2 ಪೂರ್ವ 24
24
ಯೆಹೂದದ ಅರಸನಾದ ಯೆಹೋವಾಷನು
1ಯೆಹೋವಾಷನು ಅರಸನಾದಾಗ ಏಳು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ನಲ್ವತ್ತು ವರ್ಷ ರಾಜ್ಯಭಾರ ಮಾಡಿದನು. ಬೇರ್ಷೆಬದವಳಾದ ಚಿಬ್ಯಳು ಅವನ ತಾಯಿ. 2ಯೆಹೋವಾಷ ಯಾಜಕನಾದ ಯೆಹೋಯಾದನ ಜೀವಮಾನದಲ್ಲೆಲ್ಲಾ ಯೆಹೋವನ ಚಿತ್ತಾನುಸಾರವಾಗಿ ನಡೆದುಕೊಳ್ಳುತ್ತಿದ್ದನು. 3ಯೆಹೋಯಾದನು, ಯೆಹೋವಾಷನಿಗೆ ಇಬ್ಬರು ಕನ್ಯೆಯರನ್ನು ಮದುವೆ ಮಾಡಿಸಿದನು; ಅರಸನು ಗಂಡು ಹೆಣ್ಣು ಮಕ್ಕಳನ್ನು ಪಡೆದನು.
4ಕ್ರಮೇಣ ಯೆಹೋವಾಷನು ಯೆಹೋವನ ಆಲಯವನ್ನು ಜೀರ್ಣೋದ್ಧಾರ ಮಾಡುವುದಕ್ಕೆ ಮನಸ್ಸು ಮಾಡಿದನು. 5ಯಾಜಕರನ್ನೂ ಲೇವಿಯರನ್ನೂ ಒಟ್ಟಿಗೆ ಸೇರಿಸಿ ಅವರಿಗೆ, “ನೀವು ಯೆಹೂದದ ಪಟ್ಟಣಗಳಿಗೆ ಹೋಗಿ, ನಿಮ್ಮ ದೇವರಾದ ಯೆಹೋವನ ಆಲಯದ ವಾರ್ಷಿಕ ಜೀರ್ಣೋದ್ಧಾರ ಮಾಡುವುದಕ್ಕಾಗಿ ಎಲ್ಲಾ ಇಸ್ರಾಯೇಲರಿಂದ ಹಣ ಸಂಗ್ರಹಿಸಿರಿ; ಈ ಕಾರ್ಯವನ್ನು ಶೀಘ್ರವಾಗಿ ನೆರವೇರಿಸಿರಿ” ಎಂದು ಆಜ್ಞಾಪಿಸಿದನು. ಆದರೂ ಲೇವಿಯರು ಅವಸರ ಮಾಡಲಿಲ್ಲ. 6ಆದುದರಿಂದ ಅರಸನು ಅವರ ಮುಖ್ಯಸ್ಥನಾದ ಯೆಹೋಯಾದನನ್ನು ಕರೆಯಿಸಿ ಅವನಿಗೆ, “ಯೆಹೋವನ ಸೇವಕನಾದ ಮೋಶೆಯ ವಿಧಿಗನುಸಾರವಾಗಿ ಇಸ್ರಾಯೇಲ್ ಸಮೂಹದವರೆಲ್ಲರು ದೇವದರ್ಶನದ ಗುಡಾರಕ್ಕೋಸ್ಕರ ಕೊಡಬೇಕಾದ ಕಾಣಿಕೆಯನ್ನು ಈ ಲೇವಿಯರು ಯೆಹೂದ್ಯರಿಂದಲೂ ಯೆರೂಸಲೇಮಿನ ಜನರಿಂದಲೂ ಕೂಡಿಸುವ ಹಾಗೆ ನೀನೇಕೆ ನೋಡಿಕೊಳ್ಳಲಿಲ್ಲ? 7ಅತಿದುಷ್ಟಳಾದ ಅತಲ್ಯಳ ಮನೆಯವರು ದೇವಾಲಯವನ್ನು ಹಾಳುಮಾಡಿ, ಯೆಹೋವನ ಆಲಯದ ಪ್ರತಿಷ್ಠಿತ ವಸ್ತುಗಳನ್ನು ಬಾಳನಿಗಾಗಿ ಕೊಟ್ಟು ಬಿಟ್ಟಿದ್ದಾರಲ್ಲಾ?” ಎಂದು ಹೇಳಿದನು. 8ಅನಂತರ ಅರಸನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ಯೆಹೋವನ ಆಲಯದ ಬಾಗಿಲಿನ ಹೊರಗೆ ಇರಿಸಿದನು. 