YouVersion Logo
Search Icon

ಮತ್ತಾಯ 21

21
ಯೆರೂಸಲೇಮಿನಲ್ಲಿ ಯೇಸು ಅರಸನಂತೆ ಪ್ರವೇಶ
1ಅವರು ಯೆರೂಸಲೇಮಿಗೆ ಸಮೀಪಿಸಿ ಓಲಿವ್ ಗುಡ್ಡದ ಬೇತ್ಫಗೆ ಬಂದಾಗ, ಯೇಸು ಇಬ್ಬರು ಶಿಷ್ಯರನ್ನು ಕಳುಹಿಸಿ, 2ಅವರಿಗೆ, “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ. ತಕ್ಷಣವೇ ಒಂದು ಕತ್ತೆಯು ತನ್ನ ಮರಿಯೊಂದಿಗೆ ಕಟ್ಟಿರುವುದನ್ನು ನೀವು ಕಾಣುವಿರಿ. ಅವುಗಳನ್ನು ಬಿಚ್ಚಿ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ. 3ಯಾವನಾದರೂ ನಿಮಗೆ ಏನಾದರೂ ಕೇಳಿದರೆ, ನೀವು ಅವನಿಗೆ, ‘ಇವು ಕರ್ತದೇವರಿಗೆ ಅವಶ್ಯವಾಗಿವೆ’ ಎಂದು ಹೇಳಿರಿ. ಆಗ ಅವನು ಅವುಗಳನ್ನು ಕೂಡಲೇ ಕಳುಹಿಸುವನು,” ಎಂದು ಹೇಳಿದರು.
4ಇದೆಲ್ಲವೂ ಪವಿತ್ರ ವೇದದಲ್ಲಿ ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಆಯಿತು. ಅದೇನೆಂದರೆ,
5“ಚೀಯೋನಿನ ಪುತ್ರಿಗೆ ಹೇಳಿರಿ,#21:5 ಚೀಯೋನ ಅಂದರೆ ಯೆರೂಸಲೇಮ
‘ಇಗೋ, ನಿನ್ನ ಅರಸನು,
ಸಾತ್ವಿಕನಾಗಿ, ಕತ್ತೆಯನ್ನೂ,
ಕತ್ತೆಯಮರಿಯನ್ನೂ ಹತ್ತಿದವನಾಗಿ ನಿನ್ನ ಬಳಿಗೆ ಬರುತ್ತಾನೆ.’ ”#21:5 ಜೆಕರ್ಯ 9:9
6ಆಗ ಶಿಷ್ಯರು ಹೊರಟುಹೋಗಿ ಯೇಸು ತಮಗೆ ಅಪ್ಪಣೆ ಕೊಟ್ಟಂತೆಯೇ ಮಾಡಿದರು. 7ಅವರು ಕತ್ತೆಯನ್ನೂ ಅದರ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದರು; ಯೇಸು ಅದರ ಮೇಲೆ ಕೂತುಕೊಂಡರು. 8ಆಗ ಜನರ ದೊಡ್ಡ ಸಮೂಹವು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ಮರಗಳಿಂದ ಕೊಂಬೆಗಳನ್ನು ಕೊಯ್ದು ದಾರಿಯಲ್ಲಿ ಹರಡಿದರು. 9ಯೇಸುವಿನ ಮುಂದೆಯೂ ಹಿಂದೆಯೂ ಹೋಗುತ್ತಿದ್ದ ಜನರ ಸಮೂಹಗಳು,
“ದಾವೀದನ ಪುತ್ರನಿಗೆ ಹೊಸನ್ನ#21:9 ಹೊಸನ್ನ ಹೀಬ್ರೂ ಭಾಷೆಯಲ್ಲಿ ನಮ್ಮನ್ನು ರಕ್ಷಿಸು!”
“ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!”#21:9 ಕೀರ್ತನೆ 118:25,26
“ಮಹೋನ್ನತದಲ್ಲಿ ಜಯ!”
ಎಂದು ಘೋಷಿಸಿದರು.
10ಯೆರೂಸಲೇಮಿಗೆ ಪ್ರವೇಶಿಸಿದಾಗ, ಪಟ್ಟಣದಲ್ಲಿ ಕೋಲಾಹಲವುಂಟಾಗಿ, “ಇವರು ಯಾರು?” ಎಂದು ಕೇಳಿದರು.
