ಯೆಜೆಕಿಯೇಲನು 3
3
1ಬಳಿಕ ಸರ್ವೇಶ್ವರ ನನಗೆ, “ನರಪುತ್ರನೇ, ನಿನಗೆ ಕೊಟ್ಟ ಈ ಸುರುಳಿಯನ್ನು ತಿನ್ನು; ಅನಂತರ ಇಸ್ರಯೇಲ್ ವಂಶದವರಿಗೆ ಸಾರು, ಹೋಗು,” ಎಂದು ಆಜ್ಞಾಪಿಸಿದರು. 2ನಾನು ಬಾಯಿ ತೆರೆದೆ; ಅವರೇ ಆ ಸುರುಳಿಯನ್ನು ನನಗೆ ತಿನ್ನಿಸಿದರು. 3ತಿನ್ನಿಸುತ್ತಾ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ,” ಎಂದರು. ನಾನು ಅದನ್ನು ತಿಂದುಬಿಟ್ಟೆ; ಅದು ನನ್ನ ಬಾಯಿಗೆ ಜೇನಿನಂತೆ ಸಿಹಿಯಾಗಿತ್ತು.
4ಆಮೇಲೆ ಸರ್ವೇಶ್ವರ ನನಗೆ ಹೀಗೆಂದರು: “ನರಪುತ್ರನೇ, ನೀನು ಇಸ್ರಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ಹೇಳು. 5ನಾನು ನಿನ್ನನ್ನು ಇಸ್ರಯೇಲ್ ವಂಶದವರ ಬಳಿಗೆ ಕಳುಹಿಸುತ್ತೇನೆಯೇ ಹೊರತು ಕಷ್ಟಕರವಾದ ಅನ್ಯಭಾಷೆಯನ್ನಾಡುವ ಜನರ ಬಳಿಗೆ ಕಳುಹಿಸುತ್ತಿಲ್ಲ; 6ಹೌದು, ನಿನಗೆ ಅರ್ಥವಾಗದ ಕಷ್ಟಕರವಾದ ಅನ್ಯಭಾಷೆಯನ್ನಾಡುವ ನಾನಾ ಜನಾಂಗಗಳ ಕಡೆಗೆ ಕಳುಹಿಸುತ್ತಿಲ್ಲ. ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ ಪಕ್ಷದಲ್ಲಿ ಅವರಾದರೂ ನಿಶ್ಚಯವಾಗಿ ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು. 7ಇಸ್ರಯೇಲ್ ವಂಶದವರೋ ನಿನಗೆ ಕಿವಿಗೊಡಲು ಸಿದ್ಧರಿಲ್ಲ; ನನಗೂ ಕಿವಿಗೊಡಲು ಸಿದ್ಧರಿಲ್ಲ; ಅವರೆಲ್ಲರು ಗರ್ವಿಗಳು ಹಾಗೂ ಹಟಮಾರಿಗಳು. 8ಇಗೋ, ಅವರ ಕಠಿಣ ಹೃದಯಕ್ಕೆ ವಿರುದ್ಧ ನಿನ್ನ ಹೃದಯವನ್ನು ಕಠಿಣಪಡಿಸಿದ್ದೇನೆ; ಅವರ ಹಟಮಾರಿತನಕ್ಕೆ ಪ್ರತಿಯಾಗಿ ನಿನ್ನನ್ನು ಹಟವಾದಿಯನ್ನಾಗಿ ಮಾಡಿದ್ದೇನೆ. 9ನಿನ್ನ ನಿರ್ಧಾರವನ್ನು ಕಗ್ಗಲ್ಲಿಗಿಂತ ಕಠಿಣವಾದ ವಜ್ರದಷ್ಟು ಕಠಿಣಪಡಿಸಿದ್ದೇನೆ; ಅವರು ದ್ರೋಹಿ ವಂಶದವರು, ಅವರಿಗೆ ಭಯಪಡಬೇಡ; ಅವರ ಬಿರುನೋಟಕ್ಕೆ ಬೆಚ್ಚದಿರು.”
10ಇದಲ್ಲದೆ ಸರ್ವೇಶ್ವರ ನನಗೆ ಹೀಗೆ ಹೇಳಿದರು: “ನರಪುತ್ರನೇ, ನಾನು ನಿನಗೆ ನುಡಿಯುವ, ಮಾತುಗಳನ್ನೆಲ್ಲಾ ಕಿವಿಯಿಂದ ಕೇಳಿ ಮನಸ್ಸಿನಲ್ಲಿಟ್ಟುಕೋ. 11ಸೆರೆಯಾಗಿರುವ ನಿನ್ನ ಸ್ವಜನರ ಬಳಿಗೆಹೋಗಿ ಅವರು ಕೇಳಲಿ ಅಥವಾ ಕೇಳದೆಹೋಗಲಿ ಅವರನ್ನು ಪ್ರಭೋಧಿಸು; ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ,’ ಎಂದು ಅವರಿಗೆ ಸಾರಿಹೇಳು.”
