ಯೆರೆಮೀಯ 34
34
ಚಿದ್ಕೀಯನಿಗೊಂದು ಎಚ್ಚರಿಕೆ
1ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು, ಅವನ ಸಮಸ್ತ ಸೈನ್ಯವು, ಅವನ ಕೈಕೆಳಗಿನ ಭೂರಾಜರೆಲ್ಲರು ಹಾಗೂ ಸಕಲ ಪ್ರಜೆಗಳು ಜೆರುಸಲೇಮಿಗೂ ಅದಕ್ಕೆ ಸೇರಿದ ಎಲ್ಲ ಊರುಗಳಿಗೂ ವಿರುದ್ಧ ಯುದ್ಧಮಾಡುತ್ತಿದ್ದಾಗ ಸರ್ವೇಶ್ವರ ಯೆರೆಮೀಯನಿಗೆ ಈ ವಿಷಯವನ್ನು ತಿಳಿಸಿದರು: 2“ಇಸ್ರಯೇಲರ ದೇವರಾದ ಸರ್ವೇಶ್ವರನಾದ ನನ್ನ ನುಡಿ ಇದು: ನೀನು ಜುದೇಯದ ಅರಸ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಹೀಗೆಂದು ಹೇಳು - ‘ಸರ್ವೇಶ್ವರನ ಮಾತನ್ನು ಆಲಿಸು: ಇಗೋ, ನಾನು ಈ ನಗರವನ್ನು ಬಾಬಿಲೋನಿನ ಅರಸನ ಕೈವಶಮಾಡುವೆನು. ಅವನು ಇದನ್ನು ಬೆಂಕಿಯಿಂದ ಸುಟ್ಟುಹಾಕುವನು. 3ನೀನು ಅವನ ಕೈಯಿಂದ ತಪ್ಪಿಸಿಕೊಳ್ಳಲಾರದೆ ಬಂಧಿತನಾಗಿ ಅವನ ವಶವಾಗುವೆ. ಬಾಬಿಲೋನಿನ ಅರಸನ ಸಮಕ್ಷಮದಲ್ಲಿ ನಿಲ್ಲುವೆ. ಅವನು ನಿನ್ನೊಡನೆ ಮುಖಾಮುಖಿಯಾಗಿ ಮಾತಾಡುವನು. ನೀನು ಬಾಬಿಲೋನಿಗೆ ಗಡಿಪಾರಾಗುವೆ. 4ಆದರೂ ಜುದೇಯದ ಅರಸನಾದ ಚಿದ್ಕೀಯನೇ, ಸರ್ವೇಶ್ವರನ ಮಾತನ್ನು ಕೈಗೊಳ್ಳು; ಸರ್ವೇಶ್ವರ ನಿನ್ನ ವಿಷಯವಾಗಿ ಹೀಗೆನ್ನುತ್ತಾರೆ - ನೀನು ಕತ್ತಿಯಿಂದ ಹತನಾಗುವುದಿಲ್ಲ. 5ನೆಮ್ಮದಿಯಿಂದ ಸಾಯುವೆ. ನಿನಗಿಂತ ಮುಂಚೆ, ನಿನ್ನ ಪೂರ್ವಜರಾದ ದಿವಂಗತ ಅರಸರ ಸ್ಮರಣಾರ್ಥ ಜನರು ಧೂಪಹಾಕಿದ ಪ್ರಕಾರ ನಿನಗೂ ಹಾಕುವರು. ‘ಅಯ್ಯೋ ಒಡೆಯಾ’ ಎಂದು ನಿನಗಾಗಿ ಗೋಳಾಡುವರು. ಇದು ನನ್ನ ನುಡಿ,’ ಎಂದಿದ್ದಾರೆ ಸರ್ವೇಶ್ವರ.”
6ಅಂತೆಯೇ, ಪ್ರವಾದಿ ಯೆರೆಮೀಯನು ಈ ವಿಷಯಗಳನ್ನೆಲ್ಲ ಜುದೇಯದ ಅರಸ ಚಿದ್ಕೀಯನಿಗೆ ಜೆರುಸಲೇಮಿನಲ್ಲೆ ತಿಳಿಸಿದನು. 7ಆಗ ಬಾಬಿಲೋನಿನ ಅರಸನ ಸೈನ್ಯವು ಜೆರುಸಲೇಮಿಗೂ ಮತ್ತು ಜುದೇಯದೊಳಗೆ ಕೋಟೆಕೊತ್ತಲದ ನಗರಗಳಾಗಿದ್ದ ಲಾಕೀಷಿಗೂ ಅಜೇಕಕ್ಕೂ ವಿರುದ್ಧ ಯುದ್ಧಮಾಡುತ್ತಿತ್ತು.
