YouVersion Logo
Search Icon

ಗಲಾತ್ಯರಿಗೆ 5

5
ಸ್ವಾತಂತ್ರ್ಯವನ್ನು ಸದುಪಯೋಗಿಸಿಕೊಳ್ಳಿ
1ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ.
2ಪೌಲನಾದ ನಾನು ಹೇಳುವುದನ್ನು ಕೇಳಿ: ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತಯೇಸುವಿನಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ. 3ಸುನ್ನತಿಮಾಡಿಸಿಕೊಳ್ಳುವ ಪ್ರತಿಯೊಬ್ಬನೂ ಇಡೀ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಲು ಬದ್ಧನಾಗಿದ್ದಾನೆ ಎಂದು ಪುನಃ ನಿಮಗೆ ನಾನು ಒತ್ತಿ ಹೇಳುತ್ತೇನೆ. 4ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರ ಮೂಲಕವೇ ದೇವರೊಡನೆ ಸತ್ಸಂಬಂಧ ಪಡೆಯಬೇಕೆಂದಿರುವ ನೀವು ಕ್ರಿಸ್ತಯೇಸುವಿನಿಂದ ಬೇರ್ಪಟ್ಟಿದ್ದೀರಿ. ದೈವಾನುಗ್ರಹದಿಂದ ದೂರವಾಗಿದ್ದೀರಿ. 5ನಾವಾದರೋ ಪವಿತ್ರಾತ್ಮರ ಮುಖಾಂತರ ವಿಶ್ವಾಸದಿಂದ ದೇವರೊಂದಿಗೆ ಸತ್ಸಂಬಂಧವನ್ನು ಹೊಂದುತ್ತೇವೆಂಬ ನಿರೀಕ್ಷೆ ಉಳ್ಳವರಾಗಿದ್ದೇವೆ; ಈ ನಿರೀಕ್ಷೆ ಸಫಲವಾಗುವುದನ್ನು ಎದುರುನೋಡುತ್ತಿದ್ದೇವೆ. 6ಕ್ರಿಸ್ತಯೇಸುವಿನಲ್ಲಿ ಬಾಳುವವರಿಗೆ ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಮುಖ್ಯವಲ್ಲ. ಪ್ರೀತಿಯಿಂದ ಕಾರ್ಯ ಎಸಗುವ ವಿಶ್ವಾಸವೇ ಪ್ರಮುಖವಾದುದು.
7ಇದುವರೆಗೂ ನಿಮ್ಮ ಬದುಕಿನ ಓಟ ಚೆನ್ನಾಗಿ ಸಾಗುತ್ತಿತ್ತು. ಸತ್ಯಕ್ಕೆ ಶರಣರಾಗದಂತೆ ಈಗ ನಿಮ್ಮನ್ನು ತಡೆದವರು ಯಾರು? 8ಹಾಗೆ ಅಡ್ಡಿಮಾಡಿದವರು, ನಿಮ್ಮನ್ನು ಕರೆದ ದೇವರೇನೂ ಅಲ್ಲ. 9ಒಂದಿಷ್ಟು ಹುಳಿ ಸಾಕು, ಹಿಟ್ಟನ್ನೆಲ್ಲಾ ಹುದುಗೆಬ್ಬಿಸಲು! 10ಭಿನ್ನಾಭಿಪ್ರಾಯಗಳಿಗೆ ನೀವು ಮಣಿಯುವುದಿಲ್ಲವೆಂದು ನಿಮ್ಮನ್ನು ಕುರಿತು ಪ್ರಭುವಿನಲ್ಲಿ ನನಗೆ ದೃಢವಾದ ನಂಬಿಕೆ ಇದೆ. ನಿಮ್ಮಲ್ಲಿ ಗೊಂದಲ ಎಬ್ಬಿಸುವವನು ಯಾರೇ ಆಗಿರಲಿ, ಅವನು ದೈವದಂಡನೆಗೆ ಗುರಿಯಾಗುತ್ತಾನೆ.
11ಸಹೋದರರೇ, ಸುನ್ನತಿಮಾಡಿಸಿಕೊಳ್ಳುವುದು ಅವಶ್ಯಕವೆಂದು ನಾನು ಇನ್ನೂ ಬೋಧಿಸುತ್ತಿರುವುದಾಗಿ ಕೆಲವರು ಹೇಳುತ್ತಿದ್ದಾರಲ್ಲವೇ? ಹಾಗೆ ಬೋಧಿಸುತ್ತಿರುವುದಾದರೆ ನಾನೇಕೆ ಹೀಗೆ ಹಿಂಸೆಬಾಧೆಗಳನ್ನು ಅನುಭವಿಸಬೇಕಾಗುತ್ತಿತ್ತು? ನಾನು ಹಾಗೇನಾದರೂ ಬೋಧಿಸಿದ್ದರೆ, ಶಿಲುಬೆಯ ಸಂದೇಶದಿಂದ ಯಾವ ಅಡ್ಡಿ ಆತಂಕವೂ ಉಂಟಾಗುತ್ತಿರಲಿಲ್ಲ. 12ನಿಮಗೆ ಕಿರುಕುಳ ಕೊಡುತ್ತಿರುವವರು ತಮ್ಮ ಅಂಗಚ್ಛೇದವನ್ನಾದರೂ ಮಾಡಿಕೊಂಡರೆ ಲೇಸು.
