YouVersion Logo
Search Icon

ಹಿಬ್ರಿಯರಿಗೆ 13

13
ಸೂಕ್ತ ತಿಳುವಳಿಕೆ
1ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ. 2ಅತಿಥಿಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೆ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ. 3ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ. ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ. ಅನ್ಯಾಯಕ್ಕೆ ಒಳಗಾಗಿರುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ?
4ವಿವಾಹಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ.
5ಹಣದಾಶೆಗೆ ಬಲಿಯಾಗಬೇಡಿ. ನಿಮಗೆ ಇರುವುದರಲ್ಲಿಯೇ ತೃಪ್ತರಾಗಿರಿ. “ಎಂದೆಂದಿಗೂ ನಾನು ನಿನ್ನ ಕೈಬಿಡಲಾರೆ; ತ್ಯಜಿಸಲಾರೆ,” ಎಂದು ದೇವರೇ ಹೇಳಿದ್ದಾರೆ. 6ಆದ್ದರಿಂದ, “ಸರ್ವೇಶ್ವರ ನನಗೆ ಸಹಾಯಕ, ನಾನು ಭಯಪಡೆನು; ಮಾನವನು ನನಗೇನು ಮಾಡಬಲ್ಲನು?” ಎಂದು ನಾವು ಧೈರ್ಯದಿಂದ ಹೇಳಲು ಸಾಧ್ಯ.
7ದೇವರ ವಾಕ್ಯವನ್ನು ನಿಮಗೆ ಹೇಳಿಕೊಟ್ಟ ಹಿಂದಿನ ಸಭಾನಾಯಕರನ್ನು ಮರೆಯಬೇಡಿ. ಅವರು ಹೇಗೆ ಬಾಳಿದರು, ಎಂಥ ಮರಣವನ್ನು ಪಡೆದರು ಎಂಬುದನ್ನು ಕುರಿತು ಆಲೋಚಿಸಿರಿ. ಅವರ ವಿಶ್ವಾಸ ನಿಮಗೆ ಆದರ್ಶವಾಗಿರಲಿ. 8ಯೇಸುಕ್ರಿಸ್ತರು, ನಿನ್ನೆ ಇದ್ದಹಾಗೆಯೇ ಇಂದೂ ಎಂದೆಂದೂ ಇದ್ದಾರೆ. 9ನಾನಾವಿಧವಾದ ವಿಚಿತ್ರ ಬೋಧನೆಗಳ ಸೆಳೆತಕ್ಕೆ ಸಿಲುಕದಿರಿ. ನಿಮ್ಮ ಹೃದಯವನ್ನು, ಊಟೋಪಚಾರಗಳನ್ನು ಕುರಿತ ವಿಧಿನಿಯಮಗಳಿಂದ ಅಲ್ಲ, ದೇವರ ವರಪ್ರಸಾದದಿಂದ ದೃಢಪಡಿಸಿಕೊಳ್ಳಿ. ಅಂಥ ವಿಧಿನಿಯಮಗಳಿಗೆ ಬದ್ಧರಾಗಿದ್ದವರು ಯಾವ ಪ್ರಯೋಜನವನ್ನೂ ಪಡೆಯಲಿಲ್ಲ.
10ನಮಗೊಂದು ಬಲಿಪೀಠವಿದೆ; ಅಲ್ಲಿ ಅರ್ಪಿಸಲಾಗುವ ಬಲಿಯನ್ನು ಭುಜಿಸಲು ಯೆಹೂದ್ಯ ಗುಡಾರಗಳಲ್ಲಿ ಸೇವೆಸಲ್ಲಿಸುವ ಯಾಜಕರಿಗೆ ಹಕ್ಕಿಲ್ಲ. 11ಪ್ರಧಾನಯಾಜಕನು ಪಾಪಪರಿಹಾರಕ ಬಲಿಗಾಗಿ ಯಾವ ಪ್ರಾಣಿಗಳ ರಕ್ತವನ್ನು ಗರ್ಭಗುಡಿಗೆ ತರುತ್ತಾನೋ ಆ ಪ್ರಾಣಿಗಳ ದೇಹವನ್ನು ಪಾಳೆಯದಾಚೆ ಸುಡುವುದುಂಟು. 12ಯೇಸುಸ್ವಾಮಿ ಕೂಡ ತಮ್ಮ ರಕ್ತದಿಂದ ಜನರನ್ನು ಪರಿಶುದ್ಧಗೊಳಿಸುವುದಕ್ಕೋಸ್ಕರ, ನಗರದ್ವಾರದ ಹೊರಗಡೆ ಮರಣಕ್ಕೆ ಈಡಾದರು. 13ಅಂತೆಯೇ ನಾವು ಅವರ ನಿಮಿತ್ತ ನಮಗೆ ಬರುವ ನಿಂದೆ ಅವಮಾನಗಳನ್ನು ಹೊತ್ತು ನಮ್ಮ ಪಾಳೆಯದಿಂದಾಚೆ ಅವರ ಬಳಿಗೆ ಹೋಗೋಣ. 14ಏಕೆಂದರೆ, ಇಹದಲ್ಲಿ ಶಾಶ್ವತವಾದ ನಗರವು ನಮಗಿಲ್ಲ. ಬರಲಿರುವ ನಗರವನ್ನು ನಾವು ಎದುರುನೋಡುವವರು. 15ಆದ್ದರಿಂದ, ಪ್ರಭುವಾದ ಯೇಸುಕ್ರಿಸ್ತರನ್ನು ಮುಕ್ತಕಂಠದಿಂದ ಗುಣಗಾನಮಾಡುತ್ತಾ ಅವರ ಮುಖಾಂತರ ಸ್ತುತಿಯೆಂಬ ಬಲಿಯನ್ನು ದೇವರಿಗೆ ಸತತವಾಗಿ ಸಮರ್ಪಿಸೋಣ. 16ಇದಲ್ಲದೆ, ಪರೋಪಕಾರ ಮಾಡುವುದನ್ನೂ ನಿಮಗಿರುವುದನ್ನು ಪರರೊಡನೆ ಹಂಚಿಕೊಳ್ಳುವುದನ್ನೂ ನಿಲ್ಲಿಸಬೇಡಿ. ಇವು ಕೂಡ ದೇವರಿಗೆ ಮೆಚ್ಚುಗೆಯಾದ ಬಲಿಯರ್ಪಣೆಗಳೇ.
17ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ. ಅವರ ಆಜ್ಞೆಗಳನ್ನು ಪಾಲಿಸಿರಿ. ಅವರು ನಿಮ್ಮ ಆತ್ಮಗಳ ಪಾಲಕರು; ದೇವರಿಗೆ ಲೆಕ್ಕ ಒಪ್ಪಿಸಬೇಕಾದವರು. ಈ ಸೇವೆಯನ್ನು ಅವರು ಸಂತೋಷದಿಂದ ಮಾಡುವಂತೆ ನೀವು ನಡೆದುಕೊಳ್ಳಿ. ಅವರು ಮನನೊಂದುಕೊಂಡು ಮಾಡುವ ಸೇವೆಯಿಂದ ನಿಮಗೆ ಒಳಿತಾಗದು.
18ನಮಗಾಗಿಯೂ ಪ್ರಾರ್ಥಿಸಿರಿ. ಎಲ್ಲಾ ವಿಷಯಗಳಲ್ಲಿ ನಾವು ಸಜ್ಜನರಾಗಿ ನಡೆದುಕೊಳ್ಳಬೇಕೆಂಬುದೇ ನಮ್ಮ ಅಪೇಕ್ಷೆ. ನಮ್ಮ ಮನಸ್ಸಾಕ್ಷಿ ಶುದ್ಧವಾಗಿದೆಯೆಂಬ ದೃಢನಂಬಿಕೆ ನಮಗಿದೆ. 19ನಿಮ್ಮ ಬಳಿಗೆ ನಾನು ಆದಷ್ಟು ಬೇಗನೆ ಬಂದು ಸೇರುವಂತೆ ಪ್ರಾರ್ಥಿಸಬೇಕೆಂದು ನಿಮ್ಮನ್ನು ಬಹಳವಾಗಿ ಕೇಳಿಕೊಳ್ಳುತ್ತೇನೆ.
ಆಶೀರ್ವಚನ
20ಸಭೆಯೆಂಬ ಕುರಿಮಂದೆಗೆ ಮಹಾಪಾಲಕರಾದ ಯೇಸುಸ್ವಾಮಿ ಶಾಶ್ವತ ಒಡಂಬಡಿಕೆಯನ್ನು ನಿಶ್ಚಯಪಡಿಸುವುದಕ್ಕಾಗಿ ತಮ್ಮ ರಕ್ತವನ್ನು ಸುರಿಸಿದರು. ಶಾಂತಿದಾತರಾದ ದೇವರು ನಮ್ಮ ಪ್ರಭುವನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದರು. 21ನೀವು ಇಂಥ ದೇವರ ಚಿತ್ತವನ್ನು ನೆರವೇರಿಸಲು ನಿಮಗೆ ಬೇಕಾದ ಎಲ್ಲಾ ವರದಾನಗಳನ್ನು ಅವರು ನಿಮಗೆ ಅನುಗ್ರಹಿಸಲಿ. ಸ್ವಾಮಿ ಯೇಸುಕ್ರಿಸ್ತರ ಮುಖಾಂತರ ನಾವು ಅವರಿಗೆ ಪ್ರಿಯರಾದವರಾಗಿ ಬಾಳುವಂತಾಗಲಿ. ಯೇಸುಕ್ರಿಸ್ತರಿಗೆ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್.
22ಸಹೋದರರೇ, ಈ ಬುದ್ಧಿಮಾತುಗಳನ್ನು ತಾಳ್ಮೆಯಿಂದ ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇವನ್ನು ಸಂಕ್ಷೇಪವಾಗಿಯೇ ನಿಮಗೆ ಬರೆದಿದ್ದೇನೆ. 23ನಿಮ್ಮ ಸಹೋದರ ತಿಮೊಥೆಯನಿಗೆ ಬಿಡುಗಡೆಯಾಗಿದೆ ಎಂದು ನಿಮಗೆ ತಿಳಿಸಬಯಸುತ್ತೇನೆ. ಆತನು ಬೇಗ ಬಂದರೆ, ನಾನೂ ಆತನೊಂದಿಗೆ ಬಂದು ನಿಮ್ಮನ್ನು ಕಾಣುತ್ತೇನೆ.
24ನಿಮ್ಮ ಸಭಾನಾಯಕರೆಲ್ಲರಿಗೂ ಎಲ್ಲಾ ದೇವಜನರಿಗೂ ನನ್ನ ವಂದನೆಗಳು. ಇಟಲಿಯಿಂದ ಬಂದ ಸಹೋದರರು ನಿಮಗೆ ವಂದನೆ ತಿಳಿಸಿದ್ದಾರೆ.
25ದೇವರ ಕೃಪಾಶೀರ್ವಾದ ನಿಮ್ಮೆಲ್ಲರಲ್ಲೂ ಇರಲಿ!

Highlight

Share

Copy

None

Want to have your highlights saved across all your devices? Sign up or sign in