YouVersion Logo
Search Icon

ಯೆಜೆಕಿಯೇಲನು 10

10
ದೇವರ ತೇಜಸ್ಸು ದೇವಾಲಯವನ್ನು ಬಿಟ್ಟು ತೆರಳಿತು
1ದೇವದರ್ಶನದಲ್ಲಿ ಇಗೋ, ಕೆರೂಬಿಗಳ ತಲೆಗಳ ಮೇಲಿದ್ದ ಗವಿಯಾಕೃತಿಯ ಮೇಲ್ಗಡೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನದ ಆಕಾರವು ನನಗೆ ಕಾಣಿಸಿತು. 2ನಾರಿನ ಬಟ್ಟೆಯನ್ನು ಹೊದ್ದುಕೊಂಡಿದ್ದ ಆ ಪುರಷನಿಗೆ ದೇವರು, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ, ಕೆರೂಬಿಯ ಕೆಳಗೆ ಪ್ರವೇಶಿಸಿ, ಕೆರೂಬಿಗಳ ಮಧ್ಯೆಯಿಂದ ಬೊಗಸೆಯಲ್ಲಿ ಕೆಂಡಗಳನ್ನು ತುಂಬಿ ತಂದು ಪಟ್ಟಣದ ಮೇಲೆ ಎರಚು,” ಎಂದು ಅಪ್ಪಣೆಕೊಟ್ಟರು. ಅವನು ನನ್ನ ಕಣ್ಣೆದುರಿಗೇ ಹೋಗಿ ಅಲ್ಲಿ ಪ್ರವೇಶಿಸಿದನು.
3ಅವನು ಒಳಗೆ ಸೇರಿದಾಗ ಕೆರೂಬಿಗಳು ದೇವಾಲಯದ ದಕ್ಷಿಣಭಾಗದಲ್ಲಿ ನಿಂತಿದ್ದವು, ಮೇಘವು ಒಳಗಿನ ಆವರಣವನ್ನು ತುಂಬಿತ್ತು. 4ಇದಲ್ಲದೆ ಸರ್ವೇಶ್ವರನ ತೇಜಸ್ಸು ಕೆರೂಬಿಗಳನ್ನು ಬಿಟ್ಟು ಮೇಲಕ್ಕೇರಿ ದೇವಾಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತು; ದೇವಾಲಯದಲ್ಲೂ ಮೇಘವು ತುಂಬಿತ್ತು; ಸರ್ವೇಶ್ವರನ ತೇಜಸ್ಸಿನ ಅದ್ಭುತಕಾಂತಿ ಆವರಣದಲ್ಲೆಲ್ಲಾ ವ್ಯಾಪಿಸಿತ್ತು. 5ಆಗ ಕೆರೂಬಿಗಳ ರೆಕ್ಕೆಗಳ ಶಬ್ದ ಸರ್ವಶಕ್ತನಾದ ದೇವರು ಮಾತಾಡುವ ಧ್ವನಿಯಷ್ಟು ಗಂಭೀರವಾಗಿ ಹೊರಗಣ ಆವರಣದ ಪರ್ಯಂತವೂ ಕೇಳಿಸಿತು.
6ದೇವರು ನಾರಿನ ಬಟ್ಟೆಯನ್ನು ಹೊದ್ದುಕೊಂಡಿದ್ದ ಆ ಪುರುಷನಿಗೆ, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ ಪ್ರವೇಶಿಸಿ, ಕೆರೂಬಿಗಳ ಮಧ್ಯೆಯಿಂದ ಬೆಂಕಿಯನ್ನು ತೆಗೆದುಕೋ,” ಎಂದು ಅಪ್ಪಣೆಕೊಟ್ಟರು. ಅವನು ಒಳಕ್ಕೆ ಹೋಗಿ ಒಂದು ಚಕ್ರದ ಪಕ್ಕದಲ್ಲಿ ನಿಂತುಕೊಂಡನು. 7ಆಗ ಒಬ್ಬ ಕೆರೂಬಿಯು ಇತರ ಕೆರೂಬಿಯರ ನಡುವೆ ಕೈಚಾಚಿ, ಅವುಗಳ ಮಧ್ಯದಲ್ಲಿದ್ದ ಬೆಂಕಿಯನ್ನು ತೆಗೆದು, ನಾರಿನ ಬಟ್ಟೆತೊಟ್ಟವನ ಬೊಗಸೆಯಲ್ಲಿ ಹಾಕಿತು; ಅವನು ಅದನ್ನು ತೆಗೆದುಕೊಂಡು ಆಚೆಗೆ ಹೊರಟನು. 8(ಕೆರೂಬಿಗಳ ಒಂದೊಂದು ರೆಕ್ಕೆಯ ಕೆಳಗೂ ಮನುಷ್ಯಹಸ್ತದಂಥ ಒಂದೊಂದು ಹಸ್ತವು ಕಾಣಿಸಿತು.) 9ಇಗೋ, ಆ ಕೆರೂಬಿಗಳ ಪಕ್ಕಗಳಲ್ಲಿ ಒಂದೊಂದು ಕೆರೂಬಿಯ ಪಕ್ಕದಲ್ಲಿ ಒಂದೊಂದು ಚಕ್ರದಂತೆ ನಾಲ್ಕು ಚಕ್ರಗಳಿದ್ದುದು ಕಾಣಿಸಿತು. ಆ ಚಕ್ರಗಳ ಬಣ್ಣ ಪೀತರತ್ನದ ಹಾಗೆ ಹೊಳೆಯುತ್ತಿತ್ತು. 10ಅವುಗಳ ರೂಪ ಹೇಗಿತ್ತೆಂದರೆ ಒಂದು‍ ಚಕ್ರದೊಳಗೆ ಇನ್ನೊಂದು ಚಕ್ರ ರಚಿಸಿದಂತಿತ್ತು. ಆ ನಾಲ್ಕು ಚಕ್ರಗಳೂ ಒಂದೇ ಮಾದರಿಯಾಗಿದ್ದವು. 11ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು, ಓರೆಯಾಗಿ ಹೊರಳುತ್ತಿರಲಿಲ್ಲ; ಎದುರು ಮುಖವಾಗಿ ಹೋಗುತ್ತಿದ್ದವೇ ಹೊರತು ಓರೆಯಾಗಿ ಹೋಗುತ್ತಿರಲಿಲ್ಲ. 12ಕೆರೂಬಿಗಳ ಬೆನ್ನು, ಕೈ, ರೆಕ್ಕೆ, ಅಂತು ಸರ್ವಾಂಗಗಳಲ್ಲಿಯೂ ಹಾಗು ಚಕ್ರಗಳಲ್ಲಿಯೂ ಕಣ್ಣುಗಳು ಸರ್ವತ್ರ ತುಂಬಿದ್ದವು; ನಾಲ್ಕು ಕೆರೂಬಿಗಳಲ್ಲಿ ಒಂದೊಂದಕ್ಕೂ ಒಂದೊಂದು ಚಕ್ರವಿತ್ತು. 13(ನಾನು ಕೇಳಿದಂತೆ ಆ ಚಕ್ರಗಳ ಹೆಸರು ಗರಗರಗಾಲಿ ಎಂದು.)
14ಒಂದೊಂದು ಕೆರೂಬಿಗೆ ನಾಲ್ಕು ನಾಲ್ಕು ಮುಖಗಳಿದ್ದವು; ಮೊದಲನೆಯದು ಕೆರೂಬಿಯದು; ಎರಡನೆಯದು ಮನುಷ್ಯನದು, ಮೂರನೆಯದು ಸಿಂಹನದು, ನಾಲ್ಕನೆಯದು ಗರುಡಪಕ್ಷಿಯದು. 15ಆ ಕೆರೂಬಿಗಳು ಮೇಲಕ್ಕೆ ಏರಿದವು; ನಾನು ಕೆಬಾರ್ ನದಿಯ ಹತ್ತಿರ ನೋಡಿದ ಜೀವಿಗಳು ಇವೇ. 16ಕೆರೂಬಿಗಳು ಹೋಗುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಹೋಗುತ್ತಿದ್ದವು; ಕೆರೂಬಿಗಳು ನೆಲದಿಂದ ಮೇಲಕ್ಕೆ ಏರಬೇಕೆಂದು ರೆಕ್ಕೆಗಳನ್ನು ಹರಡಿಕೊಂಡಾಗ ಚಕ್ರಗಳೂ ಓರೆಯಾಗದೆ ಅವರ ಸಂಗಡವೇ ಏರಿದವು. 17ಜೀವಿಗಳ ಆತ್ಮ ಆ ಚಕ್ರಗಳಲ್ಲಿಯೂ ಇದ್ದ ಕಾರಣ, ಅವು ನಿಂತುಹೋದಾಗ ಇವೂ ನಿಂತುಹೋದವು, ಅವು ಏರಿದಾಗ ಇವೂ ಅವುಗಳ ಜೊತೆಯಲ್ಲೇ ಏರಿದವು.
18ಬಳಿಕ ಸರ್ವೇಶ್ವರನ ತೇಜಸ್ಸು ದೇವಾಲಯದ ಹೊಸ್ತಿಲನ್ನು ಬಿಟ್ಟು, ಕೆರೂಬಿಗಳ ಮೇಲೆ ನಿಂತಿತು. 19ಆಗ ನನ್ನ ಕಣ್ಣೆದುರಿಗೆ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡು ಚಕ್ರಸಮೇತವಾಗಿ ನೆಲದಿಂದ ಏರಿ ಹೊರಟು ಸರ್ವೇಶ್ವರನ ಆಲಯದ ಪೂರ್ವಬಾಗಿಲ ಮುಂದೆ ನಿಂತವು. ಅವುಗಳ ಮೇಲ್ಗಡೆ ಇಸ್ರಯೇಲಿನ ದೇವರ ತೇಜಸ್ಸು ನೆಲಸಿತ್ತು. 20ಇಸ್ರಯೇಲಿನ ದೇವರ ವಾಹನವಾಗಿ ಕೆಬಾರ್ ನದಿಯ ಹತ್ತಿರ ನನಗೆ ಕಾಣಿಸಿದ ಆ ಜೀವಿಗಳು ಇವೇ; ಅವು ಕೆರೂಬಿಗಳೆಂದು ಈಗ ನನಗೆ ತಿಳಿದುಬಂತು.
21ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು; ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯಹಸ್ತದಂಥ ಹಸ್ತಗಳು ಇದ್ದವು; 22ಅವುಗಳ ಮುಖಗಳು ಕೆಬಾರ್ ನದಿಯ ಹತ್ತಿರ ನಾನು ಕಂಡ ಮುಖಗಳಂತೆ ನನಗೆ ಕಂಡುಬಂದವು. ಅವು ಆ ಮುಖಗಳೇ. ಪ್ರತಿಯೊಂದು ಜೀವಿಯು ಹೊರಟ ಮುಖವಾಗಿಯೇ ಹೋಗುತ್ತಿತ್ತು.

Highlight

Share

Copy

None

Want to have your highlights saved across all your devices? Sign up or sign in