YouVersion Logo
Search Icon

ನ್ಯಾಯ 12

12
ಯೆಪ್ತಾಹನು ಎಫ್ರಾಯೀಮ್ಯರನ್ನು ಸೋಲಿಸಿದ್ದು
1ಎಫ್ರಾಯೀಮ್ಯರು ಒಟ್ಟಿಗೆ ಸೇರಿಕೊಂಡು ಯೊರ್ದನ್ ನದಿಯನ್ನು ದಾಟಿ ಉತ್ತರದಿಕ್ಕಿನಲ್ಲಿರುವ ಚಾಫೋನಿಗೆ ಹೋಗಿ ಯೆಪ್ತಾಹನಿಗೆ, “ನೀನು ಅಮ್ಮೋನಿಯರ ಸಂಗಡ ಯುದ್ಧಕ್ಕೆ ಹೋಗುವಾಗ ನಮ್ಮನ್ನು ಯಾಕೆ ಕರೆಯಲಿಲ್ಲ? ಈಗ ನಾವು ನಿನ್ನನ್ನೂ ನಿನ್ನ ಮನೆಯನ್ನೂ ಸುಟ್ಟುಬಿಡುತ್ತೇವೆ” ಅಂದರು. 2ಆಗ ಅವನು ಅವರಿಗೆ, “ನನಗೂ ನನ್ನ ಜನರಿಗೂ ಅಮ್ಮೋನಿಯರೊಡನೆ ವ್ಯಾಜ್ಯವಿದ್ದಾಗ ನಾನು ನಿಮ್ಮನ್ನು ಕರೆದೆನು; ಆದರೆ ನೀವು ಬಂದು ನನ್ನನ್ನು ಅವರ ಕೈಯಿಂದ ಬಿಡಿಸಲಿಲ್ಲ. 3ನೀವು ಸಹಾಯಮಾಡುವುದಿಲ್ಲವೆಂದು ತಿಳಿದು #12:3 1 ಸಮು 19:5.ಜೀವವನ್ನು ಕೈಯಲ್ಲಿ ಹಿಡಿದು ಅಮ್ಮೋನಿಯರೊಡನೆ ಯುದ್ಧಕ್ಕೆ ಹೋದೆನು. ಯೆಹೋವನು ಅವರನ್ನು ನನ್ನ ಕೈಗೆ ಒಪ್ಪಿಸಿದನು. ಹೀಗಿರಲು ನೀವು ಈಗ ಬಂದು ನನ್ನೊಡನೆ ಕಲಹಮಾಡುವುದೇಕೆ?” ಎಂದು ಉತ್ತರಿಸಿ, 4ಗಿಲ್ಯಾದಿನವರೆಲ್ಲರನ್ನೂ ಸೇರಿಸಿಕೊಂಡು ಎಫ್ರಾಯೀಮ್ಯರಿಗೆ ವಿರೋಧವಾಗಿ ಯುದ್ಧಕ್ಕೆ ನಿಂತನು. ಆಗ ಎಫ್ರಾಯೀಮ್ಯರು “ಗಿಲ್ಯಾದ್ಯರಾದ ನೀವು, ನಮ್ಮ ಮತ್ತು ಮನಸ್ಸೆಯವರ ಮಧ್ಯದಲ್ಲಿದ್ದು ಸ್ವಕುಲವನ್ನು ಬಿಟ್ಟು ಇಲ್ಲಿಗೆ ಓಡಿ ಬಂದಿದ್ದೀರಿ” ಎಂದು ಎಫ್ರಾಯೀಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಕೋಪಗೊಂಡು ಅವರನ್ನು ಪೂರ್ಣವಾಗಿ ಸೋಲಿಸಿಬಿಟ್ಟರು. 5ಇದಲ್ಲದೆ ಅವರು ಎಫ್ರಾಯೀಮಿಗೆ ಹೋಗುವ #12:5 ನ್ಯಾಯ 3:31.ಯೊರ್ದನಿನ ಹಾಯಗಡಗಳನ್ನೆಲ್ಲಾ ಹಿಡಿದರು. ತಪ್ಪಿಸಿಕೊಂಡ ಎಫ್ರಾಯೀಮ್ಯರಲ್ಲೊಬ್ಬನು ಅಲ್ಲಿಗೆ ಬಂದು ನನ್ನನ್ನು ದಾಟಗೊಡಿಸಿರಿ ಎಂದು ಅವರನ್ನು ಕೇಳಿದರೆ ಅವರು, “ನೀನು ಎಫ್ರಾಯೀಮ್ಯನೋ” ಎಂದು ಕೇಳುವರು. 6ಅವನು ಅಲ್ಲವೆಂದರೆ ಅವನಿಗೆ, “ನೀನು ಷಿಬ್ಬೋಲೆತ್ ಎಂದು ಹೇಳು” ಎಂದು ಹೇಳುವರು. ಹಾಗೆ ಅನ್ನಲಿಕ್ಕೆ ಬಾರದೆ ಅವನು ಸಿಬ್ಬೋಲೆತ್ ಅನ್ನುವನು. ಕೂಡಲೆ ಅವರು ಅವನನ್ನು ಹಿಡಿದು ಯೊರ್ದನಿನ ಹಾಯಗಡಗಳ (ಕಾಲ್ನಡಿಗೆಯಿಂದ ದಾಟಬಹುದಾದ ನಿರುಳ್ಳಸ್ಥಳ) ಬಳಿಯಲ್ಲೇ ಕೊಂದುಹಾಕುವರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಲ್ವತ್ತೆರಡು ಸಾವಿರ ಜನರು ಹತರಾದರು.
