YouVersion Logo
Search Icon

ಮೀಕ 1

1
1ಯೆಹೂದದ ಅರಸನಾದ ಯೋಥಾಮ, ಆಹಾಜ ಮತ್ತು ಹಿಜ್ಕೀಯ ಇವರ ಕಾಲದಲ್ಲಿ ಸಮಾರ್ಯದ ಮತ್ತು ಯೆರೂಸಲೇಮಿನ ವಿಷಯವಾಗಿ ಮೋರೆಷೆತ್ ಊರಿನವನಾದ ಮೀಕನಿಗೆ ಕೇಳಿ ಬಂದ ಯೆಹೋವನ ವಾಕ್ಯ.
ಸಮಾರ್ಯಕ್ಕೂ ಯೆರೂಸಲೇಮಿಗೂ ಸಂಭವಿಸುವ ನಾಶನ
2ಜನಾಂಗಗಳೇ, ನೀವೆಲ್ಲರೂ ಕೇಳಿರಿ.
ಭೂಮಂಡಲವೇ, ಭೂಮಿಯಲ್ಲಿರುವ ಸಮಸ್ತರೇ, ಕಿವಿಗೊಡಿರಿ,
ಕರ್ತನಾದ ಯೆಹೋವನು ತನ್ನ ಪವಿತ್ರಾಲಯದೊಳಗಿಂದ ನಿಮಗೆ ವಿರುದ್ಧವಾಗಿ ಸಾಕ್ಷಿಕೊಡುತ್ತಾನೆ.
3ಇಗೋ ಯೆಹೋವನು ತನ್ನ ಸ್ಥಾನದಿಂದ ಹೊರಟು ಇಳಿದುಬರುತ್ತಿದ್ದಾನೆ.
ಭೂಮಿಯ ಉನ್ನತಪ್ರದೇಶಗಳಲ್ಲಿ ನಡೆಯುತ್ತಾನೆ.
4ಬೆಂಕಿಗೆ ಎದುರು ಕರಗುವ ಮೇಣದಂತೆಯೂ ಮತ್ತು ಇಳಿಜಾರು ಪ್ರದೇಶದಲ್ಲಿ
ರಭಸವಾಗಿ ಹರಿಯುವ ನೀರಿನಂತೆ ಕಣಿವೆಗಳು, ಪರ್ವತಗಳು ಆತನ ಮುಂದೆ ಸೀಳಿ ಕರಗಿ ಕೊಚ್ಚಿಹೊಗುತ್ತಿವೆ.
5ಇದಕ್ಕೆಲ್ಲಾ ಕಾರಣ ಯಾಕೋಬಿನ ದ್ರೋಹ ಮತ್ತು ಇಸ್ರಾಯೇಲ್ ವಂಶದ ಪಾಪಗಳೇ.
ಯಾಕೋಬಿನ ದ್ರೋಹವೇನು? ಸಮಾರ್ಯವಲ್ಲವೇ!
ಯೆಹೂದದ ಕೆಟ್ಟ ಪೂಜಾಸ್ಥಾನಗಳು ಯಾವುವು?
ಯೆರೂಸಲೇಮಲ್ಲವೇ!
6ಆದಕಾರಣ ನಾನು ಸಮಾರ್ಯವನ್ನು ಹೊಲದಲ್ಲಿನ ಹಾಳು ದಿಬ್ಬವನ್ನಾಗಿಯೂ,
ದ್ರಾಕ್ಷಿಯ ತೋಟದ ಮಡಿಗಳನ್ನಾಗಿಯೂ ಮಾಡುವೆನು.
ಅದರ ಕಲ್ಲುಗಳನ್ನು ತಗ್ಗಿಗೆ ಸುರಿದುಬಿಡುವೆನು.
ಅದರ ಅಸ್ತಿವಾರಗಳನ್ನು ಬಯಲನ್ನಾಗಿ ಮಾಡುವೆನು.
7ಅದರ ಎರಕದ ಬೊಂಬೆಗಳನ್ನೆಲ್ಲಾ ಪುಡಿಪುಡಿ ಮಾಡುವೆನು.
ಅದರ ಸಮಸ್ತ ಸಂಪಾದನೆಯು ಸುಟ್ಟುಹೋಗುವುದು.
ಅದರ ಸಕಲ ವಿಗ್ರಹಗಳನ್ನು ಹಾಳುಮಾಡುವೆನು.
ಅದು ವೇಶ್ಯಾವಾಟಿಕೆಯಿಂದ ಸಂಪಾದನೆಯಾಗಿ ಕೂಡಿಸಿಟ್ಟುಕೊಂಡವುಗಳು ಹಾಗೂ
ವೇಶ್ಯಾವಾಟಿಕೆಯ ಸಂಪಾದನೆಯಾಗಿಯೇ ಪರರ ಪಾಲಾಗುವವು.
ಗೋಳಾಟ
8ಇದಕ್ಕಾಗಿ ನಾನು ಗೋಳಾಡಿ ರೋದಿಸುವೆನು,
ಬರಿಗಾಲಾಗಿಯೂ, ಬೆತ್ತಲೆಯಾಗಿಯೂ ನಡೆದಾಡುವೆನು.
