ಯೆಶಾ 3
3
ಯೆಹೂದದ ಕುರಿತಾದ ನ್ಯಾಯತೀರ್ಪು
1ಇಗೋ, ಕರ್ತನೂ, ಸೇನಾಧೀಶ್ವರನೂ ಆಗಿರುವ ಯೆಹೋವನೆಂಬ ನಾನು ಯೆರೂಸಲೇಮಿನಿಂದಲೂ, ಯೆಹೂದದಿಂದಲೂ
ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲಾ ತೆಗೆದುಬಿಡುವೆನು.
2ಇದಲ್ಲದೆ ಶೂರ, ಯುದ್ಧಭಟರು, ನ್ಯಾಯಾಧಿಪತಿ, ಪ್ರವಾದಿ, ಶಕುನದವ, ಹಿರಿಯ,
3ಪಂಚಾಶತಾಧಿಪತಿ, ಘನವಂತನು, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರೆಲ್ಲರನ್ನು ತೊಲಗಿಸಿಬಿಡುವೆನು.
4ನಾನು, “ಬಾಲಕರನ್ನು ಪ್ರಭುಗಳನ್ನಾಗಿ ಆ ದೇಶಕ್ಕೆ ನೇಮಿಸುವೆನು, ಬಾಲಕರು ಅದನ್ನು ಆಳುವರು.
5ಪ್ರಜೆಗಳು ಪರಸ್ಪರ ವಿರೋಧಿಗಳಾಗಿ, ಒಬ್ಬರನೊಬ್ಬರು ಹಿಂಸಿಸುವರು,
ಬಾಲಕರು ಹಿರಿಯರ ಮೇಲೆಯೂ, ನೀಚನು ಘನವಂತನ ಜೊತೆಯಲ್ಲಿ ಸೊಕ್ಕಿನಿಂದ ವರ್ತಿಸುವರು.
6ಆ ದಿನದಲ್ಲಿ ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿದು,
‘ನಿನಗೆ ನಿಲುವಂಗಿ ಇದೆ. ನೀನು ನಮಗೆ ಒಡೆಯನಾಗಬೇಕು. ಹಾಳಾದ ಈ ಪಟ್ಟಣವು ನಿನ್ನ ಕೈಕೆಳಗಿರಲಿ ತಂದೆಯ ಮನೆಯೊಳಗೆ ಅಣ್ಣನನ್ನು ಬಲವಂತ ಮಾಡಲು ಅಣ್ಣನು ದೇಶದ ನಿರರ್ಥಕ ವ್ರಣವೈದ್ಯನಾಗುವುದಕ್ಕೆ ನನಗೆ ಇಷ್ಟವಿಲ್ಲ’ ಎಂದು ನಿರಾಕರಿಸುವನು.
7ಆ ದಿನದಲ್ಲಿ ಅವನು ಗಟ್ಟಿಯಾಗಿ ಕೂಗುತ್ತಾ,
‘ನಾನು ನಿಮ್ಮನ್ನು ಸ್ವಸ್ಥಪಡಿಸುವುದಿಲ್ಲ. ನನ್ನ ಮನೆಯಲ್ಲಿ ಅನ್ನವಾಗಲೀ, ವಸ್ತ್ರವಾಗಲೀ ಇಲ್ಲ:
ಜನರನ್ನು ಆಳುವ ಒಡೆಯನನ್ನಾಗಿ ನನ್ನನ್ನು ಮಾಡಬೇಡಿರಿ’” ಎಂದು ಹೇಳುವನು.
8ಏಕೆಂದರೆ ಯೆರೂಸಲೇಮ್ ಹಾಳಾಯಿತು. ಯೆಹೂದವು ಬಿದ್ದುಹೋಯಿತು.
ಅವರ ನಡೆನುಡಿಗಳು ಯೆಹೋವನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತದಲ್ಲವೇ?
9ಅವರ ಮುಖಭಾವವೇ ಅವರಿಗೆ ವಿರುದ್ಧ ಸಾಕ್ಷಿಯಾಗಿದೆ. ತಮ್ಮ ಪಾಪವನ್ನು ಮರೆಮಾಡದೇ ಸೊದೋಮಿನವರಂತೆ ಪ್ರಕಟಿಸುತ್ತಾರೆ.
ಅಯ್ಯೋ, ಅವರ ಆತ್ಮದ ಗತಿಯೇ! ತಮಗೆ ತಾವೇ ಕೇಡು ಮಾಡಿಕೊಂಡಿದ್ದಾರೆ.
10ನೀವು ನೀತಿವಂತರಿಗೆ, “ನಿಮಗೆ ಒಳ್ಳೆಯದಾಗಲಿ” ಎಂದು ಹೇಳಿರಿ, ಅವರು ತಮ್ಮ ಒಳ್ಳೆಯ ಫಲವನ್ನು ಅನುಭವಿಸುವರು.
11ದುಷ್ಟರ ಗತಿಯನ್ನು ಏನು ಹೇಳಲಿ! ಅವರ ಕಾರ್ಯಗಳಿಗೆ ತಕ್ಕ ಪ್ರತಿಫಲವು ಅವರಿಗೆ ದೊರಕುವುದು.
