1 ಅರಸು 15
15
ಯೆಹೂದದ ಅರಸನಾದ ಅಬೀಯಾಮ
1ನೆಬಾಟನ ಮಗನಾದ ಯಾರೊಬ್ಬಾಮನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯಾಮನು ಯೆಹೂದದ ಅರಸನಾದನು. 2ಅವನು ಯೆರೂಸಲೇಮಿನಲ್ಲಿ ಮೂರು ವರ್ಷ ಆಳ್ವಿಕೆ ಮಾಡಿದನು. ಅಬೀಷಾಲೋಮನ ಮಗಳಾದ ಮಾಕಾ ಎಂಬಾಕೆಯು ಅವನ ತಾಯಿ. 3ತನ್ನ ತಂದೆಯು ಮಾಡಿದ ಎಲ್ಲಾ ಪಾಪಕೃತ್ಯಗಳನ್ನು ಅವನೂ ಮಾಡಿದನು. ಅವನ ಪೂರ್ವಿಕನಾದ ದಾವೀದನು ದೇವರಾದ ಯೆಹೋವನನ್ನು ಯಥಾರ್ಥಮನಸ್ಸಿನಿಂದ ಸೇವಿಸಿದಂತೆ ಅವನು ಸೇವಿಸಲಿಲ್ಲ. 4ಆದರೂ ಹಿತ್ತಿಯನಾದ ಊರೀಯನ ವಿಷಯದ ಹೊರತಾಗಿ ಬೇರೆ ಯಾವ ವಿಷಯದಲ್ಲಿಯೂ ತನ್ನ ಆಜ್ಞೆಗಳನ್ನು ಮೀರದೆ ಜೀವದಿಂದಿರುವವರೆಗೂ ತನ್ನ ಚಿತ್ತಕ್ಕನುಸಾರವಾಗಿ ನಡೆದ ದಾವೀದನ ನಿಮಿತ್ತವಾಗಿ ಯೆಹೋವನು ಯೆರೂಸಲೇಮಿನಲ್ಲಿರುವ ಅವನ ದೀಪವನ್ನು ಆರಿಸಲಿಲ್ಲ. 5ಯೆರೂಸಲೇಮನ್ನೂ ಅವನ ಸಂತಾನವನ್ನೂ ಉಳಿಸಿದನು. 6ರೆಹಬ್ಬಾಮನಿಗೂ ಮತ್ತು ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು. 7ಅಬೀಯಾಮನ ಉಳಿದ ಚರಿತ್ರೆಯೂ ಮತ್ತು ಅವನ ಎಲ್ಲಾ ಕೃತ್ಯಗಳೂ ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. ಅಬೀಯಾಮನಿಗೂ ಮತ್ತು ಯಾರೊಬ್ಬಾಮನಿಗೂ ಯುದ್ಧ ನಡೆಯುತ್ತಿತ್ತು. 8ಅಬೀಯಾಮನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದಲ್ಲಿ ಸಮಾಧಿ ಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಆಸನು ಅರಸನಾದನು.
ಯೆಹೂದದ ಅರಸನಾದ ಆಸ
9ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಆಸನು ಯೆಹೂದದ ಅರಸನಾದನು. 10ಅವನು ಯೆರೂಸಲೇಮನ್ನು ನಲ್ವತ್ತೊಂದು ವರ್ಷ ಆಳ್ವಿಕೆ ಮಾಡಿದನು. ಅಬೀಷಾಲೋಮನ ಮಗಳಾದ ಮಾಕಾ ಎಂಬಾಕೆಯು ಅವನ ತಾಯಿ. 11ಅವನು ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು. 12ಅವನು ವಿಟರನ್ನು ದೇಶದಿಂದ ಹೊರಡಿಸಿ, ತನ್ನ ಹಿರಿಯರು ಮಾಡಿಸಿಟ್ಟ ವಿಗ್ರಹಗಳನ್ನೆಲ್ಲಾ ತೆಗೆದುಹಾಕಿದನು. 13ಅವನ ತಾಯಿಯಾದ ಮಾಕಳೂ ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ ಆಸನು ಆಕೆಯನ್ನು ಗದ್ದುಗೆಯಿಂದ ತಳ್ಳಿ, ಆ ಮೂರ್ತಿಯನ್ನು ಕಡಿದು, ಕಿದ್ರೋನ್ ಹಳ್ಳದ ಹತ್ತಿರ ಸುಟ್ಟು ಹಾಕಿದನು. 14ಅವನು ದೇಶದಲ್ಲಿದ್ದ ಪೂಜಾಸ್ಥಳಗಳನ್ನು ಹಾಳುಮಾಡದಿದ್ದರೂ ತನ್ನ ಜೀವಮಾನದಲ್ಲೆಲ್ಲಾ ಪ್ರಾಮಾಣಿಕವಾದ ಮನಸ್ಸಿನಿಂದ ಸತ್ಯಮಾರ್ಗದಲ್ಲಿ ಯೆಹೋವನಿಗೆ ನಡೆದುಕೊಂಡನು. 15ಇದಲ್ಲದೆ ತನ್ನ ತಂದೆಯೂ ತಾನೂ ಪ್ರತಿಷ್ಠಿಸಿದ ಬೆಳ್ಳಿ ಬಂಗಾರವನ್ನು ಪಾತ್ರೆಗಳನ್ನೂ ಯೆಹೋವನ ಆಲಯದಲ್ಲಿ ತಂದಿಟ್ಟನು.