11ಅದಕ್ಕೆ ಜನಸಮೂಹವು, “ಇವರು ಯೇಸು, ಗಲಿಲಾಯದ ನಜರೇತಿನ ಪ್ರವಾದಿ,” ಎಂದು ಹೇಳಿತು.
ದೇವಾಲಯದಲ್ಲಿ ಯೇಸು
12ಯೇಸು ದೇವಾಲಯದ ಅಂಗಳದೊಳಗೆ ಹೋಗಿ ಮಾರುತ್ತಿದ್ದವರನ್ನೂ ಕೊಂಡುಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದರು. ಹಣ ವಿನಿಮಯ ಮಾಡುತ್ತಿದ್ದವರ ಮೇಜುಗಳನ್ನೂ ಪಾರಿವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿದರು. 13ಯೇಸು ಅವರಿಗೆ, “ ‘ನನ್ನ ಮನೆಯು ಪ್ರಾರ್ಥನೆಯ ಮನೆಯಾಗಿದೆ,’#21:13 ಯೆಶಾಯ 56:7 ಎಂದು ಬರೆದದೆ. ಆದರೆ ನೀವಾದರೋ ಅದನ್ನು, ‘ಕಳ್ಳರ ಗವಿಯನ್ನಾಗಿ’ ಮಾಡಿದ್ದೀರಿ,”#21:13 ಯೆರೆ 7:11 ಎಂದು ಹೇಳಿದರು.
14ಆಗ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಅವರ ಬಳಿಗೆ ಬಂದರು. ಯೇಸು ಅವರನ್ನು ಸ್ವಸ್ಥಮಾಡಿದರು. 15ಯೇಸು ಮಾಡಿದ ಅದ್ಭುತಕಾರ್ಯಗಳನ್ನು ಮತ್ತು ಮಕ್ಕಳು ದೇವಾಲಯದಲ್ಲಿ, “ದಾವೀದನ ಪುತ್ರನಿಗೆ ಹೊಸನ್ನ,” ಎಂದು ಕೂಗುವುದನ್ನು ಮುಖ್ಯಯಾಜಕರೂ ನಿಯಮ ಬೋಧಕರೂ ಕಂಡು ಕೋಪಗೊಂಡರು.
16“ಮಕ್ಕಳು ಹೇಳುವುದೇನೆಂದು ನಿನಗೆ ಕೇಳಿಸುತ್ತಿದೆಯೋ?” ಎಂದು ಯೇಸುವನ್ನು ಕೇಳಿದರು.
ಯೇಸು, “ಹೌದು,” ಎಂದು ಉತ್ತರಿಸಿ ಅವರಿಗೆ,
“ ‘ಸಣ್ಣ ಮಕ್ಕಳ ಮತ್ತು ಹಾಲುಣ್ಣುವ ಕೂಸುಗಳ ಬಾಯಿಂದ
ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿದ್ದೀ,’#21:16 ಕೀರ್ತನೆ 8:2
ಎಂಬುದನ್ನು ಓದಲಿಲ್ಲವೋ?” ಎಂದರು.
17ಯೇಸು ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಹೋಗಿ, ಅಲ್ಲಿ ರಾತ್ರಿ ಉಳಿದುಕೊಂಡರು.
ಅಂಜೂರದ ಮರವು ಒಣಗಿದ್ದು
18ಬೆಳಿಗ್ಗೆ ಪಟ್ಟಣಕ್ಕೆ ಹಿಂದಿರುಗಿ ಬರುತ್ತಿದ್ದಾಗ, ಯೇಸುವಿಗೆ ಹಸಿವಾಯಿತು. 19ಯೇಸು ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು, ಅದರ ಹತ್ತಿರಕ್ಕೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ. ಆಗ ಯೇಸು, ಆ ಮರಕ್ಕೆ, “ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ,” ಎಂದರು. ತಕ್ಷಣವೇ ಅಂಜೂರದ ಮರವು ಒಣಗಿ ಹೋಯಿತು.