ಬಿಡುಗಡೆಯಾದರೂ ಮತ್ತೆ ಜೀತದಾರರಾದರು
8ಯೆರೆಮೀಯನಿಗೆ ಸರ್ವೇಶ್ವರನಿಂದ ಮತ್ತೊಂದು ವಾಣಿ ಉಂಟಾಯಿತು. ಇಷ್ಟರೊಳಗೆ ಅರಸ ಚಿದ್ಕೀಯನು ಮತ್ತು ಜೆರುಸಲೇಮಿನ ಜನರೆಲ್ಲರು ಸೇರಿ ಒಂದು ಒಪ್ಪಂದ ಮಾಡಿಕೊಂಡಿದ್ದರು. 9ಅದರ ಪ್ರಕಾರ ಅವರಲ್ಲಿ ಪ್ರತಿ ಒಬ್ಬನು ತನ್ನ ಜೀತದಾರರಲ್ಲಿ ಹಿಬ್ರಿಯರಾದವರನ್ನು ಬಿಡುಗಡೆಮಾಡಬೇಕಿತ್ತು. ಯೆಹೂದ್ಯರಾದ ಸಹೋದರ ಸಹೋದರಿಯರನ್ನು ಯಾರೂ ಇನ್ನು ಮುಂದೆ ಜೀತದಾರರನ್ನಾಗಿ ಇರಿಸಿಕೊಳ್ಳದೆ ಅವರಿಗೆ ವಿಮೋಚನೆಯನ್ನು ಪ್ರಕಟಿಸಬೇಕೆಂಬುದು ಆ ಒಪ್ಪಂದವಾಗಿತ್ತು. 10ತಮ್ಮ ತಮ್ಮ ಹೆಣ್ಣುಗಂಡು ಜೀತದಾರರನ್ನು ಬಿಡುಗಡೆಮಾಡಿ ಅವರಿಂದ ಇನ್ನು ಜೀತಮಾಡಿಸಿಕೊಳ್ಳುವುದಿಲ್ಲ ಎಂಬ ಈ ಒಪ್ಪಂದಕ್ಕೆ ಸಮ್ಮತಿಸಿದ್ದ ಎಲ್ಲ ಅಧಿಕಾರಿಗಳೂ ಸಮಸ್ತ ಪ್ರಜೆಗಳೂ ಅದರಂತೆ ನಡೆದು ಜೀತದಾರರನ್ನು ಬಿಡುಗಡೆಮಾಡಿದ್ದರು. 11ಆದರೆ ಕೆಲವು ಕಾಲದ ಮೇಲೆ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು. ಬಿಡುಗಡೆಮಾಡಿದ್ದವರನ್ನು ಮತ್ತೆ ಜೀತದಾರರನ್ನಾಗಿ ಸೇರಿಸಿಕೊಂಡು ಅಧೀನದಲ್ಲಿ ಇಟ್ಟುಕೊಂಡಿದ್ದರು.
12ಹೀಗಿರಲು ಸರ್ವೇಶ್ವರ ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದರು: 13“ಇಸ್ರಯೇಲರ ದೇವರಾದ ಸರ್ವೇಶ್ವರನ ವಾಣಿ ಇದು - ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದ ನಿಮ್ಮ ಪೂರ್ವಜರನ್ನು ನಾನು ಅಲ್ಲಿಂದ ಕರೆದುತಂದಾಗ ನಾನು ಅವರೊಡನೆ ಒಂದು ಒಪ್ಪಂದಮಾಡಿಕೊಂಡೆ. 14ಒಬ್ಬ ಹಿಬ್ರಿಯನು ತನ್ನನ್ನೇ ನಿಮಗೆ ಮಾರಿಕೊಂಡು ಆರು ವರ್ಷ ನಿಮ್ಮ ಜೀತಗಾರನಾಗಿದ್ದರೆ ಅಂಥ ಸಹೋದರನನ್ನು ಏಳನೆಯ ವರ್ಷದಲ್ಲಿ ಸ್ವತಂತ್ರನನ್ನಾಗಿ ಬಿಟ್ಟುಬಿಡಿ ಎಂದು ವಿಧಿಸಿದ್ದೆ. ಆದರೆ ನಿಮ್ಮ ಪೂರ್ವಜರು ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲೂ ಇಲ್ಲ. 15ನೀವೋ ಕೂಡಲೆ ಮನಮರುಗಿ ನಿಮ್ಮ ನಿಮ್ಮ ನೆರೆಹೊರೆಯವರಿಗೆ ಬಿಡುಗಡೆಯನ್ನು ಪ್ರಕಟಿಸಿ ನನ್ನ ಚಿತ್ತಾನುಸಾರ ನಡೆದಿರಿ. ನನ್ನ ಹೆಸರಿನಿಂದ ಖ್ಯಾತಗೊಂಡಿರುವ ದೇವಾಲಯದಲ್ಲಿ, ನನ್ನ ಸಮ್ಮುಖದಲ್ಲಿ ಒಪ್ಪಂದಮಾಡಿಕೊಂಡಿರಿ. 