ನರಿಗಳಂತೆ ಅರಚಿಕೊಳ್ಳುವೆನು.
ಉಷ್ಟ್ರಪಕ್ಷಿಗಳ ಹಾಗೆ ಕಿರಿಚಿಕೊಳ್ಳುವೆನು.
9ಸಮಾರ್ಯಕ್ಕೆ ಬಿದ್ದ ಪೆಟ್ಟು ಗುಣಪಡಿಸಲಾಗದು.
ಅದು ಯೆಹೂದಕ್ಕೂ ತಾಕಿದೆ.
ನನ್ನ ಜನರ ಆಲೋಚನಾಸ್ಥಾನವಾದ ಯೆರೂಸಲೇಮಿಗೆ ಮುಟ್ಟಿದೆ.
10ಇದನ್ನು ಗತ್ ಊರಿನಲ್ಲಿ ತಿಳಿಸಬೇಡಿರಿ, ಅಳಲೇಬೇಡಿರಿ,
ಬೇತ್ಲೆಯಪ್ರದಲ್ಲಿ ಧೂಳಿನೊಳಗೆ ಹೊರಳಾಡಿರಿ.
11ಶಾಫೀರಿನವರೇ, ಬೆತ್ತಲೆಯಾಗಿ ಅವಮಾನಪಟ್ಟು ತೊಲಗಿರಿ.
ಚಾನಾನಿನವರು ಹೊರಡರು.
ಬೇತೆಚೇಲಿನ ಗೋಳಾಟವು ಅದರ ಬೆಂಬಲವನ್ನು ನಿಮಗೆ ತಪ್ಪಿಸುವುದು.
12ಕೇಡು ಯೆಹೋವನಿಂದ ಹೊರಟು ಯೆರೂಸಲೇಮಿನ
ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ತಮಗೆ
ಮೇಲುಂಟಾಗುವುದಿಲ್ಲವೋ ಎಂದು ವೇದನೆಪಡುತ್ತಾರೆ.
13ಲಾಕೀಷಿನವರೇ ಅಶ್ವಗಳನ್ನು ರಥಕ್ಕೆ ಕಟ್ಟಿರಿ.
ನಿಮ್ಮ ಊರೇ ಚೀಯೋನ್ ನಗರಿಯ ಪಾಪಕ್ಕೆ ಮೂಲ,
ಹೌದು ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿಬಂದವು.
14ಆದಕಾರಣ ನೀವು ಮೋರೆಷತ್ ಗತ್ ಊರಿಗೆ ಬಳುವಳಿ ಕೊಡಬೇಕಾಗುವುದು.
ಅಕ್ಜೀಬಿನ ಮನೆಗಳಿಂದ ಇಸ್ರಾಯೇಲಿನ ಅರಸರಿಗೆ ಮೋಸವಾಗುವುದು.
15ಮಾರೇಷದವರೇ, ನಿಮ್ಮನ್ನು ವಶಮಾಡಿಕೊಳ್ಳತಕ್ಕವನನ್ನು ಇನ್ನು ನಿಮ್ಮ ಬಳಿಗೆ ಬರಮಾಡುವೆನು.
ಇಸ್ರಾಯೇಲಿನ ನಾಯಕರು#1:15 ನಾಯಕರು ಅಥವಾ ಮಹಿಮೆಯು ಅದುಲ್ಲಾಮ್ ಪಟ್ಟಣಕ್ಕೆ ಸೇರುವುದು.
16ಯೆಹೂದವೇ, ನಿನ್ನಿಂದ ಸೆರೆಹೋಗಿರುವ ನಿನ್ನ ಮುದ್ದು ಮಕ್ಕಳಿಗಾಗಿ ಕ್ಷೌರಮಾಡಿಸಿಕೋ ಮತ್ತು ತಲೆಬೋಳಿಸಿಕೋ.
ನಿನ್ನ ಬೋಳುತನವನ್ನು ರಣಹದ್ದಿನ ಹಾಗೆ ವಿಸ್ತರಿಸಿಕೋ.

Currently Selected:

ಮೀಕ 1: IRVKan

Highlight

Share

Copy

None

Want to have your highlights saved across all your devices? Sign up or sign in