20ಶಿಷ್ಯರು ಅದನ್ನು ಕಂಡು ಆಶ್ಚರ್ಯದಿಂದ, “ಇಷ್ಟು ಬೇಗನೆ ಈ ಅಂಜೂರದ ಮರವು ಒಣಗಿಹೋಯಿತಲ್ಲಾ?” ಎಂದು ಕೇಳಿದರು.
21ಯೇಸು ಉತ್ತರವಾಗಿ ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಸಂದೇಹ ಪಡದೆ ನಂಬಿದರೆ, ನಾನು ಈ ಅಂಜೂರದ ಮರಕ್ಕೆ ಮಾಡಿದಂತೆಯೇ ನೀವೂ ಮಾಡುವಿರಿ. ಇದಲ್ಲದೆ ನೀವು ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೂ ಅದು ಹಾಗೆಯೇ ಆಗುವುದು. 22ನೀವು ನಂಬಿಕೆಯಿಂದ ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅವುಗಳನ್ನೆಲ್ಲಾ ಪಡೆಯುವಿರಿ,” ಎಂದರು.
ಯೇಸುವಿನ ಅಧಿಕಾರವನ್ನು ಪ್ರಶ್ನೆ ಮಾಡಿದ್ದು
23ಅನಂತರ ಯೇಸು ದೇವಾಲಯಕ್ಕೆ ಬಂದು ಬೋಧಿಸುತ್ತಿದ್ದಾಗ, ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವಿನ ಬಳಿಗೆ ಬಂದು, “ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಕೇಳಿದರು.
24ಅದಕ್ಕೆ ಯೇಸು, “ನಾನು ಸಹ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ; ಅದಕ್ಕೆ ನೀವು ನನಗೆ ಉತ್ತರ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. ಎಂದು ಹೇಳಿ, 25ದೀಕ್ಷಾಸ್ನಾನ ಕೊಡುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂತು? ಪರಲೋಕದಿಂದಲೋ ಇಲ್ಲವೆ ಮನುಷ್ಯರಿಂದಲೋ?” ಎಂದು ಕೇಳಿದ್ದಕ್ಕೆ,
ಅವರು ತಮ್ಮತಮ್ಮೊಳಗೆ ತರ್ಕಿಸುತ್ತಾ, “ಪರಲೋಕದಿಂದ ಎಂದು ನಾವು ಹೇಳಿದರೆ, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು. 26‘ಮನುಷ್ಯರಿಂದ ಬಂತು,’ ಎಂದು ಹೇಳಿದರೆ ಜನರಿಗೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಗೌರವಿಸುತ್ತಾರೆ,” ಎಂದುಕೊಂಡರು.
27ತರುವಾಯ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದರು.
ಅದಕ್ಕೆ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
ಇಬ್ಬರು ಪುತ್ರರ ಸಾಮ್ಯ
28ಅನಂತರ ಯೇಸು, “ನಿಮಗೇನು ಅನಿಸುತ್ತದೆ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಬಂದು, ‘ಮಗನೇ, ಹೋಗಿ ಈ ಹೊತ್ತು ನನ್ನ ದ್ರಾಕ್ಷಿಯ ತೋಟದಲ್ಲಿ ಕೆಲಸ ಮಾಡು,’ ಎಂದು ಹೇಳಿದನು.