9ದೇವರ ಸೇವಕನಾದ ಮೋಶೆಯು ಅರಣ್ಯದಲ್ಲಿ ವಿಧಿಸಿದಂತೆ, ಇಸ್ರಾಯೇಲರು ಯೆಹೋವನಿಗೋಸ್ಕರ ಕೊಡಬೇಕಾದ ಕಾಣಿಕೆಯನ್ನು ತಂದು ಕೊಡಬೇಕು ಎಂಬುದಾಗಿ ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ ಪ್ರಕಟಿಸಿದನು. 10ಎಲ್ಲಾ ಪ್ರಭುಗಳೂ, ಜನರೂ ಸಂತೋಷದಿಂದ ಬೇಕಾಗುವಷ್ಟು ಹಣವನ್ನು ಪೆಟ್ಟಿಗೆಯಲ್ಲಿ ತಂದು ಹಾಕಿದರು. 11ಪೆಟ್ಟಿಗೆ ತುಂಬಾ ಹಣವಿರುತ್ತದೆಂದು ಕಂಡು ಬಂದಾಗೆಲ್ಲಾ ಲೇವಿಯರು ಪೆಟ್ಟಿಗೆಯನ್ನು, ಆಸ್ಥಾನದ ಅಧಿಕಾರಿಗಳ ಬಳಿಗೆ ತರುತ್ತಿದ್ದರು. ಆಗ ಅರಸನ ಲೇಖಕನೂ, ಮಹಾಯಾಜಕನ ಉದ್ಯೋಗಸ್ಥನೂ ಬಂದು ಅದನ್ನು ತೆರವು ಮಾಡಿ ಮತ್ತೆ ಅದನ್ನು ಅದರ ಸ್ಥಳದಲ್ಲಿಡುತ್ತಿದ್ದರು. 12ಅರಸನೂ ಯೆಹೋಯಾದನೂ ಅದನ್ನು ಯೆಹೋವನ ಆಲಯದ ಕೆಲಸವನ್ನು ನಡೆಸುವವರಿಗೆ ಒಪ್ಪಿಸಿದರು. ಅವರು ಯೆಹೋವನ ಆಲಯದ ಜೀರ್ಣೋದ್ಧಾರಕ್ಕಾಗಿ ಶಿಲ್ಪಿಗಳನ್ನೂ, ಬಡಗಿಯರನ್ನೂ, ಅದನ್ನು ಭದ್ರಪಡಿಸುವುದಕ್ಕಾಗಿ ಕಮ್ಮಾರರನ್ನೂ, ಕಂಚುಗಾರರನ್ನೂ ಕೆಲಸಕ್ಕೆ ನೇಮಿಸಿದರು. 13ಕೆಲಸ ಮಾಡುವವರು ಆಸಕ್ತಿಯಿಂದ ಜೀರ್ಣೋದ್ಧಾರದ ಕೆಲಸವನ್ನು ಮಾಡಿ ಮುಗಿಸಿದರು. ಹೀಗೆ ಅವರು ದೇವಾಲಯವನ್ನು ಭದ್ರಪಡಿಸಿ ಪೂರ್ವಸ್ಥಿತಿಗೆ ತಂದರು. 14ಕೆಲಸ ಮುಗಿದಾಗ ಅವರು ಉಳಿದ ಹಣವನ್ನು ಅರಸನಿಗೂ, ಯೆಹೋಯಾದನಿಗೂ ಒಪ್ಪಿಸಿದರು. ಇವರು ಅದರಿಂದ ಯೆಹೋವನ ಆಲಯದ ಆರಾಧನೆಗಾಗಿಯೂ, ಯಜ್ಞಸಮರ್ಪಣೆಗಾಗಿಯೂ ಉಪಯೋಗವಾಗುವ ಧೂಪಾರತಿ, ಬೆಳ್ಳಿಬಂಗಾರದ ಪಾತ್ರೆ ಮೊದಲಾದ ಸಾಮಾನುಗಳನ್ನು ಮಾಡಿಸಿದರು. ಯೆಹೋಯಾದನ ಜೀವಮಾನದಲ್ಲೆಲ್ಲಾ ಯೆಹೋವನ ಆಲಯದಲ್ಲಿ ಪ್ರತಿನಿತ್ಯವೂ ಸರ್ವಾಂಗಹೋಮಯಜ್ಞವು ನಡೆಯುತ್ತಿತ್ತು.
