YouVersion Logo
Search Icon

ಆದಿಕಾಂಡ 20

20
ಅಬ್ರಹಾಮನು ಗೆರಾರಿಗೆ ಹೋದದ್ದು
1ಅಬ್ರಹಾಮನು ಅಲ್ಲಿಂದ ಹೊರಟು ನೆಗೆವ್‌ಗೆ ಪ್ರಯಾಣಮಾಡಿ ಕಾದೇಶಿಗೂ ಶೂರಿಗೂ ನಡುವೆ ಇದ್ದ ಗೆರಾರ್ ನಗರದಲ್ಲಿ ನೆಲೆಸಿದನು. 2ಅಬ್ರಹಾಮನು ಗೆರಾರಿನಲ್ಲಿದ್ದಾಗ ಸಾರಳು ತನಗೆ ತಂಗಿಯಾಗಬೇಕೆಂದು ಹೇಳಿಕೊಂಡನು. ಗೆರಾರಿನ ರಾಜನಾಗಿದ್ದ ಅಬೀಮೆಲೆಕನು ಇದನ್ನು ಕೇಳಿ ಸಾರಳನ್ನು ಪಡೆದುಕೊಳ್ಳಲು ಬಯಸಿದನು. ಬಳಿಕ ಅವನು ಕೆಲವು ಸೇವಕರನ್ನು ಕಳುಹಿಸಿ ಆಕೆಯನ್ನು ಕರೆಯಿಸಿಕೊಂಡನು. 3ಆದರೆ ಅಂದು ರಾತ್ರಿ ದೇವರು ಅಬೀಮೆಲೆಕನೊಡನೆ ಕನಸಿನಲ್ಲಿ ಮಾತಾಡಿ, “ನೀನು ಸಾಯುವೆ. ನೀನು ತೆಗೆದುಕೊಂಡಿರುವ ಆ ಸ್ತ್ರೀಗೆ ಮದುವೆಯಾಗಿದೆ” ಎಂದು ಹೇಳಿದನು.
4ಅಬೀಮೆಲೆಕನು ಇನ್ನೂ ಸಾರಳೊಡನೆ ಮಲಗಿಕೊಂಡಿರಲಿಲ್ಲ. ಆದ್ದರಿಂದ ಅಬೀಮೆಲೆಕನು, “ಸ್ವಾಮಿ, ನಾನು ತಪ್ಪಿತಸ್ಥನಲ್ಲ. ಒಬ್ಬ ನಿರಪರಾಧಿಯನ್ನು ನೀನು ಕೊಲ್ಲುವೆಯಾ? 5‘ಈಕೆ ನನಗೆ ತಂಗಿಯಾಗಬೇಕು’ ಎಂದು ಅಬ್ರಹಾಮನೇ ಹೇಳಿದನು. ಅಲ್ಲದೆ ಈಕೆಯೂ ‘ಅವನು ನನ್ನ ಸಹೋದರ’ ಎಂದು ಹೇಳಿದಳು. ನಾನು ನಿರಪರಾಧಿ. ನಾನು ಮಾಡಲಿದ್ದ ತಪ್ಪು ನನಗೆ ತಿಳಿದಿರಲಿಲ್ಲ” ಎಂದು ಹೇಳಿದನು.
6ಆಗ ದೇವರು ಅಬೀಮೆಲೆಕನಿಗೆ ಕನಸಿನಲ್ಲಿ, “ಹೌದು, ನೀನು ನಿರಪರಾಧಿಯೆಂದು ನನಗೆ ಗೊತ್ತಿದೆ. ನೀನು ಮಾಡಲಿದ್ದ ತಪ್ಪು ನಿನಗೆ ತಿಳಿದಿರಲಿಲ್ಲವೆಂದೂ ನನಗೆ ಗೊತ್ತಿದೆ. ಆದ್ದರಿಂದಲೇ ನಾನು ನಿನ್ನನ್ನು ಕಾಪಾಡಿದೆ. ನನಗೆ ವಿರೋಧವಾಗಿ ಪಾಪಮಾಡಲು ನಾನು ನಿನಗೆ ಅವಕಾಶ ಕೊಡಲಿಲ್ಲ. 7ಆದ್ದರಿಂದ ಅಬ್ರಹಾಮನಿಗೆ ಅವನ ಹೆಂಡತಿಯನ್ನು ಒಪ್ಪಿಸಿಬಿಡು. ಅಬ್ರಹಾಮನು ಪ್ರವಾದಿಯಾಗಿರುವುದರಿಂದ ನಿನಗೋಸ್ಕರ ಪ್ರಾರ್ಥಿಸುವನು, ಆಗ ನೀನು ಬದುಕಿಕೊಳ್ಳುವೆ. ನೀನು ಸಾರಳನ್ನು ಅಬ್ರಹಾಮನಿಗೆ ಹಿಂತಿರುಗಿಸದಿದ್ದರೆ, ನೀನೂ ನಿನ್ನ ಇಡೀ ಕುಟುಂಬದವರೂ ಸಾಯುವಿರೆಂದು ನಾನು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
8ಆದ್ದರಿಂದ ಮರುದಿನ ಮುಂಜಾನೆ, ಅಬೀಮೆಲೆಕನು ತನ್ನ ಸೇವಕರನ್ನೆಲ್ಲ ಕರೆಸಿ ತನ್ನ ಕನಸನ್ನು ತಿಳಿಸಿದನು. ಅವರಿಗೆಲ್ಲಾ ತುಂಬ ಭಯವಾಯಿತು. 9ಆಮೇಲೆ ಅಬೀಮೆಲೆಕನು ಅಬ್ರಹಾಮನನ್ನು ಕರೆಸಿ, “ನೀನು ನನಗೆ ಹೀಗೇಕೆ ಮಾಡಿದೆ? ನಿನಗೆ ವಿರೋಧವಾಗಿ ನಾನೇನು ಮಾಡಿದೆ? ಆಕೆ ತಂಗಿಯಾಗಬೇಕೆಂದು ನೀನೇಕೆ ಸುಳ್ಳು ಹೇಳಿದೆ? ನೀನು ನನ್ನ ರಾಜ್ಯಕ್ಕೆ ಕೇಡನ್ನು ಬರಮಾಡಿರುವೆ. ನೀನು ಹೀಗೆ ಮಾಡಬಾರದಿತ್ತು. 10ನೀನು ಭಯಪಟ್ಟಿದ್ದೇಕೆ? ನನಗೆ ಹೀಗೆ ಮಾಡಿದ್ದೇಕೆ?” ಎಂದು ಕೇಳಿದನು.
11ಅಬ್ರಹಾಮನು ಅವನಿಗೆ, “ನನಗೆ ಹೆದರಿಕೆಯಾಗಿತ್ತು. ಈ ಸ್ಥಳದವರಿಗೆ ದೇವರಲ್ಲಿ ಭಯಭಕ್ತಿಯಿಲ್ಲವೆಂದು ನಾನು ಭಾವಿಸಿಕೊಂಡೆ. ಯಾರಾದರೂ ನನ್ನನ್ನು ಕೊಂದು ಸಾರಳನ್ನು ತೆಗೆದುಕೊಳ್ಳಬಹುದೆಂದು ಯೋಚಿಸಿದೆ. 