YouVersion Logo
Search Icon

ಯೆಜೆಕಿಯೇಲನು 4

4
ಜೆರುಸಲೇಮಿನ ಮುತ್ತಿಗೆಯ ಮುನ್ಸೂಚನೆ
1“ನರಪುತ್ರನೇ, ನೀನು ಒಂದು ಚದರ ಇಟ್ಟಿಗೆಯನ್ನು ತೆಗೆದುಕೊಂಡು ನಿನ್ನ ಮುಂದೆ ಇಟ್ಟು ಅದರಲ್ಲಿ ಪಟ್ಟಣದ ನಕ್ಷೆಯನ್ನು ಅಂದರೆ, ಜೆರುಸಲೇಮಿನ ನಕ್ಷೆಯನ್ನು ಬರೆ. 2ಆ ನಕ್ಷೆಯ ಸುತ್ತಲು ದಿಬ್ಬಹಾಕಿ, ಒಡ್ಡುಕಟ್ಟಿ, ಪಾಳೆಯಗಳನ್ನು ಮಾಡಿ, ಭಿತ್ತಿಭೇದಕ ಯಂತ್ರಗಳನ್ನು ನಿಲ್ಲಿಸಿ, ಅದನ್ನು ಮುತ್ತು. 3ಆಮೇಲೆ ಕಬ್ಬಿಣದ ಹೆಂಚನ್ನು ತೆಗೆದುಕೊಂಡು ಅದನ್ನು ನಿನಗೂ ಆ ಪಟ್ಟಣಕ್ಕೂ ಮಧ್ಯೆ ಕಬ್ಬಿಣದ ಗೋಡೆಯನ್ನಾಗಿ ನಿಲ್ಲಿಸಿ ಆ ಪಟ್ಟಣದ ಮೇಲೆ ದೃಷ್ಟಿಯಿಡು; ಅದು ಮುತ್ತಲ್ಪಡುವುದು. ನೀನು ಅದನ್ನು ಮುತ್ತಿದಂತಾಗುವುದು. ಇದು ಇಸ್ರಯೇಲ್ ವಂಶದವರಿಗೆ ಒಂದು ಸಂಕೇತ.
4“ಇದಲ್ಲದೆ ನೀನು ನಿನ್ನ ಎಡಮಗ್ಗುಲಲ್ಲಿ ಮಲಗು. ಇಸ್ರಯೇಲ್ ವಂಶದವರ ಅಧರ್ಮದ ಭಾರ ನಿನ್ನ ಮೇಲೆ ಬಿದ್ದಿದೆ ಎಂದು ಗೊತ್ತಾಗಲಿ; ನೀನು ಎಷ್ಟು ದಿವಸ ಹೀಗೆ ಮಲಗಿಕೊಂಡಿರುವಿಯೋ ಅಷ್ಟು ದಿವಸ ಅವರ ಅಧರ್ಮವನ್ನು ಹೊತ್ತುಕೊಂಡಿರುವೆ. 5ಅವರು ಎಷ್ಟು ವರ್ಷ ತಮ್ಮ ಅಧರ್ಮದ ಫಲವನ್ನು ಅನುಭವಿಸಬೇಕೋ ಅಷ್ಟು ದಿವಸ ಅಂದರೆ, ಮುನ್ನೂರತೊಂಬತ್ತು ದಿವಸ ನೀನು ಮಲಗಿಕೊಂಡಿರಬೇಕೆಂದು ನಿನಗೆ ನೇಮಿಸಿದ್ದೇನೆ; ಅಷ್ಟು ದಿವಸ ಇಸ್ರಯೇಲ್ ವಂಶದವರ ಅಧರ್ಮವನ್ನು ನೀನು ಹೊತ್ತುಕೊಂಡಿರಬೇಕು. 6ಅಷ್ಟು ದಿವಸಗಳು ತೀರಿದ ಮೇಲೆ ಬಲಮಗ್ಗುಲಲ್ಲಿ ಮಲಗಿಕೊಂಡು ಯೆಹೂದ ವಂಶದವರ ಅಧರ್ಮವನ್ನು ಹೊತ್ತುಕೊಳ್ಳಬೇಕು. ವರ್ಷ ಒಂದಕ್ಕೆ ಒಂದು ದಿವಸ ಮೇರೆಗೆ ನಲವತ್ತು ದಿನ ಅವರ ಅಧರ್ಮವನ್ನು ಹೊತ್ತುಕೊಳ್ಳಬೇಕೆಂದು ನಿನಗೆ ಗೊತ್ತುಮಾಡಿದ್ದೇನೆ.
7“ನಿನ್ನ ತೋಳಿಗೆ ಹೊದಿಕೆಯಿಲ್ಲದೆ, ಮುತ್ತಿಗೆಯಾದ ಜೆರುಸಲೇಮಿನ ಕಡೆಗೆ ಮೋರೆ ತಿರುಗಿಸಿ, ಅದರ ವಿರುದ್ಧ ಅಶುಭವನ್ನು ಪ್ರವಾದಿಸು. 8ಇಗೋ, ನಿನ್ನ ಮುತ್ತಿಗೆಯ ದಿನಗಳು ಮುಗಿಯುವ ತನಕ ನೀನು ಬಲಮಗ್ಗುಲಿಂದ ಎಡಮಗ್ಗುಲಿಗೆ ಹೊರಳದಂತೆ ನಿನ್ನನ್ನು ಬಂಧಿಸುವೆನು.
