1 ಅರಸು 18
18
ಎಲೀಯನು ಮತ್ತು ಓಬದ್ಯನು
1ಅನೇಕ ದಿನಗಳಾದ ನಂತರ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು. ಬರಗಾಲದ ಮೂರನೆಯ ವರ್ಷದಲ್ಲಿ ಯೆಹೋವನು ಅವನಿಗೆ, “ನೀನು ಹೋಗಿ ಅಹಾಬನನ್ನು ಕಾಣು. ನಾನು ದೇಶಕ್ಕೆ ಮಳೆ ಕೊಡುತ್ತೇನೆ” ಎಂದನು. 2ಎಲೀಯನು ಅಹಾಬನನ್ನು ನೋಡುವುದಕ್ಕೆ ಹೊರಟನು. ಆಗ ಸಮಾರ್ಯದಲ್ಲಿ ಬರವು ಬಹು ಘೋರವಾಗಿದ್ದುದರಿಂದ, 3ಅಹಾಬನು ತನ್ನ ಉಗ್ರಾಣಿಕನಾದ ಓಬದ್ಯ ಎಂಬುವನನ್ನು ಕರೇಕಳುಹಿಸಿದನು. 4ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ಯೆಹೋವನಲ್ಲಿ ಬಹು ಭಯಭಕ್ತಿಯುಳ್ಳವನಾದ ಈ ಓಬದ್ಯನು ನೂರು ಜನರು ಪ್ರವಾದಿಗಳನ್ನು ತೆಗೆದುಕೊಂಡು ಅವರನ್ನು ಐವತ್ತೈವತ್ತು ಜನರನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅವರಿಗೆ ಅನ್ನಪಾನಗಳನ್ನು ಕೊಟ್ಟು ಸಾಕುತ್ತಿದ್ದನು. 5ಅಹಾಬನು ಅವನಿಗೆ, “ನಾವು ದೇಶಸಂಚಾರ ಮಾಡುತ್ತಾ, ಎಲ್ಲಾ ಬುಗ್ಗೆ ಹಳ್ಳಗಳಿಗೆ ಹೋಗಿ ಅವುಗಳಲ್ಲಿ ಹುಲ್ಲು ಸಿಕ್ಕುತ್ತದೋ ನೋಡೋಣ. ಸಿಕ್ಕುವುದಾದರೆ ನಮ್ಮ ಕುದುರೆಗಳೂ ಮತ್ತು ಹೇಸರಗತ್ತೆಗಳೂ ಉಳಿದಾವು, ಇಲ್ಲವಾದರೆ ಸತ್ತುಹೋಗುವವು” ಎಂದು ಹೇಳಿದನು. 6ಅವರು ಸಂಚಾರಕ್ಕಾಗಿ ದೇಶವನ್ನು ಎರಡು ಭಾಗ ಮಾಡಿ ಒಂದು ಭಾಗಕ್ಕೆ ಓಬದ್ಯನನ್ನು ಕಳುಹಿಸಿ ಇನ್ನೊಂದು ಕಡೆ ತಾನೇ ಹೊರಟುಹೋದನು.
