YouVersion Logo
Search Icon

ಯೆಶಾಯ 10

10
1ಅನ್ಯಾಯವಾದ ನಿಬಂಧನೆಗಳನ್ನು ಕ್ರೂರವಾದ ಕಾನೂನುಗಳನ್ನು ರಚಿಸುವ ನಿಮಗೆ ಧಿಕ್ಕಾರ ! 2ನೀವು ದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತೀರಿ. ಬಡಬಗ್ಗರಿಂದ ಹಕ್ಕುಬಾಧ್ಯತೆಗಳನ್ನು ಕಸಿದುಕೊಳ್ಳುತ್ತೀರಿ. ವಿಧವೆಯರನ್ನು ಸೂರೆಮಾಡುತ್ತೀರಿ. ಅನಾಥರನ್ನು ಕೊಳ್ಳೆಹೊಡೆಯುತ್ತೀರಿ. 3ದಂಡನೆಯ ದಿನದಂದು ಏನು ಮಾಡುವಿರಿ? ದೂರದಿಂದ ಬರುವ ವಿನಾಶದಿಂದ ಹೇಗೆ ಪಾರಾಗುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಆಸ್ತಿಪಾಸ್ತಿಯನ್ನು ಎಲ್ಲಿ ಅವಿತಿಡುವಿರಿ? 4ಖೈದಿಗಳೊಂದಿಗೆ ಕಾರಾಗೃಹವನ್ನು ಸೇರುವಿರಿ; ಇಲ್ಲವೆ, ಇತರರ ಸಮೇತ ಹತರಾಗುವಿರಿ. ಇದೇ ನಿಮ್ಮ ಗತಿ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.
ಅಸ್ಸೀರಿಯಾದ ಅರಸ - ದೇವರ ಅಸ್ತ್ರ
5ಆಹಾ, ಅಸ್ಸೀರಿಯ ನಾಡೇ, ನೀನು ನನ್ನ ಕೋಪದ ದಂಡಾಯುಧ, ರೋಷದ ದೊಣ್ಣೆ. 6ಆ ಧರ್ಮಭ್ರಷ್ಟ ಪ್ರಜೆಗೆ ಇದಿರಾಗಿ ಅಸ್ಸೀರಿಯವನ್ನು ಕಳುಹಿಸುತ್ತೇನೆ. ನನ್ನ ಕೋಪಕ್ಕೆ ಗುರಿಯಾದ ಜನರಿಗೆ ವಿರುದ್ಧ ಕಾರ್ಯವನ್ನು ಕೈಗೊಳ್ಳಲು ಆಜ್ಞೆ ಮಾಡುತ್ತೇನೆ. ನನ್ನ ಪ್ರಜೆಯನ್ನು ಸೂರೆಮಾಡಲು, ಕೊಳ್ಳೆಹೊಡೆಯಲು, ಬೀದಿಯ ಕಸದಂತೆ ತುಳಿದುಬಿಡಲು ಅದಕ್ಕೆ ಆಜ್ಞೆಮಾಡುತ್ತೇನೆ.
7ಆದರೆ ಅಸ್ಸೀರಿಯದ ಆಲೋಚನೆಯೇ ಬೇರೆ. ಅನೇಕಾನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲಮಾಡಬೇಕೆಂಬ ಯೋಜನೆ ಅದರದು. 8“ನನ್ನ ದಂಡನಾಯಕರೆಲ್ಲ ಅರಸರಲ್ಲವೇ? 9ಕರ್ಕೆಮೀಷಿನ ಗತಿ ಕಲ್ನೋವಿಗೂ ಬಂತಲ್ಲವೇ? ಅರ್ಪದಿಗೆ ಬಂದ ಪಾಡು ಹಮಾತಿಗೂ ಬಂದಿತಷ್ಟೆ. ದಮಸ್ಕಸ್ಸಿನ ಅವಸ್ಥೆಯು ಸಮಾರ್ಯಕ್ಕೂ ಸಂಭವಿಸಿತು. 10ಜೆರುಸಲೇಮ್ ಮತ್ತು ಸಮಾರ್ಯದ ವಿಗ್ರಹಗಳಿಗಿಂತ ಹೆಚ್ಚಿನ ಮೌಲ್ಯದ ಕೆತ್ತನೆಯ ಮೂರ್ತಿಗಳನ್ನು ಆರಾಧಿಸುವ ರಾಜ್ಯಗಳನ್ನು ನಾನು ಗೆದ್ದಿದ್ದೇನೆ. 11ಸಮಾರ್ಯವನ್ನೂ ಅದರ ವಿಗ್ರಹಗಳನ್ನೂ ನಾಶಮಾಡಿದ ಪ್ರಕಾರ ಜೆರುಸಲೇಮನ್ನೂ ಅದರ ಮೂರ್ತಿಗಳನ್ನೂ ನಾಶಮಾಡುತ್ತೇನೆ” ಎಂದು ಅಸ್ಸೀರಿಯ ಕೊಚ್ಚಿಕೊಳ್ಳುತ್ತಿದೆ.
