YouVersion Logo
Search Icon

ಎಫೆಸಿಯರಿಗೆ 6

6
ಕುಟುಂಬ ಪ್ರೇಮ
1ಮಕ್ಕಳೇ, ಪ್ರಭುವಿನಲ್ಲಿ ನಿಮ್ಮ ತಂದೆತಾಯಿಗಳ ಮಾತಿಗೆ ಕಿವಿಗೊಡಿ. ಇದು ಧರ್ಮಸಮ್ಮತವಾದುದು. 2‘ನಿನ್ನ ತಂದೆತಾಯನ್ನು ಗೌರವಿಸು’ ಎಂಬುದು ವಾಗ್ದಾನದಿಂದ ಕೂಡಿದ ಮೊದಲನೆಯ ಆಜ್ಞೆ. 3ಇದನ್ನು ಪಾಲಿಸಿದರೆ ನಿನಗೆ ಶುಭವಾಗುವುದು; ನೀನು ಬಹುಕಾಲ ಬಾಳುವೆ.
4ತಂದೆತಾಯಿಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಕೆರಳಿಸಬೇಡಿ. ಪ್ರತಿಯಾಗಿ ಪ್ರಭುವಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಅವರಿಗೆ ಶಿಕ್ಷಣವನ್ನು ಕೊಟ್ಟು ಶಿಸ್ತಿನಿಂದ ಸಾಕಿಸಲಹಿರಿ.
ದಾಸ್ಯ - ಸ್ವಾತಂತ್ರ್ಯ
5ಸೇವಕರೇ, ನೀವು ಮಾಡುತ್ತಿರುವುದು ಕ್ರಿಸ್ತಯೇಸುವಿನ ಸೇವೆಯನ್ನೇ ಎಂದು ಭಾವಿಸಿ, ನಿಮ್ಮ ಲೌಕಿಕ ಧಣಿಗಳಿಗೆ ಭಯಭಕ್ತಿಯಿಂದಲೂ ಏಕಮನಸ್ಸಿನಿಂದಲೂ ವಿಧೇಯರಾಗಿರಿ. 6ಧಣಿಗಳನ್ನು ಮೆಚ್ಚಿಸುವ ಸಲುವಾಗಿ ಮುಖದಾಕ್ಷಿಣ್ಯದ ಸೇವೆಯನ್ನು ಮಾಡದಿರಿ. ಕ್ರಿಸ್ತಯೇಸುವಿನ ದಾಸರಂತೆ ದೈವೇಚ್ಛೆಯನ್ನು ಹೃದಯಪೂರ್ವಕವಾಗಿ ಈಡೇರಿಸಿರಿ. 7ನೀವು ಮಾಡುವುದು ಜನಸೇವೆಯಲ್ಲ, ಪ್ರಭುಸೇವೆ ಎಂದೇ ಭಾವಿಸಿ ನಗುಮುಖದಿಂದ ಸೇವೆಮಾಡಿ. 8ದಾಸ್ಯದಲ್ಲಿರುವವನಾಗಲಿ, ಸ್ವತಂತ್ರವುಳ್ಳವನಾಗಿರಲಿ ಸತ್ಕಾರ್ಯವನ್ನು ಮಾಡುವವನು ಪ್ರಭುವಿನಿಂದ ತಕ್ಕ ಪ್ರತಿಫಲವನ್ನು ಪಡೆದೇ ತೀರುವನೆಂದು ನೀವು ಬಲ್ಲಿರಿ.
9ಯಜಮಾನರೇ, ನೀವು ಕೂಡ ನಿಮ್ಮ ಸೇವಕರೊಡನೆ ಯೋಗ್ಯವಾದ ರೀತಿಯಲ್ಲಿ ವರ್ತಿಸಿರಿ. ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿ. ಸ್ವರ್ಗಲೋಕದಲ್ಲಿ ನಿಮಗೂ ಅವರಿಗೂ ಒಬ್ಬ ಯಜಮಾನ ಇರುತ್ತಾನೆ. ಆತ ಪಕ್ಷಪಾತಿಯಲ್ಲ ಎಂಬುದನ್ನು ಮರೆಯದಿರಿ.
ದಿಟ್ಟ ಹೋರಾಟ
10ಕೊನೆಯದಾಗಿ, ಪ್ರಭುವಿನ ಅನ್ಯೋನ್ಯತೆಯಲ್ಲಿ ಬಲಾಢ್ಯರಾಗಿರಿ. ಅವರ ಪರಾಕ್ರಮ ಶಕ್ತಿಯನ್ನು ಆಶ್ರಯಿಸಿರಿ. 11ಸೈತಾನನು ನಿಮಗೆ ಒಡ್ಡುವ ಕುತಂತ್ರಗಳ ವಿರುದ್ಧ ಅಚಲರಾಗಿ ನಿಲ್ಲಲು ನೀವು ಸಮರ್ಥರಾಗುವಂತೆ ದೇವರು ನೀಡುವ ಸಕಲ ಶಸ್ತ್ರಾಸ್ತ್ರಗಳನ್ನು ಧರಿಸಿಕೊಳ್ಳಿರಿ. 