12ಆಕೆ ನನ್ನ ಹೆಂಡತಿಯೇನೋ ನಿಜ, ಆದರೆ ಆಕೆ ನನಗೆ ತಂಗಿಯೂ ಆಗಬೇಕು. ಆಕೆ ನನ್ನ ತಂದೆಯ ಮಗಳು; ನನ್ನ ತಾಯಿಯ ಮಗಳಲ್ಲ. 13ದೇವರು ನನ್ನನ್ನು ತಂದೆಯ ಮನೆಯಿಂದ ಹೊರಡಿಸಿ ಪರಸ್ಥಳಗಳಲ್ಲಿ ಸಂಚರಿಸುವಂತೆ ಮಾಡಿದ್ದರಿಂದ ನಾನು ಸಾರಳಿಗೆ, ‘ನಿನ್ನಿಂದ ನನಗೆ ಒಂದು ಉಪಕಾರವಾಗಬೇಕು. ಅದೇನೆಂದರೆ ನೀನು ನನ್ನನ್ನು ಅಣ್ಣನೆಂಬುದಾಗಿ ಹೇಳಬೇಕು ಎಂದು ಆಕೆಗೆ ತಿಳಿಸಿದೆನು’” ಎಂದನು.
14ಆಗ ನಡೆದ ಸಂಗತಿಯನ್ನೆಲ್ಲ ಅರ್ಥಮಾಡಿಕೊಂಡು ಸಾರಳನ್ನು ಅಬ್ರಹಾಮನಿಗೆ ಒಪ್ಪಿಸಿದನು; ಅಲ್ಲದೆ ಕುರಿಗಳನ್ನೂ ದನಗಳನ್ನೂ ಸೇವಕಸೇವಕಿಯರನ್ನೂ ಕೊಟ್ಟನು. 15ಅಬೀಮೆಲೆಕನು ಅಬ್ರಹಾಮನಿಗೆ, “ಇಗೋ, ಇದು ನನ್ನ ದೇಶ. ನಿನಗೆ ಇಷ್ಟವಾದ ಸ್ಥಳದಲ್ಲಿ ವಾಸಮಾಡು” ಎಂದು ಹೇಳಿದನು.
16ಅಬೀಮೆಲೆಕನು ಸಾರಳಿಗೆ, “ನಾನು ನಿನ್ನ ಅಣ್ಣನಾದ ಅಬ್ರಹಾಮನಿಗೆ ಒಂದು ಸಾವಿರ ಬೆಳ್ಳಿಯ ನಾಣ್ಯಗಳನ್ನು ಕೊಡುವೆ. ನಡೆದ ಈ ಘಟನೆಗಳಿಗೆ ಇದು ಪ್ರಾಯಶ್ಚಿತ್ತವಾಗಿದೆ. ನೀನು ನಿಷ್ಕಳಂಕಳೆಂದು ಇದು ಪ್ರತಿಯೊಬ್ಬರಿಗೂ ಸಾಕ್ಷಿಯಾಗಿರಲಿ” ಎಂದು ಹೇಳಿದನು.
17-18ದೇವರು ಅಬೀಮೆಲೆಕನ ಕುಟುಂಬದಲ್ಲಿರುವ ಎಲ್ಲ ಸ್ತ್ರೀಯರನ್ನು ಬಂಜೆಯರನ್ನಾಗಿ ಮಾಡಿದ್ದನು. ಅಬ್ರಹಾಮನ ಹೆಂಡತಿಯಾದ ಸಾರಳನ್ನು ಅಬೀಮೆಲೆಕನು ಕರೆಸಿಕೊಂಡಿದ್ದೇ ಅದಕ್ಕೆ ಕಾರಣ. ಅಬ್ರಹಾಮನು ದೇವರಲ್ಲಿ ಪ್ರಾರ್ಥಿಸಿದಾಗ ದೇವರು ಅಬೀಮೆಲೆಕನನ್ನೂ ಅವನ ಹೆಂಡತಿಯನ್ನೂ ಸೇವಕಿಯರನ್ನೂ ಗುಣಪಡಿಸಿದ್ದರಿಂದ ಅವರಿಗೆ ಮಕ್ಕಳಾದರು.

Highlight

Share

Copy

None

Want to have your highlights saved across all your devices? Sign up or sign in