2 ಪೂರ್ವ 25
25
ಯೆಹೂದದ ಅರಸನಾದ ಅಮಚ್ಯನು
1ಅಮಚ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷ ಆಳ್ವಿಕೆ ಮಾಡಿದನು. ಯೆರೂಸಲೇಮಿನವಳಾದ ಯೆಹೋವದ್ದಾನ್ ಎಂಬಾಕೆಯು ಅವನ ತಾಯಿ. 2ಅವನು ಯೆಹೋವನ ಚಿತ್ತಾನುಸಾರವಾಗಿ ನಡೆದನು; ಆದರೆ ಯಥಾರ್ಥಚಿತ್ತನಾಗಿರಲಿಲ್ಲ. 3ಅವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೆ ತನ್ನ ತಂದೆಯನ್ನು ಕೊಂದ ಸೇವಕರನ್ನು ಕೊಲ್ಲಿಸಿದನು. 4ಆದರೆ, “ಮಕ್ಕಳ ಪಾಪದ ದೆಸೆಯಿಂದ ತಂದೆಗೂ ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೂ ಮರಣ ಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪದ ಫಲವನ್ನು ತಾನೇ ಅನುಭವಿಸಬೇಕು” ಎಂಬುದಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿರುವ ಯೆಹೋವನ ಅಪ್ಪಣೆಯನ್ನು ನೆನಪು ಮಾಡಿಕೊಂಡು ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ.
5ಆಮೇಲೆ ಅಮಚ್ಯನು ಯೆಹೂದ್ಯರನ್ನು ಒಟ್ಟಾಗಿ ಸೇರಿಸಿ ಸಹಸ್ರಾಧಿಪತಿ, ಶತಾಧಿಪತಿಗಳ ಕೈಕೆಳಗೆ ಯೆಹೂದ ಮತ್ತು ಬೆನ್ಯಾಮೀನ್ ಕುಲಗಳಲ್ಲಿ ಆಯಾ ಗೋತ್ರಗಳ ಪ್ರಕಾರ ಅವರನ್ನು ನಿಲ್ಲಿಸಿ, ಇಪ್ಪತ್ತು ವರ್ಷಕ್ಕೆ ಮೇಲ್ಪಟ್ಟವರನ್ನು ಲೆಕ್ಕ ಮಾಡಿಸಿದನು. ಅವರಲ್ಲಿ ಬರ್ಜಿ ಗುರಾಣಿಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಹೊರಡತಕ್ಕ ಶೂರರು ಮೂರು ಲಕ್ಷ ಮಂದಿ ಸಿಕ್ಕಿದರು. 6ಇದಲ್ಲದೆ ಅವನು ನೂರು ತಲಾಂತು ಬೆಳ್ಳಿಯನ್ನು ಕೊಟ್ಟು, ಇಸ್ರಾಯೇಲರಿಂದಲೂ ಲಕ್ಷ ಮಂದಿ ಭಟರನ್ನು ತರಿಸಿದನು. 7ಆಗ ದೇವರ ಮನುಷ್ಯನೊಬ್ಬನು ಅವನ ಬಳಿಗೆ ಬಂದು ಅವನಿಗೆ, “ಅರಸನೇ, ಇಸ್ರಾಯೇಲ್ ಸೈನ್ಯದವರು ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಹೋಗಬಾರದು. ಯೆಹೋವನು ಎಫ್ರಾಯೀಮ್ಯರಾದ ಇಸ್ರಾಯೇಲರನ್ನೆಲ್ಲಾ ಕೈಬಿಟ್ಟಿದ್ದಾನೆ. 8ನೀನೇ ಹೋಗಿ ಆ ಕಾರ್ಯವನ್ನು ನಿರ್ವಹಿಸು; ಧೈರ್ಯದಿಂದ ಯುದ್ಧಮಾಡು. ಹಾಗೆ ಮಾಡದಿದ್ದರೆ ದೇವರು ಶತ್ರುಗಳಿಂದ ನೀನು ಅಪಜಯಹೊಂದುವಂತೆ ಮಾಡುವನು, ಜಯಾ, ಅಪಜಯಗಳನ್ನು ಉಂಟುಮಾಡುವುದಕ್ಕೆ ಆತನು ಶಕ್ತನಾಗಿರುತ್ತಾನಲ್ಲವೆ?” ಎಂದನು. 