YouVersion Logo
Search Icon

ಮಾರ್ಕ 10

10
ವಿವಾಹ ವಿಚ್ಛೇದನ ನಿಷಿದ್ಧ
(ಮತ್ತಾ. 19:1-12; ಲೂಕ. 16:18)
1ಅಲ್ಲಿಂದ ಯೇಸುಸ್ವಾಮಿ ಜೋರ್ಡನ್ ನದಿಯ ಆಚೆಕಡೆಯಿದ್ದ ಜುದೇಯ ಪ್ರಾಂತ್ಯಕ್ಕೆ ಬಂದರು. ಅಲ್ಲಿಯೂ ಜನರು ಗುಂಪುಗುಂಪಾಗಿ ಅವರ ಬಳಿಗೆ ಬಂದರು. ಯೇಸು ಅವರಿಗೂ ಉಪದೇಶಮಾಡಿದರು. 2ಫರಿಸಾಯರಲ್ಲಿ ಕೆಲವರು, ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೇ?” ಎಂದು ಕೇಳಿದರು. 3ಯೇಸು, “ಈ ವಿಷಯವಾಗಿ ಮೋಶೆ ನಿಮಗೆ ಏನೆಂದು ವಿಧಿಸಿದ್ದಾನೆ?” ಎಂದು ಅವರನ್ನೇ ಪುನಃ ಪ್ರಶ್ನಿಸಿದರು. 4ಅದಕ್ಕೆ ಅವರು, “ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಲು ಮೋಶೆ ಅನುಮತಿ ಇತ್ತಿದ್ದಾನೆ,” ಎಂದರು.
5ಆಗ ಯೇಸು, “ನಿಮ್ಮ ಹೃದಯ ಕಲ್ಲಾಗಿ ಇದ್ದುದರಿಂದಲೇ ಮೋಶೆ ಈ ನಿಯಮವನ್ನು ಬರೆದಿಟ್ಟನು. 6ಆದರೆ ಸೃಷ್ಟಿಯ ಆರಂಭದಿಂದಲೇ ‘ದೇವರು ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದ್ದಾರೆ. 7ಈ ಕಾರಣದಿಂದ ಗಂಡನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎನ್ನುತ್ತದೆ ಪವಿತ್ರಗ್ರಂಥ. 8ಹೀಗಿರುವಲ್ಲಿ ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರ. 9ಆದುದರಿಂದ ದೇವರು ಒಂದುಗೂಡಿಸಿದ್ದನ್ನು ಮನುಷ್ಯರು ಬೇರ್ಪಡಿಸದಿರಲಿ,” ಎಂದರು.
10ಅಂದು, ಮನೆಗೆ ಹೋದ ಬಳಿಕ ಶಿಷ್ಯರು, ಅದೇ ವಿಷಯವಾಗಿ ಯೇಸುವನ್ನು ವಿಚಾರಿಸಿದರು. 11ಅದಕ್ಕೆ ಅವರು, “ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹಬಗೆದು ವ್ಯಭಿಚಾರಿಯಾಗುತ್ತಾನೆ. 12ಅಂತೆಯೇ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿಣಿಯಾಗುತ್ತಾಳೆ,” ಎಂದರು.
ದೇವರ ಸಾಮ್ರಾಜ್ಯದ ಪುಟಾಣಿ ಪ್ರಜೆಗಳು
(ಮತ್ತಾ. 19:13-15; ಲೂಕ. 18:15-17)
13ಕೆಲವರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುಸ್ವಾಮಿಯ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಗದರಿಸಿದರು. 14ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ. 15ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು. ಇದು ನಿಶ್ಚಯ,” ಎಂದರು. 16ಅನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಗಳನ್ನಿರಿಸಿ ಹರಸಿದರು.
ಸಿರಿವಂತರಿಗೆ ಸವಾಲು
(ಮತ್ತಾ. 19:16-30; ಲೂಕ. 18:18-30)
17ಅಲ್ಲಿಂದ ಯೇಸುಸ್ವಾಮಿ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ಒಬ್ಬನು ಅವರ ಬಳಿಗೆ ಓಡಿಬಂದು ಮೊಣಕಾಲೂರಿ, “ಒಳ್ಳೆಯ ಗುರುವೇ, ಅಮರಜೀವವು ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?” ಎಂದು ಕೇಳಿದನು. 18“ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ. ದೈವಾಜ್ಞೆಗಳು ನಿನಗೆ ತಿಳಿದೇ ಇವೆ: 19ನರಹತ್ಯೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ಮೋಸಮಾಡಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು,” ಎಂದು ಯೇಸು ಉತ್ತರವಿತ್ತರು. 20ಅದಕ್ಕೆ ಅವನು, “ಗುರುದೇವಾ, ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ,” ಎಂದು ಹೇಳಿದನು. 21ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, “ನೀನು ಮಾಡಬೇಕಾದ ಕಾರ್ಯವೊಂದು ಬಾಕಿಯಿದೆ. ಹೋಗು, ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು. 22ಯೇಸುವಿನ ಈ ಮಾತನ್ನು ಕೇಳುತ್ತಲೇ ಅವನ ಮುಖ ಪೆಚ್ಚಾಯಿತು. ಅವನು ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟುಹೋದನು. ಏಕೆಂದರೆ ಅವನಿಗೆ ಅಪಾರ ಆಸ್ತಿಯಿತ್ತು.