16ಆದರೆ ಆಮೇಲೆ ನಿಮ್ಮ ಮನಸ್ಸನ್ನು ಮಾರ್ಪಡಿಸಿಕೊಂಡಿರಿ. ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ಜೀತದಾರರನ್ನಾಗಿ ಸೇರಿಸಿಕೊಂಡು, ಶೋಷಣೆಗೆ ಗುರಿಮಾಡಿ, ನನ್ನ ನಾಮಕ್ಕೆ ಅಪಕೀರ್ತಿ ತಂದಿದ್ದೀರಿ. 17ಆದಕಾರಣ ಸರ್ವೇಶ್ವರನಾದ ನಾನು ಹೇಳುವುದು ಇದು - ನೀವು ನನ್ನ ಮಾತನ್ನು ಕೇಳಲಿಲ್ಲ, ನಿಮ್ಮ ಸಹೋದರರಿಗೂ ನೆರೆಹೊರೆಯವರಿಗೂ ಬಿಡುಗಡೆಯನ್ನು ಪ್ರಕಟಿಸಲಿಲ್ಲ. ಇಗೋ ಸರ್ವೇಶ್ವರನಾದ ನನ್ನ ನುಡಿ: ಖಡ್ಗ-ವ್ಯಾಧಿ-ಕ್ಷಾಮ ಇವುಗಳಿಗೆ ನೀವು ಗುರಿ ಆಗುವಂತೆ ನಾನು ನಿಮಗೆ ಬಿಡುಗಡೆಯನ್ನು ಪ್ರಕಟಿಸುತ್ತೇನೆ. ಲೋಕದ ಸಮಸ್ತ ರಾಜ್ಯಗಳ ಕಣ್ಣಿಗೆ ನೀವು ಭಯಾಸ್ಪದವಾಗುವಂತೆ ಮಾಡುವೆನು. 18ನನ್ನ ನಿಬಂಧನೆಗಳನ್ನು ಕೈಗೊಳ್ಳದೆ, ನನ್ನ ಒಡಂಬಡಿಕೆಯನ್ನು ಮೀರಿದವರಿಗೆ ಇಬ್ಭಾಗವಾಗಿ ಸೀಳಿದ ಕರುವಿನ ಗತಿ ಬರುವಂತೆ ಮಾಡುವೆನು. 19ಜುದೇಯದ ಹಾಗು ಜೆರುಸಲೇಮಿನ ರಾಜ್ಯಾಧಿಕಾರಿಗಳು, ಕಂಚುಕಿಗಳು, ಯಾಜಕರು, ಸೀಳಿದ ಕರುವಿನ ಹೋಳುಗ಼ಳ ನಡುವೆ ಹಾದು ನನ್ನ ಮುಂದೆ ಒಪ್ಪಂದಮಾಡಿದರು. ಆದರೆ ಆ ಒಪ್ಪಂದಕ್ಕೆ ತದ್ವಿರುದ್ಧವಾಗಿ ನಡೆದಿದ್ದಾರೆ ನಾಡಿನ ಎಲ್ಲ ಜನರು. 20ಇವರೆಲ್ಲರನ್ನು ಶತ್ರುಗಳ ವಶಕ್ಕೆ ಒಪ್ಪಿಸುವೆನು. ಇವರ ಪ್ರಾಣವನ್ನು ಹುಡುಕುವ ಶತ್ರುಗಳ ಕೈಗೆ ಕೊಡುವೆನು. ಇವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗುವುವು. 21ಜುದೇಯದ ಅರಸ ಚಿದ್ಕೀಯನನ್ನೂ ಅವನ ಮಂತ್ರಿಗಳನ್ನೂ ಅವರ ಶತ್ರುಗಳಿಗೆ ಅಂದರೆ, ಅವರ ಪ್ರಾಣಹತ್ಯಕ್ಕಾಗಿ ಕಾದಿರುವ, ತಕ್ಷಣಕ್ಕೆ ಹಿಂದಿರುಗಿಹೋಗಿರುವ, ಬಾಬಿಲೋನಿಯದ ಅರಸನ ಕೈಗೆ ಕೊಡುವೆನು. 22ಸರ್ವೇಶ್ವರನಾದ ನನ್ನ ಗುರಿಯನ್ನು ಗಮನಿಸಿರಿ - ನಾನು ಅಪ್ಪಣೆಕೊಟ್ಟು, ಶತ್ರುಗಳು ಈ ನಗರಕ್ಕೆ ಮತ್ತೆ ಬರುವಂತೆ ಮಾಡುವೆನು. ಅವರು ಇದರ ವಿರುದ್ಧ ಯುದ್ಧಮಾಡಿ, ಇದನ್ನು ಆಕ್ರಮಿಸಿಕೊಂಡು, ಬೆಂಕಿಯಿಂದ ಸುಟ್ಟುಹಾಕುವರು. ನಾನು ಜುದೇಯದ ನಗರಗಳನ್ನು ನಿರ್ಜನವಾದ ಪಾಳುಭೂಮಿಯನ್ನಾಗಿಸುವೆನು.
Currently Selected:
ಯೆರೆಮೀಯ 34: KANCLBSI
Highlight
Share
Copy

Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.