ಜೆಕರ್ಯ 12
12
ಯೆರೂಸಲೇಮಿನ ವೈರಿಗಳನ್ನು ನಾಶ ಮಾಡಲಾಗುವುದು
1ಒಂದು ಪ್ರವಾದನೆ: ಇಸ್ರಾಯೇಲಿನ ವಿಷಯವಾಗಿ ಯೆಹೋವ ದೇವರ ವಾಕ್ಯ.
ಆಕಾಶವನ್ನು ಹರಡಿಸುವಾತರೂ, ಭೂಮಿಯ ಅಸ್ತಿವಾರವನ್ನು ಹಾಕುವಾತರೂ, ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತರೂ ಆದ ಯೆಹೋವ ದೇವರು ಹೇಳುವುದೇನೆಂದರೆ, 2“ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ಅಮಲೇರಿಸಿ ಓಲಾಡಿಸುವ ಪಾತ್ರೆಯಾಗಿ ಮಾಡುತ್ತೇನೆ. ಯೆರೂಸಲೇಮಿಗೂ, ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವಾಗ 3ಆ ದಿವಸದಲ್ಲಿ, ಅವಳ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವಾಗ, ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಚಲಿಸಲಾಗದ ಕಲ್ಲಾಗಿ ಮಾಡುತ್ತೇನೆ. ಅದನ್ನು ತೆಗೆದುಹಾಕಲು ಪ್ರಯತ್ನಿಸುವವರೆಲ್ಲರು ತಮ್ಮನ್ನು ತಾವೇ ಗಾಯಗೊಳಿಸಿಕೊಳ್ಳುತ್ತಾರೆ. 4ಆ ದಿನದಲ್ಲಿ, ನಾನು ಅವರ ಕುದುರೆಗಳಿಗೆಲ್ಲಾ ತಬ್ಬಿಬ್ಬನ್ನು ಉಂಟುಮಾಡುವೆನು, ಅದರ ರಾಹುತರನ್ನು ಭ್ರಮೆಗೊಳಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. ಯೆಹೂದ ವಂಶವನ್ನು ಕಟಾಕ್ಷಿಸಿ ಜನಾಂಗಗಳ ಕುದುರೆಗಳನ್ನೆಲ್ಲಾ ಕುರುಡು ಮಾಡುವೆನು. 5ಆ ಯೆಹೂದದ ದೊರೆಗಳು ತಮ್ಮ ಹೃದಯದಲ್ಲಿ ಯೆರೂಸಲೇಮಿನ ನಿವಾಸಿಗಳ ಶಕ್ತಿ ಸಾಮರ್ಥ್ಯ, ತಮ್ಮ ಸೇನಾಧೀಶ್ವರ ಯೆಹೋವ ದೇವರಲ್ಲಿಯೇ ಎಂದುಕೊಳ್ಳುವರು.
6“ಆ ದಿವಸದಲ್ಲಿ ನಾನು ಯೆಹೂದದ ಕುಲಪತಿಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ, ಸಿವುಡುಗಳಲ್ಲಿರುವ ಬೆಂಕಿಯ ಪಂಜಿನ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ, ಎಡಗಡೆಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನೂ ನುಂಗಿಬಿಡುವರು. ಆದರೆ ಯೆರೂಸಲೇಮಿನವರು ತಿರುಗಿ ತನ್ನ ಸ್ಥಳದಲ್ಲಿ ಯೆರೂಸಲೇಮಿನಲ್ಲಿಯೇ ಸುರಕ್ಷಿತವಾಗಿ ವಾಸಿಸುವರು.
7“ಇದಲ್ಲದೆ ದಾವೀದನ ಮನೆಯ ಘನತೆಯೂ, ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ, ಯೆಹೋವ ದೇವರು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವರು. 8ಆ ದಿನದಲ್ಲಿ ಯೆಹೋವ ದೇವರು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವರು. ಆ ದಿವಸಗಳಲ್ಲಿ ಅವರಲ್ಲಿ ಅತ್ಯಂತ ಬಲಹೀನನು ದಾವೀದನಂತೆ ಬಲಾಢ್ಯನಾಗುವನು. ದಾವೀದನ ವಂಶವು ದೇವರ ಹಾಗೆಯೂ, ಮುಂದಾಳಾಗಿ ಯೆಹೋವ ದೇವರ ದೂತನ ಹಾಗೆಯೂ ಇರುವುದು. 9ಆ ದಿವಸದಲ್ಲಿ, ಯೆರೂಸಲೇಮಿಗೆ ವಿರೋಧವಾಗಿ ಬರುವ ಜನಾಂಗಗಳನ್ನೆಲ್ಲಾ ನಾಶಮಾಡುವುದಕ್ಕೆ ನಾನು ಹುಡುಕುವೆನು.
ಅವರು ತಿವಿದವನಿಗಾಗಿ ಶೋಕ
10“ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನು ಮತ್ತು ಮೊರೆಯಿಡುವ ಮನೋಭಾವವನ್ನು ಸುರಿಸುವೆನು. ತಾವು ಇರಿದವನನ್ನು ಅವರು ದೃಷ್ಟಿಸಿನೋಡುವರು. ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ, ಆತನ ನಿಮಿತ್ತ ಗೋಳಾಡುವರು. ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆ ಪಡುವರು. 11ಆ ದಿವಸದಲ್ಲಿ ಯೆರೂಸಲೇಮಿನಲ್ಲಿ ದೊಡ್ಡ ಗೋಳಾಟವಿರುವುದು. ಮೆಗಿದ್ದೋವಿನ ತಗ್ಗಿನಲ್ಲಾದ ಹದದ್ ರಿಮ್ಮೋನಿನ ಗೋಳಾಟದ ಹಾಗೆಯೇ. 12ದೇಶವು ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾಗಿ ಗೋಳಾಡುವುದು. ದಾವೀದನ ಮನೆಯ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ನಾತಾನನ ಮನೆತನದ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; 13ಲೇವಿಯರ ಮನೆತನದ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ಶಿಮ್ಮೀಯನ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ. 14ಮತ್ತು ಉಳಿದ ಕುಲಗಳೆಲ್ಲಾ ಪ್ರತ್ಯೇಕವಾಗಿಯೂ, ಅವರ ಹೆಂಡತಿಯರು ಪ್ರತ್ಯೇಕವಾಗಿಯೂ ಗೋಳಾಡುವರು.”
Currently Selected:
ಜೆಕರ್ಯ 12: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.