YouVersion Logo
Search Icon

ಮಾರ್ಕ 11

11
ಜೆರುಸಲೇಮಿಗೆ ವಿಜಯ ಪ್ರವೇಶ
(ಮತ್ತಾ. 21:1-11; ಲೂಕ. 19:28-40; ಯೊವಾ. 12:12-19)
1ಯೇಸುಸ್ವಾಮಿ ಮತ್ತು ಅವರ ಜೊತೆಯಲ್ಲಿದ್ದವರು ಜೆರುಸಲೇಮನ್ನು ಸಮೀಪಿಸಿದರು. ಓಲಿವ್ ಗುಡ್ಡದ ಬಳಿಯಿರುವ ಬೆತ್ಫಗೆ ಮತ್ತು ಬೆಥಾನಿಯ ಕಡೆಗೆ ಬಂದಾಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು, ಹೀಗೆಂದು ಹೇಳಿಕಳುಹಿಸಿದರು: 2“ನಿಮ್ಮೆದುರಿಗಿರುವ ಆ ಹಳ್ಳಿಗೆ ಹೋಗಿರಿ; ಅದನ್ನು ಸೇರುತ್ತಲೇ, ಕಟ್ಟಿಹಾಕಿರುವ ಹೇಸರಗತ್ತೆಯ ಮರಿಯೊಂದನ್ನು ಕಾಣುವಿರಿ. ಈವರೆಗೆ ಅದರ ಮೇಲೆ ಯಾರೂ ಸವಾರಿಮಾಡಿಲ್ಲ. ಅದನ್ನು ಬಿಚ್ಚಿ ಇಲ್ಲಿಗೆ ತನ್ನಿ. 3ಯಾರಾದರೂ ನಿಮ್ಮನ್ನು ‘ಅದನ್ನೇಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ, ‘ಪ್ರಭುವಿಗೆ ಇದು ಬೇಕಾಗಿದೆ. ಅವರು ಇದನ್ನು ಬೇಗನೆ ಹಿಂದಕ್ಕೆ ಕಳುಹಿಸಿಕೊಡುವರು,’ ಎಂದು ಹೇಳಿ,” ಎಂದರು. 4ಶಿಷ್ಯರು ಹೋಗಿ ಬೀದಿಯಲ್ಲಿದ್ದ ಹೇಸರಗತ್ತೆಯ ಮರಿಯೊಂದನ್ನು ಕಂಡರು. ಬಾಗಿಲಿನ ಬಳಿ ಕಟ್ಟಿಹಾಕಿದ್ದ ಅದನ್ನು ಶಿಷ್ಯರು ಬಿಚ್ಚಿದರು. 5ಅಲ್ಲಿ ನಿಂತಿದ್ದವರಲ್ಲಿ ಕೆಲವರು, ಇದನ್ನು ನೋಡಿ, “ಅದನ್ನೇಕೆ ಬಿಚ್ಚುತ್ತೀರಿ?” ಎಂದು ಕೇಳಿದರು. 6ಯೇಸು ಹೇಳಿದಂತೆಯೇ ಶಿಷ್ಯರು ಉತ್ತರಕೊಡಲು, ಆ ಮರಿಕತ್ತೆಯನ್ನು ತೆಗೆದುಕೊಂಡುಹೋಗಲು ಬಿಟ್ಟುಕೊಟ್ಟರು.
7ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದು, ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಿದರು. ಯೇಸು ಅದನ್ನು ಹತ್ತಿ ಕುಳಿತರು. 8ಅನೇಕರು ತಮ್ಮ ಹೊದಿಕೆಗಳನ್ನು ದಾರಿಯಲ್ಲಿ ಹಾಸಿದರು. ಇನ್ನೂ ಕೆಲವರು ತೋಟಗಳಿಂದ ಮರದ ರೆಂಬೆಗಳನ್ನು ಕಡಿದು, ಎಲೆಗಳನ್ನು ಹರಡಿದರು. 9ಯೇಸುವಿನ ಹಿಂದೆಯೂ ಮುಂದೆಯೂ ಇದ್ದವರು -
“ಜಯವಾಗಲಿ !
ಸರ್ವೇಶ್ವರನ ನಾಮದಲ್ಲಿ ಬರುವವರಿಗೆ
ಮಂಗಳವಾಗಲಿ !
10ನಮ್ಮ ಪೂರ್ವಜ ದಾವೀದನ ಸಾಮ್ರಾಜ್ಯ
ಉದಯವಾಗಲಿದೆ;
ಅದಕ್ಕೆ ಶುಭವಾಗಲಿ !
ಮಹೋನ್ನತದಲ್ಲಿ ದೇವರಿಗೆ ಜಯವಾಗಲಿ !”
ಎಂದು ಘೋಷಿಸುತ್ತಿದ್ದರು. 11ಯೇಸು ಜೆರುಸಲೇಮನ್ನು ಸೇರಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ನಡೆಯುತ್ತಿದ್ದ ಎಲ್ಲವನ್ನೂ ನೋಡುವಷ್ಟರಲ್ಲಿ ಕತ್ತಲಾಗುತ್ತಾ ಬಂದಿತು; ಆದುದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು, ಅವರು ಬೆಥಾನಿಯಕ್ಕೆ ಹೊರಟುಹೋದರು.
ಫಲರಹಿತ ಬಾಳಿಗೊಂದು ದೃಷ್ಟಾಂತ
(ಮತ್ತಾ. 21:18-19)
