YouVersion Logo
Search Icon

ಗಲಾತ್ಯರಿಗೆ 4

4
ಮನೆಯಾಳಲ್ಲ, ಮಗನೇ ಹೌದು
1ನಾನು ಮತ್ತೆ ಹೇಳುವುದೇನೆಂದರೆ; ವಾರಸುದಾರನು ತಂದೆಯ ಆಸ್ತಿಗೆಲ್ಲಾ ಹಕ್ಕುದಾರನಾಗಿದ್ದರೂ, ಅವನು ಬಾಲಕನಾಗಿರುವ ತನಕ ಅವನಿಗೂ ಆಳಿಗೂ ವ್ಯತ್ಯಾಸವಿರುವುದಿಲ್ಲ. 2ತಂದೆ ಗೊತ್ತುಮಾಡಿದ ದಿನದವರೆಗೂ ಅವನು ಪೋಷಕರ ಹಾಗೂ ಕಾರ್ಯನಿರ್ವಾಹಕರ ಕೈಕೆಳಗೆ ಇರುತ್ತಾನೆ. 3ನಮ್ಮ ಸ್ಥಿತಿಯೂ ಹಾಗೆಯೇ ಇತ್ತು. ನಾವು ಬಾಲಕರಂತೆ ವಿಶ್ವದ ಮೂಲಭೂತ ಶಕ್ತಿಗಳಿಗೆ ಅಧೀನರಾಗಿದ್ದೆವು. 4-5ಕಾಲವು ಪರಿಪಕ್ವವಾದಾಗ ದೇವರು ತಮ್ಮ ಪುತ್ರನನ್ನೇ ಕಳುಹಿಸಿಕೊಟ್ಟರು. ಇವರು ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡುಗಡೆ ಮಾಡುವುದಕ್ಕಾಗಿಯೂ ದೇವಪುತ್ರರ ಪದವಿಯನ್ನು ನಮಗೆ ಒದಗಿಸಿಕೊಡುವುದಕ್ಕಾಗಿಯೂ ಒಬ್ಬ ಸ್ತ್ರೀಯಲ್ಲಿ ಜನಿಸಿದರು. ಧರ್ಮಶಾಸ್ತ್ರಕ್ಕೆ ಅಧೀನರಾಗಿಯೇ ಹುಟ್ಟಿದರು.
6ನೀವು ದೇವರ ಮಕ್ಕಳಾಗಿರುವುದರಿಂದಲೇ, “ಅಪ್ಪಾ, ತಂದೆಯೇ,” ಎಂದು ಕರೆಯುವ ತಮ್ಮ ಪುತ್ರನ ಆತ್ಮವನ್ನು ದೇವರು ನಮ್ಮ ಹೃದಯಗಳಿಗೆ ಕಳುಹಿಸಿದ್ದಾರೆ. 7ಆದ್ದರಿಂದ, ದೇವರ ಅನುಗ್ರಹದಿಂದಲೇ ನೀನು ಇನ್ನು ಮನೆಯಾಳಲ್ಲ, ಮಗನಾಗಿದ್ದೀ. ಮಗನೆಂದ ಮೇಲೆ ನೀನು ವಾರಸುದಾರನೂ ಹೌದು.
ಪೌಲನ ಕಳಕಳಿ
8ಹಿಂದೆ ನೀವು ದೇವರನ್ನು ಅರಿಯದೆ ಇದ್ದಿರಿ. ದೇವರಲ್ಲದವುಗಳಿಗೆ ಅಧೀನರಾಗಿದ್ದೀರಿ. 9ಈಗಲಾದರೋ ನಿಜದೇವರನ್ನು ಅರಿತುಕೊಂಡಿದ್ದೀರಿ; ಸರಿಯಾಗಿ ಹೇಳಬೇಕಾದರೆ ದೇವರು ನಿಮ್ಮನ್ನು ಅರಿತುಕೊಂಡಿದ್ದಾರೆ. ಹೀಗಿರಲಾಗಿ, ದುರ್ಬಲ ಹಾಗೂ ದರಿದ್ರವಾದ ಮೂಲಭೂತ ಶಕ್ತಿಗಳಿಗೆ ನೀವು ಮರಳುವುದೇಕೆ? ಪುನಃ ಅವುಗಳಿಗೆ ಗುಲಾಮರಾಗಲು ಇಚ್ಛಿಸುವುದೇಕೆ? 10ನೀವು ಶುಭಾಶುಭ ದಿನಗಳನ್ನು, ಮಾಸಗಳನ್ನು ಮತ್ತು ಸಂವತ್ಸರಗಳನ್ನು ಜಾಗರೂಕತೆಯಿಂದ ನೋಡುತ್ತೀರಿ. 11ನಿಮಗಾಗಿ ನಾನು ಪಟ್ಟ ಪ್ರಯಾಸವೆಲ್ಲ ವ್ಯರ್ಥವಾಯಿತೇನೋ ಎಂಬ ಶಂಕೆ ನನ್ನನ್ನು ಕಾಡುತ್ತಿದೆ.
