YouVersion Logo
Search Icon

ಗಲಾತ್ಯರಿಗೆ 3

3
ಧರ್ಮಶಾಸ್ತ್ರವೋ? ಶುಭಸಂದೇಶವೋ?
1ಎಲೈ ಮತಿಗೆಟ್ಟ ಗಲಾತಿಯರೇ, ನಿಮ್ಮನ್ನು ಮರುಳುಗೊಳಿಸಿದವರು ಯಾರು? ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದ್ದನ್ನು ನಿಮ್ಮ ಕಣ್ಣೆದುರಿಗೇ ಚಿತ್ರಿತಗೊಳಿಸಲಿಲ್ಲವೆ? 2ನಿಮ್ಮ ಬಳಿ ಒಂದು ವಿಷಯವನ್ನು ಕೇಳಲಿಚ್ಛಿಸುತ್ತೇನೆ; ನೀವು ಪವಿತ್ರಾತ್ಮರನ್ನು ಪಡೆದುದು ಹೇಗೆ? ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲೋ? ಇಲ್ಲವೆ ಶುಭಸಂದೇಶವನ್ನು ಕೇಳಿ ವಿಶ್ವಾಸಿಸಿದ್ದರಿಂದಲೋ? 3ನೀವು ಪವಿತ್ರಾತ್ಮ ಸಂಬಂಧವಾದ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿಯೂ ಈಗ ಅದನ್ನು ಕೇವಲ ದೇಹಸಂಬಂಧವಾದ ವಿಧಿಯಿಂದ ಪೂರೈಸಬೇಕೆಂದಿದ್ದೀರೋ? ನೀವು ಅಷ್ಟು ಮತಿಗೆಟ್ಟವರೋ? 4ನಿಮ್ಮ ಅನುಭವಗಳೆಲ್ಲವೂ ವ್ಯರ್ಥವಾದುವು ಎಂದು ಹೇಳೋಣವೇ? 5ದೇವರು ನಿಮಗೆ ಪವಿತ್ರಾತ್ಮರನ್ನು ಪ್ರಧಾನಮಾಡಿ ಮಹತ್ಕಾರ್ಯಗಳನ್ನು ಎಸಗುತ್ತಾ ಬಂದಿದ್ದಾರೆ. ಹಾಗೆ ಮಾಡುತ್ತಿರುವುದು, ನೀವು ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲ್ಲ, ಶುಭಸಂದೇಶವನ್ನು ಕೇಳಿ, ವಿಶ್ವಾಸ ಇಟ್ಟಿರುವುದರಿಂದ.
6ಪವಿತ್ರಗ್ರಂಥದಲ್ಲಿ ಬರೆದಿರುವಂತೆ: “ಅಬ್ರಹಾಮನು ದೇವರಲ್ಲಿ ವಿಶ್ವಾಸವಿಟ್ಟನು; ಈ ಕಾರಣ ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು.” 7ಆದ್ದರಿಂದ ಯಾರು ವಿಶ್ವಾಸದಿಂದ ಜೀವಿಸುತ್ತಾರೋ ಅವರೇ ಅಬ್ರಹಾಮನ ಮಕ್ಕಳೆಂದು ತಿಳಿದುಕೊಳ್ಳಿ. 