ಹಿಬ್ರಿಯರಿಗೆ 12
12
ಶಿಸ್ತಿಗಾಗಿ ಶಿಕ್ಷೆ
1ಆದಕಾರಣ ಇಷ್ಟುಮಂದಿ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಆವರಿಸಿರುವಾಗ, ನಮಗೆ ಅಡ್ಡಿಯಾಗಬಲ್ಲ ಹೊರೆಯನ್ನೂ ಅಂಟಿಕೊಳ್ಳುವ ಪಾಪವನ್ನೂ ತೆಗೆದುಹಾಕಿ, ನಮಗಾಗಿ ನೇಮಿಸಿರುವ ಓಟದ ಸ್ಪರ್ಧೆಯಲ್ಲಿ ನಾವು ಸ್ಥಿರಚಿತ್ತದಿಂದ ಭಾಗವಹಿಸೋಣ. 2ವಿಶ್ವಾಸವನ್ನು ಹುಟ್ಟಿಸುವ ಮತ್ತು ಅದನ್ನು ಪರಿಪೂರ್ಣಗೊಳಿಸುವ ಯೇಸುಸ್ವಾಮಿಯನ್ನು ಗುರಿಯಾಗಿಟ್ಟು ಓಡೋಣ. ಅವರು ತಮ್ಮ ಮುಂದಿಡಲಾದ ಸೌಭಾಗ್ಯವನ್ನು ಗಳಿಸಲು ನಿಂದೆ ಅವಮಾನಗಳನ್ನು ಲೆಕ್ಕಿಸದೆ ಶಿಲುಬೆಯ ಮರಣವನ್ನು ಸಹಿಸಿಕೊಂಡರು. ಈಗಲಾದರೋ ದೇವರ ಸಿಂಹಾಸನದ ಬಲಗಡೆ ಆಸೀನರಾಗಿದ್ದಾರೆ.
3ಪಾಪಿಗಳಿಂದ ತಮಗುಂಟಾದ ಕಠಿಣ ವಿರೋಧವನ್ನು ಯೇಸುಸ್ವಾಮಿ ಹೇಗೆ ಸಹಿಸಿಕೊಂಡರೆಂಬುದನ್ನು ಮನಸ್ಸಿನಲ್ಲಿಡಿ. ಆಗ ನೀವು ಬೇಸತ್ತು ಎದೆಗುಂದಲಾರಿರಿ. 4ಪಾಪದ ವಿರುದ್ಧ ನೀವು ಕೈಗೊಂಡ ಹೋರಾಟದಲ್ಲಿ ನಿಮ್ಮ ರಕ್ತವನ್ನೇ ಸುರಿಸುವ ಸ್ಥಿತಿಗೆ ನೀವಿನ್ನೂ ಬಂದಿಲ್ಲ. 5ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ?
“ಸುಕುಮಾರಾ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು
ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು
6ಸರ್ವೇಶ್ವರ ತಾವು ಪ್ರೀತಿಸುವವನನ್ನು ಶಿಕ್ಷಿಸುವರು;
ತಮಗೆ ಮಗನೆಂದು ಬರಮಾಡಿಕೊಳ್ಳುವವನನ್ನು ದಂಡಿಸುವರು.”