7ಓಬದ್ಯನು ಪ್ರಯಾಣಮಾಡುತ್ತಿರುವಾಗ ಎಲೀಯನು ಪಕ್ಕನೆ ಅವನಿಗೆ ಎದುರಾದನು. ಓಬದ್ಯನು ಅವನ ಗುರುತು ಹಿಡಿದು, ಸಾಷ್ಟಾಂಗನಮಸ್ಕಾರ ಮಾಡಿ, “ನೀನು ನನ್ನ ಸ್ವಾಮಿಯಾದ ಎಲೀಯನೋ?” ಎಂದು ಕೇಳಿದನು. 8ಅದಕ್ಕೆ ಅವನು, “ಹೌದು, ನೀನು ಹೋಗಿ ನಿನ್ನ ಒಡೆಯನಿಗೆ, ‘ಎಲೀಯನು ಬಂದಿದ್ದಾನೆ’ ಎಂದು ಹೇಳು” ಎಂದನು. 9ಅದಕ್ಕೆ ಓಬದ್ಯನು, “ಅಹಾಬನು ನನ್ನನ್ನು ಕೊಲ್ಲುವ ಹಾಗೆ ನೀನು ನನ್ನನ್ನು ಅವನ ಕೈಗೆ ಒಪ್ಪಿಸುವುದೇಕೆ? ನಾನೇನು ಪಾಪಮಾಡಿದೆನು? 10ನಿನ್ನ ದೇವರಾದ ಯೆಹೋವನಾಣೆ, ನನ್ನ ಒಡೆಯನು ಸೇವಕರನ್ನು ಕಳುಹಿಸಿ ನಿನ್ನನ್ನು ಹುಡುಕದ ಜನಾಂಗವೂ ರಾಜ್ಯವೂ ಒಂದೂ ಇರುವುದಿಲ್ಲ. ಆ ಜನಾಂಗ ರಾಜ್ಯಗಳವರು ‘ಎಲೀಯನು ನಮ್ಮಲ್ಲಿರುವುದಿಲ್ಲ’ ಎಂದು ಹೇಳಿದಾಗ ಅವನು ಅವರಿಂದ ಪ್ರಮಾಣ ಮಾಡಿಸಿದನು. 11ಹೀಗಿದ್ದರೂ ನೀನು ನನಗೆ ಎಲೀಯನು ಬಂದಿದ್ದಾನೆಂದು ನಿನ್ನ ಒಡೆಯನಿಗೆ ತಿಳಿಸು ಎಂಬುದಾಗಿ ಆಜ್ಞಾಪಿಸುವುದೇನು? 12ನಾನು ನಿನ್ನನ್ನು ಬಿಟ್ಟು ಹೊರಟ ಕೂಡಲೆ ಯೆಹೋವನ ಆತ್ಮವು ನಿನ್ನನ್ನು ನನಗೆ ಗೊತ್ತಿಲ್ಲದ ಬೇರೊಂದು ಸ್ಥಳಕ್ಕೆ ಒಯ್ಯುವುದು. ನಾನು ಹೋಗಿ ಅಹಾಬನಿಗೆ ಹೇಳುವಷ್ಟರಲ್ಲಿ ನೀನು ಅವನಿಗೆ ಸಿಕ್ಕದೆ ಹೋದರೆ ಅವನು ನನ್ನನ್ನು ಕೊಂದು ಹಾಕುವನು. ನಾನು ಬಾಲ್ಯಾರಭ್ಯ ಯೆಹೋವನಲ್ಲಿ ಭಯಭಕ್ತಿಯುಳ್ಳವನಲ್ಲವೇ? 13ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ನಾನು ಮಾಡಿದ್ದು ನನ್ನ ಸ್ವಾಮಿಯಾದ ನಿನಗೆ ಗೊತ್ತಾಗಲಿಲ್ಲವೋ? ಅವರಲ್ಲಿ ನೂರು ಜನರನ್ನು ತೆಗೆದುಕೊಂಡು ಐವತ್ತೈವತ್ತು ಜನರನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅನ್ನ ಪಾನಗಳನ್ನು ಕೊಟ್ಟು ಸಾಕಿದೆನಲ್ಲವೇ. 14ಹೀಗಿದ್ದರೂ ನೀನು ನನಗೆ ಎಲೀಯನು ಬಂದಿದ್ದಾನೆ ಎಂಬುದಾಗಿ ನಿನ್ನ ಒಡೆಯನಿಗೆ ತಿಳಿಸು ಎಂದು ಆಜ್ಞಾಪಿಸುತ್ತಿರುವೆಯಲ್ಲಾ. ಅವನು ನನ್ನನ್ನು ಕೊಲ್ಲುವನಲ್ಲವೋ?” ಎಂದು ಉತ್ತರಕೊಟ್ಟನು. 15ಆಗ ಎಲೀಯನು ಅವನಿಗೆ, “ನಾನು ಸನ್ನಿಧಿ ಸೇವೆಮಾಡುತ್ತಿರುವ ಸೇನಾಧೀಶ್ವರನಾದ ಯೆಹೋವನಾಣೆ, ನಾನು ಈ ಹೊತ್ತು ಅಹಾಬನಿಗೆ ಹೇಗೂ ಕಾಣಿಸಿಕೊಳ್ಳುವೆನು” ಅಂದನು.