12ನನ್ನ ಪ್ರಜೆಗಳನ್ನು ಬಾಲಕರು ಬಾಧಿಸುವರು. ಸ್ತ್ರೀಯರು ಅವರನ್ನು ಆಳುವರು.
ನನ್ನ ಪ್ರಜೆಗಳೇ, ನಿಮ್ಮನ್ನು ನಡೆಸುವವರು ದಾರಿತಪ್ಪಿಸುವವರಾಗಿದ್ದಾರೆ. ನೀವು ನಡೆಯತಕ್ಕ ದಾರಿಯನ್ನು ಹಾಳುಮಾಡಿದ್ದಾರೆ.
13ಯೆಹೋವನು ವಾದಿಸುವುದಕ್ಕೂ, ಜನರಿಗೆ ನ್ಯಾಯತೀರಿಸುವುದಕ್ಕೂ ಎದ್ದು ನಿಂತಿದ್ದಾನೆ.
14ಯೆಹೋವನು ತನ್ನ ಜನರ ಹಿರಿಯರನ್ನು, ಅಧಿಕಾರಿಗಳನ್ನೂ ನ್ಯಾಯವಿಚಾರಣೆಗೆ ತರುವನು.
ಏಕೆಂದರೆ, “ನೀವು ದ್ರಾಕ್ಷಿಯ ತೋಟವನ್ನು ನುಂಗಿಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.
15ನೀವು ನನ್ನ ಜನರನ್ನು ಜಜ್ಜಿ, ಬಡವರನ್ನು ದುಃಖದಿಂದ ಹಿಂಸಿಸುವುದೇಕೆ?”
ಎಂದು ಕರ್ತನಾದ ಸೇನಾಧೀಶ್ವರ ಯೆಹೋವನು ವಾದಿಸುವನು.
ಯೆರೂಸಲೇಮಿನವರಿಗಾಗುವ ದಂಡನೆಯೂ
16ಇದಲ್ಲದೆ ಯೆಹೋವನು ಹೀಗನ್ನುತ್ತಾನೆ, ಚೀಯೋನಿನ ಹೆಂಗಸರು ಅಹಂಕಾರವುಳ್ಳವರಾಗಿ,
ಕತ್ತು ತೂಗುತ್ತಾ, ಕಣ್ಣುಗಳನ್ನು ತಿರುಗಿಸುತ್ತಾ,
ವಯ್ಯಾರವಾಗಿ ಹೆಜ್ಜೆ ಇಡುತ್ತಾ, ಕಾಲು ಗೆಜ್ಜೆ ಜಣಜಣಿಸುತ್ತಾ ನಡೆಯುವವರಾಗಿರುವುದರಿಂದ,
17ಕರ್ತನಾದ ಯೆಹೋವನು ಚೀಯೋನಿನ ಪುತ್ರಿಯರ ನಡುನೆತ್ತಿಯನ್ನೂ ಹುಣ್ಣಿನಿಂದ ಬಾಧಿಸಿ, ಅವರ ಮಾನವನ್ನು ಬಯಲುಮಾಡುವನು.
18ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ,
19ಜುಮುಕಿ, ಬಳೆ, ಶಿರವಸ್ತ್ರ,
20ಮುಂಡಾಸು, ಕಾಲಗೆಜ್ಜೆ, ಡಾಬು, ಗಂಧದ ಭರಣಿ, ತೋಳಬಂಧಿ,
21ಮುದ್ರೆ ಉಂಗುರ, ಮೂಗುತಿ,
22ಹಬ್ಬದ ಉಡುಗೆ-ತೊಡುಗೆ, ಮೇಲಂಗಿ, ಶಾಲು, ಕೈಚೀಲ,
23ಕೈಗನ್ನಡಿ, ನಾರುಮಡಿ, ಮುಡಿ ಮುಕುಟ, ಮೇಲ್ಹೊದಿಕೆ ಈ ಸೊಗಸಾದ ಭೂಷಣಗಳನ್ನೆಲ್ಲಾ ತೆಗೆದುಹಾಕುವನು.
24ಆಗ ಸುಗಂಧದ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ,
ಅಂದವಾದ ಜಡೆಯ ಬದಲಾಗಿ ಬೋಳುತಲೆ, ನಡುವಿನ ಶಲ್ಯಕ್ಕೆ ಬದಲಾಗಿ ಗೋಣಿತಟ್ಟು,
ಸೌಂದರ್ಯಕ್ಕೆ ಬದಲಾಗಿ ಕುರೂಪ, ಬೆತ್ತಲೆ ಉಂಟಾಗುವುದು.
25ಚೀಯೋನ್ ನಗರಿಯೇ, ನಿನ್ನ ವೀರರು ಖಡ್ಗದಿಂದ ಬಿದ್ದುಹೋಗುವರು. ನಿನ್ನ ಶೌರ್ಯವು ಯುದ್ಧದಲ್ಲಿ ಅಡಗಿ ಹೋಗುವುದು.
26ಅವಳ ಪುರದ್ವಾರಗಳಲ್ಲಿ ಪ್ರಲಾಪವೂ, ದುಃಖವೂ ತುಂಬಿರುವವು. ಅವಳು ಹಾಳಾಗಿ ನೆಲದ ಮೇಲೆ ಕುಳಿತುಕೊಳ್ಳುವಳು.
Currently Selected:
ಯೆಶಾ 3: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.