ಯೆಜೆಕಿಯೇಲನು 9
9
ಜೆರುಸಲೇಮಿನ ದಂಡನೆ
1ಆಮೇಲೆ ದೇವರು, “ಈ ಪಟ್ಟಣವನ್ನು ದಂಡಿಸಲಿರುವವರೇ, ನೀವೆಲ್ಲರೂ ನಿಮ್ಮ ಹತ್ಯದ ಆಯುಧಗಳನ್ನು ಹಿಡಿದು ಸಮೀಪಿಸಿರಿ,” ಎಂದು ಗಟ್ಟಿಯಾಗಿ ಕೂಗಿ ಹೇಳಿದ ಮಾತು ನನ್ನ ಕಿವಿಗೆ ಬಿತ್ತು. 2ಕೂಡಲೆ ಗದೆಗಳನ್ನು ಹಿಡಿದುಕೊಂಡ ಆರುಮಂದಿ ಪುರುಷರು ಉತ್ತರಾಭಿಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು; ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ಕಂಚಿನ ಬಲಿಪೀಠದ ಪಕ್ಕದಲ್ಲಿ ನಿಂತುಕೊಂಡರು.
3ಇಷ್ಟರಲ್ಲಿ ಇಸ್ರಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು; ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿದ್ದ ಪುರುಷನನ್ನು ಸರ್ವೇಶ್ವರ ಕೂಗಿ ಅವನಿಗೆ, 4“ನೀನು ಜೆರುಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಾಡಿ, ಅದರೊಳಗೆ ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗೆ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು,” ಎಂದು ಅಪ್ಪಣೆಕೊಟ್ಟರು.
5ಮಿಕ್ಕವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ಸಂಚರಿಸುತ್ತಾ ಹತಿಸಿರಿ; ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ; 6ವೃದ್ಧ, ಯುವಕ, ಯುವತಿ, ಮಹಿಳೆ, ಬಾಲಕ ಎನ್ನದೆ ಸಕಲರನ್ನೂ ಸಂಹಾರ ಮಾಡಿಬಿಡಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿ,” ಎಂದು ನನಗೆ ಕೇಳಿಸುವಂತೆ ಅಪ್ಪಣೆಮಾಡಿದರು. ಆಗ ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು.
7ದೇವರು ಅವರಿಗೆ, “ಹೊರಡಿ, ಪ್ರಾಕಾರಗಳನ್ನು ಶವಗಳಿಂದ ತುಂಬಿಸಿ, ದೇವಾಲಯವನ್ನು ಹೊಲೆಗೆಡಿಸಿ,” ಎಂದು ಅಪ್ಪಣೆಕೊಡಲು ಅವರು ಹೊರಟು ಪಟ್ಟಣದಲ್ಲಿದ್ದವರನ್ನು ಹತಿಸಿದರು.
8ಅವರು ಹೊಡೆಯುತ್ತಿರುವಾಗ ಅಲ್ಲಿ ಒಂಟಿಗನಾಗಿ ಉಳಿದ ನಾನು ಅಡ್ಡಬಿದ್ದು, “ಅಯ್ಯೋ, ಸರ್ವೇಶ್ವರನಾದ ದೇವರೇ, ನೀವು ಜೆರುಸಲೇಮಿನ ಮೇಲೆ ನಿಮ್ಮ ಕೋಪಾಗ್ನಿಯನ್ನು ಸುರಿಸಿ ಇಸ್ರಯೇಲಿನ ಶೇಷವನ್ನೆಲ್ಲಾ ನಾಶಮಾಡುವಿರೋ?” ಎಂದು ಮೊರೆಯಿಟ್ಟೆ.
9ಆಗ ಅವರು ನನಗೆ, “ಇಸ್ರಯೇಲ್ ಮತ್ತು ಯೆಹೂದ ವಂಶದವರ ಅಧರ್ಮ ತುಂಬಿಹೋಗಿದೆ; ನಾಡು ರಕ್ತಪೂರ್ಣವಾಗಿದೆ, ಪಟ್ಟಣವು ಅನ್ಯಾಯಭರಿತವಾಗಿದೆ; ಆ ವಂಶದವರು, ‘ನಮ್ಮ ನಾಡನ್ನು ಸರ್ವೇಶ್ವರ ತೊರೆದುಬಿಟ್ಟಿದ್ದಾರೆ, ಸರ್ವೇಶ್ವರ ನಮ್ಮನ್ನು ನೋಡುವುದಿಲ್ಲ’ ಎಂದು ಮಾತಾಡಿಕೊಳ್ಳುತ್ತಿದ್ದಾರೆ; 10ನಾನಂತು ಅವರನ್ನು ಕಟಾಕ್ಷಿಸೆನು, ಉಳಿಸೆನು, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು,” ಎಂದು ಹೇಳಿದರು.
11ಕೂಡಲೆ ನಾರಿನ ಬಟ್ಟೆಯನ್ನು ಹೊದ್ದುಕೊಂಡು ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿದ್ದ ಪುರುಷನು, “ನಿಮ್ಮ ಅಪ್ಪಣೆಯಂತೆಯೇ ಮಾಡಿದ್ದೇನೆ,” ಎಂದು ಅರಿಕೆಮಾಡಿದನು.
Currently Selected:
ಯೆಜೆಕಿಯೇಲನು 9: KANCLBSI
Highlight
Share
Copy

Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.