12ಆದರೆ ಸರ್ವೇಶ್ವರನಾದ ನಾನು ಸಿಯೋನ್ ಪರ್ವತದಲ್ಲೂ ಜೆರುಸಲೇಮಿನಲ್ಲೂ ನನ್ನ ಗುರಿಯನ್ನು ಸಾಧಿಸಿದ ಮೇಲೆ ಆ ಅಸ್ಸೀರಿಯದ ಅರಸನನ್ನು ಅವನ ದುರಹಂಕಾರಕ್ಕಾಗಿ, ಗರ್ವದ ಭಾವನೆಗಳಿಗಾಗಿ ಸರಿಯಾಗಿ ದಂಡಿಸುವೆನು. 13ಅಸ್ಸೀರಿಯದ ಅನಿಸಿಕೆಯಿದು: “ನಾನು ವಿವೇಕಿ, ನನ್ನ ಭುಜಬಲದಿಂದಲೇ ಇದನ್ನು ಮಾಡಿದ್ದೇನೆ. ನನ್ನ ಜ್ಞಾನಶಕ್ತಿಯಿಂದಲೇ ಇದನ್ನು ಸಾಧಿಸಿದ್ದೇನೆ. ನಾಡುಗಳ ಮಧ್ಯೆಯಿರುವ ಎಲ್ಲೆಗಳನ್ನು ಕಿತ್ತುಹಾಕಿದ್ದೇನೆ. ಅವು ಕೂಡಿಸಿಟ್ಟುಕೊಂಡಿದ್ದ ನಿಕ್ಷೇಪಗಳನ್ನು ಸೂರೆಮಾಡಿದ್ದೇನೆ. ಗದ್ದುಗೆಯ ಮೇಲೆ ಕುಳಿತಿರುವವರನ್ನು ಮಹಾ ವೀರನಂತೆ ಕೆಡವಿಬಿಟ್ಟಿದ್ದೇನೆ. 14(ಬೇಡನು)ಹಕ್ಕಿಯ ಗೂಡನ್ನು ಕಂಡುಹಿಡಿಯುವಂತೆ ಜನಾಂಗಗಳ ಆಸ್ತಿಪಾಸ್ತಿಯನ್ನು ಹಿಡಿದುಕೊಂಡಿದ್ದೇನೆ. ಹಕ್ಕಿ ಬಿಟ್ಟುಹೋದ ಮೊಟ್ಟೆಗಳನ್ನು ಒಟ್ಟುಗೂಡಿಸಿಟ್ಟುಕೊಳ್ಳುವಂತೆ ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ. ರೆಕ್ಕೆಯಾಡಿಸಿ ಬೆದರಿಸಲು ಯಾರೂ ಇರಲಿಲ್ಲ. ಕೊಕ್ಕು ತೆರೆದು ಕೀಚುಗುಟ್ಟಲು ಯಾರೂ ಕಾಣಲಿಲ್ಲ.”
15ಕೊಡಲಿ, ಕಡಿಯುವವನನ್ನೇ ಕಡಿಯಲು ನಿಂತೀತೆ? ಗರಗಸ, ಆಡಿಸುವವನನ್ನೇ ಕತ್ತರಿಸಲು ಎದೆಗೊಂಡೀತೆ? ಕೋಲು, ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ದೊಣ್ಣೆ ಸಜೀವ ಮನುಷ್ಯನನ್ನೇ ಬಡಿದಂತಾಯಿತು!