29“ಮಗನು ಉತ್ತರವಾಗಿ, ‘ನಾನು ಹೋಗುವುದಿಲ್ಲ’ ಎಂದು ಹೇಳಿ, ಅನಂತರ ಪಶ್ಚಾತ್ತಾಪಪಟ್ಟು ತೋಟಕ್ಕೆ ಹೋದನು.
30“ಆಮೇಲೆ ತಂದೆ ಎರಡನೆಯವನ ಬಳಿಗೆ ಬಂದು ಅದೇ ಪ್ರಕಾರ ಅವನಿಗೆ ಹೇಳಿದನು. ಅದಕ್ಕವನು ಉತ್ತರವಾಗಿ, ‘ಅಪ್ಪಾ, ನಾನು ಹೋಗುತ್ತೇನೆ,’ ಎಂದು ಹೇಳಿದರೂ ಹೋಗಲಿಲ್ಲ.
31“ಈ ಇಬ್ಬರಲ್ಲಿ ಯಾವನು ತನ್ನ ತಂದೆಯ ಇಷ್ಟದಂತೆ ನಡೆದವನು?” ಎಂದು ಕೇಳಲು ಅವರು ಯೇಸುವಿಗೆ,
“ಮೊದಲನೆಯವನೇ,” ಎಂದರು.
ಆಗ ಯೇಸು ಅವರಿಗೆ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲು ದೇವರ ರಾಜ್ಯದೊಳಗೆ ಸೇರುವರೆಂದು ನಿಮಗೆ ನಿಜವಾಗಿ ಹೇಳುತ್ತೇನೆ. 32ಏಕೆಂದರೆ ಯೋಹಾನನು ನೀತಿ ಮಾರ್ಗದೊಡನೆ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಅವನನ್ನು ನಂಬಿದರು. ನೀವು ಇದನ್ನು ಕಂಡ ಮೇಲೆಯೂ ಅವನನ್ನು ನಂಬುವಂತೆ ಪಶ್ಚಾತ್ತಾಪ ಪಡಲಿಲ್ಲ.”
ಗೇಣಿಗೆದಾರರ ಸಾಮ್ಯ
33“ಮತ್ತೊಂದು ಸಾಮ್ಯವನ್ನು ಕೇಳಿರಿ: ಒಬ್ಬ ಯಜಮಾನನು ದ್ರಾಕ್ಷಿಯ ತೋಟವನ್ನು ಮಾಡಿ ಅದರ ಸುತ್ತಲೂ ಬೇಲಿ ಹಾಕಿದನು. ಅದರೊಳಗೆ ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಅಗೆದು ಕಾವಲುಗೋಪುರವನ್ನು ಕಟ್ಟಿ ರೈತರಿಗೆ ಗೇಣಿಗೆ ಕೊಟ್ಟು ದೂರದೇಶಕ್ಕೆ ಹೋದನು. 34ಫಲದ ಕಾಲ ಸಮೀಪಿಸಿದಾಗ, ತನ್ನ ಫಲಗಳನ್ನು ಪಡೆದುಕೊಳ್ಳುವುದಕ್ಕೆ ತನ್ನ ಸೇವಕರನ್ನು ಗೇಣಿಗೆದಾರರ ಬಳಿಗೆ ಕಳುಹಿಸಿದನು.
35“ಆಗ ಗೇಣಿಗೆದಾರರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು, ಇನ್ನೊಬ್ಬನನ್ನು ಕೊಂದುಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು. 36ಯಜಮಾನನು ಮೊದಲನೆಯವರಿಗಿಂತ ಹೆಚ್ಚು ಸೇವಕರನ್ನು ಕಳುಹಿಸಿಕೊಟ್ಟನು. ಗೇಣಿಗೆದಾರರು ಅವರಿಗೂ ಹಾಗೆಯೇ ಮಾಡಿದರು. 37ಕೊನೆಗೆ ಯಜಮಾನನು, ‘ಅವರು ನನ್ನ ಮಗನಿಗಾದರೂ ಮರ್ಯಾದೆ ಕೊಡುವರು’ ಎಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು.