15ಯೆಹೋಯಾದನು ಮುಪ್ಪಿನ ಮುದುಕನಾಗಿ ಮರಣ ಹೊಂದಿದನು; ಅವನು ಸಾಯುವಾಗ ನೂರಮೂವತ್ತು ವರ್ಷದವನಾಗಿದ್ದನು. 16ಅವನು ಇಸ್ರಾಯೇಲರ ಕುರಿತಾಗಿಯೂ ದೇವರ ಮತ್ತು ದೇವಾಲಯದ ವಿಷಯದಲ್ಲಿಯೂ ಸತ್ಕಾರ್ಯಗಳನ್ನು ಮಾಡಿದ್ದರಿಂದ ಅವನ ಶವವನ್ನು ದಾವೀದನಗರದೊಳಗೆ ರಾಜಸ್ಮಶಾನದಲ್ಲಿ ಸಮಾಧಿ ಮಾಡಿದರು.
ಯೆಹೋವಾಷನ ದುಷ್ಟತನ
17ಯೆಹೋಯಾದನು ಮೃತನಾದ ಮೇಲೆ ಯೆಹೂದ ಪ್ರಭುಗಳು ಅರಸನ ಬಳಿಗೆ ಬಂದು ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು. 18ಅಂದಿನಿಂದ ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಆಲಯವನ್ನು ನಿರಾಕರಿಸಿ, ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ ಪೂಜಿಸುವವರಾದರು. ಅವರ ಈ ಅಪರಾಧದ ದೆಸೆಯಿಂದ ಯೆಹೂದದ ಮೇಲೆಯೂ ಯೆರೂಸಲೇಮಿನ ಮೇಲೆಯೂ, ಯೆಹೋವನಿಗೆ ಕೋಪವುಂಟಾಯಿತು. 19ಯೆಹೋವನು ಅವರನ್ನು ತನ್ನ ಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಅವರ ಬಳಿಗೆ ಪ್ರವಾದಿಗಳನ್ನು ಕಳುಹಿಸಿದರು. ಅವರ ಮುಖಾಂತರವಾಗಿ ಎಷ್ಟು ಎಚ್ಚರಿಸಿದರೂ ಅವರು ಕಿವಿಗೊಡಲಿಲ್ಲ. 20ಆಗ ಯಾಜಕನಾದ ಯೆಹೋಯಾದನ ಮಗ ಜೆಕರ್ಯನು ದೇವರ ಆತ್ಮನಿಂದ ತುಂಬಿದವನಾಗಿ ಆವೇಶ ಉಳ್ಳವನಾದನು. ಆಗ ಅವನು ಜನರ ಎದುರಿನಲ್ಲಿ ಉನ್ನತ ಸ್ಥಾನದಲ್ಲಿ ನಿಂತುಕೊಂಡು ಅವರಿಗೆ, “ದೇವರ ಮಾತನ್ನು ಕೇಳಿರಿ; ನೀವು ಯೆಹೋವನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ಏಕೆ ನಾಶಮಾಡಿಕೊಳ್ಳುತ್ತಿದ್ದೀರಿ? ನೀವು ಯೆಹೋವನನ್ನು ಕಡೆಗಣಿಸಿರುವುದರಿಂದ; ಆತನೂ ನಿಮ್ಮನ್ನು ಕಡೆಗಣಿಸಿದ್ದಾನೆ” ಎಂದನು. 21ಆಗ ಅವರು ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಯೆಹೋವನ ಆಲಯದ ಪ್ರಾಕಾರದಲ್ಲಿ ಅವನನ್ನು ಕಲ್ಲೆಸೆದು ಕೊಂದರು. ಇದು ಅರಸನಾದ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು. 22ಯೆಹೋವಾಷನು ಜೆಕರೀಯನ ತಂದೆಯಾದ ಯೆಹೋಯಾದನಿಂದ ತನಗಾದ ಕೃಪೆಯನ್ನು ಮರೆತು ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ, “ಯೆಹೋವನೇ ಇದನ್ನು ನೋಡಿ, ತಕ್ಕ ಶಿಕ್ಷೆಯನ್ನು ವಿಧಿಸಲಿ” ಎಂದನು.
