YouVersion Logo
Search Icon

ಜೆಕರ್ಯ 6

6
ನಾಲ್ಕು ರಥಗಳು
1ನಾನು ಕಣ್ಣೆತ್ತಿ ನೋಡಿದಾಗ, ನಾಲ್ಕು ರಥಗಳು ಎರಡು ಬೆಟ್ಟಗಳ ಮಧ್ಯದಿಂದ ಹೊರಟು ಬಂದವು. ಆ ಬೆಟ್ಟಗಳು ಕಂಚಿನ ಬೆಟ್ಟಗಳಾಗಿದ್ದವು. 2ಮೊದಲನೆಯ ರಥಕ್ಕೆ ಕೆಂಪು ಕುದುರೆಗಳಿದ್ದವು, ಎರಡನೆಯ ರಥಕ್ಕೆ ಕಪ್ಪು ಕುದುರೆಗಳು, 3ಮೂರನೆಯ ರಥಕ್ಕೆ ಬಿಳಿ ಕುದುರೆಗಳು, ನಾಲ್ಕನೆಯ ರಥಕ್ಕೆ ಮಚ್ಚೆ ಮಚ್ಚೆಯ ಕುದುರೆಗಳಿದ್ದವು. ಇವೆಲ್ಲವೂ ಬಲವಾದ ಕುದುರೆಗಳು. 4ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ, “ನನ್ನ ಒಡೆಯನೇ, ಇದೇನು?” ಎಂದೆನು.
5ದೂತನು ನನಗೆ, “ಇವು ಸ್ವರ್ಗದ ನಾಲ್ಕು ಆತ್ಮಗಳು. ಇವು ಇಡೀ ಜಗತ್ತಿನ ಕಡೆಗೆ ಯೆಹೋವ ದೇವರ ಮುಂದೆ ನಿಂತಲ್ಲಿಂದ ಹೊರಟಿವೆ. 6ಕಪ್ಪು ಕುದುರೆಗಳ ರಥ, ಉತ್ತರ ದೇಶಕ್ಕೆ ಹೊರಟಿತು. ಬಿಳಿ ಕುದುರೆಗಳು ಪಶ್ಚಿಮಕ್ಕೆ ಹಿಂದೆ ಹೋಯಿತು. ಮಚ್ಚೆ ಮಚ್ಚೆಯ ಕುದುರೆಯ ರಥ ದಕ್ಷಿಣಕ್ಕೆ ಹೊರಟಿತು.”
7ಕೆಂಪು ಕುದುರೆಗಳ ರಥ ಹೊರಟು ಲೋಕದಲ್ಲಿ ಸಂಚಾರ ಮಾಡಲು ಹೋಗುವುದಕ್ಕೆ ನೋಡಿದವು. ಆಗ ಅವನು, “ಹೋಗಿ ಲೋಕದಲ್ಲಿ ಅತ್ತಿತ್ತ ನಡೆದಾಡುವುದಕ್ಕೆ ಇಲ್ಲಿಂದ ಹೋಗಿರಿ,” ಎಂದನು. ಹಾಗೆ ಅವು ದೇಶದಲ್ಲಿ ಅತ್ತಿತ್ತ ತಿರುಗಾಡಿದವು.
8ಆಗ ದೂತನು ನನಗೆ ಕೂಗಿ, “ನೋಡು, ಉತ್ತರ ದೇಶಕ್ಕೆ ಹೊರಟವುಗಳು, ಉತ್ತರ ದೇಶದಲ್ಲಿ ನನ್ನ ಆತ್ಮವನ್ನು ಶಾಂತಿ ಪಡಿಸಿವೆ,” ಎಂದನು.
ಯೆಹೋಶುವನಿಗೆ ಕಿರೀಟ
9ಯೆಹೋವ ದೇವರ ವಾಕ್ಯವು ನನಗೆ ಬಂದಿತು: 10“ಆ ಸೆರೆಯವರಿಂದ, ಅಂದರೆ ಬಾಬಿಲೋನಿನಿಂದ ಬಂದಿರುವ ಹೆಲ್ದಾಯನಿಂದಲೂ, ತೋಬೀಯನಿಂದಲೂ, ಯೆದಾಯನಿಂದಲೂ ಬೆಳ್ಳಿಬಂಗಾರವನ್ನು ತೆಗೆದುಕೊಂಡು, ಅದೇ ದಿವಸದಲ್ಲಿ ನೀನು ಜೆಫನ್ಯನ ಮಗ ಯೋಷೀಯನ ಮನೆಗೆ ಹೋಗು. 11ಅಲ್ಲಿ ಬೆಳ್ಳಿ, ಬಂಗಾರವನ್ನು ತೆಗೆದುಕೊಂಡು, ಕಿರೀಟಗಳನ್ನು ಮಾಡಿ, ಅವುಗಳನ್ನು ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನ ತಲೆಯ ಮೇಲೆ ಇಟ್ಟು, 12ಅವನಿಗೆ ಹೇಳತಕ್ಕದ್ದೇನೆಂದರೆ: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ರೆಂಬೆ,’ ಎಂದು ಹೆಸರುಳ್ಳ ಮನುಷ್ಯನು, ತನ್ನ ಸ್ಥಳದೊಳಗಿಂದ ರೆಂಬೆಯನ್ನು ತೆಗೆದುಹಾಕಿ, ಯೆಹೋವ ದೇವರ ಆಲಯವನ್ನು ಕಟ್ಟುವನು. 13ಅವನೇ ಯೆಹೋವ ದೇವರ ದೇವಾಲಯವನ್ನು ಕಟ್ಟಿದ ಮೇಲೆ, ರಾಜವೈಭವವನ್ನು ಧರಿಸಿ ಸಿಂಹಾಸನದ ಮೇಲೆ ಆಸೀನನಾಗಿ ಆಳುವನು. ಅವನ ಸಿಂಹಾಸನದಲ್ಲಿ ಒಬ್ಬ ಯಾಜಕನಾಗಿರುವನು. ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವುದು. 14ಆ ಕಿರೀಟಗಳು ಹೇಲೆಮ್, ತೋಬೀಯ, ಯೆದಾಯ ಮತ್ತು ಜೆಫನ್ಯನ ಮಗ ಹೇನ್ ಇವರ ಜ್ಞಾಪಕಾರ್ಥವಾಗಿ ಯೆಹೋವ ದೇವರ ಆಲಯದಲ್ಲಿ ಇರುವುವು. 15ದೂರದಲ್ಲಿರುವವರು ಬಂದು ಯೆಹೋವ ದೇವರ ಆಲಯವನ್ನು ಕಟ್ಟುವುದಕ್ಕೆ ಸಹಾಯ ಮಾಡುವರು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆಂದು ನೀವು ತಿಳಿಯುವಿರಿ. ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ಜಾಗ್ರತೆಯಾಗಿ ಕಿವಿಗೊಟ್ಟರೆ, ಇದು ನೆರವೇರುವುದು.”

Currently Selected:

ಜೆಕರ್ಯ 6: KSB

Highlight

Share

Copy

None

Want to have your highlights saved across all your devices? Sign up or sign in