16ಅವನಿಗೂ ಇಸ್ರಾಯೇಲರ ಅರಸನಾದ ಬಾಷನಿಗೂ ಯಾವಾಗಲೂ ಯುದ್ಧ ನಡೆಯುತ್ತಿತ್ತು 17ಇಸ್ರಾಯೇಲರ ಅರಸನಾದ ಬಾಷನು ಯೆಹೂದ್ಯರಿಗೆ ವಿರುದ್ಧವಾಗಿ ಯುದ್ಧಮಾಡಿ ಯಾರೂ ಯೆಹೂದ್ಯರ ಅರಸನಾದ ಆಸನ ಬಳಿಗೆ ಹೋಗಿ ಬರುವುದಕ್ಕಾಗದಂತೆ ರಾಮ ಎಂಬ ಕೋಟೆಯನ್ನು ಕಟ್ಟಿಸಿದನು. 18ಆಗ ಆಸನು ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿ ಉಳಿದಿದ್ದ ಬೆಳ್ಳಿ ಮತ್ತು ಬಂಗಾರವನ್ನು ತೆಗೆದುಕೊಂಡು, ಅದನ್ನು ದೂತರ ಮುಖಾಂತರವಾಗಿ ದಮಸ್ಕದಲ್ಲಿದ್ದ ಅರಾಮ್ಯರ ಅರಸನೂ, ಹೆಜ್ಯೋನನ ಮೊಮ್ಮಗನೂ, ಟಬ್ರಿಮ್ಮೋನನ ಮಗನೂ ಆದ ಬೆನ್ಹದದನಿಗೆ ಕೊಟ್ಟು ಕಳುಹಿಸಿದನು. 19ಆತನು ಅವನಿಗೆ “ನನಗೂ ನಿನಗೂ, ನನ್ನ ತಂದೆಗೂ ನಿನ್ನ ತಂದೆಗೂ ಒಡಂಬಡಿಕೆಯಾದಂತೆ, ಇಗೋ ನಿನಗೆ ಬೆಳ್ಳಿ ಮತ್ತು ಬಂಗಾರವನ್ನು ಕಾಣಿಕೆಯಾಗಿ ಕಳುಹಿಸಿದ್ದೇನೆ. ಇಸ್ರಾಯೇಲರ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವಂತೆ ಅವನ ಸಂಗಡ ನೀನು ಮಾಡಿಕೊಂಡಿರುವ ಒಡಂಬಡಿಕೆಯನ್ನು ಮುರಿದುಬಿಡು” ಎಂದು ಹೇಳಿದನು. 20ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ ತನ್ನ ಸೈನ್ಯಾಧಿಪತಿಗಳನ್ನು ಯುದ್ಧಕ್ಕಾಗಿ ಇಸ್ರಾಯೇಲರ ಪಟ್ಟಣಗಳಿಗೆ ಕಳುಹಿಸಿದನು. ಇವರು ಇಯ್ಯೋನ್, ದಾನ್, ಆಬೇಲ್ಬೇತ್ಮಾಕಾ, ಕಿನ್ನೆರೋತ್ ಪ್ರದೇಶ, ನಫ್ತಾಲ್ಯರ ಎಲ್ಲಾ ಪ್ರಾಂತ್ಯ ಇವುಗಳನ್ನು ಹಾಳುಮಾಡಿದರು. 21ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆಯನ್ನು ಕಟ್ಟಿಸುವುದನ್ನು ಬಿಟ್ಟು ತಿರ್ಚಕ್ಕೆ ಹೋಗಿ ಅಲ್ಲಿಯೇ ವಾಸಮಾಡಲು ತೊಡಗಿದನು. 22ಅನಂತರ ಅರಸನಾದ ಆಸನು ಯೆಹೂದ್ಯರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ಕರೆಯಿಸಿ, ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲು, ಮರಗಳನ್ನು ಅವರ ಮುಖಾಂತರವಾಗಿ ತೆಗೆದುಕೊಂಡು ಹೋಗಿ ಬೆನ್ಯಾಮೀನ್ಯರ ಗೆಬ, ಮಿಚ್ಪೆ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು. 23ಆಸನ ಉಳಿದ ಚರಿತ್ರೆ, ಅವನ ಎಲ್ಲಾ ಪರಾಕ್ರಮಕೃತ್ಯಗಳು, ಅವನು ಪಟ್ಟಣಗಳನ್ನು ಕಟ್ಟಿಸಿದ ಸಂಗತಿಗಳೂ, ಅವನ ಇತರ ಕಾರ್ಯಗಳು ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. ಮುಪ್ಪಿನಲ್ಲಿ ಅವನ ಕಾಲುಗಳಿಗೆ ರೋಗವುಂಟಾಯಿತು. 24ಅವನು ತನ್ನ ಪೂರ್ವಿಕರ ಬಳಿಗೆ ಸೇರಿದನು. ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು.
