YouVersion Logo
Search Icon

ಯೆರೆಮೀಯ 35

35
ರೇಕಾಬ್ಯರ ಆದರ್ಶ
1ಯೋಷೀಯನ ಮಗನಾದ ಜುದೇಯದ ಅರಸ ಯೆಹೋಯಾಕೀಮನ ಕಾಲದಲ್ಲಿ ಸರ್ವೇಶ್ವರ ಸ್ವಾಮಿ ಯೆರೆಮೀಯನಾದ ನನಗೆ ದಯಪಾಲಿಸಿದ ವಾಕ್ಯ ಇದು: 2“ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ, ಅವರ ಸಂಗಡ ಮಾತಾಡು. ಅವರನ್ನು ಸರ್ವೇಶ್ವರನಾಲಯದ ಒಂದು ಕೋಣೆಯೊಳಕ್ಕೆ ಕರೆದು ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು.” 3ಅಂತೆಯೆ ನಾನು (ಮತ್ತೊಬ್ಬ) ಯೆರೆಮೀಯನ ಮಗನೂ ಹಬಚ್ಚಿನ್ಯನ ಮೊಮ್ಮಗನೂ ಆದ ಯಾಜನ್ಯನನ್ನು, ಅವನ ಅಣ್ಣತಮ್ಮಂದಿರನ್ನು, ಅವನ ಎಲ್ಲ ಮಕ್ಕಳನ್ನು, ಅಂತು ರೇಕಾಬನ ಮನೆತನದವರೆಲ್ಲರನ್ನೂ ಸರ್ವೇಶ್ವರನಾಲಯಕ್ಕೆ ಕರೆದೊಯ್ದೆನು. 4ಇಗ್ದಲ್ಯನ ಮಗನೂ ದೇವರ ಮನುಷ್ಯನೂ ಆದ ಹಾನಾನನ ಮಕ್ಕಳ ಕೋಣೆಯೊಳಕ್ಕೆ, ಅಂದರೆ ಪದಾಧಿಕಾರಿಗಳ ಕೋಣೆಯ ಪಕ್ಕದಲ್ಲಿ, ಶಲ್ಲೂಮನ ಮಗನೂ ದ್ವಾರಪಾಲಕನೂ ಆದ ಮಾಸೇಯನ ಕೋಣೆಯ ಮೇಲ್ಗಡೆಯಿರುವ ಕೋಣೆಯೊಳಕ್ಕೆ ಅವರೆಲ್ಲರನ್ನು ಬರಮಾಡಿದೆನು. 5ರೇಕಾಬನ ಆ ಮನೆತನದವರ ಮುಂದೆ ದ್ರಾಕ್ಷಾರಸ ತುಂಬಿದ ಬಟ್ಟಲುಗಳನ್ನೂ ಪಂಚಪಾತ್ರೆಗಳನ್ನೂ ಇಟ್ಟು, ‘ದ್ರಾಕ್ಷಾರಸವನ್ನು ಕುಡಿಯಿರಿ’ ಎಂದು ಹೇಳಿದೆನು.
6ಅದಕ್ಕೆ ಅವರು, “ನಾವು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. ನಮ್ಮ ಪೂರ್ವಜನಾದ ರೇಕಾಬನ ಮಗ ಯೋನಾದಾಬನು ನಮಗೆ, ‘ನೀವಾಗಲಿ ನಿಮ್ಮ ಸಂತಾನದವರಾಗಲಿ ಯುಗಯುಗಾಂತರಕ್ಕೂ ದ್ರಾಕ್ಷಾರಸವನ್ನು ಕುಡಿಯಲೇಬಾರದು. 7ಮನೆ ಕಟ್ಟಬಾರದು, ಬೀಜಬಿತ್ತಬಾರದು, ತೋಟಮಾಡಬಾರದು, ಕೊಂಡು ಸೊತ್ತಾಗಿಸಿಕೊಳ್ಳಬಾರದು. ಜೀವಮಾನವೆಲ್ಲ ಗುಡಾರಗಳಲ್ಲೇ ವಾಸಿಸಬೇಕು. ಇದರಿಂದ ನೀವು ತಂಗುವ ನಾಡಿನಲ್ಲಿ ದೀರ್ಘಕಾಲ ಉಳಿಯುವಿರಿ,’ ಎಂದು ಆಜ್ಞಾಪಿಸಿದ್ದಾನೆ. 8ನಮ್ಮ ಪೂರ್ವಜನಾದ ರೇಕಾಬನ ಮಗ ಯೋನಾದಾಬನು ನಮಗೆ ಕೊಟ್ಟ ಈ ಅಪ್ಪಣೆಯನ್ನು ಎಲ್ಲ ವಿಷಯದಲ್ಲೂ ಕೈಗೊಂಡು ಬರುತ್ತಿದ್ದೇವೆ. ನಾವಾಗಲಿ, ನಮ್ಮ ಮಡದಿ ಮಕ್ಕಳಾಗಲಿ, ಜೀವಮಾನದಲ್ಲೆಲ್ಲಾ ‘ದ್ರಾಕ್ಷಾರಸ ಕುಡಿಯುವುದಿಲ್ಲ. 9ವಾಸಕ್ಕೆ ನಾವು ಮನೆಕಟ್ಟುವುದಿಲ್ಲ. ನಮಗೆ ತೋಟವಿಲ್ಲ, ಹೊಲವಿಲ್ಲ, ಬಿತ್ತನೆ ಬೀಜವಿಲ್ಲ. 10ಗುಡಾರಗಳಲ್ಲಿ ವಾಸಿಸುತ್ತಾ ನಮ್ಮ ಪೂರ್ವಜ ಯೋನಾದಾಬನು ನಮಗೆ ವಿಧಿಸಿದ್ದನ್ನೆಲ್ಲ ಶಿರಸಾವಹಿಸಿ ನಡೆಸಿಕೊಂಡು ಬರುತ್ತಿದ್ದೇವೆ.
11ಆದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಈ ನಾಡಿಗೆ ಮುತ್ತಿಗೆ ಹಾಕಿದಾಗ, ಬಾಬಿಲೋನಿಯ ಮತ್ತು ಸಿರಿಯದವರ ಸೈನ್ಯಗಳಿಂದ ತಪ್ಪಿಸಿಕೊಳ್ಳಲು, ‘ಜೆರುಸಲೇಮಿಗೆ ಹೋಗೋಣ ಬನ್ನಿ’ ಎಂದುಕೊಂಡು ಬಂದೆವು. ಈ ಕಾರಣದಿಂದಲೇ ಇಲ್ಲಿ ವಾಸಿಸುತ್ತಿದ್ದೇವೆ,” ಎಂದು ಹೇಳಿದರು.