12ಪ್ರಿಯ ಸಹೋದರರೇ, ನಾನು ನಿಮ್ಮಂತೆ ಆದಹಾಗೆ, ನೀವೂ ನನ್ನಂತೆ ಆಗಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ನೀವು ನನಗೆ ಯಾವ ಅನ್ಯಾಯವನ್ನೂ ಮಾಡಿಲ್ಲ. 13ನಾನು ಅಸ್ವಸ್ಥನಾಗಿದ್ದುದರಿಂದ ನಿಮ್ಮಲ್ಲೇ ಇದ್ದು ಮೊತ್ತಮೊದಲ ಬಾರಿಗೆ ಶುಭಸಂದೇಶವನ್ನು ನಿಮಗೆ ಸಾರಲು ಆಸ್ಪದವಾಯಿತು. ಇದನ್ನು ನೀವು ಬಲ್ಲಿರಿ. 14ನನ್ನ ದೇಹಸ್ಥಿತಿ ನಿಮಗೆ ಬೇಸರವನ್ನುಂಟುಮಾಡುವಂಥದ್ದಾಗಿದ್ದರೂ ನೀವು ನನ್ನನ್ನು ತಿರಸ್ಕರಿಸಲಿಲ್ಲ; ಅಸಹ್ಯಪಡಲಿಲ್ಲ. ನನ್ನನ್ನು ದೇವದೂತನಂತೆ ಏಕೆ, ಕ್ರಿಸ್ತಯೇಸುವಿನಂತೆಯೇ ಭಾವಿಸಿ ಉಪಚರಿಸಿದಿರಿ. 15ಅದೊಂದು ಭಾಗ್ಯವೆಂದೇ ತಿಳಿದಿರಿ. ಆ ಭಾವನೆ ಈಗೆಲ್ಲಿದೆ? ಆಗ, ಬೇಕಾಗಿದ್ದಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಡುತ್ತಿದ್ದಿರಿ ಎಂದು ನಾನು ಹೇಳಬಲ್ಲೆ! 16ಹೀಗಿರಲಾಗಿ ಸತ್ಯವನ್ನು ನುಡಿಯುವುದರಿಂದ ನಾನು ನಿಮಗೆ ಶತ್ರುವಾಗಿಬಿಟ್ಟೆನೇ?
17ಆ ನನ್ನ ವಿರೋಧಿಗಳು ನಿಮ್ಮನ್ನು ಮೆಚ್ಚಿಸಲು ತುಂಬ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಆದರೆ ಅವರ ಉದ್ದೇಶ ಒಳ್ಳೆಯದಲ್ಲ. ನೀವು ಸಹ ಅವರನ್ನು ಅಷ್ಟೇ ಆಸಕ್ತಿಯಿಂದ ಮೆಚ್ಚಿಸಬೇಕೆಂಬುದೇ ಅವರ ಉದ್ದೇಶ. ಆದ್ದರಿಂದಲೇ ನಿಮ್ಮನ್ನು ನನ್ನಿಂದ ಬೇರ್ಪಡಿಸಲು ಯತ್ನಿಸುತ್ತಿದ್ದಾರೆ. 18ನಾನು ನಿಮ್ಮ ಬಳಿ ಇರಲಿ, ಇಲ್ಲದಿರಲಿ, ಬೇರೆಯವರು ನಿಮ್ಮಲ್ಲಿ ಅಷ್ಟು ಆಸಕ್ತರಾಗಿರುವುದು ಒಳ್ಳೆಯದೇ. ಆದರೆ ಅಂಥ ಆಸಕ್ತಿ ಸದುದ್ದೇಶದಿಂದ ಕೂಡಿರಬೇಕು. 19ನನ್ನ ಪ್ರಿಯ ಮಕ್ಕಳೇ, ತಾಯಿ ತನ್ನ ಮಗುವಿಗಾಗಿ ಪ್ರಸವವೇದನೆಪಡುವ ಪ್ರಕಾರ ಕ್ರಿಸ್ತಯೇಸು ನಿಮ್ಮಲ್ಲಿ ರೂಪುಗೊಳ್ಳುವ ತನಕ ನಿಮಗಾಗಿ ನಾನು ಮತ್ತೆ ಅಂಥ ವೇದನೆಯನ್ನು ಪಡುತ್ತಿದ್ದೇನೆ. 20ನಿಮ್ಮ ವಿಷಯದಲ್ಲಿ ಏನು ಮಾಡಬೇಕೋ ನನಗೆ ತೋಚುತ್ತಿಲ್ಲ. ಬಹುಶಃ ನೇರವಾಗಿ ನಿಮ್ಮ ಬಳಿಗೆ ಬಂದು, ನಿಮ್ಮ ಮಧ್ಯದಲ್ಲೇ ಇದ್ದು ನನ್ನ ಮಾತಿನ ವೈಖರಿಯನ್ನು ಬದಲಾಯಿಸಿದ್ದರೆ ಚೆನ್ನಾಗಿರುತ್ತಿತ್ತೇನೋ!
ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳು
21ಧರ್ಮಶಾಸ್ತ್ರಕ್ಕೆ ಅಧೀನರಾಗಲು ಆಶಿಸುವವರೇ, ನನಗೆ ಉತ್ತರ ಕೊಡಿ: ಅದೇ ಧರ್ಮಶಾಸ್ತ್ರ ಹೇಳುವುದನ್ನು ನೀವು ಕೇಳಿಲ್ಲವೇ? 22ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು: ಒಬ್ಬನು ದಾಸಿಯಿಂದ ಹುಟ್ಟಿದವನು; ಇನ್ನೊಬ್ಬನು ಧರ್ಮಪತ್ನಿಯಿಂದ ಹುಟ್ಟಿದವನು. 23ದಾಸಿಯ ಮಗ ಪ್ರಕೃತಿ ಸಹಜವಾಗಿ ಹುಟ್ಟಿದವನು; ಧರ್ಮಪತ್ನಿಯ ಮಗನಾದರೋ ವಾಗ್ದಾನದ ಫಲವಾಗಿ ಹುಟ್ಟಿದವನು. 24ಇದೊಂದು ಅಲಂಕಾರ ರೂಪ. ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳಿಗೆ ಸದೃಶರಾಗಿದ್ದಾರೆ. ಒಂದು, ಸೀನಾಯ್ ಪರ್ವತದಲ್ಲಿ ಮಾಡಲಾದ ಒಡಂಬಡಿಕೆ; ಅದು ದಾಸತ್ವಕ್ಕೆ ಮಕ್ಕಳನ್ನು ಹೆರುತ್ತದೆ. ಅದನ್ನು ಸೂಚಿಸುವವಳೇ ದಾಸಿ ಹಾಗರಳು. 25ಅರೇಬಿಯಾದಲ್ಲಿರುವ ಸೀನಾಯ್ ಪರ್ವತವನ್ನು ಪ್ರತಿನಿಧಿಸುವ ಈ ಹಾಗರಳು ಈಗಿನ ಜೆರುಸಲೇಮ್ ನಗರವನ್ನು ಹೋಲುತ್ತಾಳೆ. ಹೇಗೆಂದರೆ, ಜೆರುಸಲೇಮ್ ತನ್ನ ಮಕ್ಕಳ ಸಮೇತವಾಗಿ ದಾಸತ್ವದಲ್ಲಿ ಇದೆ. 26ಆದರೆ ಸ್ವರ್ಗೀಯ ಜೆರುಸಲೇಮ್ ದಾಸಿ ಅಲ್ಲ, ಸ್ವತಂತ್ರಳು, ಈಕೆಯೇ ನಮ್ಮ ತಾಯಿ.
27“ಸಂತಾನವಿಲ್ಲದ ಸ್ತ್ರೀಯೇ, ಸಂತೋಷಿಸು
ಪ್ರಸವವೇದನೆಯನರಿಯದವಳೇ, ಹರ್ಷೋದ್ಗಾರಮಾಡು
ಗಂಡನುಳ್ಳವಳಿಗಿಂತ ಕೈಬಿಟ್ಟವಳ ಸಂತಾನ ಹೆಚ್ಚು.”
ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ.
28ಆದ್ದರಿಂದ ಪ್ರಿಯ ಸಹೋದರರೇ, ನೀವು#4:28 ಅಥವಾ : ನಾವು. ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳು. 29ಅಂದು ಪ್ರಕೃತಿಸಹಜವಾಗಿ ಹುಟ್ಟಿದವನು ದೇವರಾತ್ಮದಿಂದ ಹುಟ್ಟಿದವನನ್ನು ಹಿಂಸೆಪಡಿಸಿದಂತೆ ಇಂದೂ ನಡೆಯುತ್ತದೆ. 30ಪವಿತ್ರಗ್ರಂಥ ಹೇಳುವುದಾದರೂ ಏನು?
“ದಾಸಿಯನ್ನೂ ಅವಳ ಮಗನನ್ನೂ ಹೊರಕ್ಕೆ ದೂಡು;
ದಾಸಿಯ ಮಗನು ಧರ್ಮಪತ್ನಿಯ ಮಗನೊಂದಿಗೆ
ಪಾಲುಗಾರನಾಗಕೂಡದು.”
ಎಂದಲ್ಲವೇ? 31ಹೌದು, ಪ್ರಿಯ ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳು.

Highlight

Share

Copy

None

Want to have your highlights saved across all your devices? Sign up or sign in