ಯೆಶಾಯ 8
8
ಯೆಶಾಯನ ಪುತ್ರ - ಜನರಿಗೊಂದು ಸಂಕೇತ
1ಅನಂತರ ಸರ್ವೇಶ್ವರಸ್ವಾಮಿ ನನಗೆ ಹೀಗೆಂದರು: “ಬರೆಯುವ ದೊಡ್ಡ ಹಲಗೆ ಒಂದನ್ನು ತೆಗೆದುಕೊಂಡು ಸಾಧಾರಣ ಲಿಪಿಯಲ್ಲಿ, ಈ ಸೂಚ್ಯವಾದ ಪದಗಳನ್ನು ಬರೆ: ‘ಮಹೇರ್ ಶಾಲಾಲ್ ಹಾಷ್ ಬಜ್’ (ಅಂದರೆ ಸೂರೆಗೆ ಆತುರ; ಕೊಳ್ಳೆಗೆ ಅವಸರ). 2ನೀನು ಹೀಗೆ ಬರೆದುದಕ್ಕೆ ಯಾಜಕನಾದ ಊರೀಯ, ಯೆಬೆರೆಕ್ಕನ ಮಗನಾದ ಜೆಕರ್ಯ - ಈ ನಂಬಿಗಸ್ತರನ್ನು ಸಾಕ್ಷಿಗಳಾಗಿ ಕರೆದುಕೊ” ಎಂದು ಹೇಳಿದರು.
3ಸ್ವಲ್ಪಕಾಲವಾದ ನಂತರ ನಾನು ಪ್ರವಾದಿನಿಯನ್ನು ಕೂಡಲು ಆಕೆ ಗರ್ಭವತಿಯಾಗಿ ಗಂಡುಮಗುವನ್ನು ಹೆತ್ತಳು. ಆಗ ನನಗೆ: “ಆ ಮಗುವಿಗೆ ‘ಮಹೇರ್ ಶಾಲಾಲ್ ಹಾಷ್ ಬಜ್’ ಎಂದು ಹೆಸರಿಡು. 4ಅವನು ‘ಅಪ್ಪಾ, ಅಮ್ಮಾ, ಎಂದು ಕೂಗಬಲ್ಲವನಾಗುವುದರೊಳಗೆ ಅಸ್ಸೀರಿಯದ ಅರಸನು ದಮಸ್ಕಸ್ಸಿನ ಆಸ್ತಿಪಾಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ಹೊರಿಸಿಕೊಂಡು ಹೋಗುವನು,” ಎಂದು ಸರ್ವೇಶ್ವರಸ್ವಾಮಿ ಹೇಳಿದರು.
ಅಸ್ಸೀರಿಯದ ಅರಸನು ಮಾಡಿದ ಆಕ್ರಮಣ
5ಸರ್ವೇಶ್ವರ ಮತ್ತೊಮ್ಮೆ ನನಗೆ ಹೀಗೆಂದರು : 6“ಈ ಜನರು ಸುಲಲಿತವಾಗಿ ಹರಿಯುವ ಸಿಲೋವದ ನೀರನ್ನು ಅಲ್ಲಗಳೆದು, ಅರಸನಾದ ರೆಚೀನ ಹಾಗೂ ಪೆಕಹ ಇವರುಗಳನ್ನು ನೆಚ್ಚಿಕೊಂಡು ನಲಿಯುತ್ತಿದ್ದಾರೆ. 7ಆದುದರಿಂದ ಸ್ವಾಮಿಯಾದ ನಾನು ಅಸ್ಸೀರಿಯದ ಅರಸನನ್ನೂ ಅವನ ಚದುರಂಗ ಬಲವನ್ನೂ ಬರಮಾಡುವೆನು: ಅದು ಯೂಫ್ರಟಿಸ್ ಮಹಾನದಿಯ ಪ್ರವಾಹದಂತೆ ರಭಸವಾಗಿ ಹರಿದುಬರುವುದು. 8ಹದ್ದುಮೀರಿ ಜುದೇಯದೆಲ್ಲೆಡೆ ನುಗ್ಗಿ ಹಳ್ಳಕೊಳ್ಳಗಳನ್ನು ತುಂಬುವುದು. ಕುತ್ತಿಗೆಯ ತನಕ ಉಕ್ಕಿಬಂದು ದಿಣ್ಣೆದಿಬ್ಬಗಳನ್ನು ಮುಳುಗಿಸುವುದು.
ದೇವರು ನಮ್ಮೊಡನೆ (ಇಮ್ಮಾನುವೇಲ್) ಇರುವರು. ಅವರ ಬಿಚ್ಚುರೆಕ್ಕೆಗಳು ನಾಡಿನ ಉದ್ದಗಲವನ್ನೂ ಆವರಿಸುವುವು, ಇಡೀ ನಾಡಿಗೆ ಆಶ್ರಯ ನೀಡುವುವು.
9ಕೂಡಿಬನ್ನಿ ರಾಷ್ಟ್ರಗಳೇ, ತುಂಡುತುಂಡಾಗುವಿರಿ ನೀವು;
ಕಿವಿಗೊಡಿ, ದೂರ ದೇಶಗಳೇ, ನಡುಕಟ್ಟಿ ನಿಂತರೂ ತುಂಡುತುಂಡಾಗುವಿರಿ ನೀವು;
ಹೌದು, ನಡುಕಟ್ಟಿ ನಿಂತರೂ ತುಂಡುತುಂಡಾಗುವಿರಿ ನೀವು.
10ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ;
ಕೈಗೂಡದು ನೀವು ಮಾಡಿದ ಪ್ರತಿಜ್ಞೆ;
ಕಾರಣ, ದೇವನಿರುವನು ನಮ್ಮೊಡನೆ.”
