1 ಅರಸು 19
19
ಹೋರೇಬಿನಲ್ಲಿ ಎಲೀಯನು
1ಎಲೀಯನು ಬಾಳನ ಎಲ್ಲಾ ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದನ್ನೂ ಮತ್ತು ಅವನು ಮಾಡಿದ ಬೇರೆ ಎಲ್ಲಾ ಕಾರ್ಯಗಳನ್ನೂ ಅಹಾಬನು ಈಜೆಬೆಲಳಿಗೆ ತಿಳಿಸಿದನು. 2ಈಜೆಬೆಲಳು ಎಲೀಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನೀನು ಪ್ರವಾದಿಗಳ ಪ್ರಾಣವನ್ನು ತೆಗೆದಂತೆ ನಾಳೆ ಇಷ್ಟು ಹೊತ್ತಿಗೆ ನಾನು ನಿನ್ನ ಪ್ರಾಣವನ್ನು ತೆಗೆಯದೇ ಹೋದರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಹೇಳಿಕಳುಹಿಸಿದಳು. 3ಅವನು ಇದನ್ನು ಕೇಳಿದೊಡನೆ ತನ್ನ ಪ್ರಾಣ ರಕ್ಷಣೆಗಾಗಿ ಅಲ್ಲಿಂದ ಹೊರಟು ಯೆಹೂದದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬಿಟ್ಟನು. 4ತರುವಾಯ ತಾನೊಬ್ಬನೇ ಅರಣ್ಯದೊಳಗೆ ಒಂದು ದಿನದ ಪ್ರಯಾಣದಷ್ಟು ದೂರ ಹೋಗಿ ಒಂದು ಜಾಲೀ ಗಿಡದ ಕೆಳಗೆ ಕುಳಿತುಕೊಂಡು ಮರಣವನ್ನು ಅಪೇಕ್ಷಿಸಿದನು. ಅವನು, “ಯೆಹೋವನೇ ನನಗೆ ಸಾಕಾಯಿತು, ನನ್ನ ಪ್ರಾಣವನ್ನು ತೆಗೆದುಬಿಡು. ನಾನು ನನ್ನ ಪೂರ್ವಿಕರಿಗಿಂತ ಉತ್ತಮನಲ್ಲ” ಎಂದು ದೇವರನ್ನು ಪ್ರಾರ್ಥಿಸಿ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆ ಮಾಡಿದನು. 5ಪಕ್ಕನೆ ಒಬ್ಬ ದೇವದೂತನು ಅವನನ್ನು ತಟ್ಟಿ, “ಎದ್ದು ಊಟ ಮಾಡು” ಎಂದು ಹೇಳಿದನು. 6ಎಲೀಯನು ಎದ್ದು ನೋಡಲಾಗಿ ಕೆಂಡದ ಮೇಲೆ ಸುಟ್ಟ ರೊಟ್ಟಿಯೂ ಒಂದು ತಂಬಿಗೆ ನೀರು ತನ್ನ ತಲೆಯ ಹತ್ತಿರ ಇರುವುದನ್ನು ಕಂಡು ಅವುಗಳನ್ನು ತೆಗೆದುಕೊಂಡು ತಿಂದು, ಕುಡಿದು ತಿರುಗಿ ಮಲಗಿದನು. 7ಯೆಹೋವನ ದೂತನು ಎರಡನೆಯ ಸಾರಿ ಬಂದು ಅವನನ್ನು ತಟ್ಟಿ ಅವನಿಗೆ, “ಎದ್ದು ಊಟ ಮಾಡು, ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣಮಾಡಬೇಕಾಗಿದೆ” ಎಂದನು. 8ಅವನು ಎದ್ದು ತಿಂದು, ಕುಡಿದು ಅದರ ಬಲದಿಂದ ನಲ್ವತ್ತು ದಿನ ಹಗಲಿರುಳು ಪ್ರಯಾಣ ಮಾಡಿ ದೇವಗಿರಿಯಾದ 9ಹೋರೇಬಿಗೆ ತಲುಪಿ, ಅಲ್ಲಿನ ಒಂದು ಗವಿಯಲ್ಲಿ ಇಳಿದುಕೊಂಡನು.
ದೇವರು ಹೋರೇಬಿನಲ್ಲಿ ಎಲೀಯನಿಗೆ ಕಾಣಿಸಿಕೊಂಡಿದ್ದು
ಆಗ ಅವನಿಗೆ ಯೆಹೋವನಿಂದ, “ಎಲೀಯನೇ ನೀನು ಇಲ್ಲೇನು ಮಾಡುತ್ತೀ?” ಎಂಬ ವಾಣಿಯು ಕೇಳಿಸಿತು.