12ಆಗ ಸರ್ವೇಶ್ವರ ಯೆರೆಮೀಯನಿಗೆ: 13“ಇಸ್ರಯೇಲರ ದೇವರೂ ಸೇನಾಧೀಶ್ವರನೂ ಸರ್ವೇಶ್ವರನೂ ಆದ ನಾನು ಹೇಳುವುದು ಇದು: ನೀನು ಹೋಗಿ ಯೆಹೂದ್ಯರಿಗೂ ಜೆರುಸಲೇಮಿನ ನಿವಾಸಿಗಳಿಗೂ ಹೀಗೆಂದು ತಿಳಿಸು: ‘ನೀವು ಬುದ್ಧಿ ತಂದುಕೊಂಡು ನನ್ನ ಮಾತುಗಳನ್ನು ಕೇಳುವುದಿಲ್ಲವೆ?’ ಎನ್ನುತ್ತಾರೆ ಸರ್ವೇಶ್ವರ. 14‘ರೇಕಾಬನ ಮಗ ಯೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ. ಅವರು ಇಂದಿನವರೆಗೂ ಕುಡಿಯಲಿಲ್ಲ. ತಮ್ಮ ಪೂರ್ವಜನ ಆಜ್ಞೆಯನ್ನು ಕೈಗೊಂಡಿದ್ದಾರೆ. ನೀವೋ, ನಾನು ನಿಮಗೆ ಪದೇ ಪದೇ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ. 15ಇದಲ್ಲದೆ, ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲ ನಿಮ್ಮ ಬಳಿಗೆ ನಿರಂತರವಾಗಿ ಕಳಿಸುತ್ತಾ ಬಂದೆ. ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ. ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸದಿರಿ. ಹಾಗೆ ಮಾಡಿದರೆ ನಾನು ನಿಮಗೂ ನಿಮ್ಮ ಪೂರ್ವಜರಿಗೂ ಅನುಗ್ರಹಿಸಿದ ನಾಡಿನಲ್ಲಿ ಸುಖವಾಸಿಗಳಾಗಿರುವಿರಿ ಎಂದು ಅವರ ಮುಖಾಂತರ ಎಚ್ಚರಿಸಿದೆ. ಆದರೆ ನೀವು ಕೇಳಲಿಲ್ಲ, ಕಿವಿಗೊಡಲೂ ಇಲ್ಲ. 16ರೇಕಾಬನ ಮಗ ಯೋನಾದಾಬನ ಸಂತಾನದವರು ತಮ್ಮ ಪೂರ್ವಜರು ತಮಗೆ ವಿಧಿಸಿದ್ದನ್ನು ಕೇಳಿ ಅನುಸರಿಸಿದರು. ಆದರೆ ಈ ಜನರು ನನ್ನ ಮಾತನ್ನು ಕೇಳದೆಹೋದರು. 17ಆದ್ದರಿಂದ ಸೇನಾಧೀಶ್ವರ ಸರ್ವೇಶ್ವರನೂ ಇಸ್ರಯೇಲಿನ ದೇವರೂ ಆದ ನಾನು ಹೇಳುವುದನ್ನು ಗಮನಿಸು: ಯೆಹೂದ್ಯರಿಗೂ ಜೆರುಸಲೇಮಿನವರೆಲ್ಲರಿಗೂ ನಾನು ಕೊಟ್ಟ ಶಾಪದ ಕೇಡುಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು. ನಾನು ಹೇಳಿದರೂ ಅವರು ಕೇಳಲಿಲ್ಲ, ಕೂಗಿದರೂ ಉತ್ತರಕೊಡಲಿಲ್ಲ’.”
18ಯೆರೆಮೀಯನು ರೇಕಾಬ್ಯರಿಗೆ, “ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: ‘ನೀವು ನಿಮ್ಮ ಪೂರ್ವಜ ಯೋನಾದಾಬನ ಅಪ್ಪಣೆಯನ್ನು ಕೇಳಿ ಅವನ ಎಲ್ಲ ವಿಧಿಗಳನ್ನು ಅನುಸರಿಸಿ, ಅವನು ಆಜ್ಞಾಪಿಸಿದ್ದನ್ನೆಲ್ಲ ನೆರವೇರಿಸಿದ ಕಾರಣ 19ರೇಕಾಬನ ಮಗ ಯೋನಾದಾಬನ ಸಂತಾನದವರಲ್ಲಿ ನನ್ನ ಸಮ್ಮುಖ ಸೇವೆಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು’ ಎಂದನು.”

Highlight

Share

Copy

None

Want to have your highlights saved across all your devices? Sign up or sign in

Video for ಯೆರೆಮೀಯ 35