ಎಫೆಸಿಯರಿಗೆ 5
5
ಸಚ್ಚರಿತೆಯೇ ಸೌರಭ
1ದೇವರ ಅಕ್ಕರೆಯ ಮಕ್ಕಳು ನೀವು. ಆದ್ದರಿಂದ ದೇವರನ್ನೇ ಅನುಸರಿಸಿ ಬಾಳಿರಿ. 2ಕ್ರಿಸ್ತಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ಸಮರ್ಪಿಸಿದರು. ದೇವರಿಗೆ ಸುಗಂಧ ಕಾಣಿಕೆಯನ್ನಾಗಿಯೂ ಬಲಿಯನ್ನಾಗಿಯೂ ಅರ್ಪಿಸಿದರು. ಅಂತೆಯೇ, ನೀವೂ ಪ್ರೀತಿಯಿಂದ ಬಾಳಿರಿ.
3ನೀವು ದೇವಜನರಾಗಿರುವುದರಿಂದ ನಿಮ್ಮಲ್ಲಿ ಲೈಂಗಿಕ ಪಾಪವಾಗಲಿ, ಅಶುದ್ಧ ಕೃತ್ಯಗಳಾಗಲಿ ಮತ್ತು ದುರಾಶೆಯಾಗಲಿ ಇರಬಾರದು. ಇಂಥ ಸುದ್ದಿಗೂ ನೀವು ಅವಕಾಶ ಕೊಡಬಾರದು. 4ಹೊಲಸು ಮಾತುಗಳು, ಬರಡು ನುಡಿಗಳು, ಕುಚೋದ್ಯ ಪದಗಳು ಯಾವುವೂ ನಿಮಗೆ ತರವಲ್ಲ. ಪ್ರತಿಯಾಗಿ, ದೇವರಿಗೆ ನೀವು ಕೃತಜ್ಞತಾಸ್ತುತಿಮಾಡಿರಿ. 5ವ್ಯಭಿಚಾರಿಗಳಿಗೂ ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸುವವರಿಗೂ ಮತ್ತು ದುರಾಶೆಯುಳ್ಳವರಿಗೂ (ದುರಾಶೆ ವಿಗ್ರಹಾರಾಧನೆಯ ಒಂದು ರೂಪ) ಕ್ರಿಸ್ತಯೇಸುವಿನ ಮತ್ತು ದೇವರ ಸಾಮ್ರಾಜ್ಯದಲ್ಲಿ ಹಕ್ಕುಬಾಧ್ಯತೆ ಇಲ್ಲವೆಂದು ನಿಮಗೆ ಮನದಟ್ಟಾಗಿರಲಿ.
6ಹುರುಳಿಲ್ಲದ ಮಾತುಗಳನ್ನು ಆಡುವವರಿಗೆ ಮರುಳಾಗದಿರಿ. ಇಂಥ ಕೃತ್ಯಗಳನ್ನು ಮಾಡುವ ದುಷ್ಕರ್ಮಿಗಳ ಮೇಲೆ ದೇವರ ಕೋಪ ಎರಗುತ್ತದೆ. 7ಅಂಥವರ ಸಹವಾಸವೇ ನಿಮಗೆ ಬೇಡ. 8ನೀವು ಹಿಂದೊಮ್ಮೆ ಕತ್ತಲುಮಯವಾಗಿದ್ದಿರಿ. ಈಗಲಾದರೋ ಪ್ರಭುವಿನಲ್ಲಿ ಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿನ ಮಕ್ಕಳಾಗಿ ಬಾಳಿರಿ. 9ಕಾರಣ -ಸಚ್ಚರಿತೆ, ಸದಾಚಾರ ಮತ್ತು ಸತ್ಯಸಂಧತೆ ಇವೆಲ್ಲವೂ ಬೆಳಕಿನ ಕುಡಿಗಳು. 10ಪ್ರಭುವಿಗೆ ಮೆಚ್ಚಿಕೆಯಾದುದು ಯಾವುದೆಂಬುದನ್ನು ಕಲಿತುಕೊಳ್ಳಿರಿ. 11ನಿಷ್ಪ್ರಯೋಜಕವಾದ ಕತ್ತಲುಮಯ ಕಾರ್ಯಗಳಿಗೆ ಕೈಹಾಕದಿರಿ. ಅಂಥವುಗಳನ್ನು ಬಯಲಿಗೆಳೆದು ಖಂಡಿಸಿರಿ. 12ಆ ಜನರು ಗುಟ್ಟಾಗಿ ಮಾಡುವ ಕೃತ್ಯಗಳು ಹೇಳುವುದಕ್ಕೂ ಅವಮಾನಕರವಾದುವು.