12ಆಮೇಲೆ ದೇವರಾತ್ಮ ನನ್ನನ್ನು ಎತ್ತಿಕೊಂಡುಹೋಯಿತು. “ಮಹಿಮಾಭರಿತ ಸರ್ವೇಶ್ವರ ಸ್ವಾಮಿಗೆ ಆತನಾಲಯದಲ್ಲಿ ಸ್ತೋತ್ರ; ಸ್ತೋತ್ರ;” ಎಂಬ ಮಹಾಶಬ್ದ ನನ್ನ ಹಿಂದೆ ಭರಭರನೆ ಕೇಳಿಸಿತು. 13ಆ ಜೀವಿಗಳ ರೆಕ್ಕೆಗಳು ಒಂದಕ್ಕೊಂದು ಬಡಿದಾಡುವ ಸಪ್ಪಳ, ಅವುಗಳ ಪಕ್ಕದಲ್ಲಿ ಗರಗರನೆ ತಿರುಗುವ ಚಕ್ರಗಳ ಸದ್ದು ಹೀಗೆ ಭೂಕಂಪದಂಥ ಮಹಾಶಬ್ದ ನನ್ನ ಕಿವಿಗೆ ಬಿತ್ತು. 14ದೇವರಾತ್ಮ ನನ್ನನ್ನು ಎತ್ತಿಕೊಂಡುಹೋಯಿತು. ಸರ್ವೇಶ್ವರನ ಹಸ್ತಸ್ಪರ್ಶದಿಂದ ನಾನು ಅತಿ ಪರವಶನಾಗಿದ್ದು ವ್ಯಥೆಗೊಳ್ಳುತ್ತಾ ಮನಸ್ತಾಪಪಡುತ್ತಾ ಮುನ್ನಡೆದೆ. 15ಅನಂತರ ಕೆಬಾರ್ ನದಿಯ ಹತ್ತಿರ ತೇಲ್ ಅಬೀಬ್ನಲ್ಲಿ ವಾಸವಾಗಿದ್ದ ಗಡೀಪಾರಾಗಿ ಸೆರೆಯಾಳುಗಳಾಗಿದ್ದವರ ಬಳಿಗೆ ಬಂದೆ. ಅವರು ಕೂತಿದ್ದ ಸ್ಥಳದಲ್ಲಿಯೇ ಕುಳಿತುಕೊಂಡೆ; ಏಳು ದಿವಸ ಅಲ್ಲೇ ಅವರ ಮಧ್ಯದಲ್ಲಿ ಸ್ತಬ್ದನಾಗಿ ಇದ್ದುಬಿಟ್ಟೆ.
ಕಾವಲುಗಾರನಾಗಿ ನೇಮಕ
(ಯೆಜೆ. 33:1-9)
16ಏಳು ದಿವಸಗಳಾದ ಮೇಲೆ ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು: 17“ನರಪುತ್ರನೇ, ನಾನು ನಿನ್ನನ್ನು ಇಸ್ರಯೇಲ್ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ ನನ್ನ ಪರವಾಗಿ ಅವರನ್ನು ಎಚ್ಚರಿಸು. 18ನಾನು ದುಷ್ಟನಿಗೆ, “ನೀನು ಖಂಡಿತವಾಗಿ ಸಾಯುವೆ,” ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆ ಹಾಗು ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವನಿಗೆ ಬುದ್ಧಿಹೇಳದೆ ಇದ್ದರೆ, ಆ ದುಷ್ಟನು ತನ್ನ ಅಪರಾಧಕ್ಕಾಗಿ ಸಾಯಬೇಕಾಗುವುದು; ಅವನ ಮರಣಕ್ಕೆ ನೀನೆ ಹೊಣೆಯಾಗುವೆ. 19ನೀನು ಆ ದುಷ್ಟನನ್ನು ಎಚ್ಚರಿಸಿದರೂ ಅವನು ತನ್ನ ದುಷ್ಟತನವನ್ನೂ ದುರ್ಮಾರ್ಗವನ್ನೂ ಬಿಡದೆಹೋದರೆ ತನ್ನ ಅಪರಾಧಕ್ಕಾಗಿ ಸಾಯುವನು; ನೀನಾದರೋ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ. 20ಇದಲ್ಲದೆ, ಸಜ್ಜನನೊಬ್ಬನು ತನ್ನ ಸನ್ನಡತೆಯನ್ನು ಬಿಟ್ಟು ಅಧರ್ಮಮಾಡುವಲ್ಲಿ, ನಾನು ಅವನ ಮುಂದೆ ಒಡ್ಡುವ ಆತಂಕವನ್ನು ಎಡವಿ ಅವನು ಸತ್ತೇ ಸಾಯುವನು; ನೀನು ಅವನನ್ನು ಎಚ್ಚರಿಸದೆಹೋದ ಕಾರಣ ಅವನು ತನ್ನ ಪಾಪದಿಂದ ಸಾಯಬೇಕಾಯಿತು. ಅವನು ಮಾಡಿದ ಸುಕೃತ್ಯಗಳು ಲೆಕ್ಕಕ್ಕೆಬಾರವು; ಅವನ ಮರಣಕ್ಕೆ ನೀನೆ ಹೊಣೆಯಾಗುವೆ. 21ನೀನು ಆ ಸಜ್ಜನನನ್ನು ಪಾಪಮಾಡದಂತೆ ಎಚ್ಚರಿಸಿದ ಮೇಲೆ ಅವನು ಪಾಪಮಾಡದೆ ಎಚ್ಚರಗೊಂಡರೆ ಈ ಕಾರಣ ಜೀವದಿಂದ ಉಳಿಯುವನು; ನೀನೂ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.”