ದೇವರಿಗೆ ಭಯಪಡಬೇಕು
11ಜನರು ಅನುಸರಿಸುವ ಮಾರ್ಗದಲ್ಲಿ ನಾನು ನಡೆಯಬಾರದೆಂದು ಸರ್ವೇಶ್ವರ ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು ಎಚ್ಚರಿಕೆ ಇತ್ತರು: 12“ಈ ಜನರು ಮಾಡುವ ಕುತಂತ್ರಕ್ಕೆ ಒಳಗಾಗಬೇಡ. ಅವರು ಯಾವುದಕ್ಕೆ ಭಯಪಡುತ್ತಾರೋ ಅದಕ್ಕೆ ನೀನು ಭಯಪಡಬೇಡ, ನಡುಗಲೂ ಬೇಡ. 13ಸೇನಾಧೀಶ್ವರ ಸ್ವಾಮಿಯಾದ ನಾನು ಪವಿತ್ರನೆಂದು ಎಣಿಸಿ ನನಗೆ ಭಯಭಕ್ತಿಯಿಂದ ಸನ್ಮಾನಮಾಡು, ನನಗೆ ಹೆದರು. 14ನಾನು ನಿನಗೆ ಪವಿತ್ರಾಲಯ ಆಗಿರುವೆನು. ಆದರೆ ಇಸ್ರಯೇಲಿನ ಎರಡು ಕುಲಗಳಿಗೆ ಎಡವುವ ಕಲ್ಲಾಗುವೆನು, ಮುಗ್ಗರಿಸುವ ಬಂಡೆಯಾಗುವೆನು. ಜೆರುಸಲೇಮಿನ ನಿವಾಸಿಗಳನ್ನು ಹಿಡಿಯುವ ಬಲೆಯೂ ಬೋನೂ ಆಗುವೆನು. 15ಅನೇಕರು ಎಡವಿಬೀಳುವರು, ಮುಗ್ಗರಿಸಿ ಮೂಳೆ ಮುರಿದುಕೊಳ್ಳುವರು, ಬೋನಿಗೆ ಸಿಕ್ಕಿಕೊಳ್ಳುವರು, ಬಲೆಗೆ ಬೀಳುವರು.”
ಪ್ರೇತವಿಚಾರಕರ ಬಗ್ಗೆ ಎಚ್ಚರಿಕೆ
16ದಿವ್ಯಬೋಧನೆಯನ್ನು ಸುಭದ್ರವಾಗಿ ಇರಿಸು. ಅದನ್ನು ನನ್ನ ಶಿಷ್ಯರಿಗೆ ಉಪದೇಶಮಾಡಿ ಸುರಕ್ಷಿತವಾಗಿರಿಸು. 17ಯಕೋಬನ ಮನೆತನದವರಿಗೆ ತನ್ನ ಮುಖವನ್ನು ಮರೆಯಿಸಿಕೊಂಡು ಇರುವ ಸ್ವಾಮಿಗಾಗಿ ಕಾದಿರುವೆನು. ಸ್ವಾಮಿಯನ್ನೇ ಎದುರು ನೋಡುತ್ತಿರುವೆನು. 18ಇಗೋ, ನನ್ನನ್ನೂ ನನಗೆ ಸ್ವಾಮಿ ದಯಪಾಲಿಸಿರುವ ಮಕ್ಕಳನ್ನೂ ನೋಡು. ಸಿಯೋನ್ ಶಿಖರದಲ್ಲಿ ವಾಸವಾಗಿರುವ ಸೇನಾಧೀಶ್ವರಸ್ವಾಮಿಯೇ ಇಸ್ರಯೇಲರಿಗೆ ನೀಡುವ ಸೂಚನೆಗಳು ಹಾಗೂ ಜೀವಂತ ಸಂಕೇತಗಳು ನಾವೇ ಆಗಿದ್ದೇವೆ.
19‘ಲೊಚಗುಟ್ಟುವ, ಪಿಟಿಪಿಟಿಗುಟ್ಟುವ, ಕಣಿಹೇಳುವವರ ಮತ್ತು ಪ್ರೇತವಿಚಾರಕರ ಸಲಹೆ ಕೇಳಿ’ ಎಂದು ಜನರು ನಿಮಗೆ ಹೇಳಿಯಾರು. ಆಗ, ‘ದೇವರನ್ನೇ ಏಕೆ ವಿಚಾರಿಸಬಾರದು? ಜೀವಿತರಿಗಾಗಿ ಸತ್ತವರನ್ನು ವಿಚಾರಿಸುವುದು ಸರಿಯಲ್ಲ’ ಎಂದು ಅಂಥವರಿಗೆ ನೀವು ಹೇಳಬೇಕು. 20‘ದೇವರ ಉಪದೇಶವನ್ನೂ ದೇವರ ಬೋಧನೆಯನ್ನೂ ವಿಚಾರಿಸೋಣ’ ಎಂದು ಅವರು ಹೇಳುವತನಕ ಅವರಿಗೆ ಜ್ಞಾನೋದಯವಾಗುವುದಿಲ್ಲ.
ಕಷ್ಟದ ಕಾಲ
21ಜನರು ಘೋರ ಕಷ್ಟಗಳಿಗೆ ಒಳಗಾಗುವರು. ಹಸಿದು ದೇಶದಲ್ಲೆಲ್ಲ ಅಲೆದಾಡುವರು. ಹಸಿವಿನಿಂದ ರೋಷಗೊಂಡು ಅರಸನನ್ನೂ ದೇವರನ್ನೂ ಹಳಿಯುವರು. 22ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು.
Currently Selected:
ಯೆಶಾಯ 8: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.