YouVersion Logo
Search Icon

ಜೆಕರ್ಯ 8

8
ವಿಧೇಯಜನರಿಗೆ ಯೆಹೋವನು ಸಂಕಲ್ಪಿಸಿರುವ ಭಾಗ್ಯ
1ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -
2ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಚೀಯೋನಿಗೆ ಅವಮಾನವಾಯಿತಲ್ಲಾ ಎಂದು ಬಹಳವಾಗಿ ಕುದಿಯುತ್ತೇನೆ.
ಅತಿರೋಷಗೊಂಡು ಕುದಿಯುತ್ತೇನೆ.
3ಯೆಹೋವನು ಇಂತೆನ್ನುತ್ತಾನೆ -
ನಾನು ಚೀಯೋನಿಗೆ ಹಿಂದಿರುಗಿದ್ದೇನೆ,
ಯೆರೂಸಲೇವಿುನ ಮಧ್ಯದಲ್ಲಿ ವಾಸಿಸುವೆನು;
ಆಗ ಯೆರೂಸಲೇಮು ಸುವ್ರತನಗರಿ ಅನ್ನಿಸಿಕೊಳ್ಳುವದು,
ಸೇನಾಧೀಶ್ವರ ಯೆಹೋವನ ಪರ್ವತಕ್ಕೆ
ಪರಿಶುದ್ಧ ಪರ್ವತವೆಂಬ ಹೆಸರು ಬರುವದು.
4ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಇನ್ನು ಮುಂದೆ ಯೆರೂಸಲೇವಿುನ ಚೌಕಗಳಲ್ಲಿ ಮುದುಕ ಮುದುಕಿಯರು ಕೂಡ್ರುವರು;
ಅತಿವೃದ್ಧಾಪ್ಯದ ನಿವಿುತ್ತ ಪ್ರತಿಯೊಬ್ಬ ಮುದುಕನ ಕೈಯಲ್ಲಿ ಊರುಗೋಲಿರುವದು.
5ಆ ಪಟ್ಟಣದ ಚೌಕಗಳಲ್ಲಿ ಆಟವಾಡುವ ಬಾಲಕ ಬಾಲಕಿಯರೂ ತುಂಬಿಕೊಂಡಿರುವರು.
6ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಆ ಕಾಲದ ಸ್ಥಿತಿಯು ಈ ಜನಶೇಷದವರ ದೃಷ್ಟಿಗೆ ಅತ್ಯಾಶ್ಚರ್ಯವಾದರೂ
ನನ್ನ ದೃಷ್ಟಿಗೆ ಅತ್ಯಾಶ್ಚರ್ಯವೋ?
ಇದು ಸೇನಾಧೀಶ್ವರ ಯೆಹೋವನ ನುಡಿ.
7ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಇಗೋ, ನಾನು ನನ್ನ ಜನರನ್ನು ಮೂಡಣ ದೇಶದಿಂದಲೂ ಪಡುವಣ ದೇಶದಿಂದಲೂ
ಪಾರುಮಾಡಿ ಬರಗೊಳಿಸುವೆನು,
8ಅವರು ಯೆರೂಸಲೇವಿುನೊಳಗೇ ವಾಸವಾಗಿರುವರು;
ಸತ್ಯಸಂಧತೆಯಿಂದಲೂ ಸದ್ಧರ್ಮದಿಂದಲೂ ಅವರು ನನಗೆ ಪ್ರಜೆಯಾಗಿರುವರು.
ಹಾಗೆಯೇ ನಾನು ಅವರಿಗೆ ದೇವರಾಗಿರುವೆನು.
9ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ದೇವಾಲಯವನ್ನು ಕಟ್ಟುವ ಉದ್ದೇಶದಿಂದ ಸೇನಾಧೀಶ್ವರ ಯೆಹೋವನ ಆ ಮಂದಿರದ ಅಸ್ತಿವಾರವನ್ನು ಹಾಕಿದ ಕಾಲದಲ್ಲಿಯೂ ಇದ್ದ ಪ್ರವಾದಿಗಳ ಬಾಯಿಂದ ಈ ಮಾತುಗಳನ್ನು ಈಗ ಕೇಳುವವರೇ, ನಿಮ್ಮ ಕೈಗಳು ಬಲಗೊಳ್ಳಲಿ! 10ಆ ಕಾಲಕ್ಕೆ ಮುಂಚೆ ಮನುಷ್ಯನಿಗಾಗಲಿ ಪಶುವಿಗಾಗಲಿ ದುಡಿತದಿಂದ ಏನೂ ಜೀವನವಾಗುತ್ತಿರಲಿಲ್ಲ; ಹೋಗಿಬರುವವರಿಗೆ ಶತ್ರುಗಳ ದೆಸೆಯಿಂದ ಭಯವಿಲ್ಲದೆ ಇರಲಿಲ್ಲ; ಒಬ್ಬರನ್ನೊಬ್ಬರು ಎದುರಿಸುವಂತೆ ಎಲ್ಲರನ್ನೂ ಪ್ರೇರಿಸುತ್ತಿದ್ದೆನು. 11ಇಂದಿನಿಂದಲೋ ಈ ಜನಶೇಷದವರ ವಿಷಯದಲ್ಲಿ ನಾನು ಪೂರ್ವಕಾಲದಲ್ಲಿ ಇದ್ದಂತೆ ಇರೆನು; ಇದು ಸೇನಾಧೀಶ್ವರ ಯೆಹೋವನ ನುಡಿ. 12ನೆಮ್ಮದಿಯ ಬೆಳೆಯಾಗುವದು; ದ್ರಾಕ್ಷಾಲತೆಯು ಹಣ್ಣುಬಿಡುವದು, ಭೂವಿುಯು ಧಾನ್ಯವನ್ನೀಯುವದು, ಆಕಾಶವು ಇಬ್ಬನಿಯನ್ನು ಸುರಿಸುವದು; ಈ ಜನಶೇಷದವರು ಇವುಗಳನ್ನೆಲ್ಲಾ ಅನುಭವಿಸುವಂತೆ ಅನುಗ್ರಹಿಸುವೆನು. 