8ಈ ವಿಶ್ವಾಸದ ಮೂಲಕವೇ ಅನ್ಯಧರ್ಮೀಯರನ್ನು ಕೂಡ ದೇವರು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ, ಎಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆಯಲಾಗಿತ್ತು. ಈ ಕಾರಣದಿಂದಲೇ ಅಬ್ರಹಾಮನಿಗೆ, “ನಿನ್ನ ಮುಖಾಂತರವೇ ಎಲ್ಲಾ ಜನಾಂಗಗಳು ಆಶೀರ್ವಾದವನ್ನು ಪಡೆಯುವುವು,” ಎಂಬ ಶುಭವರ್ತಮಾನವನ್ನು ಪಡೆಯುವುವು,” ಎಂಬ ಶುಭವರ್ತಮಾನವನ್ನು ಮುಂಚಿತವಾಗಿ ತಿಳಿಸಲಾಯಿತು. 9ಹೀಗಿರಲಾಗಿ, ವಿಶ್ವಾಸದಿಂದ ಬಾಳುವವರು ವಿಶ್ವಾಸಿಯಾದ ಅಬ್ರಹಾಮನು ಪಡೆದ ಸೌಭಾಗ್ಯವನ್ನೇ ಪಡೆಯುವರು.
10ಧರ್ಮಶಾಸ್ತ್ರದ ವಿಧಿನಿಯಮಗಳನ್ನೇ ಆಧಾರವಾಗಿಟ್ಟುಕೊಂಡು ಬಾಳುವವರು ಶಾಪಗ್ರಸ್ತರು. ಏಕೆಂದರೆ, “ಧರ್ಮಗ್ರಂಥದಲ್ಲಿ ಬರೆದಿರುವುದನ್ನೆಲ್ಲಾ ಅನುದಿನವೂ ಕೈಗೊಂಡು ನಡೆಯದ ಪ್ರತಿಯೊಬ್ಬನೂ ಶಾಪಗ್ರಸ್ತನು,” ಎಂದು ಲಿಖಿತವಾಗಿದೆ. 11ಇದಲ್ಲದೆ, ಧರ್ಮಶಾಸ್ತ್ರ ವಿಧಿಸುವುದನ್ನು ಪೂರೈಸುವುದರಿಂದ ಯಾರೂ ದೇವರೊಡನೆ ಸತ್ಸಂಬಂಧ ಪಡೆಯಲಾರರು ಎಂಬುದು ಸಹ ಸ್ಪಷ್ಟವಾಗಿದೆ. ಏಕೆಂದರೆ, “ಯಾರು ದೇವರೊಡನೆ ಸತ್ಸಂಬಂಧವನ್ನು ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ” ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ. 12ಧರ್ಮಶಾಸ್ತ್ರ ವಿಶ್ವಾಸವನ್ನು ಆಧರಿಸಿಲ್ಲ, ಬದಲಿಗೆ, “ಅದರ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕವಾಗಿ ಜೀವಿಸುತ್ತಾನೆ,” ಎಂದು ಬರೆಯಲಾಗಿದೆ.
13ಮರಕ್ಕೆ ತೂಗುಹಾಕಲಾದ ಪ್ರತಿ ಒಬ್ಬನೂ ಶಾಪಗ್ರಸ್ತನು,” ಎಂದು ಬರೆದಿರುವಂತೆ, ನಮಗೋಸ್ಕರ ಕ್ರಿಸ್ತಯೇಸು ಶಾಪಸ್ವರೂಪಿಯಾಗಿ ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಶಾಪದಿಂದ ನಮ್ಮನ್ನು ಪಾರುಮಾಡಿದರು. 14ಇದರಿಂದಾಗಿ ಅಬ್ರಹಾಮನಿಗೆ ದೊರಕಿದ ಸೌಭಾಗ್ಯ, ಕ್ರಿಸ್ತಯೇಸುವಿನ ಮುಖಾಂತರ ಅನ್ಯಧರ್ಮೀಯರಿಗೂ ದೊರಕುವಂತಾಯಿತು; ವಿಶ್ವಾಸದ ಮೂಲಕವಾಗಿ, ದೇವರು ವಾಗ್ದಾನ ಮಾಡಿದ ಪವಿತ್ರಾತ್ಮ ನಮಗೂ ದೊರಕುವಂತಾಯಿತು.
ರದ್ದಾಗದ ವಾಗ್ದಾನ