9ಅಮಚ್ಯನು ದೇವರ ಮನುಷ್ಯನನ್ನು, “ಹಾಗಾದರೆ ನಾನು ಇಸ್ರಾಯೇಲ್ ಸೈನ್ಯಕ್ಕೋಸ್ಕರ ನೂರು ತಲಾಂತುಗಳನ್ನು ಕೊಟ್ಟ ವಿಷಯದಲ್ಲಿ ನಾನೇನು ಮಾಡಬೇಕು?” ಎಂದು ಕೇಳಲು ಅವನು, “ಯೆಹೋವನು ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿನಗೆ ಕೊಡಬಲ್ಲನು” ಎಂದನು. 10ಆಗ ಅಮಚ್ಯನು ಎಫ್ರಾಯೀಮ್ಯ ರಿಂದ ಬಂದ ಸೈನಿಕರನ್ನು ಬೇರೆ ಮಾಡಿ, ಅವರನ್ನು ಅವರ ದೇಶಕ್ಕೆ ಕಳುಹಿಸಿದನು. ಅವರು ಯೆಹೂದ್ಯರ ಮೇಲೆ ಬಹಳ ಕೋಪಗೊಂಡು ತಮ್ಮ ದೇಶಕ್ಕೆ ಹೊರಟು ಹೋದರು. 11ಅಮಚ್ಯನಾದರೋ ಧೈರ್ಯದಿಂದ ತನ್ನ ಸೈನ್ಯವನ್ನು ಕರೆದುಕೊಂಡು, ಉಪ್ಪಿನ ತಗ್ಗಿಗೆ ಹೋಗಿ ಸೇಯೀರ್ಯರಲ್ಲಿ ಹತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು. 12ಯೆಹೂದ್ಯರು ಬೇರೆ ಹತ್ತು ಸಾವಿರ ಮಂದಿಯನ್ನು ಜೀವಸಹಿತವಾಗಿ ಹಿಡಿದು, ಕಡಿದಾದ ಬಂಡೆಯ ತುದಿಗೆ ಒಯ್ದು, ಅವರೆಲ್ಲರೂ ಚೂರು ಚೂರಾಗುವ ಹಾಗೆ ಅವರನ್ನು ಕೆಳಕ್ಕೆ ದೊಬ್ಬಿದರು. 13ಅಷ್ಟರಲ್ಲಿ ಅಮಚ್ಯನು ತನ್ನ ಜೊತೆಯಲ್ಲಿ ಯುದ್ಧಕ್ಕೆ ಬರಬಾರದೆಂದು ಹಿಂದಕ್ಕೆ ಕಳುಹಿಸಿದ ಗುಂಪಿನವರು ಸಮಾರ್ಯಕ್ಕೂ ಬೇತ್ಹೋರೋನಿಗೂ ಮಧ್ಯದಲ್ಲಿರುವ ಯೆಹೂದ ಪಟ್ಟಣಗಳ ಮೇಲೆ ದಾಳಿಮಾಡಿ ಮೂರು ಸಾವಿರ ಜನರನ್ನು ಕೊಂದು, ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಹೋದರು 14ಅಮಚ್ಯನು ಎದೋಮ್ಯರನ್ನು ಸೋಲಿಸಿ ಮನೆಗೆ ಬಂದ ಮೇಲೆ, ತಾನು ತೆಗೆದುಕೊಂಡು ಬಂದಿದ್ದ ಸೇಯೀರಿನವರ ದೇವತಾಪ್ರತಿಮೆಗಳನ್ನು ತನ್ನ ದೇವರುಗಳೆಂದು ಪ್ರತಿಷ್ಠಿಸಿ ಅವುಗಳಿಗೆ ಅಡ್ಡಬಿದ್ದು ಧೂಪ ಹಾಕುತ್ತಿದ್ದನು. 15ಆಗ ಯೆಹೋವನು ಅಮಚ್ಯನ ಮೇಲೆ ಬಹಳವಾಗಿ ಕೋಪಗೊಂಡು, ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿ ಅವನಿಗೆ, “ನಿನ್ನ ಕೈಯಿಂದ ನಿನ್ನ ಜನರನ್ನು ರಕ್ಷಿಸಲಾರದೆ ಹೋದ ಅನ್ಯದೇವತೆಗಳಲ್ಲಿ ಏಕೆ ಇಷ್ಟು ಭಕ್ತಿ?” ಎಂದು ಕೇಳಿದನು. 