ಆದಿಕಾಂಡ 21
21
ಸಾರಳಿಗೆ ಮಗುವಾಯಿತು
1ಯೆಹೋವನು ಸಾರಳಿಗೆ ಮಾಡಿದ ವಾಗ್ದಾನವನ್ನು ಮರೆಯದೆ ಈಡೇರಿಸಿದನು. 2ಸಾರಳು ವೃದ್ಧನಾಗಿದ್ದ ಅಬ್ರಹಾಮನಿಂದ ಗರ್ಭಿಣಿಯಾಗಿ, ಒಂದು ಗಂಡುಮಗುವನ್ನು ಹೆತ್ತಳು. ದೇವರು ವಾಗ್ದಾನ ಮಾಡಿದಂತೆಯೇ ಈ ಸಂಗತಿಗಳೆಲ್ಲ ತಕ್ಕಕಾಲದಲ್ಲಿ ನಡೆದವು. 3ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ ಇಸಾಕ ಎಂದು ಹೆಸರಿಟ್ಟನು. 4ಇಸಾಕನಿಗೆ ಎಂಟು ದಿನಗಳಾಗಿದ್ದಾಗ, ದೇವರ ಆಜ್ಞೆಗನುಸಾರವಾಗಿ ಅಬ್ರಹಾಮನು ಅವನಿಗೆ ಸುನ್ನತಿ ಮಾಡಿದನು.
5ಅಬ್ರಹಾಮನಿಗೆ ನೂರು ವರ್ಷಗಳಾಗಿದ್ದಾಗ, ಅವನ ಮಗನಾದ ಇಸಾಕನು ಹುಟ್ಟಿದನು. 6ಸಾರಳು, “ದೇವರು, ನನ್ನನ್ನು ನಗುವಂತೆ ಮಾಡಿದ್ದಾನೆ, ಇದನ್ನು ಕೇಳಿದ ಪ್ರತಿಯೊಬ್ಬರು ನನ್ನೊಡನೆ ನಗುವರು. 7ಅಬ್ರಹಾಮನಿಗೆ ಸಾರಳಲ್ಲಿ ಮಗನು ಹುಟ್ಟುತ್ತಾನೆಂದು ಯಾರೂ ಯೋಚಿಸಿರಲಿಲ್ಲ. ಅಬ್ರಹಾಮನು ವೃದ್ಧನಾಗಿದ್ದರೂ ಈಗ ನಾನು ಅವನಿಗೆ ಒಬ್ಬ ಮಗನನ್ನು ಕೊಟ್ಟಿದ್ದೇನೆ” ಅಂದಳು.
ಕುಟುಂಬದಲ್ಲಾದ ಒಡಕು
8ಇಸಾಕನು ಬೆಳೆದು ಊಟಮಾಡುವಷ್ಟು ದೊಡ್ಡವನಾದನು. ಆಗ ಅಬ್ರಹಾಮನು ಒಂದು ದೊಡ್ಡ ಔತಣವನ್ನು ಮಾಡಿಸಿದನು. 9ಮೊದಲು, ಈಜಿಪ್ಟಿನ ಸೇವಕಿಯಾದ ಹಾಗರಳಲ್ಲಿ ಒಬ್ಬ ಮಗನು ಹುಟ್ಟಿದ್ದನು. ಅವನಿಗೂ ಅಬ್ರಹಾಮನು ತಂದೆಯಾಗಿದ್ದನು. ಆದರೆ ಆ ಮೊದಲನೆ ಮಗನು ಇಸಾಕನಿಗೆ ತೊಂದರೆ ಕೊಡುವುದನ್ನು ಸಾರಳು ಗಮನಿಸಿದಳು. 10ಸಾರಳು ಅಬ್ರಹಾಮನಿಗೆ, “ಆ ಸೇವಕಿಯನ್ನೂ ಅವಳ ಮಗನನ್ನೂ ಕಳುಹಿಸಿಬಿಡು. ನಾವು ಸತ್ತಾಗ ನಮ್ಮ ಆಸ್ತಿಯನ್ನೆಲ್ಲ ನಮ್ಮ ಮಗನಾದ ಇಸಾಕನೇ ಪಡೆದುಕೊಳ್ಳಲಿ; ನಮ್ಮ ಆಸ್ತಿಯಲ್ಲಿ ಇಸಾಕನೊಡನೆ ಅವನು ಪಾಲುಹೊಂದುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.
11ಅಬ್ರಹಾಮನಿಗೆ ತುಂಬ ದುಃಖವಾಯಿತು. ಅವನು ತನ್ನ ಮಗನಾದ ಇಷ್ಮಾಯೇಲನ ಬಗ್ಗೆ ಚಿಂತಿಸತೊಡಗಿದನು. 12ಆದರೆ ದೇವರು ಅಬ್ರಹಾಮನಿಗೆ, “ಆ ಹುಡುಗನ ಕುರಿತಾಗಲಿ ಸೇವಕಿಯ ಕುರಿತಾಗಲಿ ಚಿಂತೆಮಾಡಬೇಡ. ಸಾರಳ ಇಷ್ಟದಂತೆ ಮಾಡು. ಇಸಾಕನೊಬ್ಬನೇ ಬಾಧ್ಯಸ್ತನಾಗಬೇಕು. 13ಆದರೆ ನಿನ್ನ ಸೇವಕಿಯ ಮಗನನ್ನು ಸಹ ನಾನು ಆಶೀರ್ವದಿಸುವೆನು. ಅವನು ನಿನ್ನ ಮಗನು. ಆದ್ದರಿಂದ ಅವನಿಂದಲೂ ನಾನು ದೊಡ್ಡ ಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.
