YouVersion Logo
Search Icon

ಜೆಕರ್ಯ 13

13
ಪಾಪದಿಂದ ಶುದ್ಧೀಕರಣ
1“ಆ ದಿವಸದಲ್ಲಿ ದಾವೀದನ ಮನೆತನದವರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಅವರ ಪಾಪದಿಂದ ಮತ್ತು ಅಶುದ್ಧತೆಯಿಂದ ಶುದ್ಧೀಕರಿಸಲು ಒಂದು ಬುಗ್ಗೆಯು ತೆರೆಯಲಾಗುವುದು.
2“ಆ ದಿನದಲ್ಲಿ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು. ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಪ್ರವಾದಿಗಳನ್ನೂ, ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿಹೋಗುವಂತೆ ಮಾಡುವೆನು. 3ಯಾವನಾದರೂ ಇನ್ನು ಪ್ರವಾದಿಸಿದರೆ, ಅವನ ಹೆತ್ತವರಾದ ತಂದೆತಾಯಿಗಳು ಅವನಿಗೆ, ‘ನೀನು ಬದುಕಬಾರದು, ಏಕೆಂದರೆ ಯೆಹೋವ ದೇವರ ಹೆಸರಿನಲ್ಲಿ ಸುಳ್ಳು ಹೇಳುತ್ತೀ,’ ಎಂದು ಹೇಳುವರು. ಅವನು ಪ್ರವಾದಿಸುವಾಗ ಅವನ ತಂದೆತಾಯಿಗಳು ಅವನನ್ನು ಇರಿದುಬಿಡುವರು.
4“ಆ ದಿವಸದಲ್ಲಿ, ಪ್ರವಾದಿಗಳು ಪ್ರವಾದಿಸುವಾಗ, ಅವರು ತಮ್ಮ ತಮ್ಮ ದರ್ಶನಗಳಿಗೆ ನಾಚಿಕೆಪಡುವರು. ಅವರು ಮೋಸಗೊಳಿಸಲು ಪ್ರವಾದಿಯ ಒರಟಾದ ವಸ್ತ್ರವನ್ನು ಧರಿಸುವುದಿಲ್ಲ. 5ಆದರೆ ಅವನು, ‘ನಾನು ಪ್ರವಾದಿಯಲ್ಲ, ನಾನು ಹೊಲದಲ್ಲಿ ವ್ಯವಸಾಯ ಮಾಡುವವನು, ಚಿಕ್ಕಂದಿನಿಂದ ನಾನು ಗುಲಾಮನಾಗಿದ್ದೇನೆ,’ ಎಂದು ಹೇಳುವನು. 6ಆಗ ಒಬ್ಬನು ಅವನಿಗೆ, ‘ನಿನ್ನ ಕೈಗಳಲ್ಲಿರುವ ಈ ಗಾಯಗಳು ಏನು?’ ಎಂದು ಕೇಳಿದರೆ, ಅವನು, ‘ನನ್ನ ಸ್ನೇಹಿತರ ಮನೆಯಲ್ಲಿ ನನಗುಂಟಾದ ಗಾಯಗಳೇ,’ ಅನ್ನುವನು.
ಕುರುಬನು ಹೊಡೆತಕ್ಕೆ ಒಳಗಾಗುವನು, ಕುರಿಗಳು ಚದರುವುವು
7“ಖಡ್ಗವೇ, ನನ್ನ ಕುರುಬನಿಗೆ ವಿರೋಧವಾಗಿ,
ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ ಎಚ್ಚರವಾಗು,”
ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
“ಕುರುಬನನ್ನು ಹೊಡೆ,
ಆಗ ಕುರಿಗಳು ಚದರಿಹೋಗುವುವು.
ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.
8ಯೆಹೋವ ದೇವರು ಹೀಗೆ ಹೇಳುತ್ತಾರೆ, ಸಮಸ್ತ ದೇಶದಲ್ಲಿ
ಮೂರರಲ್ಲಿ ಎರಡು ಪಾಲು ಹತರಾಗಿ ನಾಶವಾಗುವರು.
ಆದರೆ ಮೂರನೆಯ ಪಾಲು, ಅದರಲ್ಲಿ ಉಳಿಯುವರು.
9ಈ ಮೂರನೆಯ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ,
ಬೆಳ್ಳಿಯನ್ನು ಶುದ್ಧ ಮಾಡುವಂತೆ ಶುದ್ಧಮಾಡುವೆನು.
ಬಂಗಾರವನ್ನು ಶೋಧಿಸುವ ಪ್ರಕಾರ ಅವರನ್ನು ಶೋಧಿಸುವೆನು.
ಅವರು ನನ್ನ ಹೆಸರನ್ನು ಕರೆಯುವರು.
ನಾನು ಅವರಿಗೆ ಉತ್ತರಕೊಡುವೆನು.
ನಾನು, ‘ಇವರು ನನ್ನ ಜನರೆಂದು ಹೇಳುವೆನು,’
‘ಯೆಹೋವ ದೇವರು ನಮ್ಮ ದೇವರು’ ಎಂದು ಅವರು ಹೇಳುವರು,” ಎಂದು ಹೇಳುತ್ತೇನೆ.

Currently Selected:

ಜೆಕರ್ಯ 13: KSB

Highlight

Share

Copy

None

Want to have your highlights saved across all your devices? Sign up or sign in

Video for ಜೆಕರ್ಯ 13