10ಅವನು ಅದಕ್ಕೆ, “ಸೇನಾಧೀಶ್ವರನಾದ ದೇವರೇ, ಯೆಹೋವನೇ ಇಸ್ರಾಯೇಲರು ನಿನ್ನ ನಿಬಂಧನೆಯನ್ನು ಮೀರಿದ್ದಾರೆ. ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ. ನಾನೊಬ್ಬನೇ ಉಳಿದು ನಿನ್ನ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ” ಎಂದು ಉತ್ತರಕೊಟ್ಟನು. 11ಆಗ ಪುನಃ, “ನೀನು ಹೊರಗೆ ಬಂದು ಬೆಟ್ಟದ ಮೇಲೆ ಯೆಹೋವನ ಮುಂದೆ ನಿಲ್ಲು” ಎಂಬ ವಾಣಿಯಾಯಿತು. ಆಹಾ ಯೆಹೋವನು ಅಲ್ಲಿ ಹಾದು ಹೋದನು. ಆತನ ಮುಂದೆ ಪರ್ವತಗಳು ಭೇದಿಸಿ ಬಂಡೆಗಳನ್ನು ಪುಡಿ ಪುಡಿಮಾಡುವಂಥ ದೊಡ್ಡ ಬಿರುಗಾಳಿಯು ಬೀಸಿತು. ಯೆಹೋವನು ಅದರಲ್ಲಿ ಇರಲಿಲ್ಲ. ತರುವಾಯ ಭೂಕಂಪವಾಯಿತು, ಅದರಲ್ಲಿಯೂ ಆತನಿರಲಿಲ್ಲ. 12ಭೂಕಂಪವಾದ ನಂತರ ಸಿಡಿಲುಂಟಾಯಿತು, ಅದರಲ್ಲಿಯೂ ಯೆಹೋವನಿರಲಿಲ್ಲ. ಕಡೆಗೆ ನಯವಾದ ಮೃದು ಸ್ವರವೊಂದು ಕೇಳಿಸಿತು, 13ಅದನ್ನು ಕೇಳಿದ ಕೂಡಲೆ ಎಲೀಯನು ತನ್ನ ಕಂಬಳಿಯಿಂದ ಮೋರೆಯನ್ನು ಮುಚ್ಚಿಕೊಂಡು ಹೋಗಿ ಗವಿಯ ದ್ವಾರದಲ್ಲಿ ನಿಂತನು. ಆಗ, “ಎಲೀಯನೇ ನೀನು ಇಲ್ಲೇನು ಮಾಡುತ್ತೀ?” ಎಂಬ ವಾಣಿಯು ಕೇಳಿಸಿತು. 14ಅದಕ್ಕೆ ಅವನು, “ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲರು ನಿನ್ನ ನಿಬಂಧನೆಯನ್ನು ಮೀರಿದ್ದಾರೆ, ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ. ನಾನೊಬ್ಬನೇ ಉಳಿದು ನಿನ್ನ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ” ಎಂದು ಉತ್ತರಕೊಟ್ಟನು. 15ಆಗ ಯೆಹೋವನು ಅವನಿಗೆ, “ನೀನು ಬಂದ ದಾರಿಯಿಂದ ಹಿಂದಿರುಗಿ ದಮಸ್ಕದ ಅರಣ್ಯಕ್ಕೆ ಹೋಗು, ಅಲ್ಲಿಂದ ಪಟ್ಟಣದೊಳಗೆ ಪ್ರವೇಶಿಸಿ ಹಜಾಯೇಲನನ್ನು ಅರಾಮ್ಯರ ಅರಸನನ್ನಾಗಿ ಅಭಿಷೇಕಿಸು. 16ನಿಂಷಿಯ ಮಗನಾದ ಯೇಹುವನ್ನು ಇಸ್ರಾಯೇಲರ ಅರಸನನ್ನಾಗಿಯೂ, ಆಬೇಲ್ ಮೆಹೋಲದವನೂ ಶಾಫಾಟನ ಮಗನೂ ಆದ ಎಲೀಷನನ್ನು ನಿನಗೆ ಬದಲಾಗಿ ಪ್ರವಾದಿಯನ್ನಾಗಿಯೂ ಅಭಿಷೇಕಿಸು. 17ಹಜಾಯೇಲನ ಕತ್ತಿಗೆ ತಪ್ಪಿಸಿಕೊಂಡವರನ್ನು ಯೇಹುವು ಕೊಲ್ಲುವನು. ಅವನ ಕತ್ತಿಗೆ ತಪ್ಪಿಸಿಕೊಂಡವರನ್ನು ಎಲೀಷನು ಕೊಲ್ಲುವನು. 18ಆದರೆ ಬಾಳನ ವಿಗ್ರಹಕ್ಕೆ ಅಡ್ಡಬೀಳದೆಯೂ, ಅದನ್ನು ಮುದ್ದಿಡದೆಯೂ ಇರುವ ಏಳು ಸಾವಿರ ಇಸ್ರಾಯೇಲರನ್ನು ಉಳಿಸುವೆನು” ಎಂದು ಹೇಳಿದನು.
ಎಲೀಷನು ಎಲೀಯನ ಸೇವಕನಾಗಿದ್ದು
19ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವುದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆ ಜೋಡಿಯಿಂದ ತಾನಾಗಿಯೇ ಹೊಲವನ್ನು ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. 20ಕೂಡಲೇ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ, “ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವುದಕ್ಕೆ ಅಪ್ಪಣೆಯಾಗಲಿ, ಅನಂತರ ನಿನ್ನನ್ನು ಹಿಂಬಾಲಿಸುವೆನು” ಅಂದನು. ಅದಕ್ಕೆ ಎಲೀಯನು “ಹೋಗು ನಾನು ನಿನಗೆ ಮಾಡಿರುವುದನ್ನು ಮರೆಯಬೇಡ?” ಎಂದು ಉತ್ತರಕೊಟ್ಟನು. 21ಎಲೀಷನು ಹಿಂದಿರುಗಿ ಹೋಗಿ ತಾನು ಉಳುತ್ತಿದ್ದ ಜೋಡಿ ಎತ್ತುಗಳನ್ನು ತೆಗೆದುಕೊಂಡು ಅವುಗಳನ್ನು ವಧಿಸಿ ಮಾಂಸವನ್ನು ರಂಟೆಯ ಕಟ್ಟಿಗೆಯಿಂದ ಬೇಯಿಸಿ, ಜನರಿಗೆ ಔತಣಮಾಡಿಸಿದನು. ಅನಂತರ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಸೇವಕನಾದನು.
Currently Selected:
1 ಅರಸು 19: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.