14ಮರುದಿನ ಮುಂಜಾನೆ, ಅಬ್ರಹಾಮನು ಸ್ವಲ್ಪ ಆಹಾರವನ್ನು ಮತ್ತು ಸ್ವಲ್ಪ ನೀರನ್ನು ತೆಗೆದು ಹಾಗರಳಿಗೆ ಕೊಟ್ಟನು. ಹಾಗರಳು ಅವುಗಳನ್ನು ತೆಗೆದುಕೊಂಡು ತನ್ನ ಮಗನೊಡನೆ ಅಲ್ಲಿಂದ ಹೊರಟುಹೋದಳು. ಹಾಗರಳು ಆ ಸ್ಥಳವನ್ನು ಬಿಟ್ಟು ಬೇರ್ಷೆಬದ ಮರಳುಗಾಡಿನಲ್ಲಿ ಅಲೆಯತೊಡಗಿದಳು.
15ಸ್ವಲ್ಪ ಸಮಯದ ನಂತರ, ಇದ್ದ ನೀರೆಲ್ಲಾ ಮುಗಿದುಹೋಯಿತು. ಕುಡಿಯುವುದಕ್ಕೆ ಏನೂ ಇರಲಿಲ್ಲ. ಆದ್ದರಿಂದ ಹಾಗರಳು ತನ್ನ ಮಗನನ್ನು ಪೊದೆಯ ಕೆಳಗೆ ಮಲಗಿಸಿದಳು. 16ಹಾಗರಳು ಸ್ವಲ್ಪ ದೂರ ನಡೆದುಹೋಗಿ ಕುಳಿತುಕೊಂಡು ತನ್ನ ಮಗನು ಸಾಯುವುದನ್ನು ನೋಡಲಾರದೆ ಅಳತೊಡಗಿದಳು.
17ಮಗುವಿನ ಕೂಗು ದೇವರಿಗೆ ಕೇಳಿಸಿತು. ಆಗ ದೇವದೂತನು ಆಕಾಶದಿಂದ ಆಕೆಯನ್ನು ಕರೆದು, “ಹಾಗರಳೇ, ನಿನಗೇನಾಯಿತು? ಭಯಪಡಬೇಡ; ಮಗುವಿನ ಕೂಗನ್ನು ಯೆಹೋವನು ಕೇಳಿದ್ದಾನೆ. 18ಹೋಗಿ ಮಗುವನ್ನು ಎತ್ತಿಕೊ. ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
19ಆಮೇಲೆ ದೇವರು ಹಾಗರಳಿಗೆ ಒಂದು ಬಾವಿ ಕಾಣಿಸುವಂತೆ ಮಾಡಿದನು. ಹಾಗರಳು ಬಾವಿಗೆ ಹೋಗಿ ತನ್ನ ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಬಂದು ಮಗುವಿಗೆ ಕುಡಿಸಿದಳು.
20ದೇವರು ಆ ಮಗುವಿನ ಸಂಗಡವಿದ್ದ ಕಾರಣ ಆ ಮಗುವು ಬೆಳೆದು ದೊಡ್ಡವನಾದನು; ಕಾಡಿನಲ್ಲಿ ವಾಸವಾಗಿದ್ದು ಚತುರ ಬಿಲ್ಲುಗಾರನಾದನು. 21ಅವನ ತಾಯಿಯು ಅವನಿಗೆ ಈಜಿಪ್ಟಿನ ಹುಡುಗಿಯನ್ನು ತಂದು ಮದುವೆ ಮಾಡಿಸಿದಳು. ಅವರು ಪಾರಾನ್ ಕಾಡಿನಲ್ಲಿ ತಮ್ಮ ವಾಸವನ್ನು ಮುಂದುವರಿಸಿದರು.