16ಆ ಮಾತನ್ನು ಹೇಳಿದ ಪ್ರವಾದಿಗೆ ಅರಸನು, “ನಿನ್ನನ್ನು ನನಗೆ ಆಲೋಚನಾಮಂತ್ರಿಯನ್ನಾಗಿ ನೇಮಿಸಿದವರು ಯಾರು?; ಸುಮ್ಮನಿರು, ನಿನಗೆ ಪೆಟ್ಟು ಬೇಕೋ?” ಎಂದನು. ಅವನು, “ನೀನು ನನ್ನ ಬುದ್ಧಿವಾದವನ್ನು ಆಲಿಸದೆ ಹೀಗೆ ಮಾಡುತ್ತಿರುವುದರಿಂದ ದೇವರು ನಿನ್ನನ್ನು ನಾಶ ಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದಾನೆ ಎಂಬುದನ್ನು ನಾನು ಬಲ್ಲೆ” ಎಂದು ಹೇಳಿ ಸುಮ್ಮನಾದನು.
17ಅನಂತರ ಯೆಹೂದದ ಅರಸನಾದ ಅಮಚ್ಯನು ಸಮಾಲೋಚನೆ ನಡೆಸಿ, ಯೇಹುವಿನ ಮೊಮ್ಮಗನೂ, ಯೆಹೋವಾಹಾಜನ ಮಗನೂ, ಇಸ್ರಾಯೇಲರ ಅರಸನೂ ಆದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ” ಎಂದು ದೂತರ ಮುಖಾಂತರವಾಗಿ ಹೇಳಿ ಕಳುಹಿಸಿದನು. 18ಆಗ ಇಸ್ರಾಯೇಲರ ಅರಸನಾದ ಯೋವಾಷನು ಯೆಹೂದ್ಯರ ಅರಸನಾದ ಅಮಚ್ಯನಿಗೆ, “ಲೆಬನೋನಿನ ಒಂದು ಮುಳ್ಳುಗಿಡವು, ಅಲ್ಲಿನ ದೇವದಾರು ಮರಕ್ಕೆ, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು’ ಎಂದು ಹೇಳಿ ಕಳುಹಿಸಿತು. ತುಸು ಹೊತ್ತಾದ ಮೇಲೆ ಲೆಬನೋನಿನ ಒಂದು ಕಾಡುಮೃಗವು ಆ ಮಾರ್ಗವಾಗಿ ಹಾದು ಹೋಗುತ್ತಿರುವಾಗ, ಆ ಮುಳ್ಳುಗಿಡವನ್ನು ತುಳಿದು ಬಿಟ್ಟಿತು. 19ಅಹಹ! ಎದೋಮ್ಯರನ್ನು ಸೋಲಿಸಿ ಬಹಳ ಕೀರ್ತಿಯನ್ನು ಪಡಕೊಂಡೆ, ಎಂದು ನೀನು ಹೆಮ್ಮೆಪಡುತಿರುವೆ; ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಬಾರದೇ? ನನ್ನನ್ನು ಕೆಣಕಿ ನಿನಗೂ ನಿನ್ನ ಯೆಹೂದ ರಾಜ್ಯಕ್ಕೂ ಏಕೆ ಕೇಡನ್ನು ತಂದುಕೊಳ್ಳುವೆ” ಎಂದು ಉತ್ತರಕೊಟ್ಟನು. 20ಅಮಚ್ಯನು ಆ ಮಾತನ್ನು ಲಕ್ಷಿಸಲಿಲ್ಲ; ಅದು ದೇವರ ಸಂಕಲ್ಪದಿಂದಲೇ ಆಯಿತು. ಯೆಹೂದ್ಯರು ಎದೋಮ್ಯರ ದೇವತೆಗಳಲ್ಲಿ ಭಕ್ತಿಯನ್ನಿಟ್ಟದ್ದರಿಂದ ಅವರನ್ನು ಅಪಜಯ ಮಾಡಬೇಕೆಂದು ಯೆಹೋವನು ನಿರ್ಣಯಿಸಿದ್ದನು. 21ಇಸ್ರಾಯೇಲರ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು; ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದ ಪ್ರಾಂತ್ಯದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು. 