12ನಮ್ಮ ಹೋರಾಟ ಕೇವಲ ನರಮಾನವರೊಂದಿಗಲ್ಲ, ದಿಗಂತದಲ್ಲಿರುವ ಅಧಿಕಾರಿಗಳ ಹಾಗೂ ಆಧಿಪತ್ಯಗಳ ವಿರುದ್ಧ; ಪ್ರಸ್ತುತ ಅಂಧಕಾರಲೋಕಾಧಿಪತಿಗಳ ಹಾಗೂ ಅಶರೀರ ದುಷ್ಟಗಣಗಳ ವಿರುದ್ಧ. 13ಎಂದೇ, ದೇವರು ಕೊಡುವ ಸಕಲ ಶಸ್ತ್ರಾಸ್ತ್ರಗಳೊಂದಿಗೆ ಸುಸಜ್ಜಿತರಾಗಿರಿ. ಆ ದುರ್ದಿನದಂದು ವೈರಿಗಳನ್ನು ಎದುರಿಸಲು ಆಗ ನೀವು ಶಕ್ತರಾಗುತ್ತೀರಿ. ಮಾತ್ರವಲ್ಲ, ಕಟ್ಟಕಡೆಯವರೆಗೆ ಹಿಮ್ಮೆಟ್ಟದೆ ನಿಲ್ಲುತ್ತೀರಿ; 14ಹಿಮ್ಮೆಟ್ಟದೆ ನಿಲ್ಲಲೇಬೇಕು. ಇದಕ್ಕಾಗಿ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಳ್ಳಿ. ನೀತಿಯೆಂಬ ರಕ್ಷಕವಚವನ್ನು ತೊಟ್ಟುಕೊಳ್ಳಿರಿ. 15ಶಾಂತಿಯ ಶುಭಸಂದೇಶವನ್ನು ಸಾರಲು ಶ್ರದ್ಧೆಯೆಂಬ ಪಾದರಕ್ಷೆಯನ್ನು ಮೆಟ್ಟುಕೊಳ್ಳಿರಿ. 16ಸತತವೂ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಹೀಗೆ ಸೈತಾನನ ಅಗ್ನಿಬಾಣಗಳನ್ನೆಲ್ಲಾ ನಂದಿಸಲು ಶಕ್ತರಾಗುವಿರಿ. 17ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿ; ಪವಿತ್ರಾತ್ಮರ ಕೊಡುಗೆಯಾದ ದೇವರ ವಾಕ್ಯವು ನಿಮಗೆ ಖಡ್ಗವಾಗಿರಲಿ. 18ಪವಿತ್ರಾತ್ಮರಿಂದ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲೂ ಪ್ರಾರ್ಥಿಸಿರಿ. ನಿಮ್ಮ ಕೋರಿಕೆ, ಬೇಡಿಕೆಗಳನ್ನು ದೇವರಿಗೆ ಅರ್ಪಿಸಿರಿ. ಎಚ್ಚರವಾಗಿದ್ದು ಎಲ್ಲಾ ದೇವಜನರಿಗಾಗಿ ಎಡೆಬಿಡದೆ ಪ್ರಾರ್ಥಿಸಿರಿ. 19ಶುಭಸಂದೇಶದ ಸತ್ಯಾರ್ಥವನ್ನು ನಿರ್ಭೀತನಾಗಿ ಸಾರಲು ಸೂಕ್ಷ್ಮವಾದ ಮಾತುಗಳನ್ನು ದೇವರು ನನಗೆ ದಯಪಾಲಿಸಲೆಂದು ನನಗೋಸ್ಕರ ಪ್ರಾರ್ಥಿಸಿರಿ. 20ಶುಭಸಂದೇಶದ ನಿಮಿತ್ತ ನಾನು ಸೆರೆಯಾಳಾಗಿದ್ದರೂ ಪ್ರಭುವಿನ ರಾಯಭಾರಿಯಾಗಿದ್ದೇನೆ. ಎಂತಲೇ, ಈ ಶುಭಸಂದೇಶವನ್ನು ಧೈರ್ಯದಿಂದ ಸೂಕ್ತ ರೀತಿಯಲ್ಲಿ ಸಾರಲಾಗುವಂತೆ ನನಗಾಗಿ ಪ್ರಾರ್ಥಿಸಿರಿ.
ಅಂತಿಮ ಆಶೀರ್ವಾದ
21ಪ್ರಿಯ ಸಹೋದರ ತುಖಿಕನು ನನ್ನ ವಿಷಯವಾಗಿಯೂ ನನ್ನ ಕೆಲಸಕಾರ್ಯಗಳ ವಿಷಯವಾಗಿಯೂ ನಿಮಗೆ ತಿಳಿಸುವನು. ಆತ ಪ್ರಭುವಿನ ಪ್ರಾಮಾಣಿಕ ಸೇವಕ. 22ನಮ್ಮ ಸಮಾಚಾರವನ್ನು ನಿಮಗೆ ತಿಳಿಸಲೆಂದು ಹಾಗೂ ನಿಮ್ಮನ್ನು ಉತ್ತೇಜಿಸಲೆಂದು ಆತನನ್ನು ನಿಮ್ಮಲ್ಲಿಗೆ ಕಳುಹಿಸಿದ್ದೇನೆ.
23ಪಿತನಾದ ದೇವರೂ ಪ್ರಭುವಾದ ಯೇಸುಕ್ರಿಸ್ತರೂ ಸಹೋದರರಿಗೆ ಶಾಂತಿಸಮಾಧಾನವನ್ನು ಮತ್ತು ಪ್ರೀತಿವಿಶ್ವಾಸವನ್ನು ದಯಪಾಲಿಸಲಿ. 24ಪ್ರಭು ಯೇಸುಕ್ರಿಸ್ತರಲ್ಲಿ ಚಿರಪ್ರೀತಿಯನ್ನಿಟ್ಟ ಎಲ್ಲರಿಗೂ ದೇವರ ಅನುಗ್ರಹ ಲಭಿಸಲಿ!

Highlight

Share

Copy

None

Want to have your highlights saved across all your devices? Sign up or sign in