ಯೆರೆಮೀಯ 38
38
ನೀರಿಲ್ಲದ ಬಾವಿಯಲ್ಲಿ ಯೆರೆಮೀಯನು
1ಯೆರೆಮೀಯನು ಜನರೆಲ್ಲರಿಗೆ, “ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: ನಗರದಲ್ಲಿ ನಿಲ್ಲುವವನು ಖಡ್ಗ-ಕ್ಷಾಮ-ವ್ಯಾಧಿಗಳಿಂದ ಸಾಯುವನು. ನಗರವನ್ನು ಬಿಟ್ಟುಹೋಗಿ ಬಾಬಿಲೋನಿಯರನ್ನು ಮರೆಹೋಗುವವನು ಬದುಕುವನು. ತನ್ನ ಪ್ರಾಣವೊಂದನ್ನಾದರೂ ಬಾಚಿಕೊಂಡು ಹೋಗಿ ಬದುಕುವನು. 2ಬಾಬಿಲೋನಿನ ಅರಸನು ಈ ನಗರವನ್ನು ಆಕ್ರಮಿಸುವನು. ಇದು ಅವನ ವಶವಾಗುವುದು ನಿಶ್ಚಯ” ಎಂದು ಸಾರುತ್ತಿದ್ದನು. 3ಮತ್ತಾನನ ಮಗ ಶೆಫತ್ಯ, ಪಷ್ಹೂರನ ಮಗ ಗೆದಲ್ಯ, ಸೆಲೆಮ್ಯನ ಮಗ ಯೂಕಲ, ಹಾಗೂ ಮಲ್ಕೀಯನ ಮಗ ಪಷ್ಹೂರ ಇವರು ಮೇಲೆ ಹೇಳಿದ ಮಾತುಗಳನ್ನು ಕೇಳಿದರು.
4ಈ ಪದಾಧಿಕಾರಿಗಳು ಅರಸನ ಬಳಿಗೆ ಬಂದು, “ಒಡೆಯಾ, ಈ ಯೆರೆಮೀಯನಿಗೆ ಮರಣದಂಡನೆಯಾಗಬೇಕು. ಇವನು ನಗರದಲ್ಲಿರುವ ಸೈನಿಕರಿಗೂ ಜನರೆಲ್ಲರಿಗೂ ಇಂಥ ಭವಿಷ್ಯವನ್ನು ನುಡಿಯುತ್ತಾ ಅವರು ಎದೆಗುಂದುವಂತೆ ಮಾಡುತ್ತಿದ್ದಾನೆ. ಅವನು ಹಾರೈಸುವುದು ಜನರ ಕ್ಷೇಮವನ್ನಲ್ಲ ಹಾನಿಯನ್ನೇ,” ಎಂದು ದೂರಿತ್ತರು.
5ಅದಕ್ಕೆ ಅರಸ ಚಿದ್ಕೀಯನು, “ಇಗೋ, ಯೆರೆಮೀಯನು ನಿಮ್ಮ ಕೈಯಲ್ಲಿದ್ದಾನೆ. ಅರಸನು ನಿಮಗೆ ಅಡ್ಡಬಂದು ಏನೂ ಮಾಡಬಲ್ಲವನಲ್ಲ,” ಎಂದನು. 6ಅವರು ಯೆರೆಮೀಯನನ್ನು ಹಿಡಿದು ಕಾರಾಗೃಹದ ಅಂಗಳದಲ್ಲಿದ್ದ ರಾಜವಂಶೀಯನಾದ ಮಲ್ಕೀಯನ ಬಾವಿಯೊಳಗೆ ಹಗ್ಗಗಳಿಂದ ಇಳಿಸಿ ಅಲ್ಲೇ ಬಿಟ್ಟುಬಿಟ್ಟರು. ಆ ಬಾವಿಯಲ್ಲಿ ನೀರಿರಲಿಲ್ಲ, ಕೆಸರಿತ್ತು. ಯೆರೆಮೀಯನು ಅದರೊಳಗೆ ಹೂತುಕೊಂಡನು.
