ಯೆಶಾ 2
2
ಚೀಯೋನಿನ ಮುಂದಣ ಪ್ರಖ್ಯಾತಿ
1ಯೆಹೂದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಕಂಡು ಬಂದ ದೈವೋಕ್ತಿ ಇದೇ.
2ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು
ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು.
ಆಗ ಸಕಲ ದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು.
3ಹೊರಟು ಬಂದ ಬಹು ಜನಾಂಗದವರು,
“ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ,
ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು. ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು.
ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವುದು.
4ಆತನು ದೇಶದೇಶಗಳ ವ್ಯಾಜ್ಯವನ್ನು ವಿಚಾರಿಸುವನು, ಬಹು ರಾಷ್ಟ್ರದವರಿಗೆ ನ್ಯಾಯತೀರಿಸುವನು;
ಅವರೋ ತಮ್ಮ ಆಯುಧಗಳನ್ನು ಕುಲುಮೆಗೆ ಹಾಕಿ, ಕತ್ತಿಗಳನ್ನು ನೇಗಿಲ ಗುಳಗಳನ್ನಾಗಿಯೂ, ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು.
ಜನಾಂಗಕ್ಕೆ ವಿರುದ್ಧವಾಗಿ ಜನಾಂಗವು ಕತ್ತಿಯನ್ನೆತ್ತದು. ಇನ್ನು ಮೇಲೆ ಯುದ್ಧಾಭ್ಯಾಸವು ನಡೆಯುವುದೇ ಇಲ್ಲ.
ಯೆಹೋವನ ನ್ಯಾಯನಿರ್ಣಯದ ದಿನ
5ಯಾಕೋಬಿನ ವಂಶದವರೇ ಬನ್ನಿರಿ, ಯೆಹೋವನ ಜ್ಞಾನದ ಬೆಳಕಿನಲ್ಲಿ ನಡೆಯೋಣ.
6ಯಾಕೋಬಿನ ಮನೆತನದವರು ಪೂರ್ವದೇಶಗಳಲ್ಲಿ ಮಂತ್ರತಂತ್ರಗಳಲ್ಲಿ ಮಗ್ನರೂ,
ಫಿಲಿಷ್ಟಿಯರ ಹಾಗೆ ಕಣಿ ಹೇಳುವವರೂ,
ಅನ್ಯದೇಶಗಳವರ ಸಂಗಡ ಒಪ್ಪಂದ ಮಾಡುವವರೂ ಆಗಿರುವುದರಿಂದ ಯೆಹೋವನೇ ಈ ನಿನ್ನ ಜನರನ್ನು ಕೈಬಿಟ್ಟಿದ್ದೀ.
7ಅವರ ದೇಶವು ಬೆಳ್ಳಿಬಂಗಾರಗಳಿಂದ ತುಂಬಿದೆ. ಅವರ ನಿಧಿನಿಕ್ಷೇಪಗಳಿಗೆ ಮಿತಿಯಿಲ್ಲ.
ಅವರ ದೇಶವು ಅಶ್ವಬಲದಿಂದ ತುಂಬಿದೆ. ಅವರ ರಥಗಳಿಗೆ ಮಿತಿಯೇ ಇಲ್ಲ.
8ಅವರ ದೇಶವು ವಿಗ್ರಹಗಳಿಂದಲೂ ತುಂಬಿದೆ.
ತಮ್ಮ ಕೈಯಿಂದಲೇ, ತಮ್ಮ ಬೆರಳುಗಳಿಂದಲೇ ಮಾಡಿದ ಕೆಲಸಕ್ಕೆ ನಮಸ್ಕರಿಸುತ್ತಾರೆ.
9ಹೀಗಿರಲು ಜನರು ಅಧರ್ಮಿಗಳಾಗಲಿ, ಉತ್ತಮರಾಗಲಿ ತಗ್ಗಿಸಲ್ಪಡುವರು, ಪ್ರತಿ ಮನುಷ್ಯನು ಬಿದ್ದುಹೋಗುವನು. ನೀನು ಅವರನ್ನು ಸ್ವೀಕರಿಸಬೇಡ.
10ಗವಿಯೊಳಗೆ ನುಗ್ಗು, ಯೆಹೋವನ ಭಯಂಕರತನಕ್ಕೂ,
ಅತ್ಯುನ್ನತ ಮಹಿಮೆಗೂ ಹೆದರಿ ಭೂಮಿಯಲ್ಲಿ ಅವಿತುಕೋ.
11ಮನುಷ್ಯನ ಗರ್ವದೃಷ್ಟಿಯು ತಗ್ಗಿಹೋಗುವುದು, ಮನುಷ್ಯರ ಅಹಂಕಾರವು ತಗ್ಗುವುದು.
ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.
