YouVersion Logo
Search Icon

ಯೋನ 4

4
ಯೋನನ ಕೋಪವೂ ದೇವರ ಕನಿಕರವೂ
1ಇದರಿಂದ ಯೋನನಿಗೆ ಬಹು ಬೇಸರವಾಯಿತು; ಅವನು ಬಹಳ ಸಿಟ್ಟುಗೊಂಡನು. 2ಆಗ ಅವನು ಯೆಹೋವನಿಗೆ ಮೊರೆಯಿಟ್ಟನು, “ಯೆಹೋವನೇ, ಲಾಲಿಸು, ನಾನು ಸ್ವದೇಶದಲ್ಲಿರುವಾಗಲೇ ಹೀಗಾಗುವುದೆಂದು ಹೇಳಿದೆನಷ್ಟೆ; ನೀನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಕೃಪೆಯೂ ಉಳ್ಳ ದೇವರು, ಮಾಡಬೇಕೆಂದಿದ್ದ ಕೇಡಿಗೆ ಮನಮರುಗುವವನು ಎಂದು ನಾನು ತಿಳಿದೇ, ತಾರ್ಷೀಷಿಗೆ ಓಡಿಹೋಗಲು ಪ್ರಯತ್ನಿಸಿದ್ದು. 3ಆದುದರಿಂದ ಯೆಹೋವನೇ, ನನ್ನ ಪ್ರಾಣವನ್ನು ತೆಗೆದುಕೋ; ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ವಿಜ್ಞಾಪಿಸಿಕೊಂಡನು. 4ಅದಕ್ಕೆ ಯೆಹೋವನು, “ನೀನು ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಿದನು. 5ಅನಂತರ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣದಲ್ಲಿ ಒಂದು ಗುಡಿಸಲನ್ನು ಮಾಡಿಕೊಂಡು ಪಟ್ಟಣವು ಏನಾಗುವುದೋ ಎಂದು ನೋಡುತ್ತಾ ಅದರ ನೆರಳಿನಲ್ಲಿ ಕುಳಿತುಕೊಂಡಿದ್ದನು. 6ಆಗ ದೇವರಾದ ಯೆಹೋವನು ಒಂದು ಸೋರೆಗಿಡವನ್ನು ಬೆಳೆಯುವಂತೆ ಮಾಡಿ ಅದು ಯೋನನ ತಲೆಗೆ ನೆರಳಾಗಿ ಅವನ ಮನೋವ್ಯಥೆಗೆ ಸಮಾಧಾನ ಬರುವಂತೆ ಮಾಡಿದನು. ಇದರಿಂದ ಯೋನನಿಗೆ ಬಹು ಸಂತೋಷವಾಯಿತು. 7ಮಾರನೆಯ ದಿನ ಮುಂಜಾನೆ ದೇವರು ಒಂದು ಹುಳಕ್ಕೆ ಆ ಸೋರೆಗಿಡವನ್ನು ಕೊರೆಯಲು ಅಪ್ಪಣೆ ಮಾಡಿದನು. ಆ ಗಿಡವು ಒಣಗಿಹೋಯಿತು. 8ಸೂರ್ಯನು ಉದಯಿಸಿದಾಗ ದೇವರು ಬಿಸಿಯಾದ ಮೂಡಣ ಗಾಳಿಯನ್ನು ಏರ್ಪಡಿಸಿದನು; ಬಿಸಿಲು ಯೋನನ ತಲೆಗೆ ಹೊಡೆಯಲು ಅವನು ಮೂರ್ಛೆಹೋಗುವವನಾಗಿ “ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ಸಾಯಲು ಬಯಸಿದನು. 9ಆಗ ದೇವರು ಯೋನನಿಗೆ, “ನೀನು ಸೋರೆಗಿಡ ಒಣಗಿದ್ದಕ್ಕಾಗಿ ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಲು ಯೋನನು “ಹೌದು, ನಾನು ಸಾಯುವಷ್ಟು ಕಾಲ ಸಿಟ್ಟುಗೊಳ್ಳುವುದು ಸರಿಯೇ” ಎಂದು ಉತ್ತರಕೊಟ್ಟನು. 10ಅದಕ್ಕೆ ಯೆಹೋವನು “ನೀನು ಆ ಸೋರೆಗಿಡಕ್ಕಾಗಿ ಕಷ್ಟಪಡಲಿಲ್ಲ, ಬೆಳೆಯಿಸಲಿಲ್ಲ; ಅದು ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾಯಿತು; 11ಇಂಥ ಗಿಡಕ್ಕಾಗಿ ನೀನು ಕನಿಕರಪಡುವಾಗ ಎಡಗೈ ಬಲಗೈ ತಿಳಿಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು, ಅಪಾರ ಪಶುಪ್ರಾಣಿಗಳೂ ಇರುವ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ?” ಎಂದನು.

Currently Selected:

ಯೋನ 4: IRVKan

Highlight

Share

Copy

None

Want to have your highlights saved across all your devices? Sign up or sign in