7ಅರಮನೆಯ ಕಂಚುಕಿಯಾದ ಎಬೆದ್ಮೆಲೆಕನೆಂಬ ಸುಡಾನಿನವನು ಯೆರೆಮೀಯನನ್ನು ಬಾವಿಯಲ್ಲಿ ಹಾಕಿದ್ದಾರೆಂದು ತಿಳಿದುಕೊಂಡನು. 8ಅವನು ಅರಮನೆಯಿಂದ ಹೊರಟು, ಬೆನ್ಯಾಮೀನಿನ ಬಾಗಿಲಿನಲ್ಲಿ ಕುಳಿತುಕೊಂಡಿದ್ದ ಅರಸನ ಬಳಿಗೆ ಬಂದು, 9“ನನ್ನೊಡೆಯಾ, ಅರಸರೇ, ಈ ಜನರು ಪ್ರವಾದಿ ಯೆರೆಮೀಯನಿಗೆ ಮಾಡಿರುವುದೆಲ್ಲ ದುಷ್ಟಕಾರ್ಯವೇ ಸರಿ. ಅವನನ್ನು ಬಾವಿಯಲ್ಲಿ ಹಾಕಿದ್ದಾರೆ. ಆಹಾರವಿಲ್ಲದೆ ಅವನು ಬಿದ್ದಲ್ಲೇ ಸಾಯುವುದು ಖಚಿತ. ಏಕೆಂದರೆ ನಗರದಲ್ಲಿ ರೊಟ್ಟಿಯೆಲ್ಲಾ ತೀರಿಹೋಗಿದೆ,” ಎಂದು ಅರಿಕೆಮಾಡಿದನು. 10ಇದನ್ನು ಕೇಳಿದ ಅರಸನು ಸುಡಾನಿನ ಎಬೆದ್ಮೆಲೆಕನಿಗೆ, “ನೀನು ಇಲ್ಲಿಂದ ಮೂವತ್ತು ಮಂದಿ ಆಳುಗಳನ್ನು ಕರೆದುಕೊಂಡು ಹೋಗಿ ಪ್ರವಾದಿ ಯೆರೆಮೀಯನು ಸಾಯುವ ಮೊದಲೇ, ಅವನನ್ನು ಬಾವಿಯಿಂದ ಎತ್ತಿಸು,” ಎಂದು ಅಪ್ಪಣೆಕೊಟ್ಟನು. 11ಕೂಡಲೇ ಸುಡಾನಿನ ಎಬೆದ್ಮೆಲೆಕನು ಆಳುಗಳನ್ನು ಕರೆದುಕೊಂಡು ಹೋಗಿ, ಅರಮನೆಯನ್ನು ಹೊಕ್ಕು, ಖಜಾನೆಯ ಕೆಳಗಣ ಕೋಣೆಯಿಂದ ಹಳೆಯ ಹರಕು ಚಿಂದಿಪಂದಿಗಳನ್ನು ತೆಗೆದುಕೊಂಡು, ಹಗ್ಗಕ್ಕೆ ಕಟ್ಟಿ ಬಾವಿಯೊಳಗಿದ್ದ ಯೆರೆಮೀಯನಿಗೆ ಮುಟ್ಟಿಸಿದನು. 12“ಹಳೆಯ ಈ ಹರಕು ಚಿಂದಿಗಳನ್ನು ಹಗ್ಗಕ್ಕೆ ಸುತ್ತಿ ಕಂಕುಳಲ್ಲಿ ಇಟ್ಟುಕೋ” ಎನ್ನಲು ಯೆರೆಮೀಯನು ಅದರಂತೆಯೇ ಮಾಡಿದನು. 13ಈ ಪ್ರಕಾರ ಯೆರೆಮೀಯನನ್ನು ಹಗ್ಗಗಳ ಮೂಲಕ ಸೇದಿಕೊಂಡು ಬಾವಿಯಿಂದ ಮೇಲಕ್ಕೆ ಎತ್ತಿದರು. ಬಳಿಕ ಯೆರೆಮೀಯನು ಹಿಂದಿನಂತೆ ಕಾರಾಗೃಹದ ಅಂಗಳದಲ್ಲಿ ವಾಸಿಸುತ್ತಿದ್ದನು.
ಯೆರೆಮೀಯ ಮತ್ತು ಚಿದ್ಕೀಯನ ನಡುವೆ ಕೊನೆಯ ಸಂವಾದ
14ಅರಸ ಚಿದ್ಕೀಯನು ಪ್ರವಾದಿ ಯೆರೆಮೀಯನನ್ನು ಸರ್ವೇಶ್ವರನ ಆಲಯದ ಮೂರನೆಯ ಬಾಗಿಲ ಬಳಿಗೆ ಕರೆತರಿಸಿ, “ನಾನು ನಿನ್ನಲ್ಲಿ ಒಂದು ವಿಷಯವನ್ನು ಕೇಳುತ್ತೇನೆ, ನನಗೆ ಏನನ್ನೂ ಮರೆಮಾಡಬೇಡ,” ಎಂದನು.