22ಯೆಹೂದ್ಯರು ಇಸ್ರಾಯೇಲ್ಯರಿಗೆ ಸೋತು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು. 23ಇಸ್ರಾಯೇಲರ ಅರಸನಾದ ಯೋವಾಷನು, ಯೆಹೋವಾಹಾಜನ ಮೊಮ್ಮಗನೂ, ಯೆಹೋವಾಷನ ಮಗನೂ, ಯೆಹೂದದ ಅರಸನೂ, ಆದ ಅಮಚ್ಯನನ್ನು ಬೇತ್ಷೆಮೆಷಿನಲ್ಲಿ ಸೆರೆ ಹಿಡಿದನು. ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದು, ಎಫ್ರಾಯೀಮಿನ ಮುಂಬಾಗಿಲಿಗೂ, ಮೂಲೆಯ ಬಾಗಿಲಿಗೂ ಮಧ್ಯದಲ್ಲಿದ್ದ ಯೆರೂಸಲೇಮಿನ ಗೋಡೆಯನ್ನು ನಾನೂರು ಮೊಳದಷ್ಟು ಕೆಡವಿಹಾಕಿದ್ದಲ್ಲದೆ, 24ಅವನು ಓಬೇದೆದೋಮನ ವಶದಲ್ಲಿದ್ದ ದೇವಾಲಯದ ಎಲ್ಲ ಬೆಳ್ಳಿಬಂಗಾರವನ್ನು, ಪಾತ್ರೆಗಳನ್ನು, ಅರಸನ ಅರಮನೆಯ ಭಂಡಾರಗಳಲ್ಲಿದ್ದುದೆಲ್ಲವನ್ನು ತೆಗೆದುಕೊಂಡು, ಹೊಣೆಗಾರರಾದ ಕೆಲವರನ್ನು ಸೆರೆ ಹಿಡಿದು ಸಮಾರ್ಯಕ್ಕೆ ಹಿಂದಿರುಗಿದನು. 25ಇಸ್ರಾಯೇಲರ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತ ನಂತರ, ಯೆಹೂದದ ಅರಸನಾದ ಯೆಹೋವಾಷನ ಮಗ ಅಮಚ್ಯನು ಇನ್ನೂ ಹದಿನೈದು ವರ್ಷ ಬದುಕಿದ್ದನು. 26ಅಮಚ್ಯನ ಉಳಿದ ಪೂರ್ವೋತ್ತರ ಚರಿತ್ರೆಯು ಯೆಹೂದ್ಯರ ಮತ್ತು ಇಸ್ರಾಯೇಲರ ರಾಜರ ಗ್ರಂಥಗಳಲ್ಲಿ ಬರೆಯಲ್ಪಟ್ಟಿವೆ. 27ಅಮಚ್ಯನು ಯೆಹೋವನನ್ನು ತ್ಯಜಿಸಿದ್ದರಿಂದ ಯೆರೂಸಲೇಮಿನವರು ಅವನಿಗೆ ವಿರುದ್ಧವಾಗಿ ಒಳಸಂಚು ಮಾಡುತ್ತಿದ್ದರು. ಆದ್ದರಿಂದ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಆಳುಗಳನ್ನು ಕಳುಹಿಸಿ ಅವನನ್ನು ಅಲ್ಲಿಯೇ ಕೊಲ್ಲಿಸಿದರು. 28ಅವನ ಜನರು ಆ ಶವವನ್ನು ಕುದುರೆಯ ಮೇಲೆ ಯೆರೂಸಲೇಮ್ ಪಟ್ಟಣಕ್ಕೆ ತಂದು ಯೆಹೂದದ ರಾಜಧಾನಿಯೊಳಗೆ ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿಮಾಡಿದರು.
Currently Selected:
2 ಪೂರ್ವ 25: IRVKan
Highlight
Share
Copy
![None](/_next/image?url=https%3A%2F%2Fimageproxy.youversionapi.com%2F58%2Fhttps%3A%2F%2Fweb-assets.youversion.com%2Fapp-icons%2Fen.png&w=128&q=75)
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.