16ಆದಕಾರಣ, ಒಡೆಯರಾದ ಸೇನಾಧೀಶ್ವರ ಸರ್ವೇಶ್ವರ ಅಸ್ಸೀರಿಯಾದ ಕೊಬ್ಬಿದ ಯೋಧರಿಗೆ ಕ್ಷಯರೋಗವನ್ನು ಬರಮಾಡುವರು. ಅವರ ದೇಹಕ್ಕೆ ಬೆಂಕಿಯಂತೆ ಉರಿಯುವ ಜ್ವರವನ್ನು ಉಂಟುಮಾಡುವರು. 17ಇಸ್ರಯೇಲಿನ ಪರಂಜ್ಯೋತಿಯಾದ ದೇವರು ಅಗ್ನಿಯಂತಾಗುವರು; ಇಸ್ರಯೇಲಿನ ಪರಮಪಾವನ ಸ್ವಾಮಿ ಜ್ವಾಲೆಯಂತಾಗುವರು; ಅದು ಒಂದೇ ಒಂದು ದಿನದಲ್ಲಿ ಅಸ್ಸೀರಿಯರ ಮುಳ್ಳುಪೊದರುಗಳನ್ನೂ ಬಿಡದೆ ಎಲ್ಲವನ್ನೂ ದಹಿಸಿಬಿಡುವುದು. 18ದೇಹಾತ್ಮದಂಥ ಅದರ ಉದ್ಯಾನವನವನ್ನೂ ಫಲಭರಿತ ತೋಟವನ್ನೂ ನಿರ್ಮೂಲ ಮಾಡುವುದು. ಮಾರಕರೋಗ ತಗಲಿದ ರೋಗಿಯಂತೆ ದೇಶವೆಲ್ಲವೂ ಕರಗಿಹೋಗುವುದು. 19ಅದರ ಅಳಿದುಳಿದ ಮರಗಳು ಒಂದು ಕೂಸು ಕೂಡ ಎಣಿಸಿ ಬರೆಯುವಷ್ಟು ಕಡಿಮೆಯಾಗುವುವು.
ಅಳಿದುಳಿದ ಇಸ್ರಯೇಲರು
20ಆ ದಿನದಂದು ಅಳಿದುಳಿದ ಇಸ್ರಯೇಲರು, ತಪ್ಪಿಸಿಕೊಂಡ ಯಕೋಬ ಮನೆತನದವರು ತಮ್ಮನ್ನು ಬಾಧಿಸಿದವರನ್ನು ನೆಮ್ಮುವುದಿಲ್ಲ. ಬದಲಿಗೆ ಇಸ್ರಯೇಲರ ಪರಮಪಾವನ ಸ್ವಾಮಿಯಾದ ಸರ್ವೇಶ್ವರನನ್ನೇ ನಿಶ್ಚಯವಾಗಿ ಆಶ್ರಯಿಸುವರು. 21ಯಕೋಬ ಮನೆತನದವರಲ್ಲಿ ಅಳಿದುಳಿದ ಕೆಲವರು ಪರಾಕ್ರಮಿಯಾದ ದೇವರ ಕಡೆಗೆ ತಿರುಗಿಕೊಳ್ಳುವರು. 22ಇಸ್ರಯೇಲೇ, ನಿನ್ನ ಜನರು ಸಮುದ್ರದ ಮರಳಿನಂತೆ ಅಸಂಖ್ಯಾತರಾಗಿ ಇದ್ದರೂ ಅವರಲ್ಲಿ ಕೆಲವರು ಮಾತ್ರ ಉಳಿದು ಹಿಂದಿರುಗುವರು. ಅವರ ಅಳಿವು ಶಾಸನಬದ್ಧವಾದುದು ಹಾಗೂ ಸಂಪೂರ್ಣವಾಗಿ ನ್ಯಾಯಸಮ್ಮತವಾದುದು. 23ಹೌದು, ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ, ತಮ್ಮ ಆಜ್ಞೆಯ ಪ್ರಕಾರ ನಾಡಿನಲ್ಲೆಲ್ಲಾ ಪೂರ್ಣ ವಿನಾಶವನ್ನು ಬರಮಾಡುವರು.
ಅಸ್ಸೀರಿಯಾಗೆ ದಂಡನೆ ಖಚಿತ
24ಹೀಗಿರಲು ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಹೇಳುವುದೇನೆಂದರೆ: “ಸಿಯೋನಿನಲ್ಲಿ ವಾಸಿಸುವ ನನ್ನ ಜನರೇ, ಈಜಿಪ್ಟಿನವರು ನಿಮಗೆ ಮಾಡಿದಂತೆ ಅಸ್ಸೀರಿಯದವರು ನಿಮ್ಮನ್ನು ಬಡಿಗೆಯಿಂದ ಹೊಡೆದು, ನಿಮಗೆ ವಿರುದ್ಧ ದೊಣ್ಣೆಯನ್ನು ಎತ್ತುವಾಗ ಅವರಿಗೆ ಹೆದರಬೇಡಿ; 25ನಿಮ್ಮ ಮೇಲಿರುವ ನನ್ನ ಕೋಪ ಬಹುಬೇಗನೆ ಇಳಿದು, ಅವರ ಮೇಲೆ ತಿರುಗಿಕೊಳ್ಳುವುದು. 