬೀದಿಗಳು ಆಡುವ ಬಾಲಕ ಬಾಲಕಿಯರಿಂದ ತುಂಬಿರುವುದು.”
6ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇದು ಈ ದಿವಸಗಳಲ್ಲಿ ಉಳಿದ ಈ ಜನರ ದೃಷ್ಟಿಗೆ ಆಶ್ಚರ್ಯವಾಗಿ ತೋರಿದರೂ, ನನ್ನ ಕಣ್ಣುಗಳಿಗೆ ಸಹ ಆಶ್ಚರ್ಯವಾಗಿ ತೋರುವುದೋ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
7ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಾನು ನನ್ನ ಜನರನ್ನು ಪೂರ್ವದಿಕ್ಕಿನ ದೇಶದಿಂದಲೂ, ಪಶ್ಚಿಮ ದೇಶದಿಂದಲೂ ರಕ್ಷಿಸುವೆನು. 8ನಾನು ಅವರನ್ನು ತರುವೆನು. ಅವರು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು. ನಾನು ಅವರಿಗೆ ನಂಬಿಗಸ್ತನೂ, ನೀತಿವಂತನೂ ಆದ ದೇವರಾಗಿರುವೆನು.”
9ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ದೇವಾಲಯವನ್ನು ಕಟ್ಟುವ ಹಾಗೆ ಸೇನಾಧೀಶ್ವರ ಯೆಹೋವ ದೇವರ ಆಲಯದ ಅಸ್ತಿವಾರವು ಹಾಕಲಾದ ದಿವಸದಲ್ಲಿದ್ದ ಪ್ರವಾದಿಗಳ ಬಾಯಿಂದಾದ ಈ ವಾಕ್ಯಗಳನ್ನು ಈ ದಿವಸಗಳಲ್ಲಿ ಕೇಳುವವರೇ, ನಿಮ್ಮ ಕೈಗಳು ಬಲವಾಗಿರಲಿ. 10ಏಕೆಂದರೆ ಈ ದಿವಸಗಳಿಗಿಂತ ಮುಂಚೆ ಮನುಷ್ಯನಿಗೆ ಕೂಲಿ ಇರಲಿಲ್ಲ, ಪಶುಗಳಿಗೆ ದುಡಿತವಿರಲಿಲ್ಲ; ಇಲ್ಲವೆ ಹೋಗುವವನಿಗೂ, ಬರುವವನಿಗೂ ಇಕ್ಕಟ್ಟಿನ ದೆಸೆಯಿಂದ ಸಮಾಧಾನವಿರಲಿಲ್ಲ. ನಾನು ಪ್ರತಿಯೊಬ್ಬನನ್ನು ಅವರ ನೆರೆಯವನಿಗೆ ವಿರೋಧವಾಗಿ ಇಟ್ಟಿದ್ದೇನೆ. 11ಆದರೆ ಈಗ ಉಳಿದ ಈ ಜನರಿಗೆ ನಾನು ಪೂರ್ವದ ದಿವಸಗಳಲ್ಲಿದ್ದ ಹಾಗೆ ಇರುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
12ಬೀಜವು ವೃದ್ಧಿಯಾಗುವುದು. ದ್ರಾಕ್ಷಿಬಳ್ಳಿ ತನ್ನ ಫಲವನ್ನು ಕೊಡುವುದು. ಭೂಮಿಯು ತನ್ನ ಹುಟ್ಟುವಳಿಯನ್ನು ಹೆಚ್ಚಾಗಿ ಕೊಡುವುದು. ಆಕಾಶಗಳು ತಮ್ಮ ಮಂಜನ್ನು ಕೊಡುವುವು. ಈ ಜನರಲ್ಲಿ ಉಳಿದವರು, ಇವುಗಳನ್ನೆಲ್ಲಾ ಸ್ವಾಧೀನ ಮಾಡಿಕೊಳ್ಳುವಂತೆ ಮಾಡುವೆನು. 13ಯೆಹೂದದ ಮನೆತನದವರೇ, ಇಸ್ರಾಯೇಲಿನ ಮನೆತನದವರೇ ನೀವು ಜನಾಂಗಗಳಲ್ಲಿ ಶಾಪವಾಗಿದ್ದ ಪ್ರಕಾರ, ನಾನು ನಿಮ್ಮನ್ನು ರಕ್ಷಿಸುವೆನು ಮತ್ತು ನೀವು ಆಶೀರ್ವಾದವಾಗಿರುವಿರಿ, ಭಯಪಡಬೇಡಿರಿ, ನಿಮ್ಮ ಕೈಗಳು ಬಲವಾಗಿರಲಿ.
14ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಪಿತೃಗಳು ನನಗೆ ಸಿಟ್ಟು ಎಬ್ಬಿಸಿದಾಗ ನಾನು ನಿಮ್ಮನ್ನು ಕರುಣಿಸದೆ, ವಿನಾಶವನ್ನು ಬರಮಾಡಲು ಯೋಚಿಸಿದೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 15“ಆದರೆ ಈಗ ನಾನು ತಿರುಗಿ ಈ ದಿವಸಗಳಲ್ಲಿ ಪುನಃ ಯೆರೂಸಲೇಮಿಗೂ, ಯೆಹೂದದ ಮನೆತನದವರಿಗೂ ಒಳ್ಳೆಯದನ್ನು ಮಾಡಲು ಯೋಚಿಸಿದ್ದೇನೆ. ನೀವು ಭಯಪಡಬೇಡಿರಿ. 16ನೀವು ಮಾಡತಕ್ಕ ಕಾರ್ಯಗಳು ಇವೇ: ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಮಾತನಾಡಲಿ. ನಿಮ್ಮ ನ್ಯಾಯಾಲಯಗಳಲ್ಲಿ ಸತ್ಯವೂ ನ್ಯಾಯವೂ ಶಾಂತಿಯ ಸಾಧನವಾಗಿರಲಿ. 17ನಿಮ್ಮ ಹೃದಯಗಳಲ್ಲಿ ನೆರೆಯವನ ವಿರುದ್ಧವಾಗಿ ಕೇಡನ್ನು ಕಲ್ಪಿಸದಿರಿ. ಸುಳ್ಳು ಪ್ರಮಾಣವನ್ನು ಪ್ರೀತಿಸಬೇಡಿರಿ. ಏಕೆಂದರೆ ಇವುಗಳನ್ನೆಲ್ಲಾ ನಾನು ಹಗೆಮಾಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
18ಯೆಹೋವ ದೇವರ ವಾಕ್ಯವು ಪುನಃ ನನಗೆ ಬಂದು ಹೇಳಿದ್ದೇನೆಂದರೆ,
19ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಾಲ್ಕನೆಯ, ಐದನೆಯ, ಏಳನೆಯ, ಹತ್ತನೆಯ ತಿಂಗಳಿನ ಉಪವಾಸವು ಯೆಹೂದದ ಮನೆತನದವರಿಗೆ ಸಂತೋಷಕರ, ಸಂಭ್ರಮ ಕಾಲವೂ, ಆನಂದಕರವಾದ ಹಬ್ಬಗಳೂ ಆಗುವುವು. ಆದರೆ ಸತ್ಯವನ್ನೂ, ಸಮಾಧಾನವನ್ನೂ ಪ್ರೀತಿಸಿರಿ.”
20ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅನೇಕ ಜನರೂ, ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನೂ ಬರುವರು. 21ಒಂದು ಪಟ್ಟಣದ ನಿವಾಸಿಗಳು ಮತ್ತೊಂದಕ್ಕೆ ಹೋಗಿ, ‘ನಾವು ಯೆಹೋವ ದೇವರ ಮುಂದೆ ಬೇಡಿಕೊಳ್ಳುವುದಕ್ಕೂ, ಸೇನಾಧೀಶ್ವರ ಯೆಹೋವ ದೇವರನ್ನು ಹುಡುಕುವುದಕ್ಕೂ ಬೇಗ ಹೋಗೋಣ. ನಾನು ಕೂಡ ಹೋಗುತ್ತೇನೆ,’ ಎಂದು ಹೇಳುವರು. 22ಅನೇಕ ಜನರೂ, ಬಲವಾದ ಜನಾಂಗಗಳೂ ಯೆರೂಸಲೇಮಿಗೆ ಸೇನಾಧೀಶ್ವರ ಯೆಹೋವ ದೇವರನ್ನು ಹುಡುಕುವುದಕ್ಕೂ, ಯೆಹೋವ ದೇವರ ಮುಂದೆ ಬೇಡಿಕೊಳ್ಳುವುದಕ್ಕೂ ಬರುವುವು.”
23ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಆ ದಿವಸಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು, ನಾವು ನಿಮ್ಮ ಸಂಗಡ ಬರುತ್ತೇವೆ, ಏಕೆಂದರೆ ನಿಮ್ಮ ಸಂಗಡ ದೇವರು ಇದ್ದಾರೆಂದು ಕೇಳಿದ್ದೇವೆ,” ಎಂದು ಹೇಳುವರು.
Currently Selected:
ಜೆಕರ್ಯ 8: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.