YouVersion Logo
Search Icon

ಮತ್ತಾಯ 20

20
ದ್ರಾಕ್ಷಿಯ ತೋಟದ ಕೂಲಿಯಾಳುಗಳ ಸಾಮ್ಯ
1“ಪರಲೋಕ ರಾಜ್ಯವನ್ನು ತನ್ನ ದ್ರಾಕ್ಷಿಯ ತೋಟಕ್ಕೆ ಕೂಲಿಯಾಳುಗಳನ್ನು ಕರೆಯುವುದಕ್ಕಾಗಿ ಬೆಳಿಗ್ಗೆ ಹೊರಟ ಒಬ್ಬ ಯಜಮಾನನಿಗೆ ಹೋಲಿಸಲಾಗಿದೆ. 2ಅವನು ದಿನಕ್ಕೆ ಒಂದು ಬೆಳ್ಳಿನಾಣ್ಯ#20:2 ಒಂದು ದಿನಾರಿಯ ನಾಣ್ಯವು ಒಂದು ದಿನದ ಕೂಲಿಗೆ ಸಮವಾಗಿತ್ತು ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ದ್ರಾಕ್ಷಿಯ ತೋಟಕ್ಕೆ ಅವರನ್ನು ಕಳುಹಿಸಿಕೊಟ್ಟನು.
3“ಅವನು ಸುಮಾರು ಒಂಬತ್ತು ಗಂಟೆಗೆ ಹೊರಗೆ ಹೋಗಿ ಇನ್ನು ಕೆಲವರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವುದನ್ನು ಕಂಡು, 4ಅವರಿಗೆ, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುತ್ತೇನೆ,’ ಎಂದು ಹೇಳಿದನು. 5ಆಗ ಅವರು ಹೊರಟು ಹೋದರು.
“ಅವನು ಸುಮಾರು ಹನ್ನೆರಡು ಗಂಟೆಗೂ ಅನಂತರ ಮೂರು ಗಂಟೆಗೂ ತಿರುಗಿ ಹೋಗಿ ಹಾಗೆಯೇ ಮಾಡಿದನು. 6ತರುವಾಯ ಸುಮಾರು ಐದು ಗಂಟೆಗೆ ಅವನು ಹೊರಗೆ ಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವುದನ್ನು ಕಂಡು, ‘ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವುದೇಕೆ?’ ಎಂದು ಕೇಳಿದನು.
7“ಅವರು, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ,’ ಎಂದರು.
“ಆಗ ಅವನು, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ,’ ಎಂದು ಹೇಳಿದನು.
8“ಸಂಜೆಯಾದಾಗ, ದ್ರಾಕ್ಷಿಯ ತೋಟದ ಯಜಮಾನನು ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನವರೆಗೆ ಕೂಲಿಯನ್ನು ಕೊಡು,’ ಎಂದು ಹೇಳಿದನು.
9“ಆಗ ಐದು ಗಂಟೆಗೆ ಕರೆದವರು ಬಂದಾಗ ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 10ಆಗ ಮೊದಲು ಬಂದವರು, ತಮಗೆ ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಲ್ಲಿ ಪ್ರತಿಯೊಬ್ಬನಿಗೂ ಅದೇ ರೀತಿಯಲ್ಲಿ ಒಂದೊಂದೇ ಬೆಳ್ಳಿನಾಣ್ಯ ಸಿಕ್ಕಿತು. 11ಅವರು ಅದನ್ನು ತೆಗೆದುಕೊಂಡಾಗ, ಯಜಮಾನನ ವಿರೋಧವಾಗಿ ಗೊಣುಗುಟ್ಟುತ್ತಾ, 12‘ಕಡೆಯವರಾದ ಇವರು ಒಂದೇ ತಾಸು ಕೆಲಸಮಾಡಿದ್ದಾರೆ, ಆದರೆ ದಿನವೆಲ್ಲಾ ಬಿಸಿಲಿನಲ್ಲಿ ಭಾರ ಹೊತ್ತು ಕೆಲಸಮಾಡಿದ ನಮ್ಮನ್ನು ನೀನು ಇವರಿಗೆ ಸಮಮಾಡಿದ್ದಿ,’ ಎಂದರು.
