ಚೆಫನ್ಯ 1
1
ಯೆಹೋವನ ಭಯಂಕರ ದಿನದ ಎಚ್ಚರಿಕೆ
(1)
1ಆಮೋನನ ಮಗನೂ ಯೆಹೂದದ ಅರಸನೂ ಆದ ಯೋಷೀಯನ ಕಾಲದಲ್ಲಿ ಕೂಷಿಯ ಮಗನೂ ಗೆದಲ್ಯನ ಮೊಮ್ಮಗನೂ ಹಿಜ್ಕೀಯನಿಗೆ ಹುಟ್ಟಿದ ಅಮರ್ಯನ ಮರಿಮಗನೂ ಆದ ಚೆಫನ್ಯನಿಗೆ ಯೆಹೋವನು ದಯಪಾಲಿಸಿದ ವಾಕ್ಯ.
ಸಮಸ್ತ ಪ್ರಾಣಿಗಳ ನಾಶನ
2ಯೆಹೋವನು ಇಂತೆನ್ನುತ್ತಾನೆ -
ನಾನು ಭೂಮಂಡಲದಿಂದ ಸಮಸ್ತವನ್ನು ಅಳಿಸಿಬಿಡುವೆನು.
3ಜನಪಶುಗಳನ್ನೂ ಆಕಾಶದ ಪಕ್ಷಿಗಳನ್ನೂ
ಸಮುದ್ರದ ಮೀನುಗಳನ್ನೂ ನಾಶಪಡಿಸುವೆನು;
ವಿಗ್ರಹಗಳೆಂಬ ವಿಘ್ನಗಳನ್ನೂ ಅವುಗಳಿಗೆ ಎಡವುವ ದುಷ್ಟರನ್ನೂ
ಸಂಹರಿಸುವೆನು; ಭೂವಿುಯ ಮೇಲಿಂದ ನರಸಂತಾನವನ್ನು ಕಿತ್ತುಹಾಕುವೆನು;
ಇದು ಯೆಹೋವನ ನುಡಿ.
ಅಪರಾಧಿಯಾದ ಯೆರೂಸಲೇವಿುಗೆ ದೇವರ ದಂಡನೆ ತಪ್ಪದು
4ನಾನು ಯೆಹೂದದ ಮೇಲೂ ಯೆರೂಸಲೇವಿುನವರೆಲ್ಲರ ಮೇಲೂ ಕೈಯೆತ್ತಿ
ಈ ಸ್ಥಳದಿಂದ ಬಾಳನ ಪೂಜೆಯನ್ನು ನಿಶ್ಶೇಷಗೊಳಿಸಿ
ಕೆಮಾರ್ಯ ಮೊದಲಾದ ಪೂಜಾರಿಗಳನ್ನು ನಿರ್ನಾಮಮಾಡುವೆನು;
5ಮಾಳಿಗೆಗಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆ ಪೂಜಿಸುವವರನ್ನೂ
ಯೆಹೋವನ ಭಕ್ತರೆಂದು ಪ್ರತಿಜ್ಞೆಮಾಡಿಕೊಂಡು ಆರಾಧಿಸಿ
ಮಲ್ಕಾಮನ ಮೇಲೆ ಆಣೆಯಿಡುವವರನ್ನೂ
6ಯೆಹೋವನನ್ನು ಆಶ್ರಯಿಸದೆ ಯೆಹೋವನ ದರ್ಶನವನ್ನು ಬಯಸದೆ
ಯೆಹೋವನ ಮಾರ್ಗಬಿಟ್ಟವರನ್ನೂ ಧ್ವಂಸಪಡಿಸುವೆನು.
7ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ;
ಯೆಹೋವನ ದಿನವು ಸಮೀಪಿಸಿತು;
ಯೆಹೋವನು ಯಜ್ಞದ ಔತಣವನ್ನು ಸಿದ್ಧಪಡಿಸಿದ್ದಾನೆ,
ಕರೆದವರನ್ನು ಮಡಿಮಾಡಿದ್ದಾನೆ.
8ಯೆಹೋವನ ಆ ಯಜ್ಞದಿನದಲ್ಲಿ
ನಾನು ದೇಶಾಧಿಪತಿಗಳನ್ನೂ ರಾಜವಂಶದವರನ್ನೂ
ವಿದೇಶವಸ್ತ್ರಧಾರಿಗಳೆಲ್ಲರನ್ನೂ ದಂಡಿಸುವೆನು.
