YouVersion Logo
Search Icon

1 ಅರಸು 16

16
1ಆಗ ಯೆಹೋವನು ಹನಾನೀಯನ ಮಗನಾದ ಯೇಹುವಿನ ಮುಖಾಂತರವಾಗಿ ಅವನಿಗೆ ಹೇಳಿದ್ದೇನೆಂದರೆ, 2“ನಾನು ನಿನ್ನನ್ನು ಧೂಳಿನಿಂದ ಎತ್ತಿ, ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನನ್ನಾಗಿ ಮಾಡಿದರೂ ನೀನು ಯಾರೊಬ್ಬಾಮನ ಮಾರ್ಗದಲ್ಲಿ ನಡೆದು ನನ್ನ ಜನರಾದ ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿರುವೆ. ಅವರ ಪಾಪದ ಮೂಲಕವಾಗಿ ನನಗೆ ಕೋಪವನ್ನೆಬ್ಬಿಸಿದ್ದಿ. 3ಆದುದರಿಂದ ನಿನ್ನನ್ನೂ ಮತ್ತು ನಿನ್ನ ಮನೆಯವರನ್ನು ನಾಶಮಾಡುವೆನು. ನೆಬಾಟನ ಮಗನಾದ ಯಾರೊಬ್ಬಾಮನ ಮನೆಗಾದ ಗತಿಯು ನಿನಗೂ, ನಿನ್ನ ಮನೆಯವರಿಗೂ ಆಗುವುದು. 4ನಿನ್ನ ಕುಟುಂಬದವರಲ್ಲಿ ಪಟ್ಟಣದೊಳಗೆ ಸಾಯುವವರನ್ನು ನಾಯಿಗಳೂ ಮತ್ತು ಅಡವಿಯಲ್ಲಿ ಸಾಯುವವರನ್ನು ಪಕ್ಷಿಗಳು ತಿಂದುಬಿಡುವವು” ಎಂಬುದೇ. 5ಬಾಷನ ಉಳಿದ ಚರಿತ್ರೆಯೂ ಅವನ ಪರಾಕ್ರಮಕೃತ್ಯಗಳೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. 6ಅವನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ತಿರ್ಚದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಏಲನು ಅರಸನಾದನು. 7ಬಾಷನು ಯಾರೊಬ್ಬಾಮನ ಮನೆಯವರಂತೆ ತನ್ನ ದುಷ್ಕೃತ್ಯಗಳಿಂದ ಯೆಹೋವನಿಗೆ ಕೋಪಬರುವಂತೆ ಮಾಡಿ, ಆತನ ದೃಷ್ಟಿಯಲ್ಲಿ ದ್ರೋಹಿಯಾದುದರಿಂದಲೂ ಅವನು ಯಾರೊಬ್ಬಾಮನ ಮನೆಯವರನ್ನು ನಿರ್ನಾಮಗೊಳಿಸಿದ್ದರಿಂದಲೂ ಯೆಹೋವನು ಹನಾನೀಯನ ಮಗ ಪ್ರವಾದಿಯಾದ ಯೇಹುವಿನ ಮುಖಾಂತರ ಬಾಷನಿಗೂ, ಅವನ ಕುಟುಂಬಕ್ಕೂಆಗುವ ದುರ್ಗತಿಯನ್ನು ಮುಂತಿಳಿಸಿದನು.
ಇಸ್ರಾಯೇಲರ ಅರಸನಾದ ಏಲನು
8ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಇಪ್ಪತ್ತಾರನೆಯ ವರ್ಷದಲ್ಲಿ ಬಾಷನ ಮಗನಾದ ಏಲನು ತಿರ್ಚದಲ್ಲಿ ಇಸ್ರಾಯೇಲರ ಅರಸನಾಗಿ ಎರಡು ವರ್ಷ ಆಳ್ವಿಕೆ ಮಾಡಿದನು. 9ಅವನ ಸೇವಕನೂ ಅವನ ರಥಬಲದ ಅರ್ಧಭಾಗಕ್ಕೆ ಅಧಿಪತಿಯೂ ಆಗಿದ್ದ ಜಿಮ್ರಿ ಎಂಬುವವನು ಅವನಿಗೆ ವಿರುದ್ಧವಾಗಿ ಒಳಸಂಚು ಮಾಡಿದನು. ಅರಸನು ತಿರ್ಚದಲ್ಲಿ ತನ್ನ ಅರಮನೆಯ ಮೇಲ್ವಿಚಾರಕನಾದ ಅರ್ಚನೆಂಬುವವನ ಮನೆಯಲ್ಲಿ ಕುಡಿದು ಮತ್ತನಾಗಿರುವಾಗ ಜಿಮ್ರಿಯು ಅಲ್ಲಿಗೆ ಹೋದನು. 