YouVersion Logo
Search Icon

ಜೆಕರ್ಯ 2

2
ಜೆರುಸಲೇಮನ್ನು ಅಳತೆ ಮಾಡಿದ್ದು
1ಆಗ ನಾನು ಮೇಲಕ್ಕೆ ನೋಡಿದಾಗ ಒಬ್ಬ ಮನುಷ್ಯನು ಕೈಯಲ್ಲಿ ಒಂದು ಹಗ್ಗ ಮತ್ತು ಅಳತೆ ಮಾಡುವ ಸಾಮಾಗ್ರಿಗಳನ್ನು ಹಿಡಿದುಕೊಂಡಿದ್ದನ್ನು ಕಂಡೆನು. 2“ನೀನು ಎಲ್ಲಿಗೆ ಹೋಗುತ್ತೀ?” ಎಂದು ನಾನು ಅವನನ್ನು ವಿಚಾರಿಸಿದೆನು.
“ನಾನು ಜೆರುಸಲೇಮ್ ಎಷ್ಟು ಉದ್ದಗಲವಿದೆಯೆಂದು ಅಳತೆ ಮಾಡಲು ಹೋಗುತ್ತಿದ್ದೇನೆ” ಎಂದನು.
3ಆಗ ನನ್ನೊಡನೆ ಮಾತನಾಡುತ್ತಿದ್ದ ದೂತನು ನನ್ನನ್ನು ಬಿಟ್ಟುಹೋದನು. ಅವನೊಡನೆ ಮಾತನಾಡಲು ಇನ್ನೊಬ್ಬ ದೂತನು ಬಂದನು. 4ಅವನು, “ಓಡಿಹೋಗಿ ಆ ಯೌವನಸ್ಥನಿಗೆ ಜೆರುಸಲೇಮು ಅಳತೆ ಮಾಡಲು ಸಾಧ್ಯವಾಗದಷ್ಟು ದೊಡ್ಡದಾಗಿದೆ ಎಂದು ಹೇಳು. ಅಲ್ಲದೆ ಅವನಿಗೆ ಈ ವಿಷಯವನ್ನೂ ತಿಳಿಸು:
‘ಜೆರುಸಲೇಮ್ ಗೋಡೆಗಳಿಲ್ಲದ ಪಟ್ಟಣವಾಗುವದು.
ಯಾಕೆಂದರೆ ಅಷ್ಟೊಂದು ಜನರೂ ಪಶುಗಳೂ ಅಲ್ಲಿ ವಾಸಿಸುವವು.’
5ಯೆಹೋವನು ಹೇಳುವುದೇನೆಂದರೆ,
‘ನಾನು ಆಕೆಯ ಸುತ್ತಲೂ ಆಕೆಯನ್ನು ಸಂರಕ್ಷಿಸುವ ಬೆಂಕಿಯ ಗೋಡೆಯಂತಿರುವೆನು.
ಮತ್ತು ನಾನು ಅಲ್ಲಿಯೇ ವಾಸಿಸುವದರಿಂದ ಆ ನಗರಕ್ಕೆ ಮಹಿಮೆಯನ್ನು ತರುವೆನು.’”
ತಮ್ಮ ಮನೆಗೆ ಬರಲು ದೇವರು ತನ್ನ ಜನರನ್ನು ಕರೆಯುತ್ತಾನೆ
6ಯೆಹೋವನು ಹೀಗೆನ್ನುತ್ತಾನೆ,
“ಅವಸರಪಡುತ್ತಾ ಉತ್ತರದ ದೇಶಗಳಿಂದ ಹೊರಬನ್ನಿರಿ.
ಹೌದು, ನಾನು ನಿಮ್ಮ ಜನರನ್ನು ಪ್ರತಿಯೊಂದು ದಿಕ್ಕಿಗೂ ಚದರಿಸಿರುವುದು ನಿಜ.
7ಚೀಯೋನಿನ ಜನರಾದ ನೀವು ಬಾಬಿಲೋನಿನಲ್ಲಿ ವಾಸಿಸುತ್ತಿದ್ದೀರಿ.
ಅಲ್ಲಿಂದ ತಪ್ಪಿಸಿಕೊಂಡು ಬನ್ನಿರಿ. ಆ ನಗರದಿಂದ ಓಡಿಹೋಗಿರಿ.”
8ಇದು ಸರ್ವಶಕ್ತನಾದ ಯೆಹೋವನ ನುಡಿ.
“ನಿಮ್ಮ ವಸ್ತುಗಳನ್ನು ಕದ್ದುಕೊಂಡ ಜನಾಂಗಗಳಿಗೆ ಆತನು ನನ್ನನ್ನು ಕಳುಹಿಸಿದನು.
ನಿಮಗೆ ಗೌರವವನ್ನು ತರುವುದಕ್ಕಾಗಿ ಆತನು ನನ್ನನ್ನು ಕಳುಹಿಸಿದನು.
ಯಾಕೆಂದರೆ, ನಿಮಗೆ ಹಾನಿ ಮಾಡಿದರೆ
ಅದು ದೇವರ ಕಣ್ಣುಗುಡ್ಡೆಗೆ ಹಾನಿ ಮಾಡಿದಂತೆ.
9ಬಾಬಿಲೋನಿನ ಜನರು ನನ್ನ ಜನರನ್ನು ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿದರು.
ಆದರೆ ನಾನು ಅವರನ್ನು ಹೊಡೆಯುವೆನು.
ಅವರನ್ನು ನನ್ನ ಜನರ ಗುಲಾಮರನ್ನಾಗಿ ಮಾಡುವೆನು.”
ಆಗ ಯೆಹೋವ ದೇವರು ನನ್ನನ್ನು ಕಳುಹಿಸಿದನೆಂಬುದು ನಿಮಗೆ ಗೊತ್ತಾಗುವದು.
10ಯೆಹೋವನು ಹೀಗೆನ್ನುತ್ತಾನೆ,
“ಚೀಯೋನೇ, ಆನಂದಿಸು, ಯಾಕೆಂದರೆ ನಾನು ಬಂದು
ನಿಮ್ಮ ಪಟ್ಟಣದಲ್ಲಿ ವಾಸಿಸುವೆನು.
11ಆ ಸಮಯದಲ್ಲಿ ವಿವಿಧ ಜನಾಂಗಗಳ ಜನರು
ನನ್ನನ್ನು ನೋಡಲು ಬರುವರು.
ಅವರು ನನ್ನ ಜನರಾಗುವರು.
ಮತ್ತು ನಾನು ನಿಮ್ಮ ನಗರದಲ್ಲಿ ವಾಸಿಸುವೆನು.”
ಆಗ ಸರ್ವಶಕ್ತನಾದ ದೇವರು ನನ್ನನ್ನು ಕಳುಹಿಸಿದ್ದಾನೆಂದು
ನಿಮಗೆ ಗೊತ್ತಾಗುವುದು.
12ಯೆಹೋವನು ತಿರುಗಿ ಜೆರುಸಲೇಮನ್ನು ತನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವನು.
ಯೆಹೂದವು ಆ ಪವಿತ್ರ ದೇಶದಲ್ಲಿರುವ ಆತನ ಪಾಲು.
13ಎಲ್ಲರೂ ಮೌನವಾಗಿರಿ.
ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಹೊರಬರುತ್ತಿದ್ದಾನೆ.

Currently Selected:

ಜೆಕರ್ಯ 2: KERV

Highlight

Share

Copy

None

Want to have your highlights saved across all your devices? Sign up or sign in

Videos for ಜೆಕರ್ಯ 2