13“ಆದರೆ ಯಜಮಾನನು ಅವರಲ್ಲಿ ಒಬ್ಬನಿಗೆ ಉತ್ತರವಾಗಿ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ಒಂದು ಬೆಳ್ಳಿ ನಾಣ್ಯಕ್ಕೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಿಲ್ಲವೇ? 14ನಿನ್ನ ಕೂಲಿ ತೆಗೆದುಕೊಂಡು ಹೋಗು. ನಿನಗೆ ನಾನು ಕೊಟ್ಟಂತೆಯೇ ಈ ಕಡೆಯವನಿಗೂ ಕೊಡುವುದು ನನ್ನ ಇಷ್ಟ. 15ನನ್ನದನ್ನು ನನ್ನ ಇಷ್ಟಬಂದಂತೆ ಕೊಡುವುದಕ್ಕೆ ನನಗೆ ಹಕ್ಕಿಲ್ಲವೇ? ನಾನು ಔದಾರ್ಯವುಳ್ಳವನಾದ್ದರಿಂದ, ನಿನಗೆ ಹೊಟ್ಟೆಯುರಿಯೋ?’ ಎಂದನು.
16“ಹೀಗೆ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
ಯೇಸು ತಮ್ಮ ಮರಣದ ವಿಷಯ ಪ್ರವಾದಿಸಿದ್ದು
17ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ಪ್ರತ್ಯೇಕವಾಗಿ ಕರೆದು ಅವರಿಗೆ, 18“ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ಮನುಷ್ಯಪುತ್ರನಾದ ನನ್ನನ್ನು ಮುಖ್ಯಯಾಜಕರ ಮತ್ತು ನಿಯಮ ಬೋಧಕರ ಕೈಗೆ ಒಪ್ಪಿಸಿಕೊಡುವರು. ಅವರು ನನಗೆ ಮರಣದಂಡನೆಯನ್ನು ವಿಧಿಸುವರು. 19ಇದಲ್ಲದೆ ನನ್ನನ್ನು ಹಾಸ್ಯಮಾಡುವುದಕ್ಕೂ ಕೊರಡೆಗಳಿಂದ ಹೊಡೆಯುವುದಕ್ಕೂ ಶಿಲುಬೆಗೆ ಹಾಕುವುದಕ್ಕೂ ಯೆಹೂದ್ಯರಲ್ಲದವರ ಕೈಗೆ ಒಪ್ಪಿಸಿಕೊಡುವರು. ನಾನಾದರೋ ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವೆನು,” ಎಂದು ಹೇಳಿದರು.
ತಾಯಿಯ ಬೇಡಿಕೆ
20ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುವಿನ ಬಳಿಗೆ ಬಂದು, ಅವರ ಮುಂದೆ ಮೊಣಕಾಲೂರಿ ಬೇಡಿಕೊಂಡಳು.
21ಯೇಸು, “ನಿನ್ನ ಬೇಡಿಕೆ ಏನು?” ಎಂದು ಕೇಳಿದರು.
“ನಿಮ್ಮ ರಾಜ್ಯದಲ್ಲಿ ಈ ನನ್ನ ಇಬ್ಬರು ಪುತ್ರರಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹಿಸಬೇಕು,” ಎಂದು ಬೇಡಿಕೊಂಡಳು.
22ಯೇಸು ಉತ್ತರವಾಗಿ, “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೇ?” ಎಂದು ಕೇಳಿದರು.
ಅವರು, “ಹೌದು, ನಮ್ಮಿಂದಾಗುವುದು,” ಎಂದು ಹೇಳಿದರು.
23ಅದಕ್ಕೆ ಯೇಸು, “ನನ್ನ ಪಾತ್ರೆಯಿಂದ ನೀವು ಕುಡಿಯುವಿರಿ, ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ, ನನ್ನ ತಂದೆಯಿಂದ ಅದು ಯಾರಿಗೋಸ್ಕರ ಸಿದ್ಧವಾಗಿದೆಯೋ ಅವರಿಗೇ ಕೊಡಲಾಗುವುದು,” ಎಂದು ಹೇಳಿದರು.
24ಬೇರೆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ, ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. 25ಆದರೆ ಯೇಸು ಶಿಷ್ಯರನ್ನು ತಮ್ಮ ಹತ್ತಿರಕ್ಕೆ ಕರೆದು, “ಯೆಹೂದ್ಯರಲ್ಲದವರ ಅಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆಂದೂ ಉನ್ನತ ಅಧಿಕಾರಿಗಳು ಅವರ ಮೇಲೆ ಅಧಿಕಾರವನ್ನು ನಡೆಸುತ್ತಾರೆಂದೂ ನಿಮಗೆ ತಿಳಿದಿದೆ. 26ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಲಿ. 27ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆಂದಿದ್ದರೆ, ಅವನು ನಿಮ್ಮ ಆಳಾಗಿರಲಿ. 28ಮನುಷ್ಯಪುತ್ರನಾದ ನಾನು ಸಹ ಸೇವೆಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆಮಾಡುವುದಕ್ಕಾಗಿಯೂ ಅನೇಕರಿಗಾಗಿ ನನ್ನ ಪ್ರಾಣವನ್ನೇ ಈಡಾಗಿ ಕೊಡುವುದಕ್ಕಾಗಿಯೂ ಬಂದಿದ್ದೇನೆ,” ಎಂದು ಹೇಳಿದರು.
ಯೇಸು ಇಬ್ಬರು ಕುರುಡರಿಗೆ ದೃಷ್ಟಿಕೊಟ್ಟದ್ದು
29ಯೇಸು ಮತ್ತು ಅವರ ಶಿಷ್ಯರು ಯೆರಿಕೋವಿನಿಂದ ಹೊರಟು ಹೋಗುತ್ತಿರುವಾಗ, ಜನರು ದೊಡ್ಡ ಸಮೂಹವಾಗಿ ಯೇಸುವನ್ನು ಹಿಂಬಾಲಿಸಿದರು. 30ದಾರಿಯ ಮಗ್ಗುಲಲ್ಲಿ ಕೂತಿದ್ದ ಇಬ್ಬರು ಕುರುಡರು ಯೇಸು ಹಾದು ಹೋಗುತ್ತಿದ್ದಾರೆಂದು ಕೇಳಿ, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಕೂಗಿ ಹೇಳಿದರು.
31ಅವರು ಸುಮ್ಮನಿರುವಂತೆ ಜನರ ಸಮೂಹವು ಅವರನ್ನು ಗದರಿಸಿತು. ಆದರೂ ಅವರು, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಇನ್ನೂ ಗಟ್ಟಿಯಾಗಿ ಕೂಗಿಕೊಂಡರು.
32ಆಗ ಯೇಸು ನಿಂತು, ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದರು.
33ಅವರು ಯೇಸುವಿಗೆ, “ಕರ್ತದೇವರೇ, ನಮಗೆ ಕಣ್ಣು ಕಾಣುವಂತೆ ಮಾಡು,” ಎಂದರು.
34ಯೇಸು ಅವರ ಮೇಲೆ ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದರು. ಕೂಡಲೇ ಅವರ ಕಣ್ಣುಗಳು ದೃಷ್ಟಿಯನ್ನು ಪಡೆದವು. ಅವರೂ ಯೇಸುವನ್ನು ಹಿಂಬಾಲಿಸಿದರು.

Currently Selected:

ಮತ್ತಾಯ 20: KSB

Highlight

Share

Copy

None

Want to have your highlights saved across all your devices? Sign up or sign in