ಜೆಕರ್ಯ 7
7
ನ್ಯಾಯ ಮತ್ತು ಕರುಣೆ, ಉಪವಾಸವಲ್ಲ
1ಅರಸನಾದ ದಾರ್ಯಾವೆಷನ ನಾಲ್ಕನೆಯ ವರ್ಷದಲ್ಲಿ ಒಂಬತ್ತನೆಯ ತಿಂಗಳಿನ ಅಂದರೆ ಕಿಸ್ಲೇವ್ ತಿಂಗಳಿನ ನಾಲ್ಕನೆಯ ದಿವಸದಲ್ಲಿ ಯೆಹೋವ ದೇವರ ವಾಕ್ಯವು ಜೆಕರ್ಯನಿಗೆ ಬಂದಿತು. 2ಅಷ್ಟರಲ್ಲಿ ಬೇತೇಲಿನ ಜನರು ಸರೆಚರನನ್ನೂ, ರೆಗೆಮ್ ಮೆಲೆಕನನ್ನೂ, ಅವರ ಮನುಷ್ಯರನ್ನೂ ಯೆಹೋವ ದೇವರ ಪ್ರಸನ್ನತೆಯನ್ನು ಕೋರಲು ದೇವಾಲಯಕ್ಕೆ ಕಳುಹಿಸಿದರು. 3ಆಗ ಸರ್ವಶಕ್ತರಾದ ಯೆಹೋವ ದೇವರ ಆಲಯದಲ್ಲಿದ್ದ ಯಾಜಕರ ಸಂಗಡ ಮತ್ತು ಪ್ರವಾದಿಗಳ ಸಂಗಡ ನಾನು ಮಾತನಾಡಿ, “ಇಷ್ಟು ವರ್ಷ ಮಾಡಿದ ಪ್ರಕಾರ, ಐದನೆಯ ತಿಂಗಳಿನಲ್ಲಿ ಉಪವಾಸವಿದ್ದು, ಪ್ರಲಾಪಿಸಬೇಕೋ?” ಎಂದು ವಿಚಾರಿಸಿಕೊಂಡು ಬರಬೇಕೆಂದು ಅವರಿಗೆ ಆಜ್ಞಾಪಿಸಿದರು.
4ಆಗ ಸರ್ವಶಕ್ತರಾದ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ, 5“ದೇಶದ ಜನರೆಲ್ಲರಿಗೂ, ಯಾಜಕರಿಗೂ ಹೀಗೆ ಹೇಳು: ‘ನೀವು ಈ ಎಪ್ಪತ್ತು ವರ್ಷಗಳು ಐದನೆಯ ಮತ್ತು ಏಳನೆಯ ತಿಂಗಳುಗಳಲ್ಲಿ ಉಪವಾಸ ಮಾಡಿ, ದುಃಖಿಸುತ್ತಿದ್ದಾಗ, ಆ ನಿಮ್ಮ ಉಪವಾಸವು ನಿಜವಾಗಿಯೂ ನನಗಾಗಿ ಮಾಡಿದ್ದೀರೋ? 6ನೀವು ಉಂಡು ಕುಡಿಯುತ್ತಿದ್ದಾಗ, ನಿಮಗಾಗಿಯೇ ಉಂಡು ಕುಡಿದಿರಲ್ಲಾ? 7ಯೆರೂಸಲೇಮು, ಅದರ ಸುತ್ತಲಿನ ಪಟ್ಟಣಗಳೂ ನಿವಾಸಿಗಳುಳ್ಳವುಗಳಾಗಿಯೂ, ಸುಖವಾಗಿಯೂ, ಸಮೃದ್ಧಿಯಾಗಿಯೂ ದಕ್ಷಿಣವೂ, ಪಶ್ಚಿಮ ನಿವಾಸಿಗಳುಳ್ಳವುಗಳಾಗಿಯೂ ಇದ್ದಾಗ, ಯೆಹೋವ ದೇವರು ಪೂರ್ವದ ಪ್ರವಾದಿಗಳ ಮೂಲಕ ಸಾರಿದ ಮಾತುಗಳು ಅವು ಅಲ್ಲವೋ?’ ಎಂಬುದು.”
8ಯೆಹೋವ ದೇವರ ವಾಕ್ಯವು ಜೆಕರ್ಯನಿಗೆ ಪುನಃ ಬಂದು ಹೇಳಿದ್ದೇನೆಂದರೆ, 9“ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನಿಜವಾದ ನ್ಯಾಯವನ್ನು ತೀರಿಸಿರಿ; ಒಬ್ಬರಿಗೊಬ್ಬರು ಪ್ರೀತಿಯನ್ನೂ, ಕನಿಕರವನ್ನೂ ತೋರಿಸಿರಿ; 10ವಿಧವೆಗೂ, ದಿಕ್ಕಿಲ್ಲದವನಿಗೂ, ಅನ್ಯನಿಗೂ, ಬಡವನಿಗೂ ಹಿಂಸಾಚಾರ ಮಾಡಬೇಡಿರಿ; ಯಾರೂ ತನ್ನ ಹೃದಯದಲ್ಲಿ ತನ್ನ ಸಹೋದರನ ಮೇಲೆ ಕೆಟ್ಟದ್ದನ್ನು ಕಲ್ಪಿಸದೆ ಇರಲಿ,’ ” ಎಂಬುದು.
11“ಆದರೆ ಅವರು ಕೇಳುವುದಕ್ಕೆ ನಿರಾಕರಿಸಿದರು. ಅವರು ಬೆನ್ನನ್ನು ತಿರುಗಿಸಿ, ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದ ಮಾಡಿಕೊಂಡರು. 12ಅವರು ನಿಯಮವನ್ನೂ, ಸರ್ವಶಕ್ತದರಾದ ಯೆಹೋವ ದೇವರು ತಮ್ಮ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯಗಳನ್ನೂ ಕೇಳದ ಹಾಗೆ, ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಕಠಿಣಮಾಡಿಕೊಂಡರು. ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರ ಮಹಾಕೋಪಕ್ಕೆ ಗುರಿಯಾದರು.
13“ಆಗ, ‘ನಾನು ಕೂಗಲು, ಅವರು ಕೇಳದೆ ಇದ್ದ ಪ್ರಕಾರ, ಅವರು ಕೂಗಲು ನಾನು ಕೇಳದೆ ಇದ್ದೇನೆಂದು,’ ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. 14ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರಗಾಳಿಯಿಂದ ಚದರಿಸಿ ಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು. ಹಾದು ಹೋಗುವವನೂ, ತಿರುಗಿಕೊಳ್ಳುವವನೂ ಇಲ್ಲದೆ ಹೋಯಿತು. ಏಕೆಂದರೆ ರಮ್ಯವಾದ ದೇಶವನ್ನು ಹಾಳುಮಾಡಿದರು.”
Currently Selected:
ಜೆಕರ್ಯ 7: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.