23ಆಗ ಯೇಸುಸ್ವಾಮಿ ಸುತ್ತಲೂ ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು ಎಷ್ಟೊಂದು ಕಷ್ಟ!” ಎಂದರು. 24ಅವರ ಈ ಮಾತನ್ನು ಕೇಳಿದ ಶಿಷ್ಯರು ಬೆರಗಾದರು. ಯೇಸು ಪುನಃ ಅವರಿಗೆ, “ಮಕ್ಕಳೇ, ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟು ಕಷ್ಟ! 25ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಸೇರುವುದಕ್ಕಿಂತಲೂ ಒಂಟೆಯು ಸೂಜಿಗಣ್ಣಲ್ಲಿ ನುಸುಳುವುದು ಸುಲಭ,” ಎಂದರು. 26ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಿಮಿತ ಆಶ್ಚರ್ಯ ಆಯಿತು. “ಹಾಗಾದರೆ ಯಾರು ತಾನೆ ಜೀವೋದ್ಧಾರ ಹೊಂದಲು ಸಾಧ್ಯ?” ಎಂದು ತಮ್ಮ ತಮ್ಮೊಳಗೇ ಮಾತನಾಡಿಕೊಂಡರು. 27ಯೇಸು ಅವರನ್ನು ನಿಟ್ಟಿಸಿ ನೋಡಿ, “ಮನುಷ್ಯರಿಗೆ ಇದು ಅಸಾಧ್ಯ, ದೇವರಿಗಲ್ಲ. ದೇವರಿಗೆ ಎಲ್ಲವೂ ಸಾಧ್ಯ,” ಎಂದರು.
28ಆಗ ಪೇತ್ರನು ಮುಂದೆ ಬಂದು, “ನೋಡಿ, ನಾವು ಎಲ್ಲವನ್ನೂ ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು. 29ಆಗ ಯೇಸು, “ನಾನು ನಿಶ್ಚಯವಾಗಿ ಹೇಳುತ್ತೇನೆ: ಯಾರಾದರೂ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ಮನೆಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುತ್ತಾನೋ ಅವನು, 30ಈ ಕಾಲದಲ್ಲೇ ಮನೆ, ಅಣ್ಣತಮ್ಮ, ಅಕ್ಕತಂಗಿ, ತಾಯಿ, ಮಕ್ಕಳು, ಹೊಲಗದ್ದೆ ಇವೆಲ್ಲವನ್ನೂ ನೂರ್ಮಡಿಯಷ್ಟು ಪಡೆಯುವನು. ಇವುಗಳೊಂದಿಗೆ ಹಿಂಸೆಯನ್ನೂ ಅನುಭವಿಸಬೇಕಾಗುವುದು; ಅದಲ್ಲದೆ ಮುಂದಿನ ಲೋಕದಲ್ಲಿ ಅಮರಜೀವವನ್ನು ಪಡೆಯುವನು.
31“ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು,” ಎಂದರು.
ಯೇಸುವಿನ ಮರಣ - ಪುನರುತ್ಥಾನದ ಮೂರನೆಯ ಪ್ರಕಟಣೆ
(ಮತ್ತಾ. 20:17-19; ಲೂಕ. 18:31-34)
32ಜೆರುಸಲೇಮಿಗೆ ಪ್ರಯಾಣಮಾಡುತ್ತ ಇದ್ದಾಗ ಯೇಸುಸ್ವಾಮಿ ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದರು. ಅದನ್ನು ನೋಡಿ ಶಿಷ್ಯರು ಆಶ್ಚರ್ಯಪಟ್ಟರು. ಅವರ ಹಿಂದೆ ಬರುತ್ತಿದ್ದವರು ದಿಗಿಲುಗೊಂಡರು. ಆಗ ಯೇಸು ಹನ್ನೆರಡುಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ತಮಗೆ ಸಂಭವಿಸಲಿರುವ ವಿಷಯಗಳನ್ನು ಮತ್ತೊಮ್ಮೆ ಅವರಿಗೆ ಹೇಳತೊಡಗಿದರು: 33“ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ, ಪರಕೀಯರ ಕೈಗೊಪ್ಪಿಸುವರು. 34ಇವರು ಆತನನ್ನು ಪರಿಹಾಸ್ಯಮಾಡುವರು; ಆತನ ಮೇಲೆ ಉಗುಳುವರು; ಕೊರಡೆಗಳಿಂದ ಹೊಡೆಯುವರು; ಅನಂತರ ಕೊಂದುಹಾಕುವರು. ಆತನಾದರೋ ಮೂರು ದಿನದ ಮೇಲೆ ಪುನರುತ್ಥಾನ ಹೊಂದುವನು,” ಎಂದರು.
ನಮ್ರಸೇವೆ ಪರಮಶ್ರೇಷ್ಠ
(ಮತ್ತಾ. 20:20-28)
35ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, “ಗುರುವೇ, ನಮ್ಮದೊಂದು ಬಿನ್ನಹವಿದೆ. ಅದನ್ನು ನಡೆಸಿಕೊಡಬೇಕು,” ಎಂದು ವಿಜ್ಞಾಪಿಸಿಕೊಂಡರು. 36“ನನ್ನಿಂದ ನಿಮಗೇನಾಗಬೇಕು?” ಎಂದು ಯೇಸು ಕೇಳಿದರು. 37“ತಮ್ಮ ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ ಆಸೀನರಾಗುವಂತೆ ಅನುಗ್ರಹಿಸಬೇಕು,” ಎಂದು ತಮ್ಮ ಬಯಕೆಯನ್ನು ತೋಡಿಕೊಂಡರು. 38ಅದಕ್ಕೆ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ನಾನವನ್ನು ಪಡೆಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು ಆಗುತ್ತದೆ,” ಎಂದು ಅವರು ಮರು ನುಡಿದರು. 39ಆಗ ಯೇಸು, “ನಾನು ಕುಡಿಯುವ ಪಾತ್ರೆಯಿಂದ ನೀವೂ ಕುಡಿಯುವಿರಿ; ನಾನು ಪಡೆಯಲಿರುವ ಸ್ನಾನವನ್ನು ನೀವೂ ಪಡೆಯುವಿರಿ. 40ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು,” ಎಂದು ನುಡಿದರು.
41ಉಳಿದ ಹತ್ತುಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ ಯೊವಾನ್ನರ ಮೇಲೆ ಸಿಟ್ಟುಗೊಂಡರು. 42ಆಗ ಯೇಸು ಶಿಷ್ಯರೆಲ್ಲರನ್ನು ತನ್ನ ಬಳಿಗೆ ಕರೆದು, “ಪ್ರಜಾಧಿಪತಿಗಳು ಎನಿಸಿಕೊಳ್ಳುವವರು ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ; ಇದು ನಿಮಗೆ ಗೊತ್ತು. 43ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ;; 44ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ. 45ನರಪುತ್ರನು ಸಹ ಸೇವೆಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು ಬೋಧಿಸಿದರು.
ಕರುಣಾಕರ ಯೇಸು
(ಮತ್ತಾ. 20:29-34; ಲೂಕ. 18:35-43)
46ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಜೆರಿಕೊ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡಗುಂಪು ಅವರನ್ನು ಹಿಂಬಾಲಿಸಿತು. 47ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್‍ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ, ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು. 48ಅನೇಕರು ‘ಸುಮ್ಮನಿರು’ ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಇನ್ನಷ್ಟು ಗಟ್ಟಿಯಾಗಿ ಕೂಗಿಕೊಂಡನು. 49ಇದನ್ನು ಕೇಳಿ ಯೇಸು ಅಲ್ಲೇ ನಿಂತು, “ಅವನನ್ನು ಕರೆದುಕೊಂಡು ಬನ್ನಿ,” ಎಂದು ಅಪ್ಪಣೆಮಾಡಿದರು. ಅವರು ಹೋಗಿ, “ಏಳು, ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದ್ದಾರೆ,” ಎಂದು ಹೇಳಿದರು. 50ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೇ ಬಿಟ್ಟು ತಟ್ಟನೆ ಎದ್ದು, ಯೇಸುವಿನ ಬಳಿಗೆ ಬಂದನು. 51ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಕೇಳಿದರು. ಅದಕ್ಕೆ ಅವನು, “ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು. 52ಯೇಸು ಅವನಿಗೆ, “ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ಪಸ್ಥಮಾಡಿದೆ,” ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆಹೋದನು.

Currently Selected:

ಮಾರ್ಕ 10: KANCLBSI

Highlight

Share

Copy

None

Want to have your highlights saved across all your devices? Sign up or sign in