12ಮರುದಿನ ಅವರೆಲ್ಲರೂ ಬೆಥಾನಿಯದಿಂದ ಜೆರುಸಲೇಮಿಗೆ ಬರುತ್ತಿದ್ದಾಗ ಯೇಸುಸ್ವಾಮಿಗೆ ಹಸಿವಾಯಿತು. 13ದೂರದಲ್ಲಿ ಎಲೆ ತುಂಬಿದ ಅಂಜೂರದ ಮರವೊಂದು ಕಣ್ಣಿಗೆ ಬಿದ್ದಿತು. ಅದರಲ್ಲಿ ಹಣ್ಣೇನಾದರೂ ಸಿಕ್ಕೀತೆಂದು ಅಲ್ಲಿಗೆ ಹೋದರು. ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳೇ ಹೊರತು ಇನ್ನೇನೂ ಕಾಣಲಿಲ್ಲ. ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ. 14ಯೇಸು ಆ ಮರಕ್ಕೆ, “ಇನ್ನು ಮುಂದೆ ನಿನ್ನ ಹಣ್ಣನ್ನು ಯಾರೂ ಎಂದಿಗೂ ತಿನ್ನದಂತಾಗಲಿ,” ಎಂದರು. ಶಿಷ್ಯರು ಈ ಮಾತುಗಳನ್ನು ಕೇಳಿಸಿಕೊಂಡರು.
ಕರ್ತರ ಗುಡಿ ವರ್ತಕರ ಗುಹೆಯಾಗದಿರಲಿ
(ಮತ್ತಾ. 21:12-17; ಲೂಕ. 19:45-48; ಯೊವಾ. 2:13-22)
15ತರುವಾಯ ಅವರು ಜೆರುಸಲೇಮಿಗೆ ಬಂದರು. ಯೇಸುಸ್ವಾಮಿ ಮಹಾದೇವಾಲಯಕ್ಕೆ ಹೋಗಿ, ಅಲ್ಲಿ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟತೊಡಗಿದರು; ನಾಣ್ಯ ವಿನಿಮಯಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿದರು; ಪಾರಿವಾಳಗಳನ್ನು ಮಾರುತ್ತಿದ್ದವರ ಮಣೆಗಳನ್ನು ಉರುಳಿಸಿದರು. 16ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದುಹೋಗುವವರನ್ನು ತಡೆದರು. 17“ ‘ಸರ್ವಜನಾಂಗಗಳಿಗೂ ಪ್ರಾರ್ಥನಾಲಯ ನನ್ನೀ ಆಲಯ’ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ ಅಲ್ಲವೇ? ನೀವು ಅದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾಡಿದ್ದೀರಿ,” ಎಂದು ಯೇಸು ಅವರಿಗೆ ಬುದ್ಧಿಹೇಳಿದರು. 18ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ನಡೆದ ಈ ಸಂಗತಿಯನ್ನು ಕೇಳಿ ಯೇಸುವನ್ನು ಕೊಲ್ಲಿಸುವ ಮಾರ್ಗವನ್ನು ಹುಡುಕತೊಡಗಿದರು. ಏಕೆಂದರೆ, ಯೇಸುವನ್ನು ಕಂಡರೆ ಅವರಿಗೆ ಭಯವಿತ್ತು. ಕಾರಣ - ಜನರೆಲ್ಲರೂ ಅವರ ಬೋಧನೆಗೆ ಮಾರುಹೋಗಿದ್ದರು. 19ಸೂರ್ಯಾಸ್ತಮದ ಬಳಿಕ ಯೇಸು ಮತ್ತು ಶಿಷ್ಯರು ಪಟ್ಟಣದಿಂದ ಹೊರಗೆಹೋದರು.
ವಿಶ್ವಾಸಭರಿತ ಪ್ರಾರ್ಥನೆ
(ಮತ್ತಾ. 21:20-22)
20ಬೆಳಿಗ್ಗೆ ಅವರೆಲ್ಲರೂ ಅದೇ ಮಾರ್ಗವಾಗಿ ಹಿಂದಿರುಗುವಾಗ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು. 21ಪೇತ್ರನು ಹಿಂದಿನ ದಿನ ನಡೆದುದನ್ನು ಸ್ಮರಿಸಿಕೊಂಡು, ಯೇಸುಸ್ವಾಮಿಗೆ, “ಗುರುವೇ, ತಾವು ಶಪಿಸಿದ ಆ ಅಂಜೂರದ ಮರ ಈಗ ಒಣಗಿಹೋಗಿದೆ,” ಎಂದನು. 