38“ಆದರೆ ಗೇಣಿಗೆದಾರರು ಆ ಮಗನನ್ನು ನೋಡಿ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಬನ್ನಿರಿ, ನಾವು ಇವನನ್ನು ಕೊಂದು ಇವನ ಆಸ್ತಿಯನ್ನು ಕಿತ್ತುಕೊಳ್ಳೋಣ,’ ಎಂದುಕೊಂಡು, 39ಅವನನ್ನು ಹಿಡಿದು ದ್ರಾಕ್ಷಿಯ ತೋಟದಿಂದ ಹೊರಗೆ ಹಾಕಿ ಅವನನ್ನು ಕೊಂದುಹಾಕಿದರು.
40“ಹೀಗಿರುವುದರಿಂದ ದ್ರಾಕ್ಷಿತೋಟದ ಯಜಮಾನನೇ ಬಂದಾಗ, ಆ ಗೇಣಿಗೆದಾರರಿಗೆ ಏನು ಮಾಡುವನು?” ಎಂದು ಯೇಸು ಕೇಳಲು,
41ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವಿಗೆ, “ಅವನು ಆ ದುಷ್ಟ ಮನುಷ್ಯರನ್ನು ಕ್ರೂರವಾಗಿ ಸಂಹರಿಸುವನು. ತಕ್ಕ ಕಾಲದಲ್ಲಿ ತನಗೆ ಫಲಗಳನ್ನು ಸಲ್ಲಿಸುವ ಬೇರೆ ಗೇಣಿಗೆದಾರರಿಗೆ ತನ್ನ ದ್ರಾಕ್ಷಿತೋಟವನ್ನು ಗೇಣಿಗೆ ಕೊಡುವನು,” ಎಂದು ಹೇಳಿದರು.
42ಯೇಸು ಅವರಿಗೆ,
“ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು.
ಇದು ಕರ್ತನಿಂದಲೇ ಆಯಿತು.
ಇದು ನಮ್ಮ ದೃಷ್ಟಿಯಲ್ಲಿ ಆಶ್ಚರ್ಯವಾಗಿ ತೋರುತ್ತದೆ,’#21:42 ಕೀರ್ತನೆ 118:22,23
ಎಂಬುದನ್ನು ನೀವು ಪವಿತ್ರ ವೇದದಲ್ಲಿ ಎಂದೂ ಓದಲಿಲ್ಲವೇ?
43“ಆದ್ದರಿಂದ, ದೇವರ ರಾಜ್ಯವು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನರಿಗೆ ಕೊಡಲಾಗುವುದು ಎಂದು ನಾನು ನಿಮಗೆ ಹೇಳುತ್ತೇನೆ. 44ಈ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು, ಆದರೆ ಇದೇ ಕಲ್ಲು ಯಾವನ ಮೇಲೆ ಬೀಳುವುದೋ ಅವನನ್ನು ಅದು ಜಜ್ಜಿ ಹೋಗುವಂತೆ ಮಾಡುವುದು,” ಎಂದರು.
45ಮುಖ್ಯಯಾಜಕರೂ ಫರಿಸಾಯರೂ ಯೇಸುವಿನ ಸಾಮ್ಯಗಳನ್ನು ಕೇಳಿದಾಗ, ತಮ್ಮ ವಿಷಯದಲ್ಲಿಯೇ ಅದನ್ನು ಹೇಳಿದರೆಂದು ಅರ್ಥಮಾಡಿಕೊಂಡರು. 46ಅವರು ಯೇಸುವನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದರು. ಆದರೂ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ ಜನರು ಯೇಸುವನ್ನು ಪ್ರವಾದಿಯೆಂದು ನಂಬಿದ್ದರು.

Currently Selected:

ಮತ್ತಾಯ 21: KSB

Highlight

Share

Copy

None

Want to have your highlights saved across all your devices? Sign up or sign in