ಜೆಕರ್ಯ 3
3
ಪ್ರಧಾನ ಯಾಜಕನು
1ದೇವದೂತನು ನನಗೆ ಪ್ರಧಾನ ಯಾಜಕನಾದ ಯೆಹೋಶುವನನ್ನು ತೋರಿಸಿದನು. ಅವನು ಯೆಹೋವನ ದೂತನ ಮುಂದೆ ನಿಂತಿದ್ದನು. ಸೈತಾನನು ಯೆಹೋಶುವನ ಬಲಗಡೆಯಲ್ಲಿ ನಿಂತಿದ್ದನು. ಯೆಹೋಶುವನು ಕೆಟ್ಟಕೃತ್ಯಗಳನ್ನು ಮಾಡಿದ್ದಾನೆಂದು ದೂರು ಹೇಳುವದಕ್ಕಾಗಿ ಸೈತಾನನು ಅಲ್ಲಿ ನಿಂತಿದ್ದನು. 2ಆಗ ಯೆಹೋವನ ದೂತನು ಹೇಳಿದ್ದೇನೆಂದರೆ, “ಯೆಹೋವನು ನಿನ್ನನ್ನು ಖಂಡಿಸಲಿ ಮತ್ತು ಟೀಕೆ ಮಾಡಲಿ. ಯೆಹೋವನು ತನ್ನ ವಿಶೇಷ ನಗರವನ್ನಾಗಿ ಜೆರುಸಲೇಮನ್ನು ಆರಿಸಿಕೊಂಡಿದ್ದಾನೆ. ಆ ನಗರವನ್ನು ಆತನೇ ಕಾಪಾಡಿದನು. ಬೆಂಕಿಯಿಂದ ಎಳೆದುತೆಗೆದ ಕೊಳ್ಳಿಯಂತೆ ಆತನು ಅದನ್ನು ಕಾಪಾಡಿದನು.”
3ಯೆಹೋಶುವನು ದೂತನ ಮುಂದೆ ನಿಂತುಕೊಂಡಿದ್ದನು. ಅವನ ವಸ್ತ್ರವು ಮಲಿನವಾಗಿತ್ತು. 4ಆಗ ಆ ದೂತನು ಪಕ್ಕದಲ್ಲಿ ನಿಂತಿದ್ದ ಬೇರೆ ದೂತರನ್ನುದ್ದೇಶಿಸಿ, “ಯೆಹೋಶುವನ ಮೇಲಿರುವ ಮೈಲಿಗೆ ವಸ್ತ್ರವನ್ನು ತೆಗೆಯಿರಿ” ಎಂದು ಹೇಳಿದನು. ಆಗ ದೂತನು ಯೆಹೋಶುವನಿಗೆ, “ನಾನು ನಿನ್ನ ದೋಷಗಳನ್ನು ತೊಳೆದುಬಿಟ್ಟಿರುವೆ. ಈಗ ನಾನು ನಿನಗೆ ಹೊಸ ಬಟ್ಟೆಗಳನ್ನು ಕೊಡುತ್ತೇನೆ” ಎಂದು ಹೇಳಿದನು.
5ಆಗ ನಾನು, “ಅವನ ತಲೆಯ ಮೇಲೆ ಶುಚಿಯಾದ ಪೇಟವನ್ನಿಡಿರಿ” ಎಂದು ಹೇಳಿದಾಗ ಅವರು ಅವನಿಗೆ ಶುಭ್ರವಾದ ಪೇಟವನ್ನು ಇಟ್ಟರು. ಯೆಹೋವನ ದೂತನು ಅಲ್ಲಿ ನಿಂತಿದ್ದಾಗಲೇ ಅವನಿಗೆ ನಿರ್ಮಲವಾದ ಬಟ್ಟೆಗಳನ್ನು ಧರಿಸಲು ಕೊಟ್ಟರು. 6ಆಗ ಯೆಹೋವನ ದೂತನು ಯೆಹೋಶುವನಿಗೆ ಹೀಗೆ ಹೇಳಿದನು.
7ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
“ನಾನು ಹೇಳುವ ರೀತಿಯಲ್ಲಿ ಜೀವಿಸು.
ನಾನು ಹೇಳುವ ರೀತಿಯಲ್ಲಿ ನಡೆ.
ನೀನು ನನ್ನ ಆಲಯದ ಮುಖ್ಯಾಧಿಕಾರಿಯಾಗುವೆ.
ಅದರ ಅಂಕಣಗಳನ್ನು ನೀನು ನೋಡಿಕೊಳ್ಳುವೆ.
ಇಲ್ಲಿ ನಿಂತಿರುವವರೊಂದಿಗೆ ನೀನು ಪ್ರವೇಶಿಸಬಹುದು.
8ಪ್ರಧಾನ ಯಾಜಕನಾದ ಯೆಹೋಶುವನೇ,
ಅವನೊಂದಿಗೆ ಸೇವೆಮಾಡುವ ಇತರ ಯಾಜಕರೇ, ನನ್ನ ಮಾತಿಗೆ ಕಿವಿಗೊಡಿರಿ.
ಈ ಗಂಡಸರು ಮುಂದೆ ಏನಾಗಬಹುದೆಂಬುದಕ್ಕೆ ನಿದರ್ಶನವಾಗಿದ್ದಾರೆ.
ಆಗ ನಾನು ನನ್ನ ವಿಶೇಷ ಸೇವಕನನ್ನು ಕರೆತರುವೆನು.
ಆತನ ಹೆಸರು ಕೊಂಬೆ.
9ನೋಡು, ನಾನು ಯೆಹೋಶುವನ ಮುಂದೆ ಒಂದು ವಿಶೇಷ ಕಲ್ಲನ್ನಿಡುವೆನು.
ಆ ಕಲ್ಲಿನಲ್ಲಿ ಏಳು ಬದಿಗಳಿವೆ.
ನಾನು ಆ ವಿಶೇಷ ಕಲ್ಲಿನ ಮೇಲೆ ವಿಶೇಷ ಸಂದೇಶವನ್ನು ಕೆತ್ತುವೆನು.
ನಾನು ಆ ದೇಶದ ಪಾಪವನ್ನು ಒಂದು ದಿವಸದಲ್ಲಿ ತೆಗೆದುಹಾಕುವೆನೆಂದು ಅದು ತೋರಿಸುವುದು.”
10ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
“ಆ ದಿವಸಗಳಲ್ಲಿ ಜನರು ತಮ್ಮ ಸ್ನೇಹಿತರೊಂದಿಗೆ
ಕುಳಿತುಕೊಂಡು ಸಂಭಾಷಿಸುವರು.
ಅಂಜೂರದ ಮರದ ನೆರಳಿನಲ್ಲಿಯೂ ದ್ರಾಕ್ಷಿತೋಟಗಳ ನೆರಳಿನಲ್ಲಿಯೂ
ಕುಳಿತುಕೊಂಡು ಮಾತನಾಡಲು ಪರಸ್ಪರ ಆಮಂತ್ರಿಸುವರು.”
Currently Selected:
ಜೆಕರ್ಯ 3: KERV
Highlight
Share
Copy
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International