7ಶಿಸ್ತಿಗಾಗಿ ಶಿಕ್ಷೆಯನ್ನು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಂದೆಯಿಂದ ಶಿಕ್ಷೆಯನ್ನು ಪಡೆಯದ ಮಗನಿದ್ದಾನೆಯೇ? 8ದೇವರು ಎಲ್ಲಾ ಮಕ್ಕಳನ್ನು ಶಿಕ್ಷಿಸುವಾಗ, ನೀವು ಮಾತ್ರ ಅದಕ್ಕೆ ಹೊರತಾದರೆ ನೀವು ತಂದೆಗೆ ಹುಟ್ಟಿದವರಲ್ಲ, ಹಾದರಕ್ಕೆ ಹುಟ್ಟಿದವರು. 9ಲೌಕಿಕ ತಂದೆ ನಮ್ಮನ್ನು ಶಿಕ್ಷಿಸಿದಾಗಲೂ ನಾವು ಅವರನ್ನು ಗೌರವಿಸುತ್ತೇವೆ. ಹೀಗಿರುವಲ್ಲಿ, ಪಾರಮಾರ್ಥಿಕ ತಂದೆಯಾದ ದೇವರಿಗೆ ನಾವು ಎಷ್ಟೋ ವಿಧೇಯರಾಗಿ ಬಾಳಬೇಕಲ್ಲವೇ? 10ಲೌಕಿಕ ತಂದೆಯಾದವರು ತಮ್ಮ ಮನಸ್ಸಿಗೆ ಸರಿದೋರಿದಂತೆ ನಮ್ಮನ್ನು ಶಿಕ್ಷಿಸುತ್ತಾರೆ. ಅದು ಕೊಂಚಕಾಲಕ್ಕೆ ಮಾತ್ರ ಪರಿಣಾಮಕರವಾಗಿರುತ್ತದೆ. ದೇವರಾದರೋ ನಾವು ಅವರ ಪರಿಶುದ್ಧತೆಯಲ್ಲೇ ಭಾಗಿಗಳಾಗುವಂತೆ ನಮ್ಮ ಹಿತಕ್ಕೋಸ್ಕರ ಶಿಕ್ಷಿಸುತ್ತಾರೆ. 11ಯಾವ ಶಿಕ್ಷೆಯಾದರೂ ತಕ್ಷಣಕ್ಕೆ ಸಿಹಿಯಾಗಿರದೆ ಕಹಿಯಾಗಿಯೇ ಇರುತ್ತದೆ. ಹೀಗೆ ಶಿಸ್ತಿನ ಕ್ರಮಕ್ಕೆ ಒಳಗಾದವರು ಮುಂದಕ್ಕೆ ನ್ಯಾಯನೀತಿಯನ್ನೂ ಶಾಂತಿಸಮಾಧಾನವನ್ನೂ ಪ್ರತಿಫಲವಾಗಿ ಪಡೆಯುತ್ತಾರೆ.
ದೇವರ ಧ್ವನಿಯನ್ನು ಕಡೆಗಣಿಸದಿರಿ
12ಆದ್ದರಿಂದ, ಜೋತುಬೀಳುವ ನಿಮ್ಮ ಕೈಗಳನ್ನು ಮೇಲೆತ್ತಿ, ಕುಸಿದುಬೀಳುವ ನಿಮ್ಮ ಮೊಣಕಾಲುಗಳನ್ನು ಚೇತರಿಸಿಕೊಳ್ಳಿ. 13ನೀವು ಹಿಡಿದಿರುವ ಹಾದಿಯನ್ನು ಸರಿಪಡಿಸಿಕೊಳ್ಳಿ. ಆಗ ಕುಂಟುವ ಕಾಲು ಉಳುಕದೆ ವಾಸಿಯಾಗುತ್ತದೆ.
14ಎಲ್ಲರೊಂದಿಗೂ ಶಾಂತಿಸಮಾಧಾನದಿಂದಿರಲು ಪ್ರಯತ್ನಿಸಿರಿ; ಪರಿಶುದ್ಧತೆಯನ್ನು ಅರಸಿರಿ; ಪರಿಶುದ್ಧತೆಯಿಲ್ಲದೆ ಯಾರೂ ದೇವರನ್ನು ಕಾಣುವಂತಿಲ್ಲ. 15ನಿಮ್ಮಲ್ಲಿ ಯಾರೂ ದೇವರ ಅನುಗ್ರಹವನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಾಗಿರಿ. ಯಾವ ವಿಷದ ಬೇರೂ ನಿಮ್ಮಲ್ಲಿ ತಲೆದೋರಿ, ಅಸಮಾಧಾನವನ್ನು ಹುಟ್ಟಿಸಿ, ಸಭೆಯನ್ನು ಕೆಡಿಸದಂತೆ ನೋಡಿಕೊಳ್ಳಿ. 16ನಿಮ್ಮಲ್ಲಿ ಯಾರೂ ಕಾಮುಕರಾಗಬಾರದು. ಏಸಾವನಂತೆ ಅಧರ್ಮಿಗಳು ಆಗಬಾರದು. ಆತನು, ಒಪ್ಪೊತ್ತಿನ ಊಟಕ್ಕಾಗಿ ತನ್ನ ಜನ್ಮಸಿದ್ಧವಾದ ಹಕ್ಕನ್ನೇ ಮಾರಿಕೊಂಡನು. 17ಅನಂತರ ತಂದೆಯ ಆಶೀರ್ವಾದವನ್ನು ಬಾಧ್ಯವಾಗಿ ಪಡೆಯಲು ಕಣ್ಣೀರಿಟ್ಟು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ; ತಂದೆಯ ತೀರ್ಮಾನವನ್ನು ಮಾರ್ಪಡಿಸುವ ಸಾಧ್ಯತೆಯೂ ಇರಲಿಲ್ಲ. ಇದು ನಿಮಗೆ ತಿಳಿದ ವಿಷಯ.
18ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು; 19ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. 20ಏಕೆಂದರೆ, ಈ ಬೆಟ್ಟವನ್ನು ಮುಟ್ಟುವ ಯಾರೇ ಆಗಲಿ, ಯಾವ ಪ್ರಾಣಿಯೇ ಆಗಲಿ, ಅದನ್ನು ಕಲ್ಲೆಸೆದು ಕೊಲ್ಲಬೇಕು, ಎಂಬ ಆಜ್ಞೆಯನ್ನು ಅವರು ಸಹಿಸಲಾರದೆಹೋದರು. 21ಆ ನೋಟ ಎಷ್ಟು ಭಯಂಕರವಾಗಿತ್ತೆಂದರೆ, ಮೋಶೆ ಕೂಡ, “ನಾನು ಭಯದಿಂದ ನಡುಗುತ್ತಿದ್ದೇನೆ,” ಎಂದು ಹೇಳುವಂತಾಯಿತು!
22ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ, ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ, ಅಸಂಖ್ಯ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; 23ಸ್ವರ್ಗದಲ್ಲಿ ದಾಖಲೆಯಾಗಿರುವ ಜೇಷ್ಠಪುತ್ರನ ಸಭೆಗೆ; ನೀವು ಬಂದಿರುವುದು ಸಕಲ ಮಾನವರ ನ್ಯಾಯಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; 24ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕ್ಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾರಕ್ತದ ಬಳಿಗೆ ನೀವು ಬಂದಿದ್ದೀರಿ.
25ಆದ್ದರಿಂದ ನಿಮ್ಮೊಡನೆ ಮಾತಾಡುವ ದೇವರ ಧ್ವನಿಯನ್ನು ಕಡೆಗಣಿಸಬೇಡಿ. ಭೂಮಿಯ ಮೇಲೆ ತಮಗೆ ಬುದ್ಧಿವಾದ ಹೇಳಿದವರನ್ನು ಕಡೆಗಣಿಸಿದವರು ದಂಡನೆಯಿಂದ ತಪ್ಪಿಸಿಕೊಳ್ಳಲಿಲ್ಲ. ಹೀಗಿರುವಲ್ಲಿ, ನಮಗೆ ಸ್ವರ್ಗಲೋಕದಿಂದ ಬುದ್ಧಿವಾದ ಹೇಳಿದಾತನನ್ನು ಕಡೆಗಣಿಸಿದರೆ ಹೇಗೆತಾನೆ ದಂಡನೆಯಿಂದ ತಪ್ಪಿಸಿಕೊಂಡೇವು? 26ಅಂದು ದೇವರ ಧ್ವನಿಗೆ ಭೂಮಿಯು ನಡುಗಿತು. ಇಂದಾದರೋ, “ಇನ್ನೂ ಒಂದು ಸಾರಿ ನಾನು ಭೂಮಿಯನ್ನಷ್ಟೇ ಅಲ್ಲ, ಆಕಾಶವನ್ನೂ ನಡುಗಿಸುತ್ತೇನೆ,” ಎಂದು ಪ್ರತಿಜ್ಞೆಮಾಡಿರುತ್ತಾರೆ. 27“ಇನ್ನೂ ಒಂದು ಸಾರಿ,” ಎಂಬ ಈ ಮಾತು ಸೃಷ್ಟಿಸಲಾದ ವಸ್ತುಗಳನ್ನು ಕದಲಿಸಿ ಕಿತ್ತುಹಾಕಲಾಗುವುದು ಎಂಬುದನ್ನು ಸೂಚಿಸುತ್ತದೆ. ಆಗ, ಕದಲಿಸಲಾಗದ ವಸ್ತುಗಳೆಲ್ಲಾ ಸ್ಥಿರವಾಗಿ ಉಳಿಯುತ್ತವೆ.
28ಆದ್ದರಿಂದ ಯಾರಿಂದಲೂ ಕದಲಿಸಲಾಗದ ಸಾಮ್ರಾಜ್ಯವನ್ನು ಪಡೆದಿರುವ ನಾವು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸೋಣ. ಅವರಿಗೆ ಚಿರಋಣಿಗಳಾಗಿದ್ದು, ಭಯಭಕ್ತಿಯಿಂದ ಸಮರ್ಪಕ ಆರಾಧನೆಯನ್ನು ಸಲ್ಲಿಸೋಣ. 29ಏಕೆಂದರೆ, ನಮ್ಮ ದೇವರು ದಹಿಸುವ ಅಗ್ನಿ.
Currently Selected:
ಹಿಬ್ರಿಯರಿಗೆ 12: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.