15ಪ್ರಿಯ ಸಹೋದರರೇ, ದೈನಂದಿನ ಜೀವನದಿಂದ ಒಂದು ಉದಾಹರಣೆಯನ್ನೇ ತೆಗೆದುಕೊಳ್ಳೋಣ: ಒಬ್ಬನು ಮತ್ತೊಬ್ಬನೊಡನೆ ಒಂದು ಒಪ್ಪಂದ ಮಾಡಿಕೊಳ್ಳುತ್ತಾನೆ. ಕ್ರಮಬದ್ಧವಾಗಿ ಅದನ್ನು ಮಾಡಿ ಮುಗಿಸಿದ ಮೇಲೆ ಯಾರೂ ಅದನ್ನು ರದ್ದುಮಾಡುವಂತಿಲ್ಲ, ಬದಲಾಯಿಸುವಂತಿಲ್ಲ. 16ಹಾಗೆಯೇ, ದೇವರು ಅಬ್ರಹಾಮನಿಗೂ ಆತನ ಸಂತತಿಗೂ ವಾಗ್ದಾನಗಳನ್ನು ಮಾಡಿದರು. "ನಿನ್ನ ಸಂತತಿಗಳಿಗೆ" ಎಂದು ಹೇಳಿ ಅನೇಕರನ್ನು ಸೂಚಿಸದೆ “ನಿನ್ನ ಸಂತತಿಗೆ” ಎಂದು ಹೇಳಿ ಒಬ್ಬ ವ್ಯಕ್ತಿಯನ್ನೇ ಆ ವಾಗ್ದಾನದಲ್ಲಿ ಸೂಚಿಸಿದರು. ಆ ವ್ಯಕ್ತಿಯೇ ಕ್ರಿಸ್ತಯೇಸು. 17ದೇವರು ಅಬ್ರಹಾಮನೊಂದಿಗೆ ಮಾಡಿಮುಗಿಸಿದ ಒಪ್ಪಂದವನ್ನು ನಾನೂರ ಮೂವತ್ತು ವರ್ಷಗಳಾದ ಮೇಲೆ ಬಂದ ಧರ್ಮಶಾಸ್ತ್ರದಿಂದ ರದ್ದುಪಡಿಸಲಾಗದು; ಆ ವಾಗ್ದಾನವನ್ನು ವ್ಯರ್ಥಪಡಿಸಲಾಗದು. 18ದೇವರು ನಮಗೆ ಹಕ್ಕುಬಾಧ್ಯತೆಯಾಗಿ ಕೊಡುವುದು ಧರ್ಮಶಾಸ್ತ್ರದಿಂದ ಲಭಿಸುವುದಾದರೆ ಅದು ಇನ್ನು ದೇವವಾಗ್ದಾನದಿಂದ ಲಭಿಸದು ಎಂದಂತಾಯಿತು. ಆದರೆ ದೇವರು ಅದನ್ನು ಅಬ್ರಹಾಮನಿಗೆ ದಯಪಾಲಿಸಿದ್ದು ವಾಗ್ದಾನದ ಮೂಲಕವೇ.
19ಹಾಗಾದರೆ ಧರ್ಮಶಾಸ್ತ್ರದ ಉದ್ದೇಶವಾದರೂ ಏನು? ಅಪರಾಧದ ಅರಿವನ್ನು ಮೂಡಿಸುವುದಕ್ಕಾಗಿ ಅದನ್ನು ಕಾಲಕ್ರಮೇಣ ಸೇರಿಸಲಾಯಿತು. ದೇವವಾಗ್ದಾನವನ್ನು ಪಡೆದ ಆ ಸಂತತಿ ಬರುವ ತನಕ ಮಾತ್ರ ಅದು ಇರಲೆಂದು ಕೊಡಲಾಯಿತು. ಅಲ್ಲದೆ, ಕೇವಲ ದೇವದೂತರ ಮುಖಾಂತರ, ಒಬ್ಬ ಮಾನವ ಮಧ್ಯಸ್ಥನ ಮೂಲಕ ಮಾತ್ರ ಅದನ್ನು ನೀಡಲಾಯಿತು. 20ಒಂದೇ ಪಕ್ಷ ಇರುವಾಗ ಮಧ್ಯಸ್ಥನು ಬೇಕಿಲ್ಲ, ದೇವರಾದರೋ ಒಬ್ಬರೇ.
ಕ್ರಿಸ್ತೇಸುವಿಗೆ ಸೇರಿದವರು ವಾರಸುದಾರರು