15ಯೆರೆಮೀಯನು ಚಿದ್ಕೀಯನಿಗೆ, “ನಾನು ತಮಗೆ ಇದ್ದದ್ದನ್ನು ಇದ್ದಹಾಗೆ ಹೇಳಿದರೆ ತಾವು ನನ್ನನ್ನು ಕೊಂದುಹಾಕುವುದು ನಿಶ್ಚಯವಲ್ಲವೆ? ನಾನು ತಮಗೆ ಬುದ್ಧಿವಾದ ಹೇಳಿದರೆ ತಾವು ಕೇಳುವುದಿಲ್ಲ,” ಎಂದು ಉತ್ತರಕೊಟ್ಟನು.
16ಅದಕ್ಕೆ ಅರಸ ಚಿದ್ಕೀಯನು, “ನಮಗೆ ಈ ಪ್ರಾಣವನ್ನು ದಯಪಾಲಿಸಿದ ಸರ್ವೇಶ್ವರನ ಜೀವದಾಣೆ, ನಾನು ನಿನ್ನನ್ನು ಕೊಂದುಹಾಕುವುದಿಲ್ಲ. ನಿನ್ನ ಪ್ರಾಣವನ್ನು ಹುಡುಕುವ ಈ ಜನರ ಕೈಗೂ ನಿನ್ನನ್ನು ಸಿಕ್ಕಿಸುವುದಿಲ್ಲ,” ಎಂದು ಗುಟ್ಟಾಗಿ ಪ್ರಮಾಣಮಾಡಿ ಹೇಳಿದನು.
17ಆಗ ಯೆರೆಮೀಯನು, “ಸೇನಾಧೀಶ್ವರ ಸರ್ವೇಶ್ವರನೂ ಇಸ್ರಯೇಲರ ದೇವರೂ ಆದ ಸ್ವಾಮಿ ಹೀಗೆನ್ನುತ್ತಾರೆ: ತಾವು ಬಾಬಿಲೋನಿಯದ ಅರಸನ ಪದಾಧಿಕಾರಿಗಳ ಮೊರೆಹೊಕ್ಕರೆ ತಮ್ಮ ಪ್ರಾಣ ಉಳಿಯುವುದು. ಈ ನಗರ ಬೆಂಕಿ ಇಂದ ಸುಟ್ಟುಹೋಗದು, ತಾವೂ ತಮ್ಮ ಮನೆಯವರೂ ಮನೆತನದವರೂ ಬದುಕುವಿರಿ. 18ತಾವು ಬಾಬಿಲೋನಿಯದ ಅರಸನ ಪದಾಧಿಕಾರಿಗಳಿಗೆ ಮೊರೆಹೋಗದಿದ್ದರೆ ಈ ನಗರವು ಬಾಬಿಲೋನಿನವರ ಕೈವಶವಾಗುವುದು. ಅವರು ಇದನ್ನು ಬೆಂಕಿ ಇಂದ ಸುಟ್ಟುಬಿಡುವರು. ತಾವು ಅವರ ಕೈಯಿಂದ ತಪ್ಪಿಸಿಕೊಳ್ಳಲಾರಿರಿ,” ಎಂದು ಹೇಳಿದನು.
19ಇದನ್ನು ಕೇಳಿದ ಅರಸ ಚಿದ್ಕೀಯನು ಯೆರೆಮೀಯನಿಗೆ, “ಬಾಬಿಲೋನಿಯದವರು ತಮ್ಮನ್ನು ಮರೆಹೊಕ್ಕಿರುವ ಯೆಹೂದ್ಯರಿಗೆ ನನ್ನನ್ನು ಒಪ್ಪಿಸಬಹುದು. ಅವರು ನನ್ನನ್ನು ಹಿಂಸಿಸಬಹುದು ಎಂಬ ಸಂಶಯ ನನಗಿದೆ,” ಎಂದು ಉತ್ತರಕೊಟ್ಟನು.