9ಹೊಸ್ತಿಲಹಾರಿ ನುಗ್ಗಿ ಮೋಸಹಿಂಸೆಗಳಿಂದ ದೋಚಿದ್ದನ್ನು
ತಮ್ಮ ಒಡೆಯನ ಮನೆಯೊಳಗೆ ತುಂಬಿಸುವವರೆಲ್ಲರನ್ನು ಆ ದಿನದಲ್ಲಿ ದಂಡಿಸುವೆನು.
10ಅದೇ ದಿನದಲ್ಲಿ ಮೀನುಬಾಗಿಲಿಂದ ಕೂಗಾಟ,
ಎರಡನೆಯ ಕೇರಿಯಿಂದ ಗೋಳಾಟ,
ಗುಡ್ಡಗಳ ಮೇಲಿಂದ ಧಡಮ್ ಎನ್ನುವ ಶಬ್ದ,
ಅಂತು ದೊಡ್ಡ ಗದ್ದಲವಾಗುವದು;
ಇದು ಯೆಹೋವನ ನುಡಿ.
11ಒರಳ ಕೇರಿಯವರೇ, ಕಿರಚಿರಿ,
ಎಲ್ಲಾ ಸಾಹುಕಾರರು ಹಾಳಾದರು,
ಹೊರೆಬೆಳ್ಳಿಯವರೆಲ್ಲರು ನಾಶವಾದರು.
12ಆ ಕಾಲದಲ್ಲಿ ನಾನು ದೀಪಗಳನ್ನು ಹಿಡಿದು
ಯೆರೂಸಲೇಮನ್ನೆಲ್ಲಾ ಹುಡುಕಿಬಿಡುವೆನು;
ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು ಎಂದು
ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ
ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ
ಜನರನ್ನು ದಂಡಿಸುವೆನು.
13ಅವರ ಆಸ್ತಿಯು ಸೂರೆಯಾಗುವದು,
ಅವರ ಮನೆಗಳು ಹಾಳಾಗುವವು;
ಅವರು ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಿಸರು,
ತೋಟಗಳನ್ನು ಮಾಡಿಕೊಂಡರೂ ಅವುಗಳ ದ್ರಾಕ್ಷಾರಸವನ್ನು ಕುಡಿಯರು.
ಯೆಹೋವನ ದಿನದ ವಿವರಣೆ
14ಯೆಹೋವನ ಮಹಾದಿನವು ಹತ್ತಿರವಾಯಿತು,
ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ;
ಆಹಾ, ಕಿವಿಗೊಡಿರಿ, ಯೆಹೋವನ ದಿನವೇ ಬಂದಿತು;
ಇಗೋ, ಅಲ್ಲಿ ಒಬ್ಬ ಶೂರನು ಘೋರವಾಗಿ ಗೋಳಾಡುತ್ತಿದ್ದಾನೆ!
15ಆ ದಿನವು ರೌದ್ರದ ದಿನ, ಶ್ರಮಸಂಕಟಗಳ ದಿನ,
ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ,
ಕಾರ್ಮುಗಿಲ ಕಗ್ಗತ್ತಲ ದಿನ.
16ಕೋಟೆಗಳನ್ನೂ ದೊಡ್ಡ ಕೊತ್ತಲಗಳನ್ನೂ ಹಿಡಿಯಲು
ಆರ್ಭಟಿಸಿ ಕೊಂಬೂದುವ ದಿನ.
17ಯೆಹೋವನಾದ ನನಗೆ ಜನರು ಪಾಪಮಾಡಿದ ಕಾರಣ
ಕುರುಡರಂತೆ ನಡೆಯುವ ಹಾಗೆ ಅವರನ್ನು ಸಂಕಟಪಡಿಸುವೆನು;
ಅವರ ರಕ್ತವು ದೂಳಿನಂತೆ ಚೆಲ್ಲಿಹೋಗುವದು,
ಅವರ ಮಾಂಸವು ಮಲದ ಹಾಗೆ ಬಿದ್ದಿರುವದು.
18ಯೆಹೋವನ ರೌದ್ರದ ದಿನದಲ್ಲಿ
ಅವರ ಬೆಳ್ಳಿಬಂಗಾರಗಳು ಕೂಡಾ ಅವರನ್ನು ರಕ್ಷಿಸಲಾರವು;
ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವದು;
ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು,
ಹೌದು, ಘೋರವಾಗಿ ನಿರ್ಮೂಲ ಮಾಡುವನು.
Currently Selected:
ಚೆಫನ್ಯ 1: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.