ಯೆಜೆಕಿಯೇಲನು 5
5
ಕತ್ತರಿಸಿದ ಕೂದಲಿನ ಗತಿ ಜೆರುಸಲೇಮಿನವರ ಸ್ಥಿತಿ
1“ನರಪುತ್ರನೇ, ಹರಿತವಾದ ಖಡ್ಗವನ್ನು ತೆಗೆದುಕೊಂಡು, ಕ್ಷೌರಿಕನ ಕತ್ತಿಯನ್ನಾಗಿ ಉಪಯೋಗಿಸಿ ನಿನ್ನ ತಲೆಯನ್ನೂ ಗಡ್ಡವನ್ನೂ ಬೋಳಿಸಿಬಿಡು; ತಕ್ಕಡಿಯನ್ನು ತಂದು ತೂಗಿ ಆ ಕೂದಲನ್ನು ಸರಿಯಾಗಿ ಮೂರು ಭಾಗಮಾಡು. 2ಮುತ್ತಿಗೆಯ ದಿನಗಳು ಮುಗಿದ ಕೂಡಲೆ ಕೂದಲಿನ ಒಂದು ಭಾಗವನ್ನು ಪಟ್ಟಣದ ಮಧ್ಯೆ ಬೆಂಕಿಯಲ್ಲಿ ಸುಡು; ಇನ್ನೊಂದು ಭಾಗವನ್ನು ತೆಗೆದುಕೊಂಡು ಪಟ್ಟಣದ ಸುತ್ತಲು ಖಡ್ಗದಿಂದ ಕಡಿ; ಮತ್ತೊಂದು ಭಾಗವನ್ನು ಗಾಳಿಗೆ ತೂರಿಬಿಡು; (ಈ ಪ್ರಕಾರ ನಾನು ನನ್ನ ಜನರ ಹಿಂದೆ ಕತ್ತಿಯನ್ನು ಬೀಸುವೆನು). 3ಈ ಕಡೆಯ ಭಾಗದಲ್ಲಿ ಉಳಿಸಿಕೊಂಡ ಕೆಲವು ಕೂದಲನ್ನು ನಿನ್ನ ಮೇಲಂಗಿಯ ಅಂಚಿನಲ್ಲಿ ಕಟ್ಟು; 4ಆಮೇಲೆ ಇವುಗಳಲ್ಲಿ ಕೆಲವನ್ನು ಆರಿಸಿ ಬೆಂಕಿಯಲ್ಲಿ ಹಾಕಿ ಸುಡು; ಅವುಗಳಿಂದ ಬೆಂಕಿ ಹೊರಟು ಇಸ್ರಯೇಲ್ ವಂಶವನ್ನೆಲ್ಲಾ ವ್ಯಾಪಿಸುವುದು.”
5ಸರ್ವೇಶ್ವರನಾದ ದೇವರು ಹೀಗೆಂದರು: “ನಾನಾ ದೇಶಗಳ ನಡುವೆ, ನಾನಾ ಜನಾಂಗಗಳ ಮಧ್ಯೆ ನಾನು ಸ್ಥಾಪಿಸಿದ ಜೆರುಸಲೇಮ್ ಪಟ್ಟಣ ಈ ಮನೆ. 6ಅದು ನನ್ನ ನಿಯಮನಿಷ್ಠೆಗಳಿಗೆ ಒಳಪಡದೆ ಇತರ ಜನಾಂಗಗಳಿಗಿಂತಲೂ ಸುತ್ತಲಿನ ದೇಶಗಳಿಗಿಂತಲೂ ಹೆಚ್ಚು ಅಧರ್ಮವನ್ನು ನಡೆಸಿದೆ; ಅದರ ನಿವಾಸಿಗಳು ನನ್ನ ನಿಯಮವನ್ನು ಅನುಸರಿಸದೆ ನನ್ನ ವಿಧಿಗಳನ್ನು ನಿರಾಕರಿಸಿದ್ದಾರೆ. 7ಹೀಗಿರಲು ಸರ್ವೇಶ್ವರ ಸ್ವಾಮಿಯಾದ ನಾನು ಹೇಳುವುದಿದು: ‘ನೀವು ನನ್ನ ನಿಯಮಗಳನ್ನು ಅನುಸರಿಸದೆ, ನನ್ನ ವಿಧಿಗಳನ್ನು ಕೈಗೊಳ್ಳದೆ, ನಿಮ್ಮ ಸುತ್ತಲಿನ ಜನಾಂಗಗಳ ಧರ್ಮವಿಧಿಗಳನ್ನು ಆಚರಿಸಿ, ಆ ಜನಾಂಗಗಳಿಗಿಂತ ಹೆಚ್ಚು ದಂಗೆಕೋರರಾಗಿ ವರ್ತಿಸಿದ್ದೀರಿ. 8ಆದುದರಿಂದ ಜೆರುಸಲೇಮೇ, ಇಗೋ, ನಾನೇ ನಿನಗೆ ವಿರುದ್ಧವಾಗಿದ್ದೇನೆ. ಜನಾಂಗಗಳ ಕಣ್ಣೆದುರಿಗೆ ನಿನ್ನ ಜನರನ್ನು ದಂಡಿಸುವೆನು; ಇದು ಸರ್ವೇಶ್ವರನಾದ ನನ್ನ ನುಡಿ. 9ನೀನು ಬಹಳ ಅಸಹ್ಯಕೃತ್ಯಗಳಲ್ಲಿ ತೊಡಗಿದ್ದರಿಂದ ನಾನು ಈವರೆಗೂ ಇನ್ನು ಮುಂದಕ್ಕೂ ಮಾಡದಂಥ ದಂಡನೆಯನ್ನು ಈಗ ನಿನಗೆ ಮಾಡುವೆನು. 10ನಿನ್ನಲ್ಲಿ ತಂದೆಗಳು ಮಕ್ಕಳನ್ನು, ಮಕ್ಕಳು ತಂದೆಗಳನ್ನು ತಿನ್ನುವರು; ನಾನು ನಿನ್ನನ್ನು ದಂಡಿಸಿ ನಿನ್ನಲ್ಲಿ ಉಳಿದ ಸಮಸ್ತರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು.’