13ಸಹೋದರರೇ, ನೀವು ಮುಕ್ತ ಸ್ವತಂತ್ರ ಜೀವನವನ್ನು ನಡೆಸಬೇಕೆಂದು ದೇವರು ನಿಮ್ಮನ್ನು ಕರೆದಿದ್ದಾರೆ. ಆದರೆ, ಆ ಸ್ವಾತಂತ್ರ್ಯವನ್ನು ದೈಹಿಕ ಬಯಕೆಗಳಿಗೆ ಸಾಧನವಾಗಿ ಮಾಡಿಕೊಳ್ಳಬೇಡಿ. ಬದಲಾಗಿ, ನೀವು ಒಬ್ಬರಿಗೊಬ್ಬರು ಪ್ರೀತಿಯಿಂದ ಸೇವೆಮಾಡಿರಿ. 14“ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನು ಪ್ರೀತಿಸು,” ಎಂಬ ಒಂದೇ ವಚನದಲ್ಲಿ ಇಡೀ ಧರ್ಮಶಾಸ್ತ್ರವು ಅಡಗಿದೆ. 15ಆದರೆ ನೀವು ನಿಮ್ಮ ಕಚ್ಚಾಟ, ಕಿತ್ತಾಟ, ನುಂಗಾಟ - ಇವುಗಳನ್ನು ನಿಲ್ಲಿಸದಿದ್ದರೆ ಒಬ್ಬರಿಂದೊಬ್ಬರು ವಿನಾಶವಾದೀರಿ ಎಚ್ಚರಿಕೆ!
ಪವಿತ್ರಾತ್ಮದತ್ತವಾದ ಸತ್ಫಲಗಳು ಹಾಗೂ ದೇಹದ ದುಷ್ಫಲಗಳು
16ನಾನು ಹೇಳುವುದೇನೆಂದರೆ: ನೀವು ಪವಿತ್ರಾತ್ಮರ ಪ್ರೇರಣೆಗನುಸಾರವಾಗಿ ನಡೆದುಕೊಳ್ಳಬೇಕು. ಆಗ, ದೈಹಿಕ ವ್ಯಾಮೋಹಕ್ಕೆ ನೀವು ಈಡಾಗಲಾರಿರಿ. 17ಏಕೆಂದರೆ, ದೈಹಿಕ ವ್ಯಾಮೋಹವು ಪವಿತ್ರಾತ್ಮರಿಗೆ ವಿರುದ್ಧವಾಗಿದೆ. ಪವಿತ್ರಾತ್ಮ ಆ ವ್ಯಾಮೋಹಕ್ಕೆ ವಿರುದ್ಧವಾಗಿದ್ದಾರೆ. ಇವೆರಡೂ ಒಂದಕ್ಕೊಂದು ಕಾದಾಡುವುದರಿಂದ ನಿಮ್ಮ ಬಯಕೆ ಕೈಗೂಡುವುದಿಲ್ಲ. 18ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ. 19ದೈಹಿಕ ವ್ಯಾಮೋಹದ ದುಷ್ಪರಿಣಾಮಗಳು ತಿಳಿದೇ ಇವೆ: ಹಾದರ, ಅಶುದ್ಧತೆ, ಕಾಮುಕತನ, 20ವಿಗ್ರಹಾರಾಧನೆ, ಮಾಟಮಂತ್ರ, ಹಗೆತನ, ಜಗಳ, ಹೊಟ್ಟೆಕಿಚ್ಚು, ಕ್ರೋಧ, ಸ್ವಾರ್ಥಭೇದ, ಪಕ್ಷಪಾತ, ಮತ್ಸರ, ಕುಡಿಕತನ, ದುಂದೌತಣ - ಇತ್ಯಾದಿಗಳು. 21ಇಂಥ ಕೃತ್ಯಗಳನ್ನು ಮಾಡುವವರು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ ಎಂದು ಈಗಾಗಲೇ ನಿಮ್ಮನ್ನು ಎಚ್ಚರಿಸಿದ್ದೇನೆ; ಈಗಲೂ ಎಚ್ಚರಿಸುತ್ತೇನೆ.
22ಪವಿತ್ರಾತ್ಮದತ್ತವಾದ ಸತ್ಫಲಗಳು ಯಾವುವೆಂದರೆ: ಪ್ರೀತಿ, ಆನಂದ, ಶಾಂತಿಸಮಾಧಾನ, ಸಹನೆ, ದಯೆ, ಸದ್ಗುಣ, ಪ್ರಾಮಾಣಿಕತೆ, ಸೌಭಾಗ್ಯ, ಸಂಯಮ - ಇಂಥವುಗಳೇ. 23ಇವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವುದಿಲ್ಲ. 24ಕ್ರಿಸ್ತಯೇಸುವಿಗೆ ಸೇರಿದ ಎಲ್ಲರೂ ತಮ್ಮ ದೈಹಿಕ ವ್ಯಾಮೋಹವನ್ನು ಅದರ ಆಶಾಪಾಶಗಳ ಹಾಗೂ ದುರಿಚ್ಛೆಗಳ ಸಮೇತ ಶಿಲುಬೆಗೆ ಜಡಿದುಬಿಟ್ಟಿದ್ದಾರೆ. 25ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದರೆ, ಅವರೇ ನಮ್ಮ ಜೀವನದ ಮಾರ್ಗದರ್ಶಿಯೂ ಆಗಿರಬೇಕು. 26ನಾವು ಅಹಂಕಾರಿಗಳಾಗಿರಬಾರದು; ಒಬ್ಬರನ್ನೊಬ್ಬರು ಕೆಣಕಬಾರದು; ಒಬ್ಬರ ಮೇಲೊಬ್ಬರು ಹೊಟ್ಟೆಕಿಚ್ಚು ಪಡಬಾರದು.

Highlight

Share

Copy

None

Want to have your highlights saved across all your devices? Sign up or sign in