YouVersion Logo
Search Icon

ಚೆಫನ್ಯ 2

2
ಯೆಹೂದಕ್ಕೆ ಪ್ರಬೋಧನೆಯೂ ಖಂಡನೆಯೂ
(2.1—3.8)
ಯೆಹೋವನನ್ನು ಶರಣುಹೊಗಲು ಪ್ರೇರಣೆ
1ನಾಚಿಕೆಗೇಡಿಯ ಜನಾಂಗದವರೇ, ತೀರ್ಪು ಫಲಿಸುವದರೊಳಗೆ
ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವದಕ್ಕೆ ಮುಂಚೆ,
ಯೆಹೋವನ ಸಿಟ್ಟಿನ ದಿನವು ನಿಮ್ಮನ್ನು ಮುಟ್ಟುವದಕ್ಕೆ ಮೊದಲು
ಸೇರಿಬನ್ನಿರಿ, ಕೂಡಿಕೊಳ್ಳಿರಿ;
2ಕಾಲವು ಹೊಟ್ಟಿನಂತೆ ಹಾರಿಹೋಗುತ್ತದಲ್ಲಾ.
3ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ,
ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ,
ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ;
ಯೆಹೋವನ ಸಿಟ್ಟಿನ ದಿನದಲ್ಲಿ ಒಂದು ವೇಳೆ ಮರೆಯಾಗುವಿರಿ.
ಫಿಲಿಷ್ಟಿಯದ ದುರ್ಗತಿ
4ಗಾಜ ನಿರ್ಜನವಾಗುವದು,
ಅಷ್ಕೆಲೋನ್ ಹಾಳಾಗುವದು,
ಅಷ್ಡೋದನ್ನು ಮಧ್ಯಾಹ್ನದಲ್ಲಿ ಓಡಿಸಿಬಿಡುವರು,
ಎಕ್ರೋನ್ ನಿರ್ಮೂಲವಾಗುವದು.
5ಅಯ್ಯೋ, ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನಾಂಗವೇ,
ನಿನ್ನ ಗತಿಯನ್ನು ಏನು ಹೇಳಲಿ!
ಕಾನಾನೇ, ಫಿಲಿಷ್ಟಿಯ ದೇಶವೇ,
ಯೆಹೋವನ ನುಡಿಯು ನಿನಗೆ ವಿರುದ್ಧವಾಗಿದೆ;
ನಿನ್ನಲ್ಲಿ ನಿವಾಸಿಯೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು.
6ಸಮುದ್ರ ತೀರದ ಆ ಪ್ರಾಂತವು ಹುಲ್ಗಾವಲಾಗುವದು,
ಕುರುಬರ ಹೊಂಡಗಳು, ಹಿಂಡುಗಳ ದೊಡ್ಡಿಗಳು, ಇವೇ ಅಲ್ಲಿರುವವು.
7ಆ ಕರಾವಳಿಯು ಯೆಹೂದವಂಶಶೇಷದವರ ಪಾಲಾಗುವದು;
ದನಕುರಿಗಳನ್ನು ಅಲ್ಲೇ ಮೇಯಿಸುವರು;
ಸಂಜೆಗೆ ಅಷ್ಕೆಲೋನಿನ ಮನೆಗಳಲ್ಲಿ ಮಲಗಿಕೊಳ್ಳುವರು;
ಅವರ ದೇವರಾದ ಯೆಹೋವನು ಅವರನ್ನು ಪರಾಂಬರಿಸಿ
ಅವರ ದುರವಸ್ಥೆಯನ್ನು ತಪ್ಪಿಸುವನು.
ಅಮ್ಮೋನು ಮೋವಾಬುಗಳ ದುರ್ಗತಿ
8ಮೋವಾಬ್ಯರೂ ಅಮ್ಮೋನ್ಯರೂ ಉಬ್ಬಟೆಯಿಂದ ನನ್ನ ಜನರ ಮೇರೆಯನ್ನು ಮೀರಿ
ಅವರ ಮೇಲೆ ಹೊರಿಸಿರುವ ದೂರುದೂಷಣೆಗಳು ನನ್ನ ಕಿವಿಗೆ ಬಿದ್ದಿವೆ.
9ಇಸ್ರಾಯೇಲ್ಯರ ದೇವರಾದ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಹೀಗಿರಲು, ನನ್ನ ಜೀವದಾಣೆ, ಸೊದೋವಿುನ ಗತಿಯೇ ಮೋವಾಬಿಗೂ ಆಗುವದು.
ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವದು;
ಆ ಪ್ರಾಂತಗಳು ಮುಳ್ಳುಗಿಡಗಳಿಂದಲೂ
ಸೌಳುಗುಂಡಿಗಳಿಂದಲೂ ತುಂಬಿಕೊಂಡು
ನಿತ್ಯನಾಶನಕ್ಕೆ ಈಡಾಗುವವು;
ನನ್ನ ಪ್ರಜೆಯಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು,
ಅವು ನನ್ನ ಜನಶೇಷದವರಿಗೆ ಸ್ವಾಸ್ತ್ಯವಾಗುವವು.
10ಆ ಪ್ರಾಂತಗಳವರು ಸೇನಾಧೀಶ್ವರ ಯೆಹೋವನ ಜನರನ್ನು ದೂಷಿಸಿ
ಅವರ ಮೇಲೆ ಉಬ್ಬಿಕೊಂಡು ಬಂದದರಿಂದ
ಅವರ ಹೆಮ್ಮೆಯ ನಿವಿುತ್ತವೇ ಅವರಿಗೆ ಈ ಗತಿಯಾಗುವದು.
11ಯೆಹೋವನು ಅವರಿಗೆ ಭಯಂಕರವಾಗುವನು;
ಲೋಕದ ದೇವರುಗಳನ್ನೆಲ್ಲಾ ಕ್ಷಯಿಸಿಬಿಡುವನು;
ಸಮಸ್ತ ಜನರು, ಅಂದರೆ ಸಮುದ್ರ ಪ್ರಾಂತದ ನಿವಾಸಿಗಳಾದ ಸಕಲ ಜನಾಂಗಗಳವರು
ತಮ್ಮ ತಮ್ಮ ಸ್ಥಳಗಳಲ್ಲೇ ಆತನನ್ನು ಆರಾಧಿಸುವರು.
ಕೂಷಿನ ದುರ್ಗತಿ
12ಕೂಷಿನವರೇ, ನೀವು ಸಹ ನನ್ನ ಖಡ್ಗದಿಂದ ಹತರಾಗುವಿರಿ.
ನಿನೆವೆಯ ದುರ್ಗತಿ
13ಯೆಹೋವನು ಬಡಗಲಿಗೆ ಕೈಚಾಚಿ ಅಶ್ಶೂರವನ್ನು ಧ್ವಂಸಪಡಿಸುವನು;
ನಿನೆವೆಯನ್ನು ಹಾಳುಮಾಡಿ ಮರುಭೂವಿುಯಂತೆ ಒಣಗಿಸಿಬಿಡುವನು.
14ಜನಾಂಗಗಳ#2.14 ಈ ವಚನದ ಮೂಲವು ಅಸ್ಪಷ್ಟ. ಪಶುಗಳೆಲ್ಲಾ ಮಂದೆಮಂದೆಯಾಗಿ
ಅದರ ಮಧ್ಯದಲ್ಲಿ ಮಲಗಿಕೊಳ್ಳುವವು;
ಕೊಕ್ಕರೆಯೂ ಮುಳ್ಳುಹಂದಿಯೂ ಅದರ ಬೋದಿಗೆಗಳಲ್ಲಿ
ವಾಸಮಾಡಿಕೊಳ್ಳುವವು;
ಕಿಟಕಿಗಳಲ್ಲಿ ಚಿಲಿಪಿಲಿಗಾನವು ಕೇಳಿಸುವದು;
ಹೊಸ್ತಿಲುಗಳಲ್ಲಿ ಹಾಳುಬಡಿಯುವದು;
ದೇವದಾರು ಹಲಿಗೆಯ ಹೊದಿಕೆಯು ಕೀಳಲ್ಪಡುವದು.
15ಈ ನಿನೆವೆಯು ಮೊದಲು ಉಲ್ಲಾಸದ ನಗರಿಯಾಗಿ
ನೆಮ್ಮದಿಯಿಂದ ನೆಲೆಗೊಂಡಿದ್ದು ತನ್ನ ಹೃದಯದೊಳಗೆ -
ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ
ಅಂದುಕೊಳ್ಳುತ್ತಿತ್ತು; ಅಯ್ಯೋ, ಎಷ್ಟೋ ಹಾಳಾಗಿ ಹೋಗಿ
ಮೃಗಗಳು ತಂಗುವ ಹಕ್ಕೆಯಾಗಿದೆ!
ಹಾದುಹೋಗುವವರೆಲ್ಲರೂ ಸಿಳ್ಳುಹಾಕಿ ಕೈಯಾಡಿಸುತ್ತಾರೆ.

Highlight

Share

Copy

None

Want to have your highlights saved across all your devices? Sign up or sign in