13ಯೆಹೂದ ಕುಲವೇ, ಇಸ್ರಾಯೇಲ್ ವಂಶವೇ, ನಿಮ್ಮ ಹೆಸರು ಹೇಗೆ ಜನಾಂಗಗಳಲ್ಲಿ ಶಾಪದ ಮಾತಾಗಿ ಸಲ್ಲುತ್ತಿತ್ತೋ ಹಾಗೆಯೇ ನಾನು ನಿಮ್ಮನ್ನು ರಕ್ಷಿಸಿದ ಮೇಲೆ ನಿಮ್ಮ ಹೆಸರು ಹರಕೆಯ ಮಾತಾಗಿ ಸಲ್ಲುವದು; ಹೆದರಬೇಡಿರಿ, ನಿಮ್ಮ ಕೈಗಳು ಬಲಗೊಳ್ಳಲಿ! 14ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನಿಮ್ಮ ಪಿತೃಗಳು ನನಗೆ ಸಿಟ್ಟೆಬ್ಬಿಸಿದಾಗ ನಿಮಗೆ ಕೇಡು ಮಾಡಬೇಕೆಂದು ನಾನು ನಿಷ್ಕರುಣಿಯಾಗಿ ಸಂಕಲ್ಪಿಸಿದಂತೆ 15ಈ ಕಾಲದಲ್ಲಿ ಯೆರೂಸಲೇವಿುಗೂ ಯೆಹೂದ ಕುಲಕ್ಕೂ ಮೇಲು ಮಾಡಬೇಕೆಂದು ಹೊಸ ಸಂಕಲ್ಪ ಮಾಡಿಕೊಂಡಿದ್ದೇನೆ; ಹೆದರಬೇಡಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ. 16ನೀವು ಮಾಡಬೇಕಾದ ಕಾರ್ಯಗಳು ಇವೇ - ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ನಿಜವನ್ನೇ ಆಡಲಿ; ನಿಮ್ಮ ಚಾವಡಿಗಳಲ್ಲಿ ಸತ್ಯವನ್ನೂ ಸಮಾಧಾನಪ್ರದನ್ಯಾಯವನ್ನೂ ಸ್ಥಾಪಿಸಿರಿ; 17ನಿಮ್ಮಲ್ಲಿ ಯಾವನೂ ತನ್ನ ಹೃದಯದಲ್ಲಿ ನೆರೆಯವನಿಗೆ ಕೇಡನ್ನು ಬಗೆಯದಿರಲಿ; ಸುಳ್ಳುಸಾಕ್ಷಿಗೆ ಎಂದೂ ಸಂತೋಷಪಡಬೇಡಿರಿ; ಇವುಗಳನ್ನೆಲ್ಲಾ ದ್ವೇಷಿಸುವವನಾಗಿದ್ದೇನೆ; ಇದು ಯೆಹೋವನ ನುಡಿ.
18ಸೇನಾಧೀಶ್ವರ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು - 19ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನಾಲ್ಕನೆಯ ತಿಂಗಳಿನ ಉಪವಾಸ, ಐದನೆಯ ತಿಂಗಳಿನ ಉಪವಾಸ, ಏಳನೆಯ ತಿಂಗಳಿನ ಉಪವಾಸ, ಹತ್ತನೆಯ ತಿಂಗಳಿನ ಉಪವಾಸ, ಇವು ಯೆಹೂದ ವಂಶಕ್ಕೆ ವಿಶೇಷವಾದ ಹಬ್ಬಗಳಾಗಿ ಹರ್ಷೋಲ್ಲಾಸಗಳನ್ನುಂಟುಮಾಡುವವು; ಹೀಗಿರಲು ಸತ್ಯವನ್ನೂ ಸಮಾಧಾನವನ್ನೂ ಪ್ರೀತಿಸಿರಿ. 20ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಇನ್ನು ಮುಂದೆ ಜನಾಂಗಗಳೂ ದೊಡ್ಡ ಪಟ್ಟಣಗಳ ನಿವಾಸಿಗಳೂ ಬರುವರು; 21ಒಂದು ಊರಿನವರು ಇನ್ನೊಂದೂರಿಗೆ ಹೋಗಿ - ಯೆಹೋವನ ಪ್ರಸನ್ನತೆಯನ್ನು ಬೇಡುವದಕ್ಕೂ ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವದಕ್ಕೂ ಹೋಗೋಣ ಬನ್ನಿರಿ, ನಾವೂ#8.21 ಮೂಲ: ನಾನೂ ಹೋಗುತ್ತೇನೆ. ಹೋಗುತ್ತೇವೆ ಎಂದು ಹೇಳುವರು. 22ಹೀಗೆ ಬಹು ದೇಶಗಳವರೂ ಬಲವಾದ ಜನಾಂಗಗಳವರೂ ಯೆರೂಸಲೇವಿುನಲ್ಲಿ ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವದಕ್ಕೂ ಯೆಹೋವನ ಪ್ರಸನ್ನತೆಯನ್ನು ಬೇಡುವದಕ್ಕೂ ಬರುವರು. 23ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಆ ಕಾಲದಲ್ಲಿ ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು - ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.

Highlight

Share

Copy

None

Want to have your highlights saved across all your devices? Sign up or sign in

Video for ಜೆಕರ್ಯ 8