13ಬೆಳಕು ಬೆಳಗಿಸುವ ವಸ್ತುಗಳೆಲ್ಲವೂ ಕಂಗೊಳಿಸುವುವು.#5:13 ಅಥವಾ : ಎಲ್ಲಿ ಬೆಳಕಿರುತ್ತದೋ ಅಲ್ಲಿ ಎಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗೆ ಕಂಗೊಳಿಸುವುದೆಲ್ಲವೂ ಬೆಳಕಾಗುವುದು. 14ಆದ್ದರಿಂದ:
ನಿದ್ದೆಮಾಡುವವನೇ ಎದ್ದೇಳು
ಸತ್ತವರನು ಬಿಟ್ಟು ಬಾ ಎಚ್ಚೆತ್ತು
ನನಗೀವನು ಬೆಳಕನು ಕ್ರಿಸ್ತನು.”
ಎಂದು ಬರೆಯಲಾಗಿದೆ. 15ಆದುದರಿಂದ ನಿಮ್ಮ ನಡತೆಯ ವಿಷಯದಲ್ಲಿ ನೀವು ಅತ್ಯಂತ ಜಾಗರೂಕರಾಗಿರಿ; ಮೂಢರಂತಿರದೆ ಜಾಣರಾಗಿ ಜೀವಿಸಿರಿ. 16ಈ ದಿನಗಳು ಕೆಟ್ಟ ದಿನಗಳಾಗಿರುವುದರಿಂದ ನಿಮಗಿರುವ ಸದವಕಾಶಗಳನ್ನು ಸದ್ವಿನಿಯೋಗಿಸಿಕೊಳ್ಳಿರಿ. 17ಬುದ್ಧಿಹೀನರಾಗಿರದೆ ಪ್ರಭುವಿನ ಚಿತ್ತವೇನೆಂದು ಗ್ರಹಿಸಿಕೊಳ್ಳಿರಿ. 18ಮದ್ಯಪಾನಮಾಡಿ ಮತ್ತರಾಗಬೇಡಿ. ಅದು ಪಾಪಕೃತ್ಯಗಳಿಗೆ ಎಡೆಮಾಡುತ್ತದೆ. ಬದಲಿಗೆ ಪವಿತ್ರಾತ್ಮಭರಿತರಾಗಿರಿ. 19ಕೀರ್ತನೆ, ಹಾಡು, ಭಕ್ತಿಗೀತೆ ಇವುಗಳಿಂದ ನಿಮ್ಮ ಭಾವಗಳನ್ನು ಪರಸ್ಪರ ವ್ಯಕ್ತಪಡಿಸಿರಿ. ಹೃದಯಾಂತರಾಳದಿಂದ ಹಾಡಿ ಪ್ರಭುವಿಗೆ ಸ್ತುತಿಸಲ್ಲಿಸಿರಿ. 20ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ಯಾವಾಗಲೂ ಎಲ್ಲ ವರಗಳಿಗಾಗಿಯೂ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. 21ಕ್ರಿಸ್ತಯೇಸುವಿನಲ್ಲಿ ಭಯಭಕ್ತಿಯುಳ್ಳವರಾಗಿದ್ದು, ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಿರಿ.