22ಅದಕ್ಕೆ ಯೇಸು, “ನಿಮಗೆ ದೇವರಲ್ಲಿ ವಿಶ್ವಾಸವಿರಲಿ, 23ಆಗ ಯಾವನಾದರೂ ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ, ಮನಸ್ಸಿನಲ್ಲಿ ಸಂದೇಹಪಡದೆ, ಅದು ಸಂಭವಿಸುವುದೆಂದು ವಿಶ್ವಾಸಿಸಿದರೆ, ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಅವನು ಹೇಳಿದಂತೆಯೇ ಆಗುವುದು. 24ಆದುದರಿಂದ ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ, ಅದನ್ನೆಲ್ಲಾ ಪಡೆದಾಯಿತೆಂದು ವಿಶ್ವಾಸಿಸಿರಿ; ಅದು ಲಭಿಸುವುದು ನಿಶ್ಚಯವೆಂದು ನಿಮಗೆ ಹೇಳುತ್ತೇನೆ. 25ಇದಲ್ಲದೆ, ನೀವು ಪ್ರಾರ್ಥನೆ ಮಾಡುವಾಗಲೆಲ್ಲ, ಯಾರಿಗಾದರೂ ವಿರೋಧವಾಗಿ ನಿಮ್ಮ ಮನಸ್ಸಿನಲ್ಲಿ ಏನಾದರೂ ಇದ್ದರೆ, ಅದನ್ನು ಕ್ಷಮಿಸಿಬಿಡಿ, 26ಆಗ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸಿಬಿಡುವರು."#11:26 ಆದರೆ ನೀವು ಕ್ಷಮಿಸದೆಹೋದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸರು” ಎಂದರು. ಈ ವಚನ ಕೆಲವು ಪ್ರತಿಗಳಲ್ಲಿ ಮಾತ್ರ ಇದೆ.
ಯೇಸುವಿಗೆ ಈ ಅಧಿಕಾರ ಎಲ್ಲಿಂದ?
(ಮತ್ತಾ. 21:23-27; ಲೂಕ. 20:1-8)
27ಯೇಸು ಮತ್ತು ಶಿಷ್ಯರು ಪುನಃ ಜೆರುಸಲೇಮಿಗೆ ಬಂದರು. ಯೇಸು ದೇವಾಲಯದ ಆವರಣದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅವರ ಬಳಿಗೆ ಬಂದು, 28“ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು?” ಎಂದು ಕೇಳಿದರು. 29ಅದಕ್ಕೆ ಯೇಸು, “ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ; ಅದಕ್ಕೆ ಉತ್ತರಕೊಡಿ. ಆಗ ಯಾವ ಅಧಿಕಾರದಿಂದ ನಾನು ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. 30ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ? ಉತ್ತರಕೊಡಿ,” ಎಂದರು. ಇದನ್ನು ಕೇಳಿದ ಅವರು ತಮ್ಮ ತಮ್ಮೊಳಗೇ ತರ್ಕಮಾಡುತ್ತಾ, 31“ದೇವರಿಂದ ಬಂದಿತೆಂದು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವನು. 32‘ಮನುಷ್ಯರಿಂದ ಬಂದಿತು’ ಎಂದು ಹೇಳೋಣ ಎಂದರೆ ಅದೂ ಆಗದು,” ಎಂದುಕೊಂಡರು. ಯೊವಾನ್ನನು ನಿಜವಾದ ಪ್ರವಾದಿಯೆಂದು ಸರ್ವರು ನಂಬಿದ್ದರಿಂದ ಅವರಿಗೆ ಜನರ ಭಯವಿತ್ತು. 33ಆದುದರಿಂದ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, “ಹಾಗಾದರೆ ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.

Currently Selected:

ಮಾರ್ಕ 11: KANCLBSI

Highlight

Share

Copy

None

Want to have your highlights saved across all your devices? Sign up or sign in