ಇಸ್ರಾಯೇಲರ ಅರಸನಾದ ನಾದಾಬನು
25ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ನಾದಾಬನು ಇಸ್ರಾಯೇಲರ ಅರಸನಾಗಿ ಎರಡು ವರ್ಷ ಆಳ್ವಿಕೆ ಮಾಡಿದನು. 26ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ ತನ್ನ ತಂದೆಯ ಮಾರ್ಗದಲ್ಲಿ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. 27ಅವನು ಇಸ್ರಾಯೇಲರೊಡನೆ ಫಿಲಿಷ್ಟಿಯರ ವಶದಲ್ಲಿದ್ದ ಗಿಬ್ಬೆತೋನ್ ಎಂಬ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ಇಸ್ಸಾಕಾರನ ಕುಲದವನೂ, ಅಹೀಯನ ಮಗನೂ ಆದ ಬಾಷನೆಂಬುವವನು ಅವನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಅವನನ್ನು ಕೊಂದನು. 28ಬಾಷನು ಯೆಹೂದ ಅರಸನಾದ ಆಸನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಅವನನ್ನು ಕೊಂದು ಅವನಿಗೆ ಬದಲಾಗಿ ತಾನು ಅರಸನಾದನು. 29ಅರಸನಾದ ಕೂಡಲೆ ಯಾರೊಬ್ಬಾಮನ ಮನೆಯಲ್ಲಿ ಒಬ್ಬನನ್ನೂ ಜೀವದಿಂದುಳಿಸದೆ ಎಲ್ಲರನ್ನೂ ಸಂಹರಿಸಿದನು. ಹೀಗೆ ಯೆಹೋವನು ಶೀಲೋವಿನ ಪ್ರವಾದಿಯಾದ ಅಹೀಯನ ಮುಖಾಂತರವಾಗಿ ಹೇಳಿಸಿದ ಮಾತು ನೆರವೇರಿತು. 30ಯಾರೊಬ್ಬಾಮನು ತಾನು ಪಾಪಮಾಡಿದ್ದಲ್ಲದೆ ಇಸ್ರಾಯೇಲರನ್ನೂ ಪಾಪಕ್ಕೆ ಪ್ರೇರೇಪಿಸಿ, ಇಸ್ರಾಯೇಲ್ ದೇವರಾದ ಯೆಹೋವನಿಗೆ ಕೋಪಬರುವಂತೆ ಮಾಡಿದ್ದರಿಂದ ಹೀಗಾಯಿತು. 31ನಾದಾಬನ ಉಳಿದ ಚರಿತ್ರೆಯೂ ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. 32ಆಸನಿಗೂ ಇಸ್ರಾಯೇಲರ ಅರಸನಾದ ಬಾಷನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು.
ಇಸ್ರಾಯೇಲರ ಅರಸನಾದ ಬಾಷನು
33ಯೆಹೂದದ ಅರಸನಾದ ಆಸನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಅಹೀಯನ ಮಗನಾದ ಬಾಷನು ಇಸ್ರಾಯೇಲರ ಅರಸನಾಗಿ ತಿರ್ಚದಲ್ಲಿದ್ದು, ಇಪ್ಪತ್ತನಾಲ್ಕು ವರ್ಷ ಆಳ್ವಿಕೆ ಮಾಡಿದನು. 34ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ ಯಾರೊಬ್ಬಾಮನ ಮಾರ್ಗದಲ್ಲಿ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
Currently Selected:
1 ಅರಸು 15: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.