YouVersion Logo
Search Icon

ಯೆರೆಮೀಯ 37

37
ಯೆರೆಮೀಯನಲ್ಲಿ ಚಿದ್ಕೀಯನು ಮಾಡಿದ ಮನವಿ
1ಯೋಷೀಯನ ಮಗ ಚಿದ್ಕೀಯನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು. ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅವನನ್ನು ಜುದೇಯದ ನಾಡಿಗೆ ಅರಸನನ್ನಾಗಿಸಿದ್ದನು. 2ಆದರೆ ಚಿದ್ಕೀಯನಾಗಲಿ, ಅವನ ಸೇವಕರಾಗಲಿ, ನಾಡಿನ ಜನರಾಗಲಿ ಸರ್ವೇಶ್ವರನು ಪ್ರವಾದಿ ಯೆರೆಮೀಯನಿಂದ ನುಡಿಸಿದ ಮಾತುಗಳನ್ನು ಕೇಳದೆಹೋದರು.
3ಹೀಗಿರುವಲ್ಲಿ ಅರಸ ಚಿದ್ಕೀಯನು ಶೆಲೆಮ್ಯನ ಮಗ ಯೆಹೂಕಲನನ್ನು ಮತ್ತು ಯಾಜಕ ಮಾಸೇಯನ ಮಗ ಚೆಫನ್ಯನನ್ನು ಯೆರೆಮೀಯನ ಬಳಿಗೆ ಕಳಿಸಿ, “ನಮಗಾಗಿ ನಮ್ಮ ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸು” ಎಂದು ವಿನಂತಿಸಿದನು. 4ಆಗ ಯೆರೆಮೀಯನು ಇನ್ನೂ ಸೆರೆಯಾಗಿರಲಿಲ್ಲ. ಜನರಲ್ಲಿಗೆ ಹೋಗುತ್ತಾ ಬರುತ್ತಿದ್ದನು. 5ಅಷ್ಟರಲ್ಲಿ ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತ್ತು. ಈ ಸಂಗತಿಯನ್ನು ಕೇಳಿ, ಜೆರುಸಲೇಮನ್ನು ಈಗಾಗಲೆ ಮುತ್ತಿದ್ದ ಬಾಬಿಲೋನಿಯದ ಸೈನಿಕರು ಅದನ್ನು ಬಿಟ್ಟುಹೋಗಿದ್ದರು.
6ಈ ಸಂದರ್ಭದಲ್ಲಿ ಪ್ರವಾದಿ ಯೆರೆಮೀಯನಿಗೆ ಸರ್ವೇಶ್ವರನಿಂದ ಕೇಳಿ ಬಂದ ವಾಣಿ: 7“ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆ ಎನ್ನುತ್ತಾರೆ - ನನ್ನ ಅಭಿಪ್ರಾಯವನ್ನು ವಿಚಾರಿಸಲು ನಿಮ್ಮನ್ನು ನನ್ನ ಬಳಿಗೆ ಕಳಿಸಿದ ಜುದೇಯದ ಅರಸನಿಗೆ ಹೀಗೆಂದು ಹೇಳಿರಿ: ‘ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶಕ್ಕೆ ಹಿಂದಿರುಗುವುದು. 8ಬಾಬಿಲೋನಿಯದವರು ಪುನಃ ಬಂದು ಈ ನಗರದ ಮೇಲೆ ದಾಳಿ ನಡೆಸುವರು. ಇದನ್ನು ಆಕ್ರಮಿಸಿ ಬೆಂಕಿಯಿಂದ ಸುಟ್ಟುಹಾಕುವರು.’ 9ಸರ್ವೇಶ್ವರ ಇಂತೆನ್ನುತ್ತಾರೆ:- ಬಾಬಿಲೋನಿಯರು ನಿಮ್ಮಿಂದ ಖಂಡಿತವಾಗಿ ತೊಲಗಿಹೋಗುವರು ಎಂದುಕೊಂಡು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ಅವರು ಹೋಗುವುದಿಲ್ಲ. 10ದಾಳಿಮಾಡುವ ಆ ಬಾಬಿಲೋನಿಯರನ್ನು ನೀವು ಪೂರ್ತಿಯಾಗಿ ಸೋಲಿಸಿದರೂ, ಅವರಲ್ಲಿ ಗಾಯಗೊಂಡವರು ಮಾತ್ರ ನಿಮ್ಮಲ್ಲಿ ಉಳಿದರೂ, ಆ ಗಾಯಗೊಂಡವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದುಬಂದು ಈ ನಗರವನ್ನು ಬೆಂಕಿಯಿಂದ ಸುಟ್ಟುಬಿಡುವರು.
ಯೆರೆಮೀಯನು ಮರಳಿ ಸೆರೆಯಲ್ಲಿ