ಅಬ್ರಹಾಮನು ಅಬೀಮೆಲೆಕನೊಡನೆ ಮಾಡಿಕೊಂಡ ಒಪ್ಪಂದ
22ಆಮೇಲೆ ಅಬೀಮೆಲೆಕನು ಮತ್ತು ಫೀಕೋಲನು ಅಬ್ರಹಾಮನೊಡನೆ ಮಾತಾಡಿದರು. ಫೀಕೋಲನು ಅಬೀಮೆಲೆಕನ ಸೈನ್ಯಾಧಿಕಾರಿಯಾಗಿದ್ದನು. ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಮಾಡುವ ಪ್ರತಿಯೊಂದರಲ್ಲೂ ದೇವರು ನಿನ್ನೊಡನೆ ಇದ್ದಾನೆ. 23ಆದ್ದರಿಂದ ನೀನು ನನ್ನೊಡನೆ ಮತ್ತು ನನ್ನ ಮಕ್ಕಳೊಡನೆ ನ್ಯಾಯವಾಗಿ ನಡೆದುಕೊಳ್ಳುವುದಾಗಿ ದೇವರ ಮೇಲೆ ಪ್ರಮಾಣಮಾಡು. ನನಗೂ ಮತ್ತು ನೀನು ವಾಸಿಸುತ್ತಿರುವ ಈ ನಾಡಿಗೂ ದಯೆತೋರುವುದಾಗಿ ನೀನು ಪ್ರಮಾಣಮಾಡು. ನಾನು ನಿನಗೆ ದಯೆತೋರಿದಂತೆ ನೀನೂ ನನಗೆ ದಯೆತೋರುವುದಾಗಿ ಪ್ರಮಾಣಮಾಡು” ಎಂದು ಹೇಳಿದನು.
24ಅದಕ್ಕೆ ಅಬ್ರಹಾಮನು, “ನೀನು ನನ್ನನ್ನು ನೋಡಿಕೊಂಡಂತೆ ನಾನೂ ನಿನ್ನನ್ನು ನೋಡಿಕೊಳ್ಳುವೆನು” ಎಂದು ಪ್ರಮಾಣಮಾಡಿದನು. 25ಆಮೇಲೆ ಅಬ್ರಹಾಮನು ಅಬೀಮೆಲೆಕನಿಗೆ, “ನಿನ್ನ ಸೇವಕರು ನೀರಿದ್ದ ಒಂದು ಬಾವಿಯನ್ನು ವಶಪಡಿಸಿಕೊಂಡಿದ್ದಾರೆ” ಎಂದು ದೂರು ಹೇಳಿದನು.
26ಅದಕ್ಕೆ ಅಬೀಮೆಲೆಕನು, “ಅದನ್ನು ಯಾರು ಮಾಡಿದರೋ ನನಗೆ ಗೊತ್ತಿಲ್ಲ. ಇಂದಿನವರೆಗೂ ನೀನು ಇದನ್ನು ನನಗೆ ಹೇಳಲೇ ಇಲ್ಲ” ಎಂದು ಹೇಳಿದನು.
27ಆಗ ಅಬ್ರಹಾಮನು ಮತ್ತು ಅಬೀಮೆಲೆಕನು ಒಂದು ಒಪ್ಪಂದವನ್ನು ಮಾಡಿಕೊಂಡರು. ಅಬ್ರಹಾಮನು ಅವನಿಗೆ ಕೆಲವು ದನಕುರಿಗಳನ್ನು ಒಪ್ಪಂದದ ಗುರುತಾಗಿ ಕೊಟ್ಟನು; 28ಅಲ್ಲದೆ ಅಬ್ರಹಾಮನು ಮಂದೆಯ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕಿಸಿದನು.
29ಅಬೀಮೆಲೆಕನು ಅಬ್ರಹಾಮನಿಗೆ, “ಈ ಏಳು ಕುರಿಗಳನ್ನು ಇಲ್ಲಿ ಇರಿಸಿರುವುದೇಕೆ?” ಎಂದು ಕೇಳಿದನು.
30ಅಬ್ರಹಾಮನು “ಆ ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ನೀನು ಈ ಕುರಿಗಳನ್ನು ನನ್ನಿಂದ ಸ್ವೀಕರಿಸಿಕೊಳ್ಳಬೇಕು” ಎಂದು ಉತ್ತರಿಸಿದನು.
31ಅವರು ಆ ಸ್ಥಳದಲ್ಲಿ ಒಪ್ಪಂದ ಮಾಡಿಕೊಂಡಿದ್ದರಿಂದ ಆ ಬಾವಿಗೆ ಬೇರ್ಷೆಬ ಎಂದು ಹೆಸರಾಯಿತು.
32ಬೇರ್ಷೆಬದಲ್ಲಿ ಒಪ್ಪಂದವನ್ನು ಮಾಡಿಕೊಂಡ ಮೇಲೆ ಅಬೀಮೆಲೆಕನು ಮತ್ತು ಅವನ ಸೈನ್ಯಾಧಿಕಾರಿಯು ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿದರು.
33ಅಬ್ರಹಾಮನು ಬೇರ್ಷೆಬದಲ್ಲಿ ವಿಶೇಷವಾದ ಒಂದು ಮರವನ್ನು ನೆಟ್ಟನು. ಆ ಸ್ಥಳದಲ್ಲಿ ಅವನು ಸದಾಕಾಲ ಜೀವಿಸುವ ದೇವರಾದ ಯೆಹೋವನಿಗೆ ಪ್ರಾರ್ಥಿಸಿದನು. 34ಅವನು ಬಹುಕಾಲದವರೆಗೆ ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದನು.
Currently Selected:
ಆದಿಕಾಂಡ 21: KERV
Highlight
Share
Copy
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International