26ಸೇನಾಧೀಶ್ವರ ಸರ್ವೇಶ್ವರಸ್ವಾಮಿಯಾದ ನಾನು, ಒಮ್ಮೆ ಓರೇಬನ ಬಂಡೆಯ ಬಳಿ ಮಿದ್ಯಾನರಿಗೆ ಮಾಡಿದಂತೆ, ಅಸ್ಸೀರಿಯದವರನ್ನು ಚಾಟಿಯಿಂದ ಥಳಿಸುವೆನು. ಕೆಂಪುಸಮುದ್ರದಲ್ಲಿ ಈಜಿಪ್ಟರನ್ನು ದಂಡಿಸಿದಂತೆ ಅಸ್ಸೀರಿಯದವರನ್ನು ದಂಡಿಸಲು ದೊಣ್ಣೆಯನ್ನೆತ್ತುವೆನು. 27ಆ ದಿನ ಬಂದಾಗ ಅವರು ನಿಮ್ಮ ಮೇಲೆ ಹೊರಿಸಿರುವ ಗುಲಾಮಗಿರಿಯನ್ನು ಕಳಚಿಹಾಕಲಾಗುವುದು. ನಿಮ್ಮ ಕೊರಳಿಗೆ ಕಟ್ಟಿದ ದಾಸ್ಯದ ನೊಗವನ್ನು ಮುರಿದುಹಾಕಲಾಗುವುದು.”
ಶತ್ರುವಿನ ಮುತ್ತಿಗೆ
28ಶತ್ರುಸೇನೆ ಅಯ್ಯಾಥಿನ ಮೇಲೆ ಬಂದು ಇಳಿದಿದೆ. ಮಿಗ್ರೋನನ್ನು ಹಾದುಹೋಗಿದೆ; ಮಿಕ್ಮಾಷಿನಲ್ಲಿ ತನ್ನ ಸಾಮಗ್ರಿಗಳನ್ನು ಬಿಟ್ಟಿದೆ. 29ಕಣಿವೆಯನ್ನು ದಾಟಿದೆ; ‘ಗೆಬಾದಲ್ಲಿ ದಂಡಿಳಿಸೋಣ’ ಎಂದು ಹೇಳುತ್ತಿದೆ. ರಾಮಾ ಜನತೆ ನಡುಗುತ್ತಿದೆ, ಸೌಲನ ಗಿಬೆಯದ ಜನ ಪಲಾಯನ ಗೈದಿದೆ. 30ಗಲ್ಲೀಮ್ ಗ್ರಾಮಸ್ಥರೇ, ಕೂಗಿ ಕಿರಿಚಿಕೊಳ್ಳಿ. ಲಯೇಷದ ಜನರೇ, ಕಿವಿಗೊಡಿರಿ. ಅನಾತೋತಿನ ಜನರೇ, ಪ್ರತ್ಯುತ್ತರ ಕೊಡಿ. 31ದಿಕ್ಕುಪಾಲಾಗಿಹರು ಮದ್ಮೇನಿನ ಜನರು; ವಲಸೆ ಹೋಗಿಹರು ಗೇಬೆಮಿನ ನಿವಾಸಿಗಳು. 32ಅದೇ ದಿನ ಬೀಡುಬಿಡುವರು ಶತ್ರುಗಳು ನೋಬಿನಲ್ಲಿ; ಸಿಯೋನ್ ಬೆಟ್ಟದ ಕಡೆಗೆ, ಜೆರುಸಲೇಮಿನ ಗುಡ್ಡದ ಕಡೆಗೆ ಮುಷ್ಟಿ ತೋರಿಸುತ್ತಿಹರಿದೊ ಆ ದಿಕ್ಕಿಗೆ.
33ಇಗೋ, ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಮರದ ಕೊಂಬೆಗಳನ್ನು ದುಡುಮ್ಮನೆ ಬೀಳಿಸುವರು. ಉನ್ನತವಾದ ವೃಕ್ಷಗಳನ್ನು ಕಡಿದುಹಾಕುವರು. ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು. 34ಕಾಡಿನ ಪೊದೆಗಳನ್ನು ಕೊಡಲಿಯಿಂದ ಕಡಿದುಬಿಡುವರು. ಲೆಬನೋನಿನ ಭವ್ಯ ಮರಗಳು ಬಿದ್ದುಹೋಗುವುವು.

Currently Selected:

ಯೆಶಾಯ 10: KANCLBSI

Highlight

Share

Copy

None

Want to have your highlights saved across all your devices? Sign up or sign in