ಪ್ರವಾದಿಯ ಬಾಯಿಗೆ ಬೀಗ
22ಅದೇ ಸ್ಥಳದಲ್ಲಿ ನಾನು ಸರ್ವೇಶ್ವರನ ಹಸ್ತಸ್ಪರ್ಶದಿಂದ ಪರವಶನಾದೆ. ಆಗ ಅವರು ನನಗೆ, “ನೀನೆದ್ದು ಬಯಲುಪ್ರದೇಶಕ್ಕೆ ಹೊರಡು, ಅಲ್ಲಿ ನಾನು ನಿನ್ನೊಂದಿಗೆ ಮಾತಾಡುವೆನು,” ಎಂದು ಹೇಳಿದರು. 23ನಾನೆದ್ದು ಬಯಲು ಪ್ರದೇಶಕ್ಕೆ ಹೊರಟುಬಂದಾಗ, ಕೆಬಾರ್ ನದಿಯ ಹತ್ತಿರ ನನಗೆ ಮಹಿಮಾದ್ಭುತ ದರ್ಶನವು ಆದಂತೆ, ಇಗೋ ಅಲ್ಲಿಯೂ ಸರ್ವೇಶ್ವರನ ಮಹಿಮೆ ಪ್ರತ್ಯಕ್ಷವಾಯಿತು. ಅದನ್ನು ನೋಡಿ ಅಡ್ಡಬಿದ್ದೆ. 24ದೇವರಾತ್ಮ ನನ್ನೊಳಗೆ ಹೊಕ್ಕು ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು. ಆಮೇಲೆ ಅವರು ನನಗೆ ಹೀಗೆ ಹೇಳಿದರು: ನೀನು ಹೋಗಿ ನಿನ್ನ ಮನೆಯೊಳಗೆ ಅಡಗಿಕೋ. 25ನರಪುತ್ರನೇ, ಇಗೋ, ನಿನ್ನ ಸ್ವಜನರೇ ನಿನ್ನನ್ನು ಕಟ್ಟಿ ಬಂಧಿಸುವರು. ನೀನು ಅವರ ಮಧ್ಯೆ ಅತ್ತಿತ್ತ ಸಂಚರಿಸದಿರುವೆ. 26ಇದಲ್ಲದೆ, ನಿನ್ನ ನಾಲಿಗೆ ಸೇದಿಹೋಗಿ ನೀನು ಮೂಕನಾಗಿರುವಂತೆ ಮಾಡುವೆನು; ದ್ರೋಹಿವಂಶದವರಾದ ಅವರನ್ನು ನೀನು ಖಂಡಿಸಲು ಸಾಧ್ಯವಾಗದು. 27ನಾನು ನಿನ್ನೊಡನೆ ಮತ್ತೆ ಮಾತಾಡುವಾಗ ನಿನ್ನ ಬಾಯನ್ನು ಬಿಚ್ಚುವೆನು; ಆಗ ನೀನು ಅವರಿಗೆ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ’ ಎಂದು ನುಡಿಯಬೇಕು; ಕೇಳುವವನು ಕೇಳಲಿ, ಕೇಳದವನು ಬಿಡಲಿ; ಏಕೆಂದರೆ ಅವರು ದ್ರೋಹಿವಂಶದವರೇ.
Currently Selected:
ಯೆಜೆಕಿಯೇಲನು 3: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.