10ಜಿಮ್ರಿಯು ಏಲನ ಮೇಲೆ ಬಿದ್ದು ಅವನನ್ನು ಕೊಂದು ಹಾಕಿ ಅವನಿಗೆ ಬದಲಾಗಿ ತಾನು ಅರಸನಾದನು. ಇದು ಯೆಹೂದದ ಅರಸನಾದ ಆಸನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ನಡೆಯಿತು. 11ಅವನು ಸಿಂಹಾಸನದ ಮೇಲೆ ಕುಳಿತು ಆಳತೊಡಗಿದ ಕೂಡಲೇ ಬಾಷನ ಮನೆಯವರನ್ನೂ ಅವನ ಬಂಧು ಮಿತ್ರರನ್ನೂ ಸಂಹರಿಸಿದನು. ಅವರಲ್ಲಿ ಒಬ್ಬ ಗಂಡಸನ್ನೂ ಉಳಿಸಲಿಲ್ಲ. 12ಬಾಷನೂ ಹಾಗು ಅವನ ಮಗನಾದ ಏಲನೂ ತಾವು ಪಾಪಮಾಡಿದ್ದಲ್ಲದೆ ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ, ತಮ್ಮ ವಿಗ್ರಹಗಳಿಂದ ಇಸ್ರಾಯೇಲ್ ದೇವರಾದ ಯೆಹೋವನಿಗೆ ಕೋಪಬರುವಂತೆ ಮಾಡಿದರು. 13ಆದುದರಿಂದ ಆತನು ಪ್ರವಾದಿಯಾದ ಯೇಹುವಿನ ಮುಖಾಂತರವಾಗಿ ಬಾಷನ ಮನೆಗೆ ಆಗುವ ದುರ್ಗತಿಯನ್ನು ಮುಂತಿಳಿಸಿದ್ದನು. ಜಿಮ್ರಿಯು ಬಾಷನ ಮನೆಯವರೆಲ್ಲರನ್ನೂ ನಿರ್ನಾಮಗೊಳಿಸಿದಾಗ ಆ ಮಾತು ನೆರವೇರಿತು. 14ಏಲನ ಉಳಿದ ಚರಿತ್ರೆಯೂ ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
ಇಸ್ರಾಯೇಲರ ಅರಸನಾದ ಜಿಮ್ರಿಯು
15ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ತಿರ್ಚದಲ್ಲಿ ಇಸ್ರಾಯೇಲರ ಅರಸನಾಗಿ ಏಳು ವರ್ಷ ಆಳ್ವಿಕೆ ಮಾಡಿದನು. ಆ ಸಮಯದಲ್ಲಿ ಇಸ್ರಾಯೇಲರು ಫಿಲಿಷ್ಟಿಯರ ವಶದಲ್ಲಿದ್ದ ಗಿಬ್ಬೆತೋನ್ ಎಂಬ ಪಟ್ಟಣಕ್ಕೆ ಮುತ್ತಿಗೆ ಹಾಕಿದ್ದರು. 16ಜಿಮ್ರಿಯು ಅರಸನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಅವನನ್ನು ಕೊಂದುಹಾಕಿದನೆಂಬ ವರ್ತಮಾನವು ಪಾಳೆಯದಲ್ಲಿದ್ದ ಇಸ್ರಾಯೇಲರಿಗೆ ಮುಟ್ಟಿತು. ಅವರು ಅದೇ ದಿನ ಅಲ್ಲಿಯೇ ಸೈನ್ಯಾಧಿಪತಿಯಾದ ಒಮ್ರಿಯನ್ನು ತಮ್ಮ ಅರಸನನ್ನಾಗಿ ನೇಮಿಸಿಕೊಂಡರು. 17ಒಮ್ರಿಯೂ ಅವನ ಜೊತೆಯಲ್ಲಿದ್ದ ಎಲ್ಲಾ ಇಸ್ರಾಯೇಲರೂ ಗಿಬ್ಬೆತೋನನ್ನು ಬಿಟ್ಟುಹೋಗಿ ತಿರ್ಚಕ್ಕೆ ಮುತ್ತಿಗೆ ಹಾಕಿದರು. 18ಪಟ್ಟಣವು ಅವರ ವಶವಾದುದನ್ನು ಜಿಮ್ರಿಯು ಕಂಡು ಅರಮನೆಯ ಗರ್ಭಗೃಹಕ್ಕೆ ಹೋಗಿ, ಅರಮನೆಗೆ ಬೆಂಕಿ ಹೊತ್ತಿಸಿ ಸುಟ್ಟುಕೊಂಡು ಸತ್ತನು. 