ಕರ್ಮೆಲ್ ಬೆಟ್ಟದಲ್ಲಿ ಎಲೀಯನು
16ಓಬದ್ಯನು ಅಹಾಬನ ಬಳಿಗೆ ಹೋಗಿ ಅವನಿಗೆ ಈ ಮಾತನ್ನು ತಿಳಿಸಿದನು. ಅಹಾಬನು ಎಲೀಯನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋಗಿ 17ಅವನನ್ನು ಕಂಡಕೂಡಲೆ, “ಇಸ್ರಾಯೇಲರಿಗೆ ಆಪತ್ತನ್ನು ಬರಮಾಡಿದವನೇ, ನೀನು ಬಂದಿಯಾ?” ಅಂದನು. 18ಅದಕ್ಕೆ ಅವನು, “ಇಸ್ರಾಯೇಲರಿಗೆ ಆಪತ್ತನ್ನು ಬರಮಾಡಿದವನು ನಾನಲ್ಲ. ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿ ಬಾಳನ ವಿಗ್ರಹಗಳನ್ನು ಪೂಜಿಸಿದ ನೀನೂ ಮತ್ತು ನಿನ್ನ ಮನೆಯವರೂ ಅದಕ್ಕೆ ಕಾರಣರು. 19ನೀನು ಈಗ ಎಲ್ಲಾ ಇಸ್ರಾಯೇಲರನ್ನೂ, ಈಜೆಬೆಲಳಿಂದ ಪೋಷಣೆ ಹೊಂದುವ ಬಾಳನ ನಾನೂರೈವತ್ತು ಪ್ರವಾದಿಗಳನ್ನು ಮತ್ತು ಅಶೇರ ದೇವತೆಯ ನಾನೂರು ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಕರೆಯಿಸು” ಎಂದು ಹೇಳಿದನು. 20ಅಹಾಬನು ಇಸ್ರಾಯೇಲರನ್ನೂ ಎಲ್ಲಾ ಪ್ರವಾದಿಗಳನ್ನೂ ಅಲ್ಲಿಗೆ ಕರೆಯಿಸಿದನು.
21ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ. ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡನು. 22ಮತ್ತು ಎಲೀಯನು ಅವರಿಗೆ, “ಯೆಹೋವನ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ, ಬಾಳನ ಪ್ರವಾದಿಗಳಲ್ಲಿ ನಾನೂರೈವತ್ತು ಜನರಿದ್ದಾರೆ. 23ಅವರು ಎರಡು ಹೋರಿಗಳನ್ನು ನಮ್ಮ ಬಳಿಗೆ ತರಲಿ ಅವುಗಳಲ್ಲಿ ಒಂದನ್ನು ಆರಿಸಿಕೊಂಡು ಕಡಿದು, ತುಂಡು ಮಾಡಿ, ಕಟ್ಟಿಗೆಯ ಮೇಲಿಡಲಿ. ಆದರೆ ಬೆಂಕಿಹೊತ್ತಿಸಬಾರದು. ನಾನೂ ಇನ್ನೊಂದನ್ನು ಹಾಗೆಯೇ ಮಾಡಿ ಬೆಂಕಿಹೊತ್ತಿಸದೆ ಕಟ್ಟಿಗೆಯ ಮೇಲಿಡುವೆನು 24ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ, ಅನಂತರ ನಾನು ಯೆಹೋವನ ಹೆಸರು ಹೇಳಿ ಪ್ರಾರ್ಥಿಸುವೆನು. ಆ ಇಬ್ಬರಲ್ಲಿ ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದೂ ನಿರ್ಣಯಿಸೋಣ” ಅಂದನು. ಎಲ್ಲಾ ಜನರು, “ಸರಿ ನೀನು ಹೇಳಿದಂತೆಯೇ ಆಗಲಿ” ಎಂದು ಉತ್ತರಕೊಟ್ಟರು. 25ಆಗ ಅವನು ಬಾಳನ ಪ್ರವಾದಿಗಳಿಗೆ, “ನೀವು ಹೆಚ್ಚು ಜನ ಇರುವುದರಿಂದ ಮೊದಲು ನೀವೇ ಒಂದು ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ಧಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಆದರೆ ಬೆಂಕಿಯನ್ನು ಹೊತ್ತಿಸಬಾರದು” ಅಂದನು. 26ಅವರು ತರಲ್ಪಟ್ಟ ಹೋರಿಗಳಲ್ಲಿ ಒಂದನ್ನು ತೆಗೆದುಕೊಂಡು ಸಿದ್ಧಪಡಿಸಿ, ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ ನಮಗೆ ಕಿವಿಗೊಡು” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರೂ ಆಕಾಶವಾಣಿಯಾಗಲಿಲ್ಲ. ಅವರು ಯಜ್ಞವೇದಿಯ ಸುತ್ತಲೂ ಕುಣಿದಾಡಿದರೂ ಯಾರೂ ಉತ್ತರ ದಯಪಾಲಿಸಲಿಲ್ಲ. 27ಮಧ್ಯಾಹ್ನವಾದನಂತರ ಎಲೀಯನು ಅವರನ್ನು ಪರಿಹಾಸ್ಯ ಮಾಡಿ, “ಗಟ್ಟಿಯಾಗಿ ಕೂಗಿರಿ, ಅವನು ದೇವರಾಗಿರುತ್ತಾನಲ್ಲಾ. ಈಗ ಒಂದು ವೇಳೆ ಅವನು ಧ್ಯಾನದಲ್ಲಿರಬಹುದು, ಇಲ್ಲವೇ ಯಾವುದೋ ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಇರಬೇಕು. ಅದೂ ಇಲ್ಲದಿದ್ದರೆ ನಿದ್ರೆಮಾಡುತ್ತಿದ್ದಾನು, ಎಚ್ಚರವಾಗಬೇಕು” ಎಂದು ಹೇಳಿದನು. 28ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ದತಿಯ ಪ್ರಕಾರ ಈಟಿ ಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು. 29ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಾ ಇದ್ದರು. ಆದರೂ ಆಕಾಶವಾಣಿಯಾಗಲಿಲ್ಲ. ಯಾರೂ ಅವರಿಗೆ ಉತ್ತರಕೊಡಲಿಲ್ಲ ಅವರನ್ನು ಲಕ್ಷಿಸಲಿಲ್ಲ.
30ಅನಂತರ ಎಲೀಯನು ಎಲ್ಲಾ ಜನರನ್ನು ಹತ್ತಿರಕ್ಕೆ ಕರೆಯಲು ಅವರು ಬಂದರು. ಅವನು ಹಾಳಾಗಿದ್ದ ಅಲ್ಲಿ ಯೆಹೋವನ ಯಜ್ಞವೇದಿಯನ್ನು ತಿರುಗಿ ಕಟ್ಟಿಸಿದನು. 31ಯೆಹೋವನಿಂದ ಇಸ್ರಾಯೇಲನೆಂಬ ಹೆಸರು ಹೊಂದಿದ ಯಾಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, 32ಯೆಹೋವನ ಹೆಸರಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸಿ, ಅದರ ಸುತ್ತಲೂ ಇಪ್ಪತ್ತು ಸೇರು ಬೀಜಬಿತ್ತುವಷ್ಟು ನೆಲವನ್ನು ಅಗೆಸಿ ಕಾಲುವೆ ಮಾಡಿಸಿದನು. 33ಇದಲ್ಲದೆ ಕಟ್ಟಿಗೆಯನ್ನು ಯಜ್ಞವೇದಿಯ ಮೇಲೆ ಕ್ರಮಪಡಿಸಿ, ಹೋರಿಯನ್ನು ವಧಿಸಿ ತುಂಡು ಮಾಡಿ ಅದರ ಮೇಲಿಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಯಜ್ಞಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಸುರಿಯಿರಿ” ಎಂದು ಆಜ್ಞಾಪಿಸಿದನು. 34ಅವರು ತೆಗೆದುಕೊಂಡು ಬರಲು, “ಇನ್ನೊಂದು ಸಾರಿ ತನ್ನಿರಿ” ಎಂದು ಹೇಳಿದನು. ತಿರುಗಿ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರವಾಗಿ ಆಜ್ಞಾಪಿಸಿಲು ಅವರು ಮತ್ತೊಮ್ಮೆ ತಂದು ಸುರಿದರು 35ನೀರು ಯಜ್ಞವೇದಿಯ ಸುತ್ತಲೂ ತುಂಬಿ ಹರಿಯಿತು. ಇದಲ್ಲದೆ ಅವನು ಕಾಲುವೆಯನ್ನು ನೀರಿನಿಂದ ತುಂಬಿಸಿದನು. 36ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ಯಜ್ಞವೇದಿಯ ಹತ್ತಿರ ಬಂದು, “ಅಬ್ರಹಾಮ, ಇಸಾಕ ಇಸ್ರಾಯೇಲರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಎಂಬುದನ್ನೂ, ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ಮತ್ತು ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನೂ ಈ ಹೊತ್ತು ತೋರಿಸಿಕೊಡು. 37ಕಿವಿಗೊಡು, ಯೆಹೋವನೇ ಕಿವಿಗೊಡು, ಯೆಹೋವನಾದ ನೀನೊಬ್ಬನೇ ದೇವರೂ! ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ನೀನೇ ಆಗಿರುತ್ತೀ ಎಂಬುದನ್ನು ಇವರಿಗೆ ತಿಳಿಯಪಡಿಸು” ಎಂದು ಪ್ರಾರ್ಥಿಸಿದನು. 38ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ, ಕಟ್ಟಿಗೆ, ಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. 39ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು. 40ಆಗ ಎಲೀಯನು ಅವರಿಗೆ, “ಬಾಳನ ಪ್ರವಾದಿಗಳೆಲ್ಲರನ್ನು ಹಿಡಿಯಿರಿ. ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು” ಎಂದು ಆಜ್ಞಾಪಿಸಲು ಅವರು ಹಿಡಿದರು. ಅವನು ಅವರನ್ನು ಕೀಷೋನ್ ಹಳ್ಳಕ್ಕೆ ಒಯ್ದು ಅಲ್ಲಿ ಕೊಲ್ಲಿಸಿದನು.
ಎಲೀಯನು ಮಳೆಗಾಗಿ ಪ್ರಾರ್ಥಿಸಿದ್ದು
41ಅನಂತರ ಅವನು ಅಹಾಬನಿಗೆ, “ನೀನು ಮೇಲೆ ಹೋಗಿ ಅನ್ನಪಾನಗಳನ್ನು ತೆಗೆದುಕೋ, ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ” ಅಂದನು. 42ಅಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದಾಗ ಎಲೀಯನು ಕರ್ಮೆಲಿನ ಬೆಟ್ಟದ ತುದಿಗೆ ಹೋಗಿ ಅಲ್ಲಿ ನೆಲದ ಮೇಲೆ ಬಿದ್ದುಕೊಂಡು ಮೊಣಕಾಲಿನ ಮೇಲೆ ತಲೆಯನ್ನಿಟ್ಟನು. 43ಅವನು ತನ್ನ ಸೇವಕನಿಗೆ, “ನೀನು ಮೇಲೆ ಹೋಗಿ ಸಮುದ್ರದ ಕಡೆಗೆ ನೋಡು” ಎಂದು ಆಜ್ಞಾಪಿಸಿದನು. ಸೇವಕನು ಹೋಗಿ ನೋಡಿ ಬಂದು, “ಏನೂ ಕಾಣುವುದಿಲ್ಲ” ಎಂದು ಹೇಳಿದನು. ಹೀಗೆ ಅವನನ್ನು ಏಳು ಸಾರಿ ಕಳುಹಿಸಿದನು. 44ಏಳನೆಯ ಸಾರಿ ಸೇವಕನು, “ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿಂದ ಏರಿ ಬರುತ್ತಿದೆ” ಎಂದು ತಿಳಿಸಿದನು. ಆಗ ಎಲೀಯನು ಅವನಿಗೆ, “ನೀನು ಹೋಗಿ ಅಹಾಬನಿಗೆ, ‘ಬೇಗನೆ ರಥವನ್ನು ಹೂಡಿಸಿಕೊಂಡು ಮಳೆಯು ನಿನ್ನನ್ನು ತಡೆಯದಂತೆ ಬೆಟ್ಟವನ್ನಿಳಿದು ಹೋಗು’ ಎಂದು ಹೇಳು” ಅಂದನು. 45ಸ್ವಲ್ಪ ಹೊತ್ತಿನಲ್ಲಿಯೇ ಆಕಾಶವು ಮೋಡಗಾಳಿಗಳಿಂದ ಕಪ್ಪಾಗಿ ದೊಡ್ಡ ಮಳೆಯು ಪ್ರಾರಂಭವಾಯಿತು. ಅಹಾಬನು ರಥದಲ್ಲಿ ಕುಳಿತುಕೊಂಡು ಇಜ್ರೇಲಿಗೆ ಹೋದನು. 46ಯೆಹೋವನ ಹಸ್ತವು ಎಲೀಯನ ಸಂಗಡ ಇದ್ದುದರಿಂದ ಅವನು ನಡುಕಟ್ಟಿಕೊಂಡು ಅಹಾಬನ ಮುಂದೆ ಓಡುತ್ತಾ ಇಜ್ರೇಲನ್ನು ಸೇರಿದನು.
Currently Selected:
1 ಅರಸು 18: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.