12ಸೇನಾಧೀಶ್ವರನಾದ ಯೆಹೋವನ ನ್ಯಾಯನಿರ್ಣಯದ ದಿನವು
ಗರ್ವದಿಂದ ಹೆಚ್ಚಿಕೊಂಡಿರುವ ಪ್ರತಿಯೊಬ್ಬನ ಮೇಲೆ ಬರುವುದು. ಆಗ ಅವನು ತಗ್ಗಿಸಲ್ಪಡುವನು.
13ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳ
ಮತ್ತು ಬಾಷಾನಿನ ಎಲ್ಲಾ ಅಲ್ಲೋನ ಮರಗಳ ಮೇಲೆಯೂ,
14ಶಿಖರಗಳನ್ನು ಉನ್ನತವಾಗಿ ಎತ್ತಿಕೊಂಡಿರುವ ಸಮಸ್ತ ಬೆಟ್ಟಗುಡ್ಡಗಳ ಮೇಲೆಯೂ,
15ಎತ್ತರವಾದ ಸಕಲ ಗೋಪುರಗಳ ಮೇಲೆಯೂ, ಭದ್ರವಾದ ಸಮಸ್ತ ಕೋಟೆಗಳ ಮೇಲೆಯೂ,
16ಎಲ್ಲಾ ದೊಡ್ಡ ದೊಡ್ಡ ತಾರ್ಷೀಷ್ ನ ಹಡಗುಗಳ ಮೇಲೆಯೂ, ಅಂತೂ ನೋಡತಕ್ಕ ಮನೋಹರವಾದ ಪ್ರತಿಯೊಂದು ವಸ್ತುವಿನ#2:16 ಮನೋಹರವಾದ ಪ್ರತಿಯೊಂದು ವಸ್ತುವಿನ ಅಥವಾ ಮನೋಹರವಾದ ಹಡಗು. ಮೇಲೆಯೂ ಆ ದಿನವೂ ತಪ್ಪದೇ ಬರುವುದು.
17ಮನುಷ್ಯರ ಗರ್ವವು ಕುಗ್ಗುವುದು. ಮನುಷ್ಯರ ಅಹಂಕಾರವು ತಗ್ಗುವುದು.
ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.
18ವಿಗ್ರಹಗಳು ಸಂಪೂರ್ಣವಾಗಿ ನಾಶವಾಗಿ ಹೋಗುವವು.
19ಯೆಹೋವನು ಭೂಮಂಡಲವನ್ನು ನಡುಗಿಸಲು ಏಳುವಾಗ,
ಮನುಷ್ಯರು ಆತನ ಭಯಂಕರ ಕೋಪಕ್ಕೂ, ಅತ್ಯುನ್ನತ ಮಹಿಮೆಗೂ ಹೆದರಿ ಬಂಡೆಗಳ ಗವಿಗಳಲ್ಲಿಯೂ, ನೆಲದ ಹಳ್ಳಕೊಳ್ಳಗಳಲ್ಲಿಯೂ ಅಡಗಿಕೊಳ್ಳುವರು.
20ಆ ದಿನದಲ್ಲಿ ಮನುಷ್ಯರು ತಮ್ಮ ಪೂಜೆಗೋಸ್ಕರ ಮಾಡಿಸಿಕೊಂಡ ಬೆಳ್ಳಿಯ ಬೊಂಬೆಗಳನ್ನೂ, ಬಂಗಾರದ ವಿಗ್ರಹಗಳನ್ನೂ,
ಇಲಿ, ಬಾವಲಿಗಳಿಗಾಗಿ ಬಿಸಾಡಿ ಬಿಡುವರು.
21ಯೆಹೋವನು ಭೂಮಂಡಲವನ್ನು ನಡುಗಿಸಲು ಏಳುವಾಗ,
ಆತನ ಭಯಂಕರಕ್ಕೂ, ಅತ್ಯುನ್ನತ ಮಹಿಮೆಗೂ ಹೆದರಿ ಬಂಡೆಗಳ ಸಂದುಗೊಂದುಗಳಲ್ಲಿಯೂ, ಚೂಪಾದ ಶಿಖರಗಳ ಕಡಿದಾದ ಸ್ಥಳಗಳಿಗೂ ನುಗ್ಗುವರು.
22ಮೂಗಿನಿಂದ ಉಸಿರಾಡುವ ತನಕ ಬದುಕುವ ನರಮನುಷ್ಯನ ಮೇಲಿನ ಭರವಸೆಯನ್ನು ಬಿಟ್ಟು ಬಿಡಿರಿ.
ಏಕೆಂದರೆ ಅವನು ಯಾವ ಲೆಕ್ಕಕ್ಕೂ ಸಮಾನನಲ್ಲ.
Currently Selected:
ಯೆಶಾ 2: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.