21ಹಾಗಾದರೆ, ಧರ್ಮಶಾಸ್ತ್ರ ದೇವರ ವಾಗ್ದಾನಕ್ಕೆ ವಿರುದ್ಧವಾಗಿದೆಯೆಂದು ಹೇಳೋಣವೇ? ಎಂದಿಗೂ ಇಲ್ಲ. ಸಜ್ಜೀವಗೊಳಿಸುವ ಶಕ್ತಿಯನ್ನು ಧರ್ಮಶಾಸ್ತ್ರ ಹೊಂದಿದ್ದರೆ ಅದನ್ನು ಅನುಸರಿಸುವುದರಿಂದ ನಿಸ್ಸಂದೇಹವಾಗಿ ದೇವರೊಡನೆ ಸತ್ಸಂಬಂಧ ದೊರಕುತ್ತಿತ್ತು. 22ಅದಕ್ಕೆ ಬದಲಾಗಿ ಸಮಸ್ತ ಲೋಕವೂ ಪಾಪಕ್ಕೆ ಒಳಗಾಯಿತು ಎಂದು ಪವಿತ್ರಗ್ರಂಥ ಸ್ಪಷ್ಟೀಕರಿಸುತ್ತದೆ. ಹೀಗೆ, ವಾಗ್ದಾನ ಮಾಡಿದ ಸೌಭಾಗ್ಯವನ್ನು ಯೇಸುಕ್ರಿಸ್ತರಲ್ಲಿ ವಿಶ್ವಾಸವಿಟ್ಟವರಿಗೆ ಅವರ ನಂಬಿಕೆಯ ಆಧಾರದ ಮೇಲೆ ಕೊಡಲಾಗುತ್ತದೆ.
23ಕ್ರೈಸ್ತವಿಶ್ವಾಸದ ಕಾಲವು ಬರುವುದಕ್ಕೆ ಮೊದಲು ನಾವು ಧರ್ಮಶಾಸ್ತ್ರದ ನಿರ್ಬಂಧಕ್ಕೆ ಒಳಗಾಗಿ ಕೈದಿಗಳಂತೆ ಇದ್ದೆವು. ಈ ವಿಶ್ವಾಸವು ಪ್ರಕಟವಾಗುವವರೆಗೂ ಇದೇ ಪರಿಸ್ಥಿತಿ ಇತ್ತು. 24ಅಂತೆಯೇ, ವಿಶ್ವಾಸದ ಮೂಲಕ ನಾವು ದೇವರೊಡನೆ ಸತ್ಸಂಬಂಧ ಹೊಂದುವಂತೆ ಕ್ರಿಸ್ತಯೇಸು ಬರುವತನಕ ಅದು ನಮಗೆ ಕಾವಲಾಗಿತ್ತು. 25ಈಗ ಕ್ರೈಸ್ತವಿಶ್ವಾಸವು ಆಗಮಿಸಿರುವುದರಿಂದ ಇನ್ನು ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಇಲ್ಲ.
26ಕ್ರಿಸ್ತಯೇಸುವಿನಲ್ಲಿ ಇಟ್ಟಿರುವ ವಿಶ್ವಾಸದ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರಿ. 27ಹೇಗೆಂದರೆ, ಕ್ರಿಸ್ತಯೇಸುವಿನಲ್ಲಿ ಒಂದಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತಂಬರರಾಗಿದ್ದೀರಿ.#3:27 ಅಕ್ಷರಶಃ : ಕ್ರಿಸ್ತರನ್ನು ಧರಿಸಿಕೊಂಡಿದ್ದೀರಿ. 28ನೀವೆಲ್ಲರೂ ಕ್ರಿಸ್ತಯೇಸುವಿನಲ್ಲಿ ಒಂದಾಗಿದ್ದೀರಿ. ಎಂದೇ, ಇನ್ನು ಮೇಲೆ ಯೆಹೂದ್ಯ-ಯೆಹೂದ್ಯನಲ್ಲದವ, ದಾಸ-ದಣಿ, ಗಂಡು-ಹೆಣ್ಣು, ಎಂಬ ಭೇದವಿಲ್ಲ. 29ನೀವು ಕ್ರಿಸ್ತಯೇಸುವಿಗೆ ಸೇರಿದವರಾಗಿದ್ದರೆ ಅಬ್ರಹಾಮನ ಸಂತತಿಯೂ ಆಗಿದ್ದೀರಿ; ದೈವವಾಗ್ದಾನದ ಪ್ರಕಾರ ವಾರಸುದಾರರೂ ಆಗಿದ್ದೀರಿ.

Highlight

Share

Copy

None

Want to have your highlights saved across all your devices? Sign up or sign in