9“ಇದಲ್ಲದೆ ನೀನು ಗೋದಿ, ಜವೆಗೋದಿ, ಅವರೆ, ಅಲಸಂದೆ, ಸಾವೆ, ಕಡಲೆ ಇವುಗಳನ್ನು ತೆಗೆದುಕೊಂಡು ಒಂದೇ ಪಾತ್ರೆಯಲ್ಲಿ ಹಾಕಿ ಅವುಗಳಿಂದ ರೊಟ್ಟಿಯನ್ನು ಮಾಡಿಕೋ; ಮಗ್ಗುಲಲ್ಲಿ ಮಲಗಿಕೊಳ್ಳುವಷ್ಟು ದಿನ, ಅಂದರೆ ಮುನ್ನೂರ ತೊಂಬತ್ತು ದಿನ ಅದನ್ನು ತಿನ್ನು. 10ನಿನ್ನ ಆಹಾರದ ತೂಕ ದಿನವೊಂದಕ್ಕೆ 230 ಗ್ರಾಂ ಇರಲಿ; ಆಗಾಗ್ಗೆ ಸ್ವಲ್ಪ ಸ್ವಲ್ಪ ತಿನ್ನಬೇಕು. 11ಮತ್ತು ನೀರನ್ನು ಅಳತೆಯ ಪ್ರಕಾರ ದಿನವೊಂದಕ್ಕೆ ಎರಡು ಬಟ್ಟಲಂತೆ ಕುಡಿ; ಆಗಾಗ್ಗೆ ಸ್ವಲ್ಪ ಸ್ವಲ್ಪ ಕುಡಿಯಬೇಕು. 12ನೀನು ಸೌದೆಗೆ ಬದಲಾಗಿ ಮನುಷ್ಯನ ಮಲವನ್ನು ಉರಿಸಿ, ನಿನ್ನ ಜನರ ಕಣ್ಣೆದುರಿಗೆ ಆ ಹಿಟ್ಟನ್ನು ರೊಟ್ಟಿಮಾಡಿ ಜವೆಗೋದಿಯ ರೊಟ್ಟಿಗಳಂತೆ ತಿನ್ನು.
13“ಹಾಗೆಯೇ ಇಸ್ರಯೇಲ್ ವಂಶದವರು ನನ್ನಿಂದ ಅನ್ಯದೇಶಗಳಿಗೆ ಅಟ್ಟಲ್ಪಟ್ಟು ಆ ದೇಶೀಯರ ನಡುವೆ ವಾಸಿಸುತ್ತಾ ತಮ್ಮ ಆಹಾರವನ್ನು ಹೊಲಸಾಗಿ ತಿನ್ನುವರು; ಇದು ಸರ್ವೇಶ್ವರನಾದ ನನ್ನ ನುಡಿ.”
14ಅದಕ್ಕೆ ನಾನು, “ಅಯ್ಯೋ, ದೇವರಾದ ಸರ್ವೇಶ್ವರ ನಾನು ಹೊಲಸನ್ನು ಮುಟ್ಟಿದವನಲ್ಲ, ನಾನು ಹುಟ್ಟಿದಂದಿನಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ, ಕಾಡುಮೃಗ ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ; ಯಾವ ಅಸಹ್ಯಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ,” ಎಂದು ಅರಿಕೆಮಾಡಿದೆ. 15ಅದಕ್ಕೆ ಅವರು, “ನೋಡು, ಮನುಷ್ಯರ ಮಲಕ್ಕೆ ಬದಲಾಗಿ ದನಗಳ ಸಗಣಿಯನ್ನು ನಿನಗೆ ಗೊತ್ತುಮಾಡಿದ್ದೇನೆ. ಇದನ್ನು ಉರಿಸಿ ನಿನ್ನ ರೊಟ್ಟಿಯನ್ನು ಸುಟ್ಟುಕೋ,” ಎಂದು ಉತ್ತರಕೊಟ್ಟರು.
16ಇದಲ್ಲದೆ ಅವರು ನನಗೆ ಹೀಗೆ ಹೇಳಿದರು: “ನರಪುತ್ರನೇ, ನಾನು ಜೆರುಸಲೇಮಿನಲ್ಲಿ ಆಹಾರ ಸರಬರಾಜನ್ನು ನಿಲ್ಲಿಸಿಬಿಡುವೆನು. ನಿವಾಸಿಗಳು ಅನ್ನವನ್ನು ತೂಕಮಾಡಿ ಅಂಜಿಕೆಯಿಂದ ತಿನ್ನುವರು, ನೀರನ್ನು ಅಳತೆಮಾಡಿ ಕಳವಳದಿಂದ ಕುಡಿಯುವರು; 17ಅವರಲ್ಲಿ ಪ್ರತಿಯೊಬ್ಬರು ಅನ್ನನೀರಿನ ಕೊರತೆಯಿಂದ ಕುಗ್ಗಿಹೋಗಿ ತಮ್ಮ ಅಧರ್ಮದಿಂದ ಕ್ಷಯಿಸಿಹೋಗುವರು.”

Highlight

Share

Copy

None

Want to have your highlights saved across all your devices? Sign up or sign in