23ವರ್ಷಾಂತ್ಯದಲ್ಲಿ ಅರಾಮ್ಯರ ಸೈನ್ಯವು ಯೆಹೋವಾಷನಿಗೆ ವಿರುದ್ಧವಾಗಿ ದಾಳಿಮಾಡಲು ಹೊರಟಿತು. ಆ ಸೈನ್ಯದವರು ಯೆಹೂದ ದೇಶದೊಳಗೆ ನುಗ್ಗಿ, ಯೆರೂಸಲೇಮಿಗೆ ಬಂದು ಇಸ್ರಾಯೇಲರ ಎಲ್ಲಾ ಜನಾಧಿಪತಿಗಳನ್ನು ನಿರ್ನಾಮ ಮಾಡಿ ಅವರಲ್ಲಿ ಸಿಕ್ಕಿದ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿಬಿಟ್ಟರು. 24ಅರಾಮ್ಯ ಸೈನ್ಯದಿಂದ ಬಂದ ಗುಂಪು ಚಿಕ್ಕದಾಗಿದ್ದರೂ ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ಕಡೆಗಣಿಸಿದ್ದರಿಂದ ಮಹಾಸೈನ್ಯವಾಗಿದ್ದ ಅವರನ್ನು ಯೆಹೋವನು ಅರಾಮ್ಯರ ಕೈಯಲ್ಲಿ ಸೋಲುವಂತೆ ಮಾಡಿ, ಯೆಹೋವಾಷನನ್ನು ಅವರ ಮುಖಾಂತರ ಶಿಕ್ಷಿಸಿದನು. 25ಕಠಿಣವಾಗಿ ಗಾಯಗೊಂಡಿದ್ದ ಅವನನ್ನು ಅರಾಮ್ಯರು ಬಿಟ್ಟು ಹೋದ ಕೂಡಲೆ, ಅವನ ಸೇವಕರು ಅವನು ಯಾಜಕನಾದ ಯೆಹೋಯಾದನ ಮಗನನ್ನು ಕೊಲ್ಲಿಸಿದ ನಿಮಿತ್ತ, ಅವನಿಗೆ ವಿರುದ್ಧವಾಗಿ ಒಳಸಂಚುಮಾಡಿ, ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಶವವನ್ನು ದಾವೀದನಗರದೊಳಗೆ ಸಮಾಧಿಮಾಡಿದರು. ಆದರೆ ರಾಜಸ್ಮಶಾನದಲ್ಲಿ ಅವನನ್ನು ಸಮಾಧಿ ಮಾಡಲಿಲ್ಲ. 26ಅಮ್ಮೋನಿಯರ ದೇಶದ ಶಿಮ್ಗಾತೆಂಬಾಕೆಯ ಮಗನಾದ ಜಾಬಾದ್, ಮೋವಾಬ್ ದೇಶದ ಶಿಮ್ರಾತೆಂಬಾಕೆಯ ಮಗನಾದ ಯೆಹೋಜಾಬಾದ್ ಎಂಬುವರೇ ಅವನ ವಿರುದ್ಧವಾಗಿ ಒಳಸಂಚು ಮಾಡಿದವರು. 27ಅವನ ಮಕ್ಕಳು ಅವನಿಗೆ ವಿರುದ್ಧವಾಗಿ ಹೇಳಲಾದ ಅನೇಕ ದೈವೋಕ್ತಿಗಳೂ, ಹಾಗು ದೇವಾಲಯದ ಜೀರ್ಣೋದ್ಧಾರ ವೃತ್ತಾಂತವು, ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ದಾಖಲಿಸಲಾಗಿದೆ. ಅವನಿಗೆ ಬದಲಾಗಿ ಅವನ ಮಗನಾದ ಅಮಚ್ಯನು ಅರಸನಾದನು.
Currently Selected:
2 ಪೂರ್ವ 24: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.