11“ನನ್ನ ಜೀವದಾಣೆ, ನೀನು ನಿನ್ನ ಹೇರಳವಾದ ಹೇಯ ವಿಗ್ರಹಗಳಿಂದಲೂ ಅಸಹ್ಯವಸ್ತುಗಳಿಂದಲೂ ನನ್ನ ಪವಿತ್ರಾಲಯವನ್ನು ಹೊಲಸು ಮಾಡಿದ್ದರಿಂದ ಖಂಡಿತವಾಗಿ ನಾನು ಸಹಿಸೆನು, ಕಟಾಕ್ಷಿಸೆನು, ಕ್ಷಮಿಸೆನು. 12ನಿನ್ನಲ್ಲಿನ ಮೂರನೆಯ ಒಂದು ಭಾಗದ ಜನರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲೆ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲು ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
13“ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಕಾರಿ ಶಾಂತನಾಗುವೆನು; ಆಗ್ರಹದಿಂದ ಮಾತಾಡಿದವನು ಸರ್ವೇಶ್ವರನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು. 14ಹಾದುಹೋಗುವವರೆಲ್ಲರ ಕಣ್ಣೆದುರಿಗೆ ನಾನು ನಿನ್ನನ್ನು ಹಾಳುಮಾಡಿ ಸುತ್ತಲಿನ ಜನಾಂಗಗಳ ನಿಂದೆಗೆ ಗುರಿಮಾಡುವೆನು.
15“ನಾನು ಕೋಪದಿಂದ, ರೋಷದಿಂದ ಹಾಗು ತೀವ್ರ ಖಂಡನೆಯಿಂದ ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ ಪರಿಹಾಸ್ಯಗಳಿಗೂ ಬೆರಗು ಬುದ್ಧಿವಾದಗಳಿಗೂ ಆಸ್ಪದವಾಗುವುವು; ಇದು ಸರ್ವೇಶ್ವರನಾದ ನನ್ನ ನುಡಿ. 16ಆಗ ನಾನು ನಿನ್ನನ್ನು ಹಾಳುಮಾಡಲು ಕ್ಷಾಮವೆಂಬ ವಿನಾಶಕರವಾದ ತೀಕ್ಷ್ಣಬಾಣಗಳನ್ನು ನಿನ್ನ ಮೇಲೆ ಬಿಡುವನು. ನಿನ್ನನ್ನು ಬರದಿಂದ ಬಹಳವಾಗಿ ಬಾಧಿಸಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು. 17ನಾನು ಕಳುಹಿಸುವ ಕ್ಷಾಮದಿಂದ, ದುಷ್ಟಮೃಗಗಳಿಂದ ನಿನಗೆ ಪುತ್ರಶೋಕ ಪ್ರಾಪ್ತಿಯಾಗುವುದು; ವ್ಯಾಧಿಯೂ ರಕ್ತಪ್ರವಾಹವೂ ನಿನ್ನನ್ನು ಪೀಡಿಸುವುದು; ನಿನ್ನನ್ನು ಖಡ್ಗಕ್ಕೆ ತುತ್ತುಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”
Currently Selected:
ಯೆಜೆಕಿಯೇಲನು 5: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.