11ಬಾಬಿಲೋನಿಯದ ಸೈನ್ಯವು ಫರೋಹನ ಸೈನ್ಯಕ್ಕೆ ಭಯಪಟ್ಟು ಜೆರುಸಲೇಮನ್ನು ಬಿಟ್ಟುಹೋಯಿತು. 12ಆಗ ಯೆರೆಮೀಯನು ಬೆನ್ಯಾಮೀನ್ ನಾಡಿನಲ್ಲಿ ತನಗೆ ಬರಬೇಕಾಗಿದ್ದ ಸೊತ್ತನ್ನು ಜನರ ಸಮಕ್ಷಮದಲ್ಲಿ ತೆಗೆದುಕೊಳ್ಳಲು ಜೆರುಸಲೇಮಿನಿಂದ ಅಲ್ಲಿಗೆ ಹೊರಟನು. 13ಬೆನ್ಯಾಮೀನನ ಬಾಗಿಲನ್ನು ಹಾದುಹೋಗುತ್ತಿರುವಾಗ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನೂ ಆದ ಇರೀಯನು ಅಲ್ಲಿ ಪಹರೆ ಕುಳಿತಿದ್ದನು. ಅವನು ಪ್ರವಾದಿ ಯೆರೆಮೀಯನನ್ನು, “ನೀನು ಬಾಬಿಲೋನಿಯರನ್ನು ಮರೆಹೋಗಲು ಹೋಗುತ್ತಿರುವೆ,” ಎಂದು ಹೇಳಿ ಅವನನ್ನು ಬಂಧಿಸಿದನು.
14ಅದಕ್ಕೆ ಯೆರೆಮೀಯನು, “ಅದು ಸುಳ್ಳು, ನಾನು ಬಾಬಿಲೋನಿಯರನ್ನು ಮರೆಹೋಗುವವನಲ್ಲ,” ಎಂದನು. ಇರೀಯನು ಅವನ ಮಾತನ್ನು ಕೇಳದೆ ಅವನನ್ನು ಬಂಧಿಸಿ, ಪದಾಧಿಕಾರಿಗಳ ಬಳಿಗೆ ಕರೆದುತಂದನು. 15ಆ ಅಧಿಕಾರಿಗಳು ಯೆರೆಮೀಯನ ಮೇಲೆ ಕೋಪಗೊಂಡು ಅವನನ್ನು ಹೊಡೆಯಿಸಿ, ತಾವು ಬಂದಿಖಾನೆಯನ್ನಾಗಿ ಮಾಡಿದ್ದ ಲೇಖಕ ಯೆಹೋನಾಥಾನನ ಮನೆಯಲ್ಲಿ ಸೆರೆಹಾಕಿಸಿದರು. 16ಯೆರೆಮೀಯನು ಆ ಬಂದಿಖಾನೆಯ ನೆಲಮನೆಗಳಲ್ಲಿ ಕೆಲವು ದಿವಸ ಇದ್ದನು.
17ಬಳಿಕ ಅರಸ ಚಿದ್ಕೀಯನು ಅವನನ್ನು ಕರೆಯಿಸಿ, “ದೇವರಿಂದ ಯಾವುದಾದರು ಸಂದೇಶ ದೊರೆಯಿತೊ?” ಎಂದು ಮನೆಯಲ್ಲಿ ಗುಟ್ಟಾಗಿ ವಿಚಾರಿಸಿದನು. ಯೆರೆಮೀಯನು, “ಹೌದು, ದೊರೆಯಿತು. ತಾವು ಬಾಬಿಲೋನಿನ ಅರಸನ ಕೈಗೆ ಸಿಕ್ಕಿಬೀಳುವಿರಿ,” ಎಂದನು. 18ಅಲ್ಲದೆ ಯೆರೆಮೀಯನು ಅರಸ ಚಿದ್ಕೀಯನಿಗೆ, “ನೀವು ನನ್ನನ್ನು ಸೆರೆಯಲ್ಲಿ ಹಾಕಿದ್ದಕ್ಕೆ ನಾನು ನಿಮಗಾಗಲಿ, ನಿಮ್ಮ ಸೇವಕರಿಗಾಗಲಿ, ಇಲ್ಲಿಯ ಜನರಿಗಾಗಲಿ ಮಾಡಿದ ಅಪರಾಧವೇನು? 19‘ಬಾಬಿಲೋನಿನ ಅರಸನು ನಿಮಗೂ ಈ ನಾಡಿಗೂ ವಿರುದ್ಧವಾಗಿ ಆಕ್ರಮಣ ನಡೆಸನು’ ಎಂದು ಸಾರಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ? 20ಎನ್ನೊಡೆಯರೇ, ಅರಸರೇ, ದಯವಿಟ್ಟು ಆಲಿಸಿ: ಲೇಖಕ ಯೆಹೋನಾಥಾನನ ಮನೆಗೆ ನನ್ನನ್ನು ಮತ್ತೆ ಕಳಿಸಬೇಡಿ. ಕಳಿಸಿದರೆ ನಾನು ಅಲ್ಲೇ ಸತ್ತೇನು. ನನ್ನ ಈ ಬಿನ್ನಹವನ್ನು ಅಂಗೀಕರಿಸಿ,” ಎಂದು ಅರಿಕೆಮಾಡಿದನು.
21ಆಗ ಅರಸ ಚಿದ್ಕೀಯನು ಅಂತೆಯೆ ಅಪ್ಪಣೆಕೊಡಲು, ಯೆರೆಮೀಯನನ್ನು ರಾಜ್ಯದ ಕಾರಾಗೃಹದ ಅಂಗಳಕ್ಕೆ ಸ್ಥಳಾಂತರಿಸಲಾಯಿತು. ರೊಟ್ಟಿ ಮಾರುಕಟ್ಟೆಯಿಂದ ಪ್ರತಿದಿನ ಒಂದೊಂದು ರೊಟ್ಟಿಯನ್ನು ಅವನಿಗೆ ತಂದುಕೊಡುತ್ತಿದ್ದರು. ನಗರದ ರೊಟ್ಟಿಯೆಲ್ಲ ತೀರುವ ತನಕ ಹಾಗೆ ಮಾಡುತ್ತಿದ್ದರು. ಯೆರೆಮೀಯನು ರಾಜ್ಯದ ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.

Highlight

Share

Copy

None

Want to have your highlights saved across all your devices? Sign up or sign in

Video for ಯೆರೆಮೀಯ 37