20ಇದನ್ನು ಕೇಳಿದ ಯೆರೆಮೀಯನು, “ಇಲ್ಲ, ತಮ್ಮನ್ನು ಅವರ ಕೈಗೆ ಒಪ್ಪಿಸುವುದಿಲ್ಲ. ದಯವಿಟ್ಟು ನಾನು ತಮಗೆ ಹೇಳಿರುವ ಸರ್ವೇಶ್ವರನ ವಾಕ್ಯದಂತೆ ನಡೆದುಕೊಳ್ಳಿ. ನಡೆದುಕೊಂಡರೆ ತಮ್ಮ ಪ್ರಾಣ ಉಳಿಯುವುದು, ಒಳ್ಳೆಯದಾಗುವುದು. 21ತಾವು ಶತ್ರುವನ್ನು ಮರೆಹೋಗೆನು ಎನ್ನುವುದಾದರೆ ಸರ್ವೇಶ್ವರ ತಮ್ಮ ಮುಂದಿನ ಗತಿಯನ್ನು ನನಗೆ ಹೀಗೆ ತೋರ್ಪಡಿಸಿದ್ದಾರೆ. 22ಜುದೇಯದ ಅರಸನ ಮನೆಯಲ್ಲಿ ಉಳಿದಿರುವ ಎಲ್ಲ ಮಹಿಳೆಯರನ್ನು ಬಾಬಿಲೋನಿಯದ ಅರಸನ ದಳಪತಿಗಳ ಬಳಿಗೆ ತರಲಾಗುವುದು. ಆ ಮಹಿಳೆಯರೇ:
‘ಆಪ್ತ ಮಿತ್ರರು ನಿನ್ನನ್ನು ವಂಚಿಸಿ
ಒಳಪಡಿಸಿಕೊಂಡರು;
ನಿನ್ನ ಕಾಲುಗಳು ಬದಿಯಲ್ಲಿ
ಹೂತಿರುವುದನ್ನು ನೋಡಿಯೂ
ನಿನ್ನಿಂದ ದೂರವಾದರು’
ಎಂದು ತಮ್ಮನ್ನು ನಿಂದಿಸುವರು. 23ತಮ್ಮ ಎಲ್ಲ ಮಡದಿಯರನ್ನೂ ಮಕ್ಕಳನ್ನೂ ಬಾಬಿಲೋನಿಯರ ಬಳಿಗೆ ತರಲಾಗುವುದು. ತಾವು ತಪ್ಪಿಸಿಕೊಳ್ಳಲಾಗದೆ ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಕೊಳ್ಳುವಿರಿ. ಈ ನಗರವು ತಮ್ಮ ನಿಮಿತ್ತ ಬೆಂಕಿಯಿಂದ ಸುಟ್ಟುಹೋಗುವುದು,” ಎಂದು ಹೇಳಿದನು.
24ಆಗ ಚಿದ್ಕೀಯನು ಯೆರೆಮೀಯನಿಗೆ, “ಈ ಮಾತುಗಳು ಯಾರಿಗೂ ತಿಳಿಯದಿರಲಿ, ಜೋಕೆ! ತಿಳಿಯದಿದ್ದರೆ ನೀನು ಸಾಯುವುದಿಲ್ಲ. 25ನಾನು ನಿನ್ನ ಸಂಗಡ ಮಾತಾಡಿದ ಸುದ್ದಿಯನ್ನು ಪದಾಧಿಕಾರಿಗಳು ಕೇಳಿ ನಿನ್ನ ಬಳಿಗೆ ಬಂದು, ‘ಅರಸನಿಗೆ ಏನು ಹೇಳಿದೆ? ನಮಗೆ ತಿಳಿಸು, ನಮಗೆ ಮರೆಮಾಡದೆ ತಿಳಿಸಿದರೆ ನಿನ್ನನ್ನು ಕೊಲ್ಲುವುದಿಲ್ಲ. ಅರಸನಿಗೆ ಏನು ಹೇಳಿದೆ? ತಿಳಿಸು, ಎಂದು ಪ್ರಶ್ನೆ ಹಾಕಿದರೆ 26ನೀನು ಅವರಿಗೆ, ‘ಯೆಹೋನಾಥಾನನ ಮನೆಗೆ ನನ್ನನ್ನು ಮರಳಿ ಸೇರಿಸಬೇಡ. ಅಲ್ಲೇ ಸತ್ತೇನು ಎಂದು ಅರಸನಲ್ಲಿ ಬಿನ್ನಹ ಮಾಡಿಕೊಂಡೆ’ ಎಂಬುದಾಗಿ ಹೇಳು,” ಎಂದು ಅಪ್ಪಣೆಮಾಡಿದನು. 27ಕೆಲವು ದಿನಗಳಾದ ಮೇಲೆ ಎಲ್ಲ ಪದಾಧಿಕಾರಿಗಳು ಯೆರೆಮೀಯನ ಬಳಿಗೆ ಬಂದು ಹಾಗೆಯೇ ಪ್ರಶ್ನೆಮಾಡಿದರು. ಅವನು ಅರಸನ ಅಪ್ಪಣೆಯಂತೆಯೇ ಉತ್ತರಕೊಟ್ಟನು. ಅಷ್ಟಕ್ಕೆ ಮಾತು ಮುಗಿದು ಅವನಿಂದ ಏನೂ ತಿಳಿದುಕೊಳ್ಳಲಾಗಲಿಲ್ಲ. 28ಜೆರುಸಲೇಮ್ ಶತ್ರುವಶವಾಗುವ ತನಕ ಯೆರೆಮೀಯನು ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.
Currently Selected:
ಯೆರೆಮೀಯ 38: KANCLBSI
Highlight
Share
Copy

Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.