19ಅವನು ಯಾರೊಬ್ಬಾಮನಂತೆ ತಾನು ಪಾಪಮಾಡಿದ್ದಲ್ಲದೆ ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ, ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದುದರಿಂದ ಹೀಗಾಯಿತು. 20ಜಿಮ್ರಿಯ ಉಳಿದ ಚರಿತ್ರೆಯೂ ಅವನ ಒಳಸಂಚೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. 21ಆ ಕಾಲದಲ್ಲಿ ಇಸ್ರಾಯೇಲರೊಳಗೆ ಎರಡು ಪಕ್ಷಗಳುಂಟಾದವು. ಒಂದು ಪಕ್ಷದವರು ಗೀನತನ ಮಗನಾದ ತಿಬ್ನಿಯನ್ನು ಹಿಂಬಾಲಿಸಿ ಅವನನ್ನು ಅರಸನನ್ನಾಗಿ ಮಾಡಿಕೊಳ್ಳಬೇಕೆಂದಿದ್ದರು. ಇನ್ನೊಂದು ಪಕ್ಷದವರು ಒಮ್ರಿಯನ್ನು ಹಿಂಬಾಲಿಸಿದರು. 22ಆದರೆ ಒಮ್ರಿಯ ಪಕ್ಷದವರು ಗೀನತನ ಮಗನಾದ ತಿಬ್ನೀಯ ಪಕ್ಷದವರನ್ನು ಸೋಲಿಸಿದರು. ತಿಬ್ನಿಯು ಮರಣ ಹೊಂದಿದ್ದರಿಂದ ಒಮ್ರಿಯೇ ಅರಸನಾದನು.
ಇಸ್ರಾಯೇಲರ ಅರಸನಾದ ಒಮ್ರಿಯು
23ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಮೂವತ್ತೊಂದನೆಯ ವರ್ಷದಲ್ಲಿ ಒಮ್ರಿಯು ಇಸ್ರಾಯೇಲರ ಅರಸನಾಗಿ ಹನ್ನೆರಡು ವರ್ಷ ಆಳ್ವಿಕೆ ಮಾಡಿದನು. ಆರು ವರ್ಷಗಳ ವರೆಗೆ ತಿರ್ಚವೇ ಅವನ ರಾಜಧಾನಿಯಾಗಿತ್ತು. 24ಅನಂತರ ಶೆಮೆರ್ ಎಂಬವನಿಗೆ #16:24 ಸುಮಾರು 70 ಕಿಲೋಗ್ರಾಂ.ಎರಡು ತಲಾಂತು ಬೆಳ್ಳಿಯನ್ನು ಕೊಟ್ಟು ಅವನಿಂದ ಸಮಾರ್ಯವೆಂಬ ಗುಡ್ಡವನ್ನು ಕೊಂಡುಕೊಂಡು, ಅದರ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ, ಅದಕ್ಕೆ ಆ ಭೂಮಿಯ ಒಡೆಯನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ಸಮಾರ್ಯ ಎಂಬ ಹೆಸರಿಟ್ಟನು. 25ಒಮ್ರಿಯು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯೂ ತನ್ನ ಪೂರ್ವಾಧಿಕಾರಿಗಳೆಲ್ಲರಿಗಿಂತ ದುಷ್ಟನಾಗಿದ್ದನು. 26ಇಸ್ರಾಯೇಲರು ವಿಗ್ರಹಗಳಿಂದ ತಮ್ಮ ದೇವರಾದ ಯೆಹೋವನಿಗೆ ಕೋಪ ಬರಿಸುವಂತೆ ಅವರನ್ನು ಪಾಪಕ್ಕೆ ಪ್ರೇರೇಪಿಸಿ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗದಲ್ಲಿ ಅವನೂ ನಡೆದನು. 27ಅವನ ಉಳಿದ ಚರಿತ್ರೆಯೂ ಪರಾಕ್ರಮಕೃತ್ಯಗಳೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. 28ಒಮ್ರಿಯು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯಪಟ್ಟಣದಲ್ಲಿ ಸಮಾಧಿ ಮಾಡಿದರು. ಅವನ ನಂತರ ಅವನ ಮಗನಾದ ಅಹಾಬನು ಅರಸನಾದನು.