ಸತಿ-ಪತಿಯ ಪ್ರೀತಿ
22ಮಹಿಳೆಯರೇ, ನೀವು ಪ್ರಭುವಿಗೆ ಹೇಗೋ ಹಾಗೆ ನಿಮ್ಮ ನಿಮ್ಮ ಪತಿಯರಿಗೆ ವಿಧೇಯರಾಗಿರಿ. 23ಕ್ರಿಸ್ತಯೇಸು ಧರ್ಮಸಭೆಯೆಂಬ ದೇಹಕ್ಕೆ ಶಿರಸ್ಸಾಗಿರುವ ಹಾಗೆಯೇ, ಪತಿಯಾದವನು ತನ್ನ ಪತ್ನಿಗೆ ಶಿರಸ್ಸಾಗಿರುತ್ತಾನೆ. ಕ್ರಿಸ್ತಯೇಸುವೇ ಧರ್ಮಸಭೆಯ ಉದ್ಧಾರಕ. 24ಧರ್ಮಸಭೆ ಕ್ರಿಸ್ತಯೇಸುವಿನ ಆಡಳಿತಕ್ಕೆ ಒಳಪಟ್ಟಿರುವಂತೆ ಪತ್ನಿಯೂ ಸಹ ಎಲ್ಲಾ ವಿಷಯಗಳಲ್ಲೂ ತನ್ನ ಪತಿಯ ಆಡಳಿತಕ್ಕೆ ಒಳಪಟ್ಟಿರಬೇಕು. 25-26ಪುರುಷರೇ, ಕ್ರಿಸ್ತಯೇಸು ಧರ್ಮಸಭೆಯನ್ನು ಪ್ರೀತಿಸಿದ ಪ್ರಕಾರ ನಿಮ್ಮ ನಿಮ್ಮ ಪತ್ನಿಯರನ್ನು ಪ್ರೀತಿಸಿರಿ. ಧರ್ಮಸಭೆಯನ್ನು ಪಾವನಗೊಳಿಸುವುದಕ್ಕಾಗಿ ಕ್ರಿಸ್ತಯೇಸು ತಮ್ಮ ಪ್ರಾಣವನ್ನೇ ಕೊಟ್ಟರು. ವಾಕ್ಯೋಪದೇಶದಿಂದಲೂ ಜಲಸ್ನಾನದಿಂದಲೂ ಅದನ್ನು ಶುದ್ಧೀಕರಿಸಿದರು. 27ಧರ್ಮಸಭೆ ಕಳಂಕಕಲ್ಮಷವಾಗಲಿ, ಸುಕ್ಕುಬೊಕ್ಕೆಯಾಗಲಿ ಇಲ್ಲದ ಸೌಂದರ್ಯವತಿಯಾಗಿ ತಮಗೆ ಅರ್ಪಿಸಿಕೊಳ್ಳುವಂತೆ ಹೀಗೆ ಮಾಡಿದರು. 28ಹಾಗೆಯೇ ಪುರುಷನು ಸಹ ತನ್ನ ಶರೀರವನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನು ಪ್ರೀತಿಸಲಿ. ತನ್ನ ಪತ್ನಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ. 29ಸ್ವಂತ ಶರೀರವನ್ನು ಯಾರೂ ಎಂದೂ ದ್ವೇಷಿಸುವುದಿಲ್ಲ, ಬದಲಿಗೆ ಅದನ್ನು ಪೋಷಿಸಿ ಪಾಲನೆ ಮಾಡುತ್ತಾನೆ. ಧರ್ಮಸಭೆಯನ್ನು ಸಹ ಕ್ರಿಸ್ತಯೇಸು ಹೀಗೆಯೇ ಕಾಪಾಡುತ್ತಾರೆ. 30ನಾವು ಆ ಸಭೆಯ ಅಂಗಗಳು. 31ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: “ಈ ಕಾರಣದಿಂದ ಪುರುಷನಾದವನು ತನ್ನ ತಂದೆತಾಯನ್ನು ಬಿಟ್ಟು ತನ್ನ ಪತ್ನಿಯೊಡನೆ ಒಂದು ಕೂಡುವನು ಮತ್ತು ಅವರಿಬ್ಬರೂ ಒಂದೇ ಶರೀರವಾಗಿರುವರು.” 32ಈ ಗಹನವಾದ ರಹಸ್ಯವು ಯೇಸುಕ್ರಿಸ್ತರಿಗೂ ಧರ್ಮಸಭೆಗೂ ಇರುವ ಸಂಬಂಧವನ್ನು ಸೂಚಿಸುತ್ತದೆ ಎಂಬುದೇ ನನ್ನ ಅಭಿಪ್ರಾಯ. 33ಆದರೆ ಇದು ನಿಮಗೂ ಅನ್ವಯಿಸುತ್ತದೆ. ಪ್ರತಿಯೊಬ್ಬ ಪುರುಷನು ತನ್ನನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನೂ ಪ್ರೀತಿಸಲಿ ಮತ್ತು ಪ್ರತಿಯೊಬ್ಬ ಸ್ತ್ರೀಯು ತನ್ನ ಪತಿಯ ವಿಷಯದಲ್ಲಿ ಗೌರವದಿಂದ ನಡೆದುಕೊಳ್ಳಲಿ.
Currently Selected:
ಎಫೆಸಿಯರಿಗೆ 5: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.