7ಗಿಲ್ಯಾದ್ಯನಾದ ಯೆಪ್ತಾಹನು ಇಸ್ರಾಯೇಲ್ಯರನ್ನು ಆರು ವರ್ಷ ಪಾಲಿಸಿದ ನಂತರ ಸತ್ತನು; ಅವನ ಶವವನ್ನು ಗಿಲ್ಯಾದಿನ ಒಂದು ಪಟ್ಟಣದಲ್ಲಿ ಸಮಾಧಿ ಮಾಡಿದರು.
ಇಬ್ಚಾನ್
8ಯೆಪ್ತಾಹನ ತರುವಾಯ ಬೇತ್ಲೆಹೇಮಿನವನಾದ ಇಬ್ಚಾನನು ಇಸ್ರಾಯೇಲರ ನ್ಯಾಯಪಾಲಕನಾದನು. 9ಅವನಿಗೆ ಮೂವತ್ತು ಮಂದಿ ಗಂಡುಮಕ್ಕಳೂ, ಮೂವತ್ತು ಮಂದಿ ಹೆಣ್ಣುಮಕ್ಕಳೂ ಇದ್ದರು. ತನ್ನ ಹೆಣ್ಣುಮಕ್ಕಳನ್ನು ಬೇರೆಯವರಿಗೆ ಕೊಟ್ಟು, ಗಂಡುಮಕ್ಕಳಿಗೋಸ್ಕರ ಹೊರಗಿನ ಮೂವತ್ತು ಮಂದಿ ಕನ್ಯೆಯರನ್ನು ತಂದನು. 10ಇವನು ಇಸ್ರಾಯೇಲ್ಯರನ್ನು ಏಳು ವರ್ಷ ಪಾಲಿಸಿದನು. ಇಬ್ಚಾನನು ಸತ್ತ ಮೇಲೆ ಅವನ ಶವವನ್ನು ಬೇತ್ಲೆಹೇಮಿನಲ್ಲಿ ಸಮಾಧಿಮಾಡಿದರು.
ಏಲೋನ್
11ಇವನ ತರುವಾಯ ಜೆಬುಲೂನ್ಯನಾದ ಏಲೋನನು ಇಸ್ರಾಯೇಲರ ಪಾಲಕನಾಗಿ ಹತ್ತು ವರ್ಷಗಳ ಕಾಲ ಅವರನ್ನು ಪಾಲಿಸಿದ ನಂತರ ಮರಣಹೊಂದಿದನು. 12ಅವನ ಶವವನ್ನು ಜೆಬುಲೂನ್ ದೇಶದ ಅಯ್ಯಾಲೋನಿನಲ್ಲಿ ಸಮಾಧಿಮಾಡಿದರು.
ಅಬ್ದೋನ್
13ಇವನ ತರುವಾಯ ಪಿರಾತೋನಿನವನೂ, ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಾಯೇಲರ ಪಾಲಕನಾದನು. 14ಇವನಿಗೆ ನಲ್ವತ್ತು ಮಂದಿ ಮಕ್ಕಳೂ, ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಇವರೆಲ್ಲರಿಗೆ ಸವಾರಿಮಾಡುವುದಕ್ಕೋಸ್ಕರ ಎಪ್ಪತ್ತು ಕತ್ತೆಗಳಿದ್ದವು. ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಾಯೇಲರನ್ನು ಎಂಟು ವರ್ಷಗಳ ಕಾಲ ಪಾಲಿಸಿದ ನಂತರ ಮರಣಹೊಂದಿದನು; 15ಅವನ ಶವವನ್ನು ಎಫ್ರಾಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದ ಮೇಲಿರುವ ಪಿರಾತೋನಿನಲ್ಲಿ ಸಮಾಧಿಮಾಡಿದರು.

Currently Selected:

ನ್ಯಾಯ 12: IRVKan

Highlight

Share

Copy

None

Want to have your highlights saved across all your devices? Sign up or sign in

Video for ನ್ಯಾಯ 12