ಇಸ್ರಾಯೇಲರ ಅರಸನಾದ ಅಹಾಬ
29ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರಾಯೇಲರ ಅರಸನಾಗಿ ಸಮಾರ್ಯಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳ್ವಿಕೆ ಮಾಡಿದನು. 30ಅವನು ತನ್ನ ಪೂರ್ವಾಧಿಕಾರಿಗಳೆಲ್ಲರಿಗಿಂತಲೂ ದುಷ್ಟನಾಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು 31ಅವನು ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗದಲ್ಲಿ ನಡೆಯುವುದು ಅಲ್ಪ ಪಾಪವೆಂದು ತಿಳಿದವನೋ ಎಂಬಂತೆ ಚೀದೋನ್ಯರ ಅರಸನಾದ ಎತ್ಬಾಳನ ಮಗಳು ಈಜೆಬೆಲ್ ಎಂಬಾಕೆಯನ್ನು ಮದುವೆಮಾಡಿಕೊಂಡು ಬಾಳ್ ದೇವರನ್ನು ಪೂಜಿಸತೊಡಗಿದನು. 32ಬಾಳ್ ದೇವರಿಗೋಸ್ಕರ ಸಮಾರ್ಯದಲ್ಲಿ ಒಂದು ಗುಡಿಯನ್ನು ಕಟ್ಟಿಸಿ, ಅದರಲ್ಲಿ ಯಜ್ಞವೇದಿಯನ್ನು ಮಾಡಿಸಿದನು. 33ಇದಲ್ಲದೆ ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿದನು. ಹೀಗೆ ಇನ್ನೂ ಎಷ್ಟೋ ಕೆಟ್ಟ ಕೆಲಸಗಳನ್ನು ಮಾಡಿ, ಮುಂಚೆ ಇದ್ದ ಎಲ್ಲಾ ಇಸ್ರಾಯೇಲ್ ರಾಜರಿಗಿಂತಲೂ ಹೆಚ್ಚಾಗಿ ಇಸ್ರಾಯೇಲ್ ದೇವರಾದ ಯೆಹೋವನಿಗೆ ಕೋಪ ಬರುವಂತೆ ಮಾಡಿದ.
34 # 16:34 ಯೆಹೋ. 6:26 ನೋಡಿರಿ. ಅವನ ಕಾಲದಲ್ಲಿ ಬೇತೇಲಿನವನಾದ ಹೀಯೇಲನು ಯೆರಿಕೋ ಪಟ್ಟಣವನ್ನು ಕಟ್ಟಿಸಿದನು. ಅವನು ಅದಕ್ಕೆ ಅಸ್ತಿವಾರ ಹಾಕಿದಾಗ ಹಿರಿಯ ಮಗನಾದ ಅಬೀರಾಮನನ್ನೂ ಬಾಗಿಲುಗಳನ್ನಿರಿಸಿದಾಗ ಕಿರಿಯ ಮಗನಾದ ಸೆಗೂಬನನ್ನೂ ಕಳೆದುಕೊಂಡನು. ಹೀಗೆ ಯೆಹೋವನು ನೂನನ ಮಗನಾದ ಯೆಹೋಶುವನಿಂದ ಹೇಳಿಸಿದ ಮಾತು ನೆರವೇರಿತು.

Currently Selected:

1 ಅರಸು 16: IRVKan

Highlight